ಹೊಸದಿಲ್ಲಿ : ನೇಪಾಲದ ಜನಕಪುರದಲ್ಲಿ ಈಚೆಗೆ ಪ್ರಧಾನಿ ನರೇಂದ್ರ ಮೋದಿ ಅವರು ‘ಲಕ್ಷಾಂತರ ಭಾರತೀಯರನ್ನು ಉದ್ದೇಶಿಸಿ ಮಾತನಾಡಿದ್ದಾರೆ’ ಎಂಬ ತನ್ನ ತಪ್ಪು ಹೇಳಿಕೆಗಾಗಿ ವಿದೇಶ ವ್ಯವಹಾರಗಳ ಸಚಿವೆ ಸುಶ್ಮಾ ಸ್ವರಾಜ್ ಅವರು ಟ್ವಿಟರ್‌ನಲ್ಲಿ ಕ್ಷಮೆಯಾಚಿಸಿದ್ದಾರೆ.
ನೇಪಾಲದ ಓರ್ವ ಸಂಸದರು ಸೇರಿದಂತೆ ಕೆಲವು ನೇಪಾಲಿಗರು ಟ್ವಿಟರ್‌ನಲ್ಲಿ, “ಈ ತಿಂಗಳ ಆದಿಯಲ್ಲಿ ಪ್ರಧಾನಿ ಮೋದಿ ಅವರು ಜನಕಪುರದಲ್ಲಿ ನೇಪಾಲಿ ಜನರನ್ನು ಉದ್ದೇಶಿಸಿ ಮಾತನಾಡಿದ್ದೇ ಹೊರತು ಭಾರತೀಯರನ್ನಲ್ಲ’ ಎಂದು ಹೇಳಿರುವರಲ್ಲದೆ ಸುಶ್ಮಾ ಸ್ವರಾಜ್ ಹೇಳಿಕೆಯನ್ನು ಅಲ್ಲಗಳೆದಿದ್ದಾರೆ.
“ಇದು ನನ್ನಿಂದಾಗಿರುವ ತಪ್ಪು. ಅದಕ್ಕಾಗಿ ನಾನು ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇನೆ’ ಎಂದು ಸ್ವರಾಜ್ ನಿನ್ನೆ ಸೋಮವಾರ ರಾತ್ರಿ ಟ್ವೀಟ್ ಮಾಡಿದರು. ಪ್ರಧಾನಿ ನರೇಂದ್ರ ಮೋದಿ ಅವರು ನೇಪಾಲ ಸಹಿತ ವಿದೇಶದಲ್ಲಿನ ಬಹುಸಂಖ್ಯಾ ಭಾರತೀಯ ತಾಣಗಳನ್ನು ತಲುಪುವ ಯತ್ನ ಮಾಡುತ್ತಿದ್ದಾರೆ ಎಂಬ ಪ್ರತಿಕ್ರಿಯೆಯ ವಿಡಿಯೋ ಒಂದನ್ನು ಕೂಡ ಸುಶ್ಮಾ ಟ್ವಿಟರ್‌ಗೆ ಹಾಕಿದ್ದಾರೆ.
“ಅಮೆರಿಕದ ಮ್ಯಾಡಿಸನ್ ಚೌಕದಿಂದ ನೇಪಾಲದ ಜನಕಪುರದ ವರೆಗ ಲಕ್ಷಾಂತಕರ ಭಾರತೀಯರನ್ನು ಉದ್ದೇಶಿಸಿ ಮಾತನಾಡುವ ಮೂಲಕ ಅವರನ್ನು ತಲುಪಿರುವ ನರೇಂದ್ರ ಮೋದಿ ಅವರು ಭಾರತದ ಮೊತ್ತ ಮೊದಲ ಪ್ರಧಾನಿ ಎನಿಸಿಕೊಂಡಿದ್ದಾರೆ ಎಂದು ಸುಶ್ಮಾ ಸ್ವರಾಜ್ ಹೇಳಿದ್ದರು.
ನೇಪಾಲಿ ಕಾಂಗ್ರೆಸ್ ನಾಯಕ ಮತ್ತು ಸಂಸದರಾಗಿರುವ ಗಗನ್ ಥಾಪಾ ಅವರು ಸ್ವರಾಜ್ ಅವರ ಈ ಹೇಳಿಕೆಯನ್ನು ಟೀಕಿಸಿ “ನೇಪಾಲದ ಸಾರ್ವಭೌಮತೆಯನ್ನು ಕಡೆಗಣಿಸುವ ನಿರುದ್ದೇಶದ ಹೇಳಿಕೆ ಇದಾಗಿರಬಹುದೇ?” ಎಂದು ಅಚ್ಚರಿ ವ್ಯಕ್ತಪಡಿಸಿದ್ದರು.