ಲಕ್ನೋ : ಉತ್ತರ ಪ್ರದೇಶ ಪೊಲೀಸ್‌ನ ಉಗ್ರ ನಿಗ್ರಹ ದಳದ ಕಮಾಂಡೋಗಳು ಲಕ್ನೋದ ಠಾಕೂರ್‌ಗಂಜ್ ಪ್ರದೇಶದಲ್ಲಿ ನಡೆಸಿದ 12 ತಾಸುಗಳ ಕಾರ್ಯಾಚರಣೆಯಲ್ಲಿ ಐಸಿಸ್ ಉಗ್ರ ಸಂಘಟನೆಯ ಖುರಾಸಾನ್ ದಳಕ್ಕೆ ಸೇರಿದ ಶಂಕಿತ ಉಗ್ರನನ್ನು ಕೊನೆಗೂ ಹತ್ಯೆಗೈಯಲಾಗಿದೆ.
ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ (ಕಾನೂನು ಮತ್ತು ಸುವ್ಯವಸ್ಥೆ) ದಲ್ಜಿತ್ ಚೌಧರಿ ಅವರು ಉಗ್ರ ನಿಗ್ರಹ ದಳದ ಕಮಾಂಡೋಗಳು ನಡೆಸಿರುವ ಈ ಯಶಸ್ವೀ ಕಾರ್ಯಾಚರಣೆಯಲ್ಲಿ ಶಂಕಿತ ಐಸಿಸ್ ಉಗ್ರನನ್ನು ಹತ್ಯೆಗೈಯಲಾಗಿರುವುದನ್ನು ದೃಢೀಕರಿಸಿದ್ದಾರೆ.
ಶಂಕಿತ ಉಗ್ರನು ಅಡಗಿಕೊಂಡಿದ್ದ ಮನೆಯನ್ನು ಪ್ರವೇಶಿಸಿದ ಕಮಾಂಡೋಗಳಿಗೆ ಆತನು ಕೋಣೆಯಲ್ಲಿ ಸತ್ತು ಬಿದ್ದಿರುವುದು ಪತ್ತೆಯಾಯಿತು. ಆತನ ಬಳಿ 8 ಪಿಸ್ತೂಲುಗಳು, 650 ಸುತ್ತಿನ ಮದ್ದು ಗುಂಡುಗಳು, 50 ಸುತ್ತಿನ ಬಳಕೆಯಾದ ಮದ್ದುಗುಂಡುಗಳು, ಸ್ಫೋಟಕ ವಸ್ತುಗಳು, ಚಿನ್ನ,ನಗದು, ಪಾಸ್‌ಪೋರ್ಟ್, ಸಿಮ್ ಕಾರ್ಡ್, ಐಸಿಸ್ ಧ್ವಜ ಇತ್ಯಾದಿಗಳು ಇದ್ದುದು ಪತ್ತೆಯಾಗಿದ್ದು ಅವುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಶಂಕಿತನು ಐಸಿಸ್ ಉಗ್ರ ಸಂಘಟನೆಯ ಸಕ್ರಿಯ ಸದಸ್ಯನಾಗಿದ್ದ ಎಂಬುದನ್ನು ಐಜಿ ಎಟಿಎಸ್ ಆಸೀಮ್ ಅರುಣ್ ದೃಢಪಡಿಸಿದ್ದಾರೆ.
ಶಂಕಿತ ಉಗ್ರ ಸೈಫುಲ್ಲಾ ಮಧ್ಯಪ್ರದೇಶದಲ್ಲಿ ಟ್ರೈನ್ ಬ್ಲಾಸ್ಟ್ ನಲ್ಲಿ ಭಾಗಿಯಾಗಿದ್ದು ಆತನ ಠಾಕೂರ್‌ಗಂಜ್ ಪ್ರದೇಶದಲ್ಲಿನ ಮನೆಯೊಂದರಲ್ಲಿ ಅಡಗಿಕೊಂಡಿದ್ದಾನೆ ಎಂಬ ಗುಪ್ತಚರ ದಳದ ಮಾಹಿತಿಗಳನ್ನು ಆಧರಿಸಿ ಎಟಿಎಸ್ ಕಮಾಂಡೋ ಕಾರ್ಯಾಚರಣೆಯನ್ನು ಕೈಗೊಳ್ಳಲಾಗಿತ್ತು.