ಕುಂದಾಪುರ: ಬೆಳ್ವೆ, ನಾಲ್ಕೂರು, ಹಿಲಿಯಾಣ ಗ್ರಾಮದ ನೂರಾರು ಕೃಷಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸೂರ್ಗೋಳಿಯಲ್ಲಿ ಸೀತಾನದಿಗೆ ಅಡ್ಡಲಾಗಿ ನಿರ್ಮಿಸಲಾದ ಕಿಂಡಿ ಅಣೆಕಟ್ಟು ಕಾಮಗಾರಿ ಈಗಾಗಲೇ ಪೂರ್ಣಗೊಂಡಿದ್ದು, ಗುರುವಾರ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟರ ಮುತುವರ್ಜಿಯಲ್ಲಿ ಸಣ್ಣ ನೀರಾವರಿ ಇಲಾಖೆಯಡಿ ಈ ಕಿಂಡಿ ಅಣೆಕಟ್ಟು ಮಂಜೂರಾಗಿದ್ದು, ಇದಕ್ಕಾಗಿ 4.95 ಕೋ.ರೂ. ಅನುದಾನ ಬಿಡುಗಡೆಗೊಂಡಿತ್ತು.
ಹಿಲಿಯಾಣ, ಬೆಳ್ವೆ, ನಾಲ್ಕೂರು ಗ್ರಾಮಗಳ 120 ಹೆಕ್ಟೇರ್ (2 ಸಾವಿರಕ್ಕೂ ಮಿಕ್ಕಿ ಎಕರೆ) ಕೃಷಿ ಭೂಮಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಈ ಕಿಂಡಿ ಅಣೆಕಟ್ಟು ನಿರ್ಮಾಣವಾಗುತ್ತಿದೆ. ಈಗಿರುವ 30 ಪಂಪ್‌ಸೆಟ್ ಹೊಂದಿರುವ ರೈತರನ್ನು ಹೊರತುಪಡಿಸಿ, ಈ ಭಾಗದ 150 ಕ್ಕೂ ಹೆಚ್ಚಿನ ರೈತರು ಇದರ ಲಾಭ ಪಡೆಯಬಹುದು. 4 ಮೀಟರ್‌ವರೆಗೂ ನೀರು ಶೇಖರಣೆಯಾಗುತ್ತದೆ.
ಈ ಕಿಂಡಿ ಅಣೆಕಟ್ಟಿನಲ್ಲಿ ಒಟ್ಟು 17 ಗೇಟುಗಳು ಇರಲಿದ್ದು, ಈಗಿನ್ನು ಮಳೆಗಾಲ ಆರಂಭವಾಗುವುದರಿಂದ ಕೆಲ ಗೇಟುಗಳನ್ನು ತೆರವು ಮಾಡುವ ನಿಟ್ಟಿನಲ್ಲಿ ಸಣ್ಣ ನೀರಾವರಿ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಶೇಷಕೃಷ್ಣ, ಎಂಜಿನಿಯರ್ ರಾಜೇಶ್ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.