ಮಹಾನಗರ: ಕೆಲವು ಸಮಯಗಳಿಂದ ಮಂಗಳೂರಿನಲ್ಲಿ ಬೀದಿ ನಾಯಿಗಳ ಉಪಟಳ ಹೆಚ್ಚಾಗುತ್ತಿದ್ದು, ಸಿಟಿಯಲ್ಲಿ ಎಷ್ಟು ಬೀದಿ ನಾಯಿಗಳಿವೆ ಎಂಬ ಲೆಕ್ಕ ಮಾತ್ರ ಪಾಲಿಕೆಯಲ್ಲಿಲ್ಲ. ಈ ಹಿನ್ನೆಲೆಯಲ್ಲಿ ನಗರದಲ್ಲಿ ಶ್ವಾನಗಳ ಸರ್ವೇ ನಡೆಸಲು ಮಗಳೂರು ಪಾಲಿಕೆ ನಿರ್ಧರಿಸಿದೆ.
ನಗರದ ಹಲವು ಕಡೆಗಳಲ್ಲಿ ಬೀದಿ ನಾಯಿಗಳ ಕಾಟ ಹೆಚ್ಚಾಗುತ್ತಿದೆ ಎಂಬ ದೂರುಗಳು ಸಾರ್ವಜನಿಕ ವಲಯದಲ್ಲಿ ಬರುತ್ತಿದೆ. ಅದರಲ್ಲೂ ನಗರದ ವಾಮಂಜೂರು, ಕದ್ರಿ, ಕೊಟ್ಟಾರ, ಸುರತ್ಕಲ್, ದಡ್ಡಲಕಾಡು, ಮಣ್ಣಗುಡ್ಡೆ, ಉರ್ವ ಸಹಿತ ವಿವಿಧ ಕಡೆಗಳಲ್ಲಿ ಬೀದಿ ನಾಯಿಗಳು ಗುಂಪಾಗಿ ಕಾಣಸಿಗುತ್ತಿದೆ. ಇದರ ಪಕ್ಕಾ ಲೆಕ್ಕಾಚಾರ ಪಾಲಿಕೆಯ ಬಳಿ ಇಲ್ಲ. ವರ್ಷಂಪ್ರತಿ ಬೀದಿಗಳ ಸರ್ವೇ ನಡೆಸಬೇಕು ಎಂಬ ಸೂಚನೆ ಇದ್ದರೂ, ಪಾಲಿಕೆ ಇತ್ತೀಚಿನ ದಿನಗಳಲ್ಲಿ ಈ ಸಮೀಕ್ಷೆ ನಡೆಸಿಲ್ಲ. ಇದೇ ಕಾರಣಕ್ಕೆ ಸದ್ಯದಲ್ಲೇ ನಗರದಲ್ಲಿ ಬೀದಿ ನಾಯಿಗಳ ಸಮೀಕ್ಷೆ ನಡೆಯಲಿದೆ.
ಬೀದಿ ನಾಯಿಗಳ ನಿಯಂತ್ರಣದ ಉದ್ದೇಶದಿಂದ ಐದು ವರ್ಷಗಳಲ್ಲಿ ನಗರದ 8,549 ಶ್ವಾನಗಳಿಗೆ ಸಂತಾನಶಕ್ತಿ ಹರಣ ಚಿಕಿತ್ಸೆ ನಡೆಸಲಾಗಿದೆ. ಶಕ್ತಿನಗರದ ಎನಿಮಲ್ ಕೇರ್ ಟ್ರಸ್ಟ್ ನಿಂದ ಚಿಕಿತ್ಸೆ ನೀಡಲಾಗುತ್ತದೆ. ನಗರದಲ್ಲಿ ಸುತ್ತಾಡುವ ಬೀದಿನಾಯಿಗಳನ್ನು ಬಲೆಯನ್ನು ಉಪಯೋಗಿಸಿ ಹಿಡಿಯಲಾಗುತ್ತದೆ. ಬಳಿಕ ಮಹಾನಗರ ಪಾಲಿಕೆಯ ಸಹಕಾರದೊಂದಿಗೆ ಮಂಗಳೂರಿನ ಶಕ್ತಿನಗರದಲ್ಲಿರುವ ಎನಿಮಲ್ ಕೇರ್ ಸಂಸ್ಥೆಗೆ ತಲುಪಿಸಲಾಗುತ್ತದೆ.
ಬಳಿಕ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ನಡೆಸಿ ಅನಂತರ ನಾಲ್ಕು ದಿನಗಳ ಕಾಲ ಅವುಗಳನ್ನು ಆರೈಕೆ ಮಾಡಲಾಗುತ್ತದೆ. ಬಳಿಕ ಯಾವ ಪ್ರದೇಶದಿಂದ ನಾಯಿಗಳನ್ನು ಹಿಡಿದು ತರಲಾಗಿತ್ತೋ, ಅಲ್ಲೇ ಮರಳಿ ಬಿಡಲಾಗುತ್ತದೆ. ಈ ಸಮಯದಲ್ಲಿ ನಾಯಿಗಳಿಗೆ ರೇಬಿಸ್ ಚುಚ್ಚುಮದ್ದು ನೀಡಲಾಗುತ್ತದೆ. ಅಲ್ಲದೆ ಸಂತಾನಶಕ್ತಿ ಹರಣ ಮಾಡಿದ ನಾಯಿಯ ಎಡ ಕಿವಿಯಲ್ಲಿ “ವಿ’ ಆಕಾರದಲ್ಲಿ ಮಾರ್ಕ್ ಮಾಡಲಾಗುತ್ತದೆ. ಈ ಕಾರ್ಯಾಚರಣೆಗೆ ಒಟ್ಟು ಇಬ್ಬರು ವೈದ್ಯರು, ಏಳು ಮಂದಿ ಸಿಬಂದಿ ಇದ್ದಾರೆ.
ನಾಯಿ ಕಚ್ಚಿದರೆ ಪಾಲಿಕೆಯಿಂದ ನೆರವು ಬೀದಿ ನಾಯಿಗಳು ಅಥವಾ ಮನೆ ನಾಯಿಗಳು ಕಚ್ಚಿದರೆ ಅಂತಹವರಿಗೆ ಮಂಗಳೂರು ಪಾಲಿಕೆಯಿಂದ ಸಹಾಯ ಧನ ನೀಡಲಾಗುತ್ತದೆ. ಕಳೆದ ವರ್ಷ ಪಾಲಿಕೆ ವ್ಯಾಪ್ತಿಯ 24 ಮಂದಿಗೆ 2,000 ರೂ. ನೀಡಲಾಗಿದೆ.
ಸದ್ಯದಲ್ಲೇ ಸಮೀಕ್ಷೆ
ಮಂಗಳೂರು ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು ಎಷ್ಟು ಬೀದಿ ನಾಯಿಗಳಿವೆ ಎಂಬ ಬಗ್ಗೆ ಸದ್ಯದಲ್ಲೇ ಪಾಲಿಕೆಯಿಂದ ಸಮೀಕ್ಷೆ ನಡೆಸಲಾಗುವುದು. ಬೀದಿ ನಾಯಿಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ. ನಗರದಲ್ಲಿ ಎನಿಮಲ್ ಕೇರ್ ಟ್ರಸ್ಟ್ ಮತ್ತು ಪಾಲಿಕೆ ಸಹಯೋಗದಲ್ಲಿ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಸಾರ್ವಜನಿಕರಿಗೆ ಬೀದಿ ಅಥವಾ ಸಾಕು ನಾಯಿಗಳು ಕಚ್ಚಿದರೆ ಅವರಿಗೆ 2000 ರೂ. ಸಹಾಯ ಧನ ನೀಡಲಾಗುತ್ತದೆ.
– ಡಾ| ಮಂಜಯ್ಯ ಶೆಟ್ಟಿ, ಪಾಲಿಕೆ ಆರೋಗ್ಯಾಧಿಕಾರಿ
*ನವೀನ್ ಭಟ್ ಇಳಂತಿಲ