ಕಕ್ಕೇರಾ: ವಿದ್ಯುತ್ ಇಲ್ಲದೆ ಕತ್ತಲಲ್ಲಿ ಜೀವನ ಕಳೆಯುತ್ತಿರುವ ಕಡುಬಡ ಕುಟುಂಬಗಳಿಗೆ ಉಚಿತವಾಗಿ ಸೋಲಾರ ದೀಪ ಅಳವಡಿಸಲು ಬೆಂಗಳೂರು ಯುವ ಎನ್‌ಜಿಒ ತಂಡದಿಂದ ಬುಧವಾರ ಪಟ್ಟಣದ ವಿವಿಧ ದೊಡ್ಡಿಗಳಿಗೆ ಭೇಟಿ ನೀಡಿ ಸರ್ವೇ ನಡೆಸಲಾಯಿತು.
ಯಾಳವರ ದೊಡ್ಡಿ, ತಳ್ಳಳ್ಳೆರದೊಡ್ಡಿ,ಹಡಗಲ್ಲರ ದೊಡ್ಡಿ ಮಲ್ಲಿಕಾರ್ಜುನ ದೊಡ್ಡಿ, ಸುರಪುರ ದೊಡ್ಡಿ ಸೇರಿದಂತೆ ವಿವಿಧ ದೊಡ್ಡಿಗಳಿಗೆ ಭೇಟಿ ನೀಡಿ ಕುಟುಂಬದ ಮಾಹಿತಿ ಪಡೆಯಲಾಯಿತು. ಯುವ ಎನ್‌ಜಿಒ ಸಂಸ್ಥೆ ಅಧ್ಯಕ್ಷ ಧರ್ಮಜೀತ್ ಸಿಂಗ್ ಮಾತನಾಡಿ, ಉಚಿತವಾಗಿ ಸೋಲಾರ ದೀಪ ಪಡೆಯುವ ಕುಟುಂಬ ತೀರಾ ಕಡು ಬಡವರಾಗಿರಬೇಕು. ಮಕ್ಕಳು ಶಿಕ್ಷಣ ಕಲಿತರಬೇಕು. ಇಂಥವರ ಕುಟುಂಬಕ್ಕೆ ಉಚಿತವಾಗಿ ಸೋಲಾರ ದೀಪ
ಕಲ್ಪಿಸಲಾಗುತ್ತಿದೆ ಎಂದರು.
ಎರಡು ದಿನಗಳಿಂದ ಸರ್ವೇ ನಡೆಸುತ್ತಿದ್ದು, ಈಗಾಗಲೇ 150ಕ್ಕೂ ಹೆಚ್ಚು ಕುಟುಂಬ ವಿದ್ಯುತ್ ಸಂಪರ್ಕ ಹೊಂದಿಲ್ಲ. ಸಮೀಕ್ಷೆ ನಡೆಸಿದ ಮನೆಗಳಿಗೆ ಗುರುತು ಹಾಕಲಾಗಿದ್ದು, ಎರಡು ತಿಂಗಳಲ್ಲಿ ಸೋಲಾರ ದೀಪ ಒದಗಿಸುವುದಾಗಿ ತಿಳಿಸಿದರು. ಪುರಸಭೆ ಸದಸ್ಯ ಶರಣಕುಮಾರ ಸೊಲ್ಲಾಪುರ ಮಾತನಾಡಿ, ರಾಜ್ಯದ ಉತ್ತರ ಕನ್ನಡ ಜಿಲ್ಲೆ ಹಾಗೂ ವಿದ್ಯುತ್ ವಂಚಿತ ಗುಡ್ಡಗಾಡು ಪ್ರದೇಶದಲ್ಲಿ ವಾಸ ಮಾಡುತ್ತಿರುವ ಕುಟುಂಬಗಳಿಗೆ ಸೋಲಾರ ದೀಪ ವಿತರಿಸಲಿದ್ದು, ಮನಗಂಡು ದೊಡ್ಡಿಗಳಿಗೆ ವಿದ್ಯುತ್ ಇಲ್ಲದ ಮಾಹಿತಿ ಎನ್‌ಜಿಒಗೆ ನೀಡಿ ಮನವಿ ಮಾಡಿಕೊಂಡ ಪರಿಣಾಮ ಸದ್ಯ ಉಚಿತ ಸೋಲಾರ ವಿತರಣೆಗೆ ಸಂಸ್ಥೆ ಮುಂದಾಗಿದೆ ಎಂದು ತಿಳಿಸಿದರು.
ಈ ಸಂದರ್ಭ ಪುರಸಭೆ ಸದಸ್ಯ ಶರಣಕುಮಾರ ಸೊಲ್ಲಾಪುರ, ಯುವ ಎನ್ ಜಿಒ ತಂಡದ ಅಖೀಲ್, ರಕ್ಷತಾ, ಸಹನಾ, ನವಿನ್, ರಾಷೀಕ, ವಿಶ್ವಜೀತ್, ದೀಪಾ, ಸುಸ್ಮಿತ, ಶೀಥಲ್, ಆನಂದ ಸೇರಿದಂತೆ ಗ್ರಾಮಸ್ಥರು ಇದ್ದರು.