Advertisement

ಸರ್ವೇ ಸಂಪೂರ್ಣ; ನೋಟಿಸ್‌ ಅಪೂರ್ಣ!

11:47 AM Sep 22, 2017 | Team Udayavani |

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಕೋಟ್ಯಂತರ ರೂ. ತೆರಿಗೆ ವಂಚಿಸಿರುವ ಪ್ರತಿಷ್ಠಿತ ಮಾಲ್‌, ಟೆಕ್‌ಪಾರ್ಕ್‌ ಹಾಗೂ ಕಟ್ಟಡಗಳ ವಿರುದ್ಧ ಕ್ರಮಕ್ಕೆ ವಲಯ ಜಂಟಿ ಆಯುಕ್ತರುಗಳು ಮೀನಾ-ಮೇಷ ಎಣಿಸುತ್ತಿದ್ದಾರೆ. ತೆರಿಗೆ ವಂಚನೆ ಬಗ್ಗೆ ಟೋಟಲ್‌ ಸರ್ವೇ ನಡೆಸಿ ವರದಿ ಕೊಟ್ಟು ಮೂರು ತಿಂಗಳಾದರೂ ಸಂಬಂಧಪಟ್ಟ ಆಸ್ತಿ ಮಾಲೀಕರಿಗೆ ನೋಟಿಸ್‌ ಸಹ ಜಾರಿ ಮಾಡಿಲ್ಲ. ಇದು ಪರೋಕ್ಷವಾಗಿ ತೆರಿಗೆ ವಂಚಿತರಿಗೆ ರಕ್ಷಣೆ ನೀಡಿದಂತಾಗಿದೆ.

Advertisement

ಟೋಟಲ್‌ ಸರ್ವೇಗೆ ನಿಯೋಜಿಸಿದ್ದ ಸಂಸ್ಥೆಯು, ಮೊದಲ ಹಂತದಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಮಾಲ್‌, ಟೆಕ್‌ಪಾರ್ಕ್‌ ಹಾಗೂ ಬೃಹತ್‌ ವಾಣಿಜ್ಯ ಕಟ್ಟಡಗಳನ್ನು 3ಡಿ ತಂತ್ರಜ್ಞಾನದ ಮೂಲಕ ಟೋಟಲ್‌ ಸ್ಟೇಷನ್‌ ಸರ್ವೇ ನಡೆಸಿ ಎಂಟು ವಲಯಗಳ 55 ಕಟ್ಟಡಗಳನ್ನು ಸರ್ವೇಗೆ ಒಳಪಡಿಸಿ ವರದಿ ನೀಡಿದೆ. ಆದರೆ, ಜಂಟಿ ಆಯುಕ್ತರುಗಳು ಮುಂದಿನ ಕ್ರಮ ಕೈಗೊಳ್ಳುತ್ತಿಲ್ಲ.

ಇದರಿಂದಾಗಿ ತಪ್ಪು ಮಾಡಿರುವುದು ಪತ್ತೆಯಾದರೂ ಯಾವುದೇ ಕ್ರಮಕ್ಕೆ ಮುಂದಾಗದ ಅಧಿಕಾರಿಗಳ ಧೋರಣೆ ಪಾಲಿಕೆಗೆ ನೂರಾರು ಕೋಟಿ ರೂ. ನಷ್ಟವುಂಟುಮಾಡುತ್ತಿದೆ. 2008ರಲ್ಲಿ ಸ್ವಯಂ ಘೋಷಿತ ಆಸ್ತಿ (ಎಸ್‌ಎಎಸ್‌)ವ್ಯವಸ್ಥೆಯನ್ನು ಬಿಬಿಎಂಪಿ ಜಾರಿಗೊಳಿಸಿತ್ತು. ಅದರಂತೆ ಆಸ್ತಿಯ ಮಾಲೀಕರೇ ತಮ್ಮ ಆಸ್ತಿ ವಿವರಗಳನ್ನು ಘೋಷಣೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿತ್ತು.

ಆಗ ಹಲವಾರು ಬೃಹತ್‌ ಕಟ್ಟಡಗಳ ಮಾಲೀಕರು ಪಾಲಿಕೆಗೆ ತಪ್ಪು ಮಾಹಿತಿ ನೀಡಿ ಆಸ್ತಿ ತೆರಿಗೆ ವಂಚಿಸಿರುವ ಬಗ್ಗೆ ಹಲವಾರು ದೂರುಗಳು ಕೇಳಿಬಂದಿದ್ದವು. ಹೀಗಾಗಿ, ಕಳೆದ ವರ್ಷ ಬಿಬಿಎಂಪಿ ವತಿಯಿಂದ ಪ್ರಾಯೋಗಿಕವಾಗಿ 10 ಕಟ್ಟಡಗಳ ಟೋಟಲ್‌ ಸ್ಟೇಷನ್‌ ಸರ್ವೇ ನಡೆಸಲಾಗಿತ್ತು. ಸರ್ವೇಯಿಂದಾಗಿ ಹತ್ತು ಬೃಹತ್‌ ಕಟ್ಟಡಗಳು ಪಾಲಿಕೆಗೆ ಆಸ್ತಿ ಅಳತೆ ಹಾಗೂ ಬಳಕೆಯ ಕುರಿತು ತಪ್ಪು ಮಾಹಿತಿ ನೀಡಿರುವುದು ಬೆಳಕಿಗೆ ಬಂದಿತ್ತು.

ಆ ಹಿನ್ನೆಲೆಯಲ್ಲಿ ಪ್ರಸಕ್ತ ಸಾಲಿನಲ್ಲಿಯೂ ಪಾಲಿಕೆಯ ಅಧಿಕಾರಿಗಳು ಮೊದಲ ಹಂತದಲ್ಲಿ ನಗರದಲ್ಲಿನ 55 ಮಾಲ್‌, ಟೆಕ್‌ಪಾರ್ಕ್‌ ಮತ್ತು ಬೃಹತ್‌ ವಾಣಿಜ್ಯ ಕಟ್ಟಡಗಳನ್ನು ಟೋಟಲ್‌ ಸ್ಟೇಷನ್‌ ಸರ್ವೇಗೆ ಒಳಪಡಿಸಿದ್ದರು. ಈಗಾಗಲೇ 33 ಕಟ್ಟಡಗಳ ಸರ್ವೇ ಕಾರ್ಯ  ಪೂರ್ಣಗೊಳಿಸಿರುವ ಏಜೆನ್ಸಿಗಳು ಆಯಾ ವಲಯ ಜಂಟಿ ಆಯುಕ್ತರಿಗೆ ವರದಿ ಸಲ್ಲಿಸಿದ್ದಾರೆ. 

Advertisement

ತೆರಿಗೆ ವಂಚನೆ ಬಯಲು: ಪಾಲಿಕೆಯ ಅಧಿಕಾರಿಗಳು ನಡೆಸಿದ ಸರ್ವೇಯಿಂದಾಗಿ ಮಾಲ್‌ಗ‌ಳು, ಬೃಹತ್‌ ಕಟ್ಟಡಗಳು ಪಾಲಿಕೆಗೆ ತಪ್ಪು ಮಾಹಿತಿ ನೀಡಿ ತೆರಿಗೆ ವಂಚಿಸಿರುವುದು ಸಾಬೀತಾಗಿದೆ. ದಕ್ಷಿಣ ವಲಯದಲ್ಲಿ ಸರ್ವೇಗೆ ಒಳಪಡಿಸಿದ 4 ಮಾಲ್‌, ಬೃಹತ್‌ ಕಟ್ಟಡಗಳ ಪೈಕಿ ಮೂರು ಕಟ್ಟಡಗಳು ನೀಡಿರುವ ಮಾಹಿತಿ ತಪ್ಪಾಗಿದ್ದು, ತೆರಿಗೆ ವಂಚಿಸಿರುವುದು ಬಯಲಾಗಿದೆ. 

ಆದರೆ, ದಕ್ಷಿಣ ವಲಯದಲ್ಲಿ ಕೇವಲ ಮೂರು ಕಟ್ಟಡಗಳಿಗೆ ಮಾತ್ರ “ನಾಮ್‌ಕಾವಾಸ್ತೆ’ ಡಿಮ್ಯಾಂಡ್‌ ನೋಟಿಸ್‌ ಜಾರಿ ಮಾಡಿರುವ ಪಾಲಿಕೆ ಆಧಿಕಾರಿಗಳು ಉಳಿದ ಕಟ್ಟಡಗಳ ಬಗ್ಗೆ ಮೌನ ವಹಿಸಿದ್ದಾರೆ. 55 ಕಟ್ಟಡಗಳ ಪೈಕಿ 33 ಕಟ್ಟಡಗಳ ಸರ್ವೇ ವರದಿಯಲ್ಲಿ ಆಯಾ ವಲಯ ಜಂಟಿ ಆಯುಕ್ತರಿಗೆ ಸಲ್ಲಿಕೆ ಮಾಡಿದ್ದಾರೆ. ಜಂಟಿ ಆಯುಕ್ತರು ಮಾತ್ರ ಸರ್ವೇ ಮಾಹಿತಿಯೊಂದಿಗೆ ಹಳೆಯ ಮಾಹಿತಿ ತಾಳೆ ಹಾಕಿ ಕಟ್ಟಡ ಮಾಲೀಕರು ಪಾವತಿಸಬೇಕಾದ ತೆರಿಗೆ, ದಂಡ ಹಾಗೂ ಬಡ್ಡಿಯನು ನಿಗದಿಪಡಿಸಬೇಕಿತ್ತು.

ಮಹದೇವಪುರದಲ್ಲಿ 4 ಕಟ್ಟಡಗಳ ಸರ್ವೇ ವರದಿ ನೀಡಲಾಗಿದ್ದರೂ ಯಾವುದೇ ಕ್ರಮಕ್ಕೆ ಅಧಿಕಾರಿಗಳು ಮುಂದಾಗಿಲ್ಲ. ಯಲಹಂಕ ವಲಯದಲ್ಲಿ 14 ಕಟ್ಟಡಗಳ ಪೈಕಿ 11 ಕಟ್ಟಡಗಳ ವರದಿ ಸಲ್ಲಿಕೆಯಾಗಿದ್ದು, ಪೂರ್ವ ವಲಯದಲ್ಲಿ 8, ಬೊಮ್ಮನಹಳ್ಳಿ ವಲಯದಲ್ಲಿ 5, ಪಶ್ಚಿಮದಲ್ಲಿ 2 ಕಟ್ಟಡ ತೆರಿಗೆ ವಂಚಿಸಿರುವುದು ಪತ್ತೆ ಮಾಡಲಾಗಿದೆ. 

ಪಾಲಿಕೆಯಿಂದ ನಡೆಸಲಾಗಿರುವ ಟೋಟಲ್‌ ಸ್ಟೇಷನ್‌ ಸರ್ವೇ ಮೂಲಕ ಪಾಲಿಕೆಗೆ ಸುಮಾರು 200 ಕೋಟಿ ರೂ. ಆದಾಯ ಬರಲಿದೆ. ಆದರೆ, ಜಂಟಿ ಆಯುಕ್ತರು ಪಾಲಿಕೆಗೆ ಆದಾಯ ತರುವ ಕಾರ್ಯಕ್ಕೆ ಸಹಕಾರ ನೀಡದ ಹಿನ್ನೆಲೆಯಲ್ಲಿ ನಷ್ಟವಾಗುತ್ತಿದೆ. ಹೀಗಾಗಿ ಅಗತ್ಯ ಕ್ರಮ ಕೈಗೊಳ್ಳುವಂತೆ ಆಯುಕ್ತರಿಗೆ ಪತ್ರ ಬರೆಯಲಾಗುವುದು.
-ಎಂ.ಕೆ.ಗುಣಶೇಖರ್‌, ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ 

-ಸರ್ವೇ ನಡೆಸಿದ ಆಸ್ತಿಗಳ ಸಂಖ್ಯೆ 55
-ಸರ್ವೇ ಪೂರ್ಣವಾದಾಸ್ತಿಗಳ ಸಂಖ್ಯೆ 52
-ಪ್ರಗತಿಯಲ್ಲಿರುವುದು 3
-ಜಂಟಿ ಆಯುಕ್ತರಿಗೆ ಸಲ್ಲಿಕೆಯಾದ ವರದಿ 33
-ಜಾರಿಯಾದ ಡಿಮ್ಯಾಂಡ್‌ ನೋಟಿಸ್‌ಗಳು 3

* ವೆಂ.ಸುನೀಲ್‌ಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next