Advertisement
ಮಂಗಳವಾರ ಬೆಳಗ್ಗೆ 11:15 ರ ಸುಮಾರಿಗೆ ಆಗಸಕ್ಕೆ ಚಿಮ್ಮಿದ ಸೂರ್ಯಕಿರಣ್-7 ಲಘು ವಿಮಾನಗಳ ಪರಸ್ಪರ ಸ್ಪರ್ಶವಾಗಿ ಎರಡು ಕಿ. ಮೀ. ದೂರದ ಇಸ್ರೋಲೇಔಟ್‌ನಲ್ಲಿ ಪತನಗೊಂಡವು. ವಿಮಾನ ಪತನದ ಶಬ್ಧದಿಂದ ಲೇಔಟ್‌ನಲ್ಲಿ ಭೂಕಂಪನದ ಅನುಭವವಾಗಿ ಮನೆಯಲ್ಲಿದ್ದ ಜನರು ಚೀರಾಡಿ ಹೊರಬಂದರು.
Related Articles
Advertisement
ಎರಡೂ ವಿಮಾನಗಳು ಸುಮಾರು 50 ಮೀಟರ್ ದೂರದ ಅಡಿಯಲ್ಲಿ ನೆಲಕ್ಕುರುಳವೆ. ಈ ಸ್ಥಳದ ಹತ್ತಿಪ್ಪತ್ತು ಅಡಿ ದೂರದಲ್ಲಿಯೇ ಅಪಾರ್ಟ್‌ಮೆಂಟ್ ಹಾಗೂ ಮನೆಗಳವೆ ಒಂದು ವೇಳೆ ಅವುಗಳ ಮೇಲೆ ಬಿದ್ದಿದ್ದರೆ ಭಾರೀ ದುರಂತವೇ ಸಂಭವಿಸುತ್ತಿತ್ತು. ಜತೆಗೆ, ವಿಮಾನದ ರೆಕ್ಕೆ ಬಡಿದು ಮನೆ ಸುಟ್ಟಿದೆ. ಅದೃಷ್ಟವಶಾತ್ ಮನೆಯಲ್ಲಿ ಯಾರು ಇಲ್ಲದ ಕಾರಣ ಪಾಣಹಾನಿಯಾಗಿಲ್ಲ.
ದುರಂತದ ಸ್ಥಳಕ್ಕೆ ಸ್ಥಳೀಯರು ತಂಡೋಪತಂಡವಾಗಿ ಆಗಮಿಸುತ್ತಿದ್ದರು. ಅವರನ್ನು ನಿಯಂತ್ರಿಸಲು ಸ್ಥಳೀಯ ಪೊಲೀಸರು ಹರಸಾಹಸಪಟ್ಟರು. ಘಟನಾ ಸ್ಥಳವನ್ನು ಸೇನಾ ಅಧಿಕಾರಿಗಳು ಸಂಪೂರ್ಣವಾಗಿ ತಮ್ಮ ಪಹರೆಗೆ ತೆಗೆದುಕೊಂಡು ವಿಮಾನದ ಅವಶೇಷಗಳನ್ನು ಪಡೆದುಕೊಳ್ಳುವ ಪ್ರಕ್ರಿಯೆಯಲ್ಲಿ ಸಂಜೆವರೆಗೂ ತೊಡಗಿದ್ದರು. ಇವರಿಗೆ ಸಿವಿಲ್ ಡಿಫೆನ್ಸ್ ತಂಡ ಕೈ ಜೋಡಿಸಿತ್ತು. ಸ್ಥಳಕ್ಕೆ ಬೆಂಗಳೂರು ನಗರ ಜಿಲ್ಲಾಧಿಕಾರಿ ವಿಜಯ್‌ಶಂಕರ್, ನಗರ ಪೊಲಿಸ್ ಆಯುಕ್ತ ಟಿ. ಸುನೀಲ್ ಕುಮಾರ್ ಭೇಟಿ ನೀಡಿ ಮಾಹಿತಿ ಪಡೆದುಕೊಂಡರು.
ಭೂ ಕಂಪನದ ಅನುಭವ: “ಮನೆಯಲ್ಲಿ ಕುಳತು ಓದುತ್ತಾ ಕುಳತೆ. ಆದರೆ, ಇದ್ದಕ್ಕಿದ್ದಂತೆ ಭಾರೀ ಶಬ್ದದ ಜೊತೆ ಭೂಕಂಪನದ ಅನುಭವ ಆಯಿತು. ಕೂಡಲೇ ನಮ್ಮ ಆಂಟಿ ಹೊರಗಡೆ ಬಂದು ಉರಿಯುತ್ತಿದ್ದ ಬೆಂಕಿ ನೋಡಿ ಕೂಗಿಕೊಂಡರು. ಹೊರ ಬಂದಾಗ ವಿಮಾನಗಳು ಪತನಗೊಂಡಿದ್ದವು. ಜನರು ಫೈಲೆಟ್‌ಗಳ ರಕ್ಷಣೆಗೆ ಓಡುತ್ತಿದ್ದರು. ಪುನ: ನಾನೂ ಅವರ ಜತೆ ತೆರಳಿ ರಕ್ಷಣಾ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ಹೋಗುತ್ತಿದ್ದೆ. ಅಷ್ಟರಲ್ಲಾಗಲೇ ಗಾಯಾಳು ಫೈಲೆಟ್‌ವೊಬ್ಬರನ್ನು ಕೆಲವರು ಎತ್ತಿಕೊಂಡು ಬಂದರು ಸೇನಾ ಸಿಬ್ಬಂದಿ ಅವರನ್ನು ಆ್ಯಂಬುಲೆನ್ಸ್‌ನಲ್ಲಿ ಕರೆದೊಯ್ದರು ಎಂದು ಸ್ಥಳೀಯ ನಿವಾಸಿ ಕುಮಾರ್ ತಿಳಿಸಿದರು.
ಭಯಾನಕ ಪತನ: “ಟೆರೇಸ್ ಮೇಲೆ ನಿಂತು ವಿಮಾನಗಳ ಹಾರಾಟ ನೋಡುತ್ತಿದ್ದೆ. ಆದರೆ ಎರಡೂ ವಿಮಾನಗಳು ಪರಸ್ಪರ ಸ್ಪರ್ಶದಿಂದ ಮನೆಯ ಸಮೀಪವೇ ನೆಲಕ್ಕೆ ಬಿದ್ದವು. ಫೈಲೆಟ್‌ಗಳು ಪ್ಯಾರಚೂಟ್ ಮೂಲಕ ಬೇರೆಡೆ ಧರೆಗುರುಳಿದರು. ಈ ಘಟನೆ ಕಂಡು ಕೂಗಿಕೊಂಡೆ. ಅಪಾರ್ಟ್‌ಮೆಂಟ್ ನಿವಾಸಿಗಳು ಹೊರಗಡೆ ಬಂದವರು ಸಹಾಯಕ್ಕೆ ಧಾವಿಸಿದರು. ವಿಮಾನ ಪತನ ದೃಶ್ಯ ಅತ್ಯಂತ ಭಯಾನಕವಾಗಿತ್ತು ಎಂದು ಅಲ್ಟಿಮೇಟ್ ಸಿಗ್ನೇಚರ್ ಅಪಾರ್ಟ್‌ಮೆಂಟ್ ನಿವಾಸಿ ಮರಿಯಮ್ ವಿವರಿಸಿದರು.
ಪೈಲೆಟ್ ರಕ್ಷಣೆ: ಪ್ಯಾರಚೂಟ್ ಮೂಲಕ ಘಟನಾ ಸ್ಥಳದಿಂದ ಸ್ವಲ್ಪ ದೂರದಲ್ಲಿ ಬಿದ್ದಿದ್ದ ಪೈಲೆಟ್‌ವೊಬ್ಬರ ಬಳಿ ತೆರಳಿ ಅವರ ರಕ್ಷಣೆ ಮಾಡಲಾಯಿತು. ಅವರನ್ನು ಎತ್ತಿಕೊಂಡು ಮಲಗಿಸಿದೆವು. ಅವರು ಸ್ವಲ್ಪ ಸ್ವಲ್ಪ ಮಾತನಾಡುತ್ತಿದ್ದರು. ಅವರಿಗೆ ಗಾಳಿಯಾಡಲು ಅವಕಾಶ ಮಾಡಿಕೊಡಲಾಗಿತ್ತು. ಅಷ್ಟರಲ್ಲಿ ರಕ್ಷಣಾ ಸಿಬ್ಬಂದಿ ಅವರನ್ನು ಆಸ್ಪತ್ರೆಗೆ ಕರೆದೊಯ್ದರು ಎಂದು ಪ್ರತ್ಯಕ್ಷದರ್ಶಿ ತಿಳಿಸಿದರು.
ರೆಕ್ಕೆಯ ಚೂರು…: ಯುದ್ಧವಿಮಾನಗಳ ಪರಸ್ಪರ ಡಿಕ್ಕಿಯಿಂದ ರೆಕ್ಕೆಯ ಚೂರೊಂದು ಕಿಲೋಮೀಟರ್ ದೂರದಲ್ಲಿ ಹಾರಿಬಿದ್ದಿತ್ತು. ಇದನ್ನು ಗಮನಿಸಿ ಪಡೆದುಕೊಂಡಿದ್ದ ಯುವಕನೊಬ್ಬ ಆ ಭಾಗವನ್ನು ರಕ್ಷಣಾ ತಂಡಕ್ಕೆ ವಾಪಾಸ್ ನೀಡಿದರು.
ರಕ್ಷಣಾ ಇಲಾಖೆಯಿಂದ ತನಿಖೆ: ಯುದ್ಧವಿಮಾನಗಳ ಪತನ ಘಟನೆಗೆ ಸಂಬಂಧಿಸಿದಂತೆ ರಕ್ಷಣಾ ಇಲಾಖೆ ತನಿಖೆ ನಡೆಸುತ್ತದೆ. ಬಳಿಕ ಘಟನೆಗೆ ಕಾರಣ ಸಂಬಂಧ ಸ್ಥಳೀಯ ಪೊಲೀಸರಿಗೆ ವರದಿ ನೀಡಲಿದೆ. ಸ್ಥಳೀಯ ಪೊಲೀಸರು ಈ ಕುರಿತು ತನಿಖೆ ನಡೆಸುವುದಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದರು.
ಸಾಹಿಲ್ ಗಾಂಧಿ ಪ್ರೊಫೈಲ್: ಸೂರ್ಯಕಿರಣ್-7 ಲಘುಯುದ್ಧವಿಮಾನ ಪತನ ದುರಂತದಲ್ಲಿ ಮೃತಪಟ್ಟ ವಿಂಗ್ ಕಮಾಂಡರ್ ಸಾಹಿಲ್ ಗಾಂಧಿ ಮೂಲತ: ಹರ್ಯಾಣದ ಹಿಸ್ಸಾರ್ ಮೂಲದವರು. ಬಾಲ್ಯ ಸ್ನೇಹಿತೆ ಹಿಮಾನಿ ಜಾಂಬ್ ಗಾಂಧಿಯನ್ನು ವಿವಾಹವಾಗಿದ್ದು. ದಂಪತಿಗೆ ಐದು ವರ್ಷದ ಪುತ್ರನಿದ್ದಾನೆ. ಹವಾಕ್ ಮಿಗ್ 21 ವಿಮಾನ ತರಬೇತಿಯನ್ನು ಲಂಡನ್‌ನಲ್ಲಿ ಸಾಹಿಲ್ ಗಾಂಧಿ ಪೂರೈಸಿದ್ದರು. ಸೂರ್ಯಕಿರಣ್ -7ರಲ್ಲಿಯೂ ಹೆಚ್ಚು ಪರಿಣತಿ ಹೊಂದಿದ್ದರು ಎಂದು ಮೂಲಗಳು ತಿಳಿಸಿವೆ. ಆದರೆ, ಈ ಬಗ್ಗೆ ರಕ್ಷಣಾ ಇಲಾಖೆ ಅಧಿಕೃತ ಮಾಹಿತಿ ಹಂಚಿಕೊಂಡಿಲ್ಲ.
ಬೀದರ್‌ನಲ್ಲೂ 2 ಬಾರಿ ಸೂರ್ಯ ಕಿರಣ ಅವಘಡಬೀದರ್: ಸೂರ್ಯಕಿರಣ್ ಅವಘಡ ಇದೇ ಮೊದಲಲ್ಲ; ಈ ಹಿಂದೆ ಕೂಡ ಬೀದರ್‌ನಲ್ಲಿ ಎರಡು ಬಾರಿ ದುರ್ಘಟನೆಗಳು ಸಂಭವಿಸಿದ್ದವು. ಅದರಲ್ಲಿ ಮೂವರು ವಿಂಗ್ ಕಮಾಂಡರ್‌ಗಳು ಬಲಿಯಾಗಿದ್ದರು. ಬೀದರ್ ಜಿಲ್ಲೆಯಲ್ಲಿ ಎರಡು ಬಾರಿ “ಸೂರ್ಯಕಿರಣ್’ ವಿಮಾನಗಳು ಅಪಘಾತಕ್ಕೀಡಾಗಿ ಮೂವರು ವಿಂಗ್ ಕಮಾಂಡರ್‌ಗಳು ದುರ್ಮರಣ ಹೊಂದಿದ್ದರು. ಮಾರ್ಚ್ 2006ರಲ್ಲಿ ನಗರದ ಹೊರವಲಯದ ನೌಬಾದ್ ಬಳಿ ಸೂರ್ಯಕಿರಣ್ ವಿಮಾನ ಅವಘಡಕ್ಕೆ ಈಡಾಗಿತ್ತು. ಹಿರಿಯ ಸ್ಕ್ವಾಡ್ರನ್ ಮುಖ್ಯಸ್ಥ ಶೈಲೇಂದ್ರ ಸಿಂಗ್ ಮತ್ತು ವಿಂಗ್ ಕಮಾಂಡರ್ ಭಾಟಿಯಾ ಸ್ಥಳದಲ್ಲೇ ಮೃತಪಟ್ಟಿದ್ದರು. ಜನವರಿ 2009ರಲ್ಲಿ ನಗರದ ಹೊರವಲಯದ ಜಮಿಸ್ತಾನ್‌ಪುರ್ ಸಮೀಪದಲ್ಲಿ ಅದೇ ಸೂರ್ಯಕಿರಣ್ ಯುದ್ಧ ವಿಮಾನ ಅವಘಡಕ್ಕೆ ಈಡಾದ ಸಂದರ್ಭದಲ್ಲಿ ವಿಂಗ್ ಕಮಾಂಡರ್ ಆರ್.ಎಸ್. ಧಾಲಿವಾಲ್ ಅಸುನೀಗಿದ್ದರು. ದೇಶದಲ್ಲಿ 30 ದುರಂತ; 41 ಸಾವು
ವರ್ಷ ಘಟನೆಗಳು ಸಾವು
2015-16 6 0
2016-17 10 29
2017-18 6 9
2018-19 8 3
ಒಟ್ಟಾರೆ 30 41 ಗಾಯಳು ಪೈಲೆಟ್ ರಕ್ಷಣೆಗೆ ಧಾವಿಸಿ ಉಪಚರಿಸಿದೆವು. ಈ ಸಂಧರ್ಭದಲ್ಲಿ ದೂರವಾಣಿ ಕರೆಯೊಂದು ಬಂದಿದ್ದು ಕರೆಯನ್ನು ಕಟ್ ಮಾಡಿದ ಅವರು ಪುನ: ಅವರೇ ಕರೆ ಮಾಡಿ ಮಾತನಾಡಿದರು. ಬಳಿಕ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು.
-ಶ್ರೀರಾಮರೆಡ್ಡಿ, ಪ್ರತ್ಯಕ್ಷದರ್ಶಿ ವಿಮಾನ ಪತನದ ಸ್ಥಳದಲ್ಲಿ ನಾಗರಿಕರು ಯಾರೂ ಗಾಯಗೊಂಡಿಲ್ಲ. ಘಟನೆಗೆ ಸಂಬಂಧಿಸಿದಂತೆ ರಕ್ಷಣಾ ಇಲಾಖೆ ಮುಂದಿನ ಕ್ರಮಗಳನ್ನು ವಹಿಸುತ್ತದೆ.
-ಬಿ.ಎಂ ವಿಜಯ್‌ಶಂಕರ್, ನಗರ ಜಿಲ್ಲಾಧಿಕಾರಿ * ವಿಜಯಕುಮಾರ ಚಂದರಗಿ/ಮಂಜುನಾಥ ಲಘುಮೇನಹಳ್ಳಿ/ರಾಜೇಶ್ ಪಟ್ಟೆ