Advertisement

ಪಾಲಿಕೆ ಮೇಲೆ ನಿಯಮ ಉಲ್ಲಂಘನೆ ತೂಗುಗತ್ತಿ?

12:26 PM Oct 10, 2018 | Team Udayavani |

ಬೆಂಗಳೂರು: ಹೈಕೋರ್ಟ್‌ ಸೂಚನೆಯಂತೆ ರಸ್ತೆ ಗುಂಡಿಗಳನ್ನು ಮುಚ್ಚುವ ಭರದಲ್ಲಿ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ “ಕರ್ನಾಟಕ ಸಾರ್ವಜನಿಕ ಸಂಗ್ರಹಣಾ ಪಾರದರ್ಶಕ ಕಾಯ್ದೆ’ (ಕೆಟಿಟಿಪಿ)ಯ ನಿಯಮ ಉಲ್ಲಂ ಸಿದೆ. ಇದು ಈಗ ಅಧಿಕಾರಿಗಳನ್ನು ಪೇಚೆಗೆ ಸಿಲುಕಿಸಿದೆ. 

Advertisement

“ಮೂರು ದಿನಗಳಲ್ಲಿ ರಸ್ತೆ ಗುಂಡಿ ಮುಚ್ಚಬೇಕು. ಆದೇಶ ಪಾಲನೆ ಆಗದಿದ್ದರೆ, ಪರಿಣಾಮ ಎದುರಿಸಲು ಸಜ್ಜಾಗಿ’ ಎಂದು ಹೈಕೋರ್ಟ್‌ ಚಾಟಿ ಬೀಸಿತ್ತು. ಈ ಬೀಸುವ ಡೊಣ್ಣೆಯಿಂದ ತಪ್ಪಿಸಿಕೊಳ್ಳಲು ಬಿಬಿಎಂಪಿಯು ರಸ್ತೆ ಗುಂಡಿ ಮುಚ್ಚುವ ಕಾಮಗಾರಿಯನ್ನು ಕರ್ನಾಟಕ ರಸ್ತೆ ಮೂಲಸೌಕರ್ಯ ಅಭಿವೃದ್ಧಿ ನಿಗಮ (ಕೆಆರ್‌ಐಡಿಎಲ್‌)ಕ್ಕೆ ವಹಿಸಿತ್ತು.

ಆದರೆ, ಇದಕ್ಕೆ ಅಗತ್ಯ ಇರುವ “4 (ಜಿ)’ ವಿನಾಯ್ತಿ ಪಡೆಯುವುದನ್ನು ಮರೆಯಿತು. ಇದರಿಂದ ಕಾಯ್ದೆ ಉಲ್ಲಂಘನೆಯ ತೂಗುಗತ್ತಿ ಪಾಲಿಕೆ ಮೇಲಿದೆ. ಈ ಹಿನ್ನೆಲೆಯಲ್ಲಿ ಉದ್ದೇಶಿತ ರಸ್ತೆ ಗುಂಡಿ ಮುಚ್ಚುವ ಕಾಮಗಾರಿಗೆ ಘಟನೋತ್ತರ ಅನುಮೋದನೆ ನೀಡುವಂತೆ ಈಗ ಬಿಬಿಎಂಪಿಯು ಸರ್ಕಾರದ ಮೊರೆ ಹೋಗಿದೆ. ವಾರದ ಹಿಂದೆಯೇ ಈ ಸಂಬಂಧ ನಗರಾಭಿವೃದ್ಧಿ ಇಲಾಖೆಗೆ ಮನವಿ ಮಾಡಿದ್ದು, ಹಣಕಾಸು ಇಲಾಖೆ ಇದರ ಪರಿಶೀಲನೆ ನಡೆಸುತ್ತಿದೆ.

ಕೆಟಿಟಿಪಿ ಕಾಯ್ದೆ ಪ್ರಕಾರ ಒಂದು ಲಕ್ಷ ರೂ. ಮೀರಿದ ಯಾವುದೇ ಸರ್ಕಾರಿ ಕಾಮಗಾರಿಗಳಿಗೆ ಕಡ್ಡಾಯವಾಗಿ ಟೆಂಡರ್‌ ಆಹ್ವಾನಿಸಬೇಕು. ಇನ್ನು ಕೆಆರ್‌ಐಡಿಎಲ್‌ಗೆ ಕಾಯ್ದೆ 4 (ಜಿ) ಅಡಿ ಕೆಟಿಟಿಪಿಯಿಂದ ವಿನಾಯ್ತಿ ನೀಡಲಾಗಿದೆ. ಅದರಂತೆ ತುರ್ತು ಕಾಮಗಾರಿಗಳನ್ನು ಗುತ್ತಿಗೆ ನೀಡದೆ, ನೇರವಾಗಿ ಕೈಗೆತ್ತಿಕೊಳ್ಳಬಹುದು. ಆದರೆ, ಇದರ ಮಿತಿ ಎರಡು ಕೋಟಿ ರೂ. ಆಗಿದ್ದು, ಷರತ್ತುಗಳನ್ನೂ ಇದಕ್ಕೆ ವಿಧಿಸಲಾಗಿದೆ.

ಆದರೆ, ಕೆಆರ್‌ಐಡಿಎಲ್‌ ಮೂಲಕ ಬಿಬಿಎಂಪಿ ಸರಿಸುಮಾರು 1,500ರಿಂದ 2,000 ಗುಂಡಿಗಳನ್ನು ಮುಚ್ಚಿಸಿದ್ದು, ಹತ್ತಾರು ಕೋಟಿ ರೂ. ಇದಕ್ಕಾಗಿ ಖರ್ಚಾಗಿದೆ. ಹಾಗೊಂದು ವೇಳೆ ಇಲಾಖೆ ಹಿಂದೇಟು ಹಾಕಿದರೆ, ಕಾಮಗಾರಿಗೆ ಪ್ರತಿಯಾಗಿ ಪಾವತಿಸಬೇಕಾದ ಅನುದಾನ ಬಿಡುಗಡೆ ಕಷ್ಟವಾಗಲಿದೆ. ಆಗ ಮತ್ತೆ ಕೋರ್ಟ್‌ ಮೊರೆಹೋಗಿ, ಅನುಮೋದನೆಗೆ ಸೂಚಿಸುವಂತೆ ಮನವಿ ಮಾಡಬೇಕಾಗುತ್ತದೆ ಎಂದು ಹೆಸರು ಹೇಳಲಿಚ್ಛಿಸದ ಬಿಬಿಎಂಪಿ ಅಧಿಕಾರಿಯೊಬ್ಬರು ತಿಳಿಸಿದರು.

Advertisement

ಉಲ್ಲಂ ಸದೆ ಅನ್ಯ ಮಾರ್ಗ ಇರಲಿಲ್ಲ?: ಪಾಲಿಕೆ ಹೀಗೆ ಕೆಟಿಟಿಪಿ ನಿಯಮ ಉಲ್ಲಂ ಸದೆ ಪರ್ಯಾಯ ಮಾರ್ಗವೂ ಇರಲಿಲ್ಲ. ಯಾಕೆಂದರೆ, ಹೈಕೋರ್ಟ್‌ ನೀಡಿದ್ದ ಗಡುವು ಮೂರು ದಿನಗಳು ಮಾತ್ರ. ಆ ಅಲ್ಪಾವಧಿಯಲ್ಲಿ ಅಂದಾಜು ಪಟ್ಟಿ ಸಿದ್ಧಪಡಿಸಿ, ಸರ್ಕಾರಕ್ಕೆ 4 (ಜಿ) ವಿನಾಯ್ತಿಗಾಗಿ ಪ್ರಸ್ತಾವನೆ ಸಲ್ಲಿಸಬೇಕಾಗಿತ್ತು. ಇದಕ್ಕೆ ಮತ್ತಷ್ಟು ಸಮಯ ಬೇಕಾಗುತ್ತಿತ್ತು. ಹಾಗಾಗಿ, ಈ ಬಗ್ಗೆ ಅರಿವಿದ್ದರೂ ನೇರವಾಗಿ ಕೆಆರ್‌ಐಡಿಎಲ್‌ಗೆ ವಹಿಸಬೇಕಾಯಿತು ಎಂದು ಪಾಲಿಕೆಯ ಹಿರಿಯ ಅಧಿಕಾರಿಯೊಬ್ಬರು ಸಮಜಾಯಿಷಿ ನೀಡುತ್ತಾರೆ.

ಡಿಎಲ್‌ಪಿ ರಸ್ತೆಗಳೂ ದುರಸ್ತಿ!: ವಿಚಿತ್ರವೆಂದರೆ ಹೀಗೆ ಗುಂಡಿಮುಚ್ಚಿದ್ದರಲ್ಲಿ ಬಹುತೇಕ ರಸ್ತೆಗಳ ಡಿಎಲ್‌ಪಿ (ಡಿಫೆಕ್ಟ್ ಲಯಾಬಲಿಟಿ ಪಿರಿಯಡ್‌)ಯಲ್ಲಿ ಇದ್ದವು. ಡಿಎಲ್‌ಪಿ ಅಂದರೆ ನಿರ್ಮಿಸಿದ ರಸ್ತೆಗಳಲ್ಲಿ ಯಾವುದೇ ಲೋಪಗಳು ಕಂಡುಬಂದರೆ, ಆ ರಸ್ತೆಗಳನ್ನು ಗುತ್ತಿಗೆಪಡೆದ ಗುತ್ತಿಗೆದಾರರೇ ದುರಸ್ತಿ ಮಾಡಿಕೊಡಬೇಕಾಗುತ್ತದೆ.

ಇದೆಲ್ಲದರ ಮಧ್ಯೆಯೂ ನಗರದ ರಸ್ತೆಗಳು ಇನ್ನೂ ಗುಂಡಿಮುಕ್ತವಾಗಿಲ್ಲ. ಕೆಲವು ರಸ್ತೆಗಳಲ್ಲಿ ಈಗಲೂ ಗುಂಡಿಗಳು ಬಲಿಗಾಗಿ ಕಾದಿವೆ. ಈ ಹಿಂದೆ ಗುಂಡಿಗಳನ್ನು ಮುಚ್ಚುವ ಕಾಮಗಾರಿ ವೇಳೆ ಮಳೆ ಇತ್ತು. ನಿಗದಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸುವ ತರಾತುರಿಯಲ್ಲಿ ಹಸಿಯಾಗಿರುವ ಜಾಗದಲ್ಲೇ ಹಾಟ್‌ಮಿಕ್ಸ್‌ ಹಾಕಿ ಮುಚ್ಚಲಾಗಿದೆ. ಅದು ತದನಂತರ ಕೆಲವೆಡೆ ಕಿತ್ತುಹೋಗಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. ಬಿಬಿಎಂಪಿ ಪ್ರಕಾರ ನಗರದಲ್ಲಿ ಅಂದಾಜು 350 ಗುಂಡಿಗಳು ಮಾತ್ರ ಇವೆ.

45 ಕೋಟಿಗೆ 4 (ಜಿ) ವಿನಾಯ್ತಿ: ಪ್ರತಿ ವರ್ಷ ಬಿಬಿಎಂಪಿಯು ಯೋಜನಾ ಕಾಮಗಾರಿಗಾಗಿ ಹೊಸ ವಾರ್ಡ್‌ಗಳಿಗೆ ವರ್ಷಕ್ಕೆ 3 ಕೋಟಿ ಹಾಗೂ ಹಳೆಯ ವಾರ್ಡ್‌ಗಳಿಗೆ 2 ಕೋಟಿ ಅನುದಾನ ನೀಡುತ್ತದೆ. ಅದರಲ್ಲಿ ಶೇ. 10ರಷ್ಟು ಮೊತ್ತವನ್ನು ರಸ್ತೆ ಗುಂಡಿ ಮುಚ್ಚಲು ಮೀಸಲಿಡಲಾಗಿರುತ್ತದೆ. ಈ ಮೊತ್ತಕ್ಕೆ ಈಗ ಕೆಟಿಟಿಪಿ ಕಾಯ್ದೆಯ 4 (ಜಿ) ವಿನಾಯ್ತಿ ನೀಡುವಂತೆ ಕೋರಲಾಗಿದೆ. ಮೂಲಗಳ ಪ್ರಕಾರ ಈ ಮೊತ್ತ 45 ಕೋಟಿ ರೂ. ಆಗಿದೆ.

* ವಿಜಯಕುಮಾರ ಚಂದರಗಿ 

Advertisement

Udayavani is now on Telegram. Click here to join our channel and stay updated with the latest news.

Next