ಚಿಕ್ಕಬಳ್ಳಾಪುರ: ಮಕ್ಕಳ ಭವಿಷ್ಯ ಚೆನ್ನಾಗಿಲ್ಲವೆಂದು ಜ್ಯೋತಿಷಿ ಹೇಳಿದ ಮಾತು ಕೇಳಿ ಇಬ್ಬರು ಮಕ್ಕಳನ್ನು ಕೊಂದು ಆತ್ಮಹತ್ಯೆಗೆ ಶರಣಾಗಿರುವ ಹೃದಯವಿದ್ರಾವಿಕ ಘಟನೆ ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರದಲ್ಲಿ ಶನಿವಾರ ತಡರಾತ್ರಿ ನಡೆದಿದೆ. ವಿ.ಆರ್.ಉಷಾ ಅವರು, ತಮ್ಮ ಮನಸ್ಸಿನ ನೋವನ್ನು ಡೆತ್‌ನೋಟ್‌ನಲ್ಲಿ ಬರೆದಿಟ್ಟಿದ್ದಾರೆ. ನಗರದ ಸರ್‌ಎಂವಿ ಲೇಔಟ್‌ನ ನಿವಾಸಿ ವಿ.ಆರ್.ಉಷಾ ಕೋಂ ಅಶೋಕ್ (32) ಹಾಗೂ ಮಕ್ಕಳಾದ ಎರಡೂವರೆ ವರ್ಷದ ಶಾನ್ವಿತ ಹಾಗೂ 10 ವರ್ಷದ ಶಾಮಂತ್ ಎಂದು ಗುರುತಿಸಲಾಗಿದೆ.
ಮಕ್ಕಳ ಭವಿಷ್ಯ ಚೆನ್ನಾಗಿಲ್ಲ ಎಂದು ತಿಳಿದ ಮೇಲೆ ಬದುಕಿನ ಮೇಲಿನ ಆಸಕ್ತಿ ಕಡಿಮೆಯಾಯಿತು. ಗಂಡ ಸೇರಿದಂತೆ ಕುಟುಂಬದ ಎಲ್ಲ ಸದಸ್ಯರೂ ನನಗೆ ಧೈರ್ಯ ಹೇಳಿದರು. ಆದರೂ ನನಗೆ ಧೈರ್ಯ ಬರಲೇ ಇಲ್ಲ. ಮೊದಲು ನಾನೊಬ್ಬಳೇ ಸಾಯಬೇಕು ಎಂದು ಅನ್ನಿ ಸಿತ್ತು. ಆದರೆ ಮಕ್ಕಳನ್ನು ಬಿಟ್ಟು ಸಾಯಲು ಇಷ್ಟವಾ ಗದೇ ನಿದ್ದೆ ಮಾತ್ರೆ ಕೊಟ್ಟು ನಾನೇ ಸಾಯಿಸಿದ್ದೇನೆ ಎಂದು ಡೆತ್‌ನೋಟಲ್ಲಿ ಬರೆದಿದ್ದಾರೆ.
ಡೆತ್ ನೋಟ್‌ನಲ್ಲಿ ಏನಿದೆ?: ನನ್ನ ಮಕ್ಕಳ ಸಾವಿಗೆ ನಾನೇ ಕಾರಣ. ಮಕ್ಕಳ ಭವಿಷ್ಯ ಚೆನ್ನಾಗಿಲ್ಲ ಎಂದು ಜ್ಯೋತಿಷಿಯೊಬ್ಬರು ಹೇಳಿದಾಗ ನನ್ನ ಬದುಕಿನ ಮೇಲೆ ಆಸಕ್ತಿ ಕಡಿಮೆ ಆಯಿತು. ಜೀವನದಲ್ಲಿ ಸಂತೋಷ ಕಂಡಿಲ್ಲ. ಅಶೋಕನ ಮದುವೆಯಾದ ಮೇಲೆ ಸಂತೋಷವಾಗಿದ್ದೆ. ಮಕ್ಕಳು ಆದ ಮೇಲೆ ಇನ್ನೂ ಆರಾಮಗಿದ್ದೆ. ಆದರೆ ಮಕ್ಕಳ ಬದುಕು ಚೆನ್ನಾಗಿಲ್ಲ ಎಂದು ಜ್ಯೋತಿಷ್ಯ ಹೇಳಿದ ಮೇಲೆ ನಾನು ಸಾಯಬೇಕು ಅನಿಸಿತು. ನೀವು ಅದೆಲ್ಲಾ ನಂಬಬೇಡ ಎಂದು ನನಗೆ ಧೈರ್ಯ ತುಂಬಿದ್ದೀರಿ. ಆದರೆ ನನಗೆ ಧೈರ್ಯ ಬರಲಿಲ್ಲ. ಆದರೆ ನಾನು ಒಬ್ಬಳೇ ಸಾಯಬೇಕು ಅನಿಸಿತು. ಆದರೆ ಮಕ್ಕಳನ್ನು ಬಿಟ್ಟು ನಾನು ಸಾಯಲು ಇಷ್ಟಪಡಲಿಲ್ಲ. ಇಬ್ಬರಿಗೂ ನಿದ್ರೆ ಮಾತ್ರೆ ಕೊಟ್ಟು ನಾನೇ ಸಾಯಿಸಿ ನೇಣಿಗೆ ಶರಣಾದೆ.
ನನ್ನಂಥ ತಾಯಿ, ಹೆಂಡತಿ ಯಾರಿಗೂ ಬೇಡ, ದೇವರು ನನಗೆ ಮೋಸ ಮಾಡಿದ. ಅಶೋಕ, ಅತ್ತೆ ಮಾವ ನನನ್ನು ಚೆನ್ನಾಗಿ ನೋಡಿಕೊಂಡರು. ನನ್ನ ಬಗ್ಗೆ ಯೋಚನೆ ಮಾಡಬೇಡಿ. ಎಷ್ಟೇ ಧೈರ್ಯ ತೆಗೆದುಕೊಂಡರು ನನ್ನ ಕೈಯಲ್ಲಿ ಆಗಲಿಲ್ಲ. ನನ್ನ ನೋವು ಯಾರಿಗೂ ಹೇಳಿಕೊಳ್ಳಲಿಲ್ಲ. ನಾನು ನಿಮಗೆ ಮೋಸ ಮಾಡುತ್ತಿದ್ದೇನೆ. ಕ್ಷಮೆ ಇರಲಿ. ನಾನು ನಿಮಗೆ ಸಂತೋಷ ಕೊಡಲಿಲ್ಲ. ಜ್ಯೋತಿಷ್ಯರ ಮಾತು ನಂಬಬೇಡ ಎಂದ ಅಕ್ಕ, ತಂಗಿ ಅಶೋಕ ಧೈರ್ಯ ಹೇಳಿದ್ದರು. ಆದರೆ ನಾನು ಒಳ್ಳೆ ಹೆಂಡತಿ, ತಾಯಿ ಆಗಲಿಲ್ಲ. ಮೋಸ ಮಾಡಿಬಿಟ್ಟೆ. ಅಶೋಕಗೆ ಎಲ್ಲರು ಧೈರ್ಯ ಹೇಳಿ. ಅವರ ಮುಂದಿನ ಜೀವನ ಚೆನ್ನಾಗಿರಲಿ. ಇಡೀ ಫ್ಯಾಮಿಲಿಯ ಕ್ಷಮೆ ನನ್ನ ಮೇಲೆ ಇರಲಿ
ಮನುಷ್ಯನಿಗೆ ಯಾವುದೇ ವಯಸ್ಸಿನ ಹಂತದಲ್ಲಿ ಖನ್ನತೆ ಬರಬಹುದು. ಸಹಜವಾಗಿ ಮನುಷ್ಯ ಅಂದುಕೊಂಡಿದ್ದನ್ನು ಸಾಧಿಸದೇ ಇದ್ದರೆ ಹೆಚ್ಚು ಮಾನಸಿಕವಾಗಿ ಖನ್ನತೆಗೆ ಒಳಗಾಗುತ್ತಾನೆ. ಮನುಷ್ಯ ತನ್ನ ಮೇಲೆ ತನಗೆ ವಿಶ್ವಾಸ ಹೊಂದಬೇಕು. ಬೇರೊಬ್ಬರು ಹೇಳುವ ಮಾತುಗಳಿಗೆ ಕಿವಿಗೊಟ್ಟರೆ ಇಂತಹ ಘಟನೆಗಳು ನಡೆಯುತ್ತವೆ. ಮಕ್ಕಳ ಭವಿಷ್ಯ ರೂಪಿಸುವುದು ಪೋಷಕರ ಕೈಯಲ್ಲಿದೆ. ಜ್ಯೋತಿಷ್ಯರ ಕೈಯಲ್ಲಿ ಇಲ್ಲ ಎಂಬುದನ್ನು ಈ ಸಮಾಜ ಅರ್ಥ ಮಾಡಿಕೊಳ್ಳಬೇಕು.
-ಡಾ.ಚಂದ್ರಮೋಹನ್, ಮಾನಸಿಕ ಆರೋಗ್ಯ ತಜ್ಞರು, ಆರೋಗ್ಯ ಇಲಾಖೆ
ಜ್ಯೋತಿಷ್ಯದಿಂದ ಇಂದು ಸಾವಿರಾರು ಕುಟುಂಬಗಳು ಸಮಾಜದಲ್ಲಿ ಬೀದಿಪಾಲಾಗಿವೆ. ಮುಗ್ಧರು ಜ್ಯೋತಿಷಿಗಳ ಮಾತು ಕೇಳಿ ಆತ್ಮವಿಶ್ವಾಸ ಕಳೆದುಕೊಂಡು ಸಾಯುತ್ತಾರೆಂಬುದನ್ನು ಚಿಕ್ಕಬಳ್ಳಾಪುರದ ಉಷಾ ಹಾಗೂ ಆಕೆಯ ಮಕ್ಕಳ ಘಟನೆಯೇ ಸಾಕ್ಷಿ. ಜ್ಯೋತಿಷಿಗಳ ತಂತ್ರ, ಕುತಂತ್ರಗಳ ಬಗ್ಗೆ ಜನರಲ್ಲಿ ದೊಡ್ಡ ಮಟ್ಟದಲ್ಲಿ ಅಭಿಯಾನ ಆಗಬೇಕಿದೆ. ಜನರನ್ನು ವೈಜ್ಞಾನಿಕವಾಗಿ, ವೈಚಾರಿಕವಾಗಿ ಜಾಗೃತಿಗೊಳಿಸಿದಾಗ ಇಂತಹ ಘಟನೆಗಳು ನಡೆಯುವುದಿಲ್ಲ. ಆತ್ಮವಿಶ್ವಾಸಕ್ಕಿಂತ ಮನುಷ್ಯನಿಗೆ ದೊಡ್ಡ ಶಕ್ತಿ ಮತ್ತೂಂದಿಲ್ಲ.
-ಡಾ.ಕೋಡಿರಂಗಪ್ಪ, ಪ್ರಗತಿಪರ ಚಿಂತಕ