Advertisement

ಶಾಲಾ ವಾಹನಗಳ ಸುಸ್ಥಿತಿ ಪರೀಕ್ಷೆ: ಅರಿವು

12:48 PM Jun 16, 2018 | Team Udayavani |

ಮೈಸೂರು: ಶಾಲಾ ಮಕ್ಕಳನ್ನು ಸಾಗಿಸುವ ವಾಹನಗಳ ಅಪಘಾತ ಪ್ರಕರಣಗಳನ್ನು ನಿಯಂತ್ರಿಸುವ ಸಲುವಾಗಿ ಉಪಸಾರಿಗೆ ಆಯುಕ್ತರ ಕಚೇರಿ ಮತ್ತು ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ ವತಿಯಿಂದ ಶುಕ್ರವಾರ ನಗರದಲ್ಲಿ ಶಾಲಾ ವಾಹನದ ಸುಸ್ಥಿತಿಯನ್ನು ಪರೀಕ್ಷಿಸುವ ಹಾಗೂ ಚಾಲಕರಿಗೆ ಅರಿವು ಮೂಡಿಸುವ ಕಾರ್ಯಕ್ರಮ ನಡೆಸಲಾಯಿತು. 

Advertisement

ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಆಯೋಜಿಸಿದ್ದ ಅರಿವು ಕಾರ್ಯಕ್ರಮದಲ್ಲಿ ಸಾರಿಗೆ ಇಲಾಖೆ ಅಧಿಕಾರಿಗಳು, ಶಾಲಾ ವಾಹನ ಚಾಲಕರ ಪರವಾನಗಿ, ವಾಹನಕ್ಕೆ ವೇಗ ನಿಯಂತ್ರಕ ಸಾಧನ ಅಳವಡಿಕೆ, ವಾಹನದಲ್ಲಿರುವ ಪ್ರಥಮ ಚಿಕಿತ್ಸೆ ವ್ಯವಸ್ಥೆ, ವಾಯು ಮಾಲಿನ್ಯ ತಡೆಗೆ ಅನುಸರಿಸಿರುವ ಕ್ರಮಗಳ ಕುರಿತಂತೆ ಮಾಹಿತಿ ಕಲೆಹಾಕಿದರು.

ಶಾಲಾ ವಾಹನದಲ್ಲಿ ಪ್ರಯಾಣಿಸುವ ಮುಂದಿನ ಪೀಳಿಗೆ ಭವಿಷ್ಯ ಕಾಪಾಡುವ ಹೊಣೆಗಾರಿಕೆ ವಾಹನ ಚಾಲಕರ ಕೈಯಲ್ಲಿದ್ದು, ಮುಂದಿನ ಪೀಳಿಗೆ ಉಳಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಮಕ್ಕಳ ಪೋಷಕರು ವಾಹನ ಚಾಲಕರ ಮೇಲಿನ ನಂಬಿಕೆಯಿಂದ ಮಕ್ಕಳನ್ನು ಕಳುಹಿಸಲಿದ್ದು, ಹೀಗಾಗಿ ಮಕ್ಕಳು ಮನೆಯಿಂದ ಶಾಲೆಗೆ, ಶಾಲೆಯಿಂದ ಮನೆಯವರೆಗೆ ಜೋಪಾನವಾಗಿ ಕರೆದುಕೊಂಡು ಹೋಗಿ ಬರುವುದು ಚಾಲಕರ ಜವಾಬ್ದಾರಿಯಾಗಿದೆ. ಈ ಸಮಯದಲ್ಲಿ ಶಾಲಾ ವಾಹನ ಚಾಲಕರು ಮಕ್ಕಳ ಪಾಲಿಗೆ ತಾಯಿ ಸ್ಥಾನದಲ್ಲಿರುವ ಕಾರಣ ಮಕ್ಕಳ ಬಗ್ಗೆ ಬಹಳ ಎಚ್ಚರಿಕೆವಹಿಸಿ ಎಂದು ಅರಿವು ಮೂಡಿಸಿದರು. 

ಶಾಲಾ ವಾಹನ ಚಾಲಕರಿಗೆ ತಾಳ್ಮೆ ಇರಬೇಕಿದ್ದು, ಬಸ್‌ ಚಾಲನೆ ವೇಳೆ ಬೇರೆ ವಾಹನಗಳನ್ನು ಹಿಂದಿಕ್ಕುವ ದುಸ್ಸಾಹಸಕ್ಕೆ ಕೈಹಾಕುವ ಪ್ರಯತ್ನಗಳನ್ನು ಮಾಡಬಾರದು. ಅಲ್ಲದೆ ವಾಹನದ ಕಿಟಕಿಗೆ ಮೆಸ್‌ ಹಾಕುವುದು ಸರಿಯಲ್ಲ, ಇದರಿಂದ ತುರ್ತು ಪರಿಸ್ಥಿತಿಯಲ್ಲಿ ಮಕ್ಕಳನ್ನು ರಕ್ಷಿಸುವುದು ಕಷ್ಟವಾಗಲಿದೆ ಹೀಗಾಗಿ ಅಡ್ಡ ಕಂಬಿಗಳನ್ನು ಬಳಸುವಂತೆ ಸೂಚನೆ ನೀಡಲಾಗಿದೆ ಎಂದು ಮಾಹಿತಿ ನೀಡಿದ ಅಧಿಕಾರಿಗಳು, ಈಗಾಗಲೇ ಹಲವು ಕಡೆಗಳಲ್ಲಿ ಮಳೆಯ ಆರ್ಭಟ ಜೋರಾಗಿದ್ದು, ಇಂತಹ ಸಂದರ್ಭದಲ್ಲಿ ಎಚ್ಚರಿಕೆಯಿಂದ ವಾಹನ ಚಲಾಯಿಸಬೇಕು ಒಂದೊಮ್ಮೆ ಮಳೆ ಜೋರಾಗಿದ್ದರೆ ವಾಹನ ತೆಗೆಯಲೇಬೇಡಿ ಎಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಪ್ರಾದೇಶಿಕ  ಸಾರಿಗೆ ಇಲಾಖೆ ಜಂಟಿ ಆಯುಕ್ತ ಡಾ.ಸಿ.ಟಿ.ಮೂರ್ತಿ, ಡಿಡಿಪಿಐ ಎನ್‌.ಮಮತ ಸೇರಿದಂತೆ ನಗರದ ಎಲ್ಲಾ ಶಾಲಾ ಕಾಲೇಜುಗಳ 250 ಶಾಲಾ ವಾಹನಗಳ ಚಾಲಕರು ಹಾಜರಿದ್ದರು.

Advertisement

ಸುಪ್ರೀಂ ಕೋರ್ಟ್‌ ಆದೇಶದಂತೆ ಶಾಲಾ ವಾಹನ ಚಾಲಕರು ಅನುಸರಿಸಬೇಕಾದ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ವಾಹನ ತಪಾಸಣೆ ವೇಳೆ ವಾಹನದಲ್ಲಿರುವ ನ್ಯೂನತೆಗಳನ್ನು ಶಾಲಾ ಕಾಲೇಜು ಮುಖ್ಯಸ್ಥರಿಗೆ ಮತ್ತು ಚಾಲಕರಿಗೆ ತಿಳಿವಳಿಕೆ ನೀಡುವ ಜತೆಗೆ ಚಾಲಕರು ವಾಹನ ಚಾಲಾಯಿಸುವ ರೀತಿಯನ್ನು ಗಮನಿಸಿ ಸಂಸ್ಥೆ ಗಮನಕ್ಕೆ ತರಲಾಗುತ್ತದೆ.

ವಾಹನದಲ್ಲಿನ ಸಮಸ್ಯೆಗಳನ್ನು ಸರಿಪಡಿಸಿಕೊಳ್ಳಲು ಸಮಯಾವಕಾಶ ನೀಡಲಿದ್ದು, ನಿಗದಿತ ಸಮಯದೊಳಗೆ ಸಮಸ್ಯೆ ಬಗೆಹರಿಸಿಕೊಂಡು ಸ್ಪಷ್ಟನೆ ತೆಗದುಕೊಳ್ಳಬೇಕು. ಇಲ್ಲದಿದ್ದರೆ ಅಂತವರಿಗೆ ಹಾಗೂ ಸಂಸ್ಥೆ ವಿರುದ್ಧ ನೋಟಿಸ್‌ ನೀಡಲಾಗುತ್ತದೆ ಎಂದು ಜಿಲ್ಲಾ ಆಯುಕ್ತ, ಪ್ರಾದೇಶಿಕ ಕಚೇರಿ ಪ್ರಭುಸ್ವಾಮಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next