Advertisement

ಶರಣರ ಬದುಕಿನ ಮಾರ್ಗ ಅನುಕರಣೀಯವಾದುದು

09:32 PM May 13, 2019 | Lakshmi GovindaRaj |

ವಿಜಯಪುರ: ಸಕಲಜೀವಿಗಳಲ್ಲಿ ಲೇಸನ್ನು ಬಯಸಿದ ಶರಣರ ಬದುಕಿನ ಮಾರ್ಗವು ಸಾರ್ವಕಾಲಿಕ ಅನುಕರಣೀಯ. ಕಾಯಕನಿಷ್ಠೆ. ಧರ್ಮನಿಷ್ಠರಾಗಿ ಶರಣಸಂಸ್ಕೃತಿಯನ್ನು ಕಟ್ಟಿಕೊಳ್ಳುವ ಕಾಯಕದಲ್ಲಿ ಎಲ್ಲರೂ ತೊಡಗಿಕೊಳ್ಳಬೇಕಿದೆ.

Advertisement

ಸಮಾಜದ ಹಿತಕ್ಕಾಗಿ ತತ್ವನಿಷ್ಠೆ, ಮೌಲ್ಯನಿಷ್ಠೆಯಿಟ್ಟುಕೊಂಡು ಧೀರೋದ್ಧಾತ ಶ್ರೇಷ್ಠ ಬದುಕು ಮಾರ್ಗದಲ್ಲಿ ಧ್ಯೇಯ, ಉದಾತ್ತತೆ ಇರಿಸಿಕೊಳ್ಳುವಂತಾಗಬೇಕು ಎಂದು ನಿಡುಮಾಮಿಡಿ ಶ್ರೀ ಮಾನವ ಸದ್ಧರ್ಮಸಿಂಹಾಸನ ಪೀಠಾಧ್ಯಕ್ಷ ಶ್ರೀ ವೀರಭದ್ರಚನ್ನಮಲ್ಲ ದೇಶೀಕೇಂದ್ರಸ್ವಾಮೀಜಿ ಹೇಳಿದರು.

ಪಟ್ಟಣ ಸುಬ್ಬಮ್ಮಚನ್ನಪ್ಪ ಸಮುದಾಯಭವನದಲ್ಲಿ ಶ್ರೀ ವೀರೇಶಚಾರಿಟಬಲ್‌ ಟ್ರಸ್ಟ್‌, ದೇವನಹಳ್ಳಿ ಸಾಕ್ಷಿಮುರುಘ ಸೇವಾಟ್ರಸ್ಟ್‌ಗಳ ಸಹಕಾರದಲ್ಲಿ ಹಮ್ಮಿಕೊಂಡಿದ್ದ ಸಾಹಿತಿ ಸಿ.ಎಂ.ವೀರಣ್ಣ ಸಂಸ್ಮರಣೆ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.

ವೀರಣ್ಣನವರ ಕೊಡುಗೆ ಅಪಾರ: ಸಾಮಾಜಿಕ, ಧಾರ್ಮಿಕ, ಅಧ್ಯಾತ್ಮಿಕ ಮತ್ತು ಸಾಹಿತ್ಯಿಕ ಕ್ಷೇತ್ರಕ್ಕೆ ಸಿ.ಎಂ.ವೀರಣ್ಣನವರ ಕೊಡುಗೆ ಅಪಾರವಾದುದು. ಅಕ್ಕನಬಳಗ, ಅರಿವಿನ ಮನೆಯ ಮೂಲಕ ಮಹಿಳೆಯರಿಗೆ, ಕಿರಿಯರಿಗೆ ಧರ್ಮಪ್ರಸಾರ ಮಾಡಲು ಮಾಡಿದ ಸೇವೆಯನ್ನು ಅನುಕರಿಸಬೇಕು ಎಂದರು.

ಜಚನಿ ಕಾರ್ಯ ಪ್ರಶಂಸನೀಯ: 12 ನೇ ಶತಮಾನದ ನಂತರ ಶ್ರಮಜೀವಿಸಂಸ್ಕೃತಿಗೆ ಪೂರಕವಾಗಿ ನಿರಕ್ಷರಕುಕ್ಷಿಗಳನ್ನು ಸಾಹಿತ್ಯಸೃಷ್ಟಿಯೆಡೆಗೆ ಓಲೈಸುವ ಕಾರ್ಯದಲ್ಲಿ ಶರಣರಷ್ಟೇ ಮಹತ್ವಪೂರ್ಣವಾಗಿ ಸೇವೆಸಲ್ಲಿಸದ ನಿಡುಮಾಮಿಡಿ ಕ್ಷೇತ್ರಾಧ್ಯಕ್ಷ ಸಾಹಿತ್ಯಸೂರ್ಯ ಜಚನಿ ಗುರುಗಳ ಕಾರ್ಯವು ಶ್ಲಾಘನೀಯವಾದುದು ಎಂದು ತಿಳಿಸಿದರು.

Advertisement

ಸಿ.ಎಂ.ವೀರಣ್ಣ ಪ್ರಶಸ್ತಿ ನೀಡಬೇಕು: ಸಾಹಿತ್ಯಚಂದ್ರ ಸಿ.ಎಂ.ವೀರಣ್ಣ ಅವರ ಹೆಸರಿನಲ್ಲಿ ಶ್ರೀ ವೀರೇಶ ಚಾರಿಟಬಲ್‌ ಟ್ರಸ್ಟ್‌ನ ವತಿಯಿಂದ ಪ್ರತಿವರ್ಷವೂ ಕೊಡುವ ಯೋಜನೆಯು ಜಾರಿಯಾಗಬೇಕು. ಸತ್ಪ್ರೇರಣೆ, ಸದ್ಚಿಂತನೆ ಬಂದು ಹೊಸಬೆಳಕು ಮೂಡಿ ಹೊಸಭಾವನೆ ಪ್ರತಿಫ‌ಲಿಸಲು ನಿಸರ್ಗವೇ ಮಾರ್ಗತೋರಬೇಕಿದೆ ಎಂದು ಹೇಳಿದರು.

ಸಾಧೆನೆ ಮೂಲಕ ಸಾಫ‌ಲ್ಯ: ವನಕಲ್ಲು ಶ್ರೀ ಮಲ್ಲೇಶ್ವರಸಂಸ್ಥಾನಮಠಾಧ್ಯಕ್ಷ ಶ್ರೀ ಬಸವರಮಾನಂದಸ್ವಾಮೀಜಿ ಅನುಭವಾಮೃತವನ್ನು ನೀಡಿ, ಮನುಷ್ಯನು ನಾನಾಕ್ಷೇತ್ರಗಳಲ್ಲಿ ಸಾಧನೆ, ಸಿದ್ಧಿಗಳ ಮೂಲಕ ಜೀವನದಲ್ಲಿ ಸಾಫ‌ಲ್ಯವನ್ನು ಪಡೆಯಲು ಸಾಧ್ಯವಿದ್ದು, ಧಾರ್ಮಿಕ ರಂಗದಲ್ಲಿ ವ್ರತ, ನಿಯಮ, ಶರಣರ ನಿಷ್ಠಾನುಷ್ಠಾನ, ಗುರುಲಿಂಗಜಂಗಮದಲ್ಲಿ ಪ್ರೇಮವನ್ನಿರಿಸಕೊಳ್ಳಬಹುದಾಗಿದೆ. ಉತ್ತಮ ಸೇವಾಮನೋಭಾವನೆಯಿರಿಸಿಕೊಳ್ಳುವ ಮೂಲಕ ಪಾಪಪುಣ್ಯಾಧಿಕರ್ಮಗಳಿಂದ ಹೊರಬರಲು ಸಾಧ್ಯವಿದೆ ಎಂದರು.

ಎಲ್ಲರೊಳಗೊಂದಾಗಿ ಬದುಕಿ: ಜಿಲ್ಲಾ ಶರಣಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಎಚ್‌.ಎಸ್‌.ರುದ್ರೇಶಮೂರ್ತಿ ಮಾತನಾಡಿ, ಎಲ್ಲರೊಳಗೊಂದಾಗಿ ಬದುಕಲು ಮಾಗಿದ ಮನಸ್ಸುಗಳಿಗೆ ಮಾತ್ರ ಸಾಧ್ಯವಿದೆ. ವಾಸ್ತವವಾಗಿ ಹಿರಿತನ ಬರುವುದು ವಯಸ್ಸು, ಅಧಿಕಾರ, ಹಣ, ವಿದ್ವತ್ತಿನಿಂದ ಅಲ್ಲ. ಸದಾಸಾತ್ವಿಕತೆ, ವಿನಯಶೀಲತೆ, ಅಹಂನಿರಸನಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಚಿಕ್ಕಬಳ್ಳಾಪುರ ವಾಪಸಂದ್ರ ನಿಡುಮಾಮಿಡಿ ಶಾಖಾಮಠಾಧ್ಯಕ್ಷೆ ಡಾ.ಶಿವಜ್ಯೋತಿತಾಯಿ, ದೇವನಹಳ್ಳಿ ಸಾಕ್ಷಿಮುರುಘ ಸೇವಾಟ್ರಸ್ಟ್‌ನ ಅಧ್ಯಕ್ಷ ತುಪ್ಪದ ಚಕ್ಕವೀರಭದ್ರಪ್ಪ, ಶ್ರೀ ವೀರಭದ್ರಸ್ವಾಮಿಗೋಷ್ಠಿ ಅಕ್ಕನ ಬಳಗ ಸೇವಾಟ್ರಸ್ಟ್‌ನ ಅಧ್ಯಕ್ಷ ಸಿ.ಬಸಪ್ಪ, ಪಿ.ರುದ್ರಪ್ಪ, ಚುಟುಕು ಕವಿ ಜರಗನಹಳ್ಳಿ ಶಿವಶಂಕರ್‌, ನಗರ್ತ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಎಚ್‌.ಎಸ್‌.ಬಸವರಾಜು, ತಾಲೂಕು ಶರಣಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮ.ಸುರೇಶ್‌ಬಾಬು, ಶ್ರೀ ವೀರೇಶಚಾರಿಟಬಲ್‌ ಟ್ರಸ್ಟ್‌ನ ಅಧ್ಯಕ್ಷ ಅನಿಲ್‌ಕುಮಾರ್‌, ಕಾರ್ಯದರ್ಶಿ ವಿಮಲಾಂಬ, ವಿವಿಧ ಸಂಘಸಂಸ್ಥೆಗಳ ಪದಾಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next