ಕ್ರೇಜಿಸ್ಟಾರ್ ರವಿಚಂದ್ರನ್ ಅಭಿನಯದ “ಅಪೂರ್ವ’ ಸಿನಿಮಾದ ಮೂಲಕ ಬೆಳ್ಳಿತೆರೆಗೆ ನಾಯಕಿಯಾಗಿ ಪರಿಚಯವಾದ ಚೆಲುವೆ ಅಪೂರ್ವ. “ಅಪೂರ್ವ’ ಸಿನಿಮಾದ ಬಳಿಕ “ಕೃಷ್ಣ ಟಾಕೀಸ್’, “ಪುರುಷೋತ್ತಮ’ ಸಿನಿಮಾಗಳಲ್ಲಿ ಕಾಣಿಸಿಕೊಂಡಿರುವ ಅಪೂರ್ವ, ಸದ್ಯ “ಜಯ ಜಯ ಜಾನಕಿರಾಮ’, “ಕಾಲಾಪತ್ಥರ್’, “ಪೆಂಟಗನ್’ ಹೀಗೆ ಒಂದಷ್ಟು ಸಿನಿಮಾಗಳಲ್ಲೂ ಅಭಿನಯಿಸಿದ್ದು, ಈ ಸಿನಿಮಾಗಳು ಇನ್ನಷ್ಟೇ ತೆರೆ ಕಾಣಬೇಕಿದೆ.
ಸದ್ಯ ಸ್ಯಾಂಡಲ್‌ವುಡ್‌ನಲ್ಲಿ ನಿಧಾನವಾಗಿ ಒಂದರ ಹಿಂದೊಂದು ಸಿನಿಮಾಗಳಲ್ಲಿ ಬಿಝಿಯಾಗಿರುವ ಅಪೂರ್ವ ಇದೀಗ “ಸೂತ್ರಧಾರಿ’ಯ ಕೈ ಸೇರಿದ್ದಾರೆ.
ಹೌದು, ಸದ್ಯ ಅಪೂರ್ವ ನಾಯಕಿಯಾಗಿ ಅಭಿನಯಿಸುತ್ತಿರುವ ಹೊಸ ಸಿನಿಮಾದ ಹೆಸರು “ಸೂತ್ರಧಾರಿ’. ಕನ್ನಡದ ರ್ಯಾಪರ್ ಚಂದನ್ ಶೆಟ್ಟಿ ನಾಯಕನಾಗಿ ಕಾಣಿಸಿಕೊಳ್ಳುತ್ತಿರುವ ಸಸ್ಪೆನ್ಸ್-ಥ್ರಿಲ್ಲರ್ ಕಥಾಹಂದರದ “ಸೂತ್ರಧಾರಿ’ ಸಿನಿಮಾದಲ್ಲಿ, ಚಂದನ್ ಶೆಟ್ಟಿಗೆ ಜೋಡಿಯಾಗಿ ಅಪೂರ್ವ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗಷ್ಟೇ ಈ ಸಿನಿಮಾದ ಮುಹೂರ್ತ ನೆರವೇರಿದ್ದು, “ಸೂತ್ರಧಾರಿ’ಯ ಚಿತ್ರೀಕರಣ ಕೂಡ ಆರಂಭವಾಗಿದೆ.
ಇನ್ನು ತಮ್ಮ ಹೊಸ ಸಿನಿಮಾ “ಸೂತ್ರಧಾರಿ’ಯ ಬಗ್ಗೆ ಮಾತನಾಡುವ ಅಪೂರ್ವ, “ಇದೊಂದು ಕಂಪ್ಲೀಟ್ ಸಸ್ಪೆನ್ಸ್ -ಥ್ರಿಲ್ಲರ್ ಶೈಲಿಯ ಸಿನಿಮಾ. “ಕೃಷ್ಣ ಟಾಕೀಸ್’ ಸಿನಿಮಾದಲ್ಲಿ ನನ್ನ ಆ್ಯಕ್ಟಿಂಗ್ ನೋಡಿದ್ದ ನಿರ್ಮಾಪಕ ನವರಸನ್ “ಸೂತ್ರಧಾರಿ’ ಸಿನಿಮಾಕ್ಕೆ ನನ್ನನ್ನು ಸೆಲೆಕ್ಟ್ ಮಾಡಿಕೊಂಡರು. ಸಿನಿಮಾದ ಕಥೆ ಕೇಳಿದ ಕೂಡಲೇ ತುಂಬಾ ಇಷ್ಟವಾಯ್ತು. ಒಳ್ಳೆಯ ಕಂಟೆಂಟ್ ಇರುವಂಥ ಸಬೆjಕ್ಟ್ ಮತ್ತು ತುಂಬ ಸ್ಕೋಪ್ ಇರುವಂಥ ಕ್ಯಾರೆಕ್ಟರ್ ಈ ಸಿನಿಮಾದಲ್ಲಿದೆ. ಹಾಗಾಗಿ ಈ ಸಿನಿಮಾ ಒಪ್ಪಿಕೊಂಡೆ. ಈ ಸಿನಿಮಾ ಮತ್ತು ನನ್ನ ಕ್ಯಾರೆಕ್ಟರ್ ಎರಡೂ ಆಡಿಯನ್ಸ್‌ಗೆ ಇಷ್ಟವಾಗಲಿದೆ. ತುಂಬ ಬಬ್ಲಿಯಾಗಿರುವಂಥ, ನೋಡಲು ಪಕ್ಕದಮನೆ ಹುಡುಗಿ ಥರ ಕಾಣಿಸಿಕೊಳ್ಳುವಂಥ ಕ್ಯಾರೆಕ್ಟರ್ ನನಗೆ ಸಿಕ್ಕಿದೆ’ ಎನ್ನುತ್ತಾರೆ.
ನವರಸನ್ ನಿರ್ಮಾಣದಲ್ಲಿ ಮೂಡಿಬರುತ್ತಿರುವ “ಸೂತ್ರಧಾರಿ’ ಸಿನಿಮಾಕ್ಕೆ ಕಿರಣ್ ಕುಮಾರ್ ಕೆ. ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರಕ್ಕೆ ಪಿ.ಕೆ.ಹೆಚ್ ದಾಸ್ ಛಾಯಾಗ್ರಹಣ, ಸತೀಶ್ ಚಂದ್ರಯ್ಯ ಸಂಕಲನವಿದೆ. ಇನ್ನು ಸಿನಿಮಾದಲ್ಲಿ ತೆರೆಮೇಲೆ ನಾಯಕನಾಗಿ ಕಾಣಿಸಿಕೊಳ್ಳುತ್ತಿರುವ ಚಂದನ್ ಶೆಟ್ಟಿ, ಈ ಸಿನಿಮಾದಲ್ಲಿ ಮೊದಲ ಬಾರಿಗೆ ಪೊಲೀಸ್ ಅಧಿಕಾರಿಯ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಜೊತೆಗೆ ಈ ಸಿನಿಮಾದ ಹಾಡುಗಳಿಗೆ ಸ್ವತಃ ಚಂದನ್ ಶೆಟ್ಟಿ ತಾವೇ ಸಂಗೀತ ಸಂಯೋಜಿಸುತ್ತಿದ್ದಾರೆ.
ಬೆಂಗಳೂರು ಸುತ್ತಮುತ್ತ “ಸೂತ್ರಧಾರಿ’ ಸಿನಿಮಾದ ಬಹುತೇಕ ಚಿತ್ರೀಕರಣ ನಡೆಯಲಿದ್ದು, ಮುಂದಿನ ವರ್ಷದ ಆರಂಭದಲ್ಲಿ ಸಿನಿಮಾ ತೆರೆಗೆ ಬರುವ ಸಾಧ್ಯತೆಯಿದೆ.