ತಿರುವನಂತಪುರಂ: ಇಲ್ಲಿನ ಗ್ರೀನ್ ಫೀಲ್ಡ್ ಮೈದಾನದಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಬ್ಯಾಟರ್ ಸೂರ್ಯಕುಮಾರ್ ಯಾದವ್ ಮತ್ತೊಂದು ಅರ್ಧಶತಕದೊಂದಿಗೆ ತಮ್ಮ ಭರ್ಜರಿ ಫಾರ್ಮ್ ಮುಂದುವರೆಸಿದರು. ಸೂರ್ಯಕುಮಾರ್ ತಮ್ಮ ಈ ಸ್ಪೋಟಕ ಇನ್ನಿಂಗ್ಸ್ ನಲ್ಲಿ ಕೇವಲ 33 ಎಸೆತಗಳಲ್ಲಿ ಮೂರು ಸಿಕ್ಸರ್ ಮತ್ತು ಐದು ಬೌಂಡರಿಗಳೊಂದಿಗೆ 50 ರನ್ ಗಳಿಸಿದರು.
ಇದೇ ವೇಳೆ ಸೂರ್ಯಕುಮಾರ್ ಯಾದವ್ ಅವರು ದಾಖಲೆಯೊಂದನ್ನು ಮುರಿದರು. ಕ್ಯಾಲೆಂಡರ್ ವರ್ಷದಲ್ಲಿ ಅತಿ ಹೆಚ್ಚು ಅಂತಾರಾಷ್ಟ್ರೀಯ ಟಿ20 ರನ್ ಪೇರಿಸಿದ ಭಾರತೀಯ ಎಂಬ ದಾಖಲೆಗೆ ಪಾತ್ರರಾದರು. ಈ ಹಿಂದೆ ಈ ದಾಖಲೆ ಶಿಖರ್ ಧವನ್ ಅವರ ಹೆಸರಿನಲ್ಲಿತ್ತು. ಧವನ್ 2018 ರಲ್ಲಿ 18 ಪಂದ್ಯಗಳಲ್ಲಿ 40.52 ರ ಸರಾಸರಿ ಮತ್ತು 147.22 ರ ಸ್ಟ್ರೈಕ್ ರೇಟ್‌ನಲ್ಲಿ 689 ರನ್ ಗಳಿಸಿದ್ದರು.
ಇದನ್ನೂ ಓದಿ:ಬಾಲಿವುಡ್ ನಿರ್ಮಾಪಕಿ ಏಕ್ತಾ ಕಪೂರ್ ಮತ್ತು ಅವರ ತಾಯಿ ವಿರುದ್ಧ ಅರೆಸ್ಟ್ ವಾರೆಂಟ್
ತಿರುವನಂತಪುರದಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಪಂದ್ಯಕ್ಕೂ ಮೊದಲು ಈ ದಾಖಲೆಯನ್ನು ಮುರಿಯಲು ಸೂರ್ಯಕುಮಾರ್ ಕೇವಲ ಎಂಟು ರನ್ ಗಳ ಅಗತ್ಯವಿತ್ತು. ಆದರೆ ಅರ್ಧ ಶತಕ ಬಾರಿಸಿದ ಸ್ಟೈಲಿಶ್ ಬ್ಯಾಟರ್ ಈಗ 2022 ರಲ್ಲಿ 732 ರನ್ ಗಳನ್ನು ಗಳಿಸಿದ್ದಾರೆ. ಇನ್ನೂ ಹಲವು ಟಿ20 ಪಂದ್ಯಗಳು ಬಾಕಿ ಇರುವಂತೆ ಸೂರ್ಯ ಈ ವರ್ಷ ಇನ್ನಷ್ಟು ರನ್ ಗಳಿಸಬಹುದು.
ಸೂರ್ಯಕುಮಾರ್ ಅವರು ಕ್ಯಾಲೆಂಡರ್ ವರ್ಷದಲ್ಲಿ ಅತೀ ಹೆಚ್ಚು ಸಿಕ್ಸರ್ (45) ಸಿಡಿಸಿದ ದಾಖಲೆಯಲ್ಲೂ ಮೊದಲ ಸ್ಥಾನಕ್ಕೇರಿದರು. 2021 ರಲ್ಲಿ ಮೊಹಮ್ಮದ್ ರಿಜ್ವಾನ್ ಅವರ 42 ಸಿಕ್ಸರ್‌ಗಳನ್ನು ಬಾರಿಸಿದ್ದರು.