Advertisement

BJP ಶಾಸಕರ ಅಮಾನತಿನ ಕ್ರಮ ಅಕ್ಷಮ್ಯ: ವಿಶ್ವೇಶ್ವರ ಹೆಗಡೆ ಕಾಗೇರಿ ಅಭಿಪ್ರಾಯ

01:47 PM Aug 03, 2023 | Team Udayavani |

ಬೆಂಗಳೂರು: ಕರ್ನಾಟಕದ ಸದನದಲ್ಲಿ ಬಹಳ ಕಡಿಮೆ ಬಾರಿ ಅಮಾನತುಗಳಾಗಿವೆ. ಮೊನ್ನೆ ದುರ್ಬೀನು ಹಾಕಿಕೊಂಡು ಹುಡುಕಿದರೆ ಸಿಗುವಷ್ಟು ಚಿಕ್ಕ ವಿಷಯಕ್ಕೆ 10 ಬಿಜೆಪಿ ಶಾಸಕರ ಅಮಾನತು ಘಟನೆ ನಡೆದಿದೆ. ಇದು ಅಕ್ಷಮ್ಯ ಕ್ರಮ ಎಂದು ಎಂದು ವಿಧಾನಸಭೆಯ ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಅಭಿಪ್ರಾಯಪಟ್ಟರು.

Advertisement

ಬೆಂಗಳೂರಿನ ‘ಸಿಟಿಜನ್ಸ್ ಫಾರ್ ಡೆಮಾಕ್ರೆಸಿ’ ವತಿಯಿಂದ ನಗರದ ಗಾಂಧಿ ಭವನದಲ್ಲಿ ಏರ್ಪಡಿಸಿದ್ದ “ಶಾಸಕರ ಅಮಾನತು ಒಂದು ಚರ್ಚೆ” ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಚಿಕ್ಕ ವಿಷಯವನ್ನೇ ದೊಡ್ಡ ವಿಷಯ ಮಾಡಿ ಸ್ಪೀಕರ್ ಮತ್ತು ಸರಕಾರ ಶಾಸಕರನ್ನು ಅಮಾನತು ಮಾಡಿದ್ದು ಅದು ಅಕ್ಷಮ್ಯ ಎಂದರು. ಇದರಲ್ಲಿ ಮುಖ್ಯಮಂತ್ರಿ, ಸಂಸದೀಯ ವ್ಯವಹಾರ ಸಚಿವರ ಪ್ರಮುಖ ಪಾತ್ರವೂ ಇದೆ ಎಂದರು. ಸದನದ ರಾಜಕೀಯ ದುರ್ಬಳಕೆಗೆ ಇದು ಸ್ಪಷ್ಟ ಉದಾಹರಣೆ ಎಂದು ತಿಳಿಸಿದರು.

ಸುಗಮ ಕಲಾಪ ನಡೆಯಲು ಆಡಳಿತ ಪಕ್ಷದ ಹೊಣೆಯೂ ಪ್ರಮುಖವಾದುದು. ದೇಶದಲ್ಲಿ ಕಾಂಗ್ರೆಸ್ ಪಕ್ಷ 50-60 ವರ್ಷ ಆಡಳಿತ ಮಾಡಿದೆ. ಪೇಪರ್ ಹರಿದು ಹಾಕಿದ ಚಿಕ್ಕ ಘಟನೆಗೆ ಅಮಾನತಿನ ಶಿಕ್ಷೆ ಕೊಡುವುದು ಸರಿಯಲ್ಲ. ಇದು ವ್ಯವಸ್ಥೆಗೆ ಹೊಡೆತ ನೀಡುತ್ತದೆ ಎಂದರು.

ಊಟಕ್ಕೆ ವಿರಾಮ ಕೊಟ್ಟಿದ್ದರೆ ಘಟನೆಯೇ ನಡೆಯುತ್ತಿರಲಿಲ್ಲ. ಯೋಗೀಶ್ ಭಟ್ ಅವರು ಡೆಪ್ಯುಟಿ ಸ್ಪೀಕರ್ ಇದ್ದಾಗ ಪೇಪರ್ ವೆಯ್ಟನ್ನೇ ಅವರತ್ತ ಒಗೆದಿದ್ದರು. ಫೈಲುಗಳನ್ನೇ ಕಿತ್ತೆಸೆದಿದ್ದರು. ಆಗೆಲ್ಲ ಸಸ್ಪೆಂಡ್ ಮಾಡಿದ್ದರೇ? ಇದು ಕ್ಷಮಾರ್ಹವಲ್ಲ ಎಂದು ತಿಳಿಸಿದರು. ಹಿರಿಯ ಸಚಿವರು ವಿಪಕ್ಷದವರಿಗೂ ಮಾತಿನ ಅವಕಾಶ ಕೊಡಬೇಕೆಂದು ತಿಳಿಸಬೇಕಿತ್ತು. ಉಗುರು ತುದಿಯಲ್ಲಿ ಹೋಗುವುದನ್ನು ಖಡ್ಗ ತೆಗೆದುಕೊಂಡು ಕತ್ತರಿಸುವುದು ಶೋಭೆ ತರುವ ವಿಚಾರವಲ್ಲ ಎಂದು ಹೇಳಿದರು.

ಇದನ್ನೂ ಓದಿ:ಸೆರೆ ಅಂಗಡಿ ಸಂಗವ್ವ ಖ್ಯಾತಿಯ ಹಿರಿಯ ನಟಿ, ರಂಗಭೂಮಿ ಕಲಾವಿದೆ ಮಮತಾ ಗುಡೂರ ನಿಧನ

Advertisement

ಪಶ್ಚಿಮ ಬಂಗಾಲ, ಕೇರಳದಲ್ಲಿ ರಾಜ್ಯಪಾಲರನ್ನು ಸಹಿಸದ, ಅವರನ್ನು ಮಾತನಾಡಲು ಬಿಡದ ಸ್ಥಿತಿ ಬಂದಿದೆ. ಲೋಕಸಭೆಯಲ್ಲಿ ಏನಾಗುತ್ತಿದೆ? ವಂಶಪಾರಂಪರ್ಯ ಆಡಳಿತದ ಮನಸ್ಥಿತಿಯನ್ನು ಒಪ್ಪಿಕೊಂಡ ಜನರು ಪ್ರಜಾಪ್ರಭುತ್ವದ ವ್ಯವಸ್ಥೆಯನ್ನು ಬಲಪಡಿಸಲು ಅಸಾಧ್ಯ ಎಂದು ಹೇಳಿದರು.

ಕರ್ನಾಟಕದಲ್ಲಿ ಒಳ್ಳೊಳ್ಳೆಯ ಮುಖ್ಯಮಂತ್ರಿ, ಸ್ಪೀಕರ್, ಪ್ರತಿಪಕ್ಷಗಳ ನಾಯಕರು ಕೆಲಸ ಮಾಡಿದ್ದಾರೆ. ಉತ್ತಮ ಕೊಡುಗೆಯನ್ನೂ ಕೊಟ್ಟಿದ್ದಾರೆ. 10 ಜನ ಬಿಜೆಪಿ ಶಾಸಕರನ್ನು ಸಭಾಧ್ಯಕ್ಷ ಯು.ಟಿ.ಖಾದರ್ ಅವರು ಅಮಾನತು ಮಾಡಿದ್ದರು. ಸದನದ ಒಳಗೆ ಅಂಗಿ ಬಿಚ್ಚಿ ಅದನ್ನು ತೂರಾಡಿಕೊಂಡು ಓಡಾಡಿದರೆ ನಮ್ಮ ಸದನದ ಘನತೆ ಹೆಚ್ಚಲು ಸಾಧ್ಯವಿದೆಯೇ? ಅಂಥ ಸಂದರ್ಭದಲ್ಲಿ ನಾನೂ ಅವರನ್ನು ಸಸ್ಪೆಂಡ್ ಮಾಡಿದ್ದೇನೆ ಎಂದು ವಿಶ್ಲೇಷಿಸಿದರು.

ಸಂವಿಧಾನ ರಚನೆ ಕೇವಲ ನಾಲ್ಕಾರು ದಿನಗಳಲ್ಲಿ ಆಗಿಲ್ಲ. ಹಲವು ವರ್ಷಗಳ ಕಾಲ ಇದಕ್ಕೆ ಬೇಕಾಗಿತ್ತು ಎಂದ ಅವರು, ಸಂವಿಧಾನ ಹೇಗಿರಬೇಕು ಎಂಬ ಕುರಿತು ಎರಡು ವರ್ಷಕ್ಕೂ ಹೆಚ್ಚು ಕಾಲ ಮುಕ್ತ ಚರ್ಚೆ ನಡೆದಿತ್ತು. ಬಳಿಕ ಶ್ರೇಷ್ಠ ಸಂವಿಧಾನ ಸಿಕ್ಕಿದೆ ಎಂದು ವಿವರಿಸಿದರು. ಸಂವಿಧಾನದ ಆಶಯ ಕಾಪಾಡುವ ಜಾಗೃತಿಯನ್ನು ಜನರಲ್ಲಿ ಮೂಡಿಸಬೇಕು ಎಂದು ತಿಳಿಸಿದರು.

ತಪ್ಪುಗಳಾಗುತ್ತದೆ; ಅದನ್ನು ಸರಿಪಡಿಸಲು ನೂರೆಂಟು ವಿಧಾನಗಳಿವೆ. ಅದರ ಕುರಿತು ಯೋಚಿಸಬೇಕೇ ಹೊರತು ಕಾಲಿಗೆ ಮುಳ್ಳು ಚುಚ್ಚಿದೆ ಎಂದು ಕಾಲನ್ನೇ ತುಂಡರಿಸುವ ವೈದ್ಯಕೀಯ ಪ್ರವೃತ್ತಿ ಜಾರಿಯಾದರೆ ಅದು ಸಮರ್ಪಕವಲ್ಲ. ಅಂತೆಯೇ ಕರ್ನಾಟಕದ ಶಾಸಕರ ಅಮಾನತು ಘಟನೆ ಪ್ರಜಾಪ್ರಭುತ್ವ ವಿರೋಧಿ ನಿಲುವೆನ್ನದೆ ಬೇರೇನು ಹೇಳಲು ಸಾಧ್ಯ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next