Advertisement
ಅ.20ರಂದು ಶ್ರೀನಗರ-ಸೋನಾಮಾರ್ಗ್ ಹೆದ್ದಾರಿಯಲ್ಲಿ ರುವ ಝಡ್-ಮೋರ್ ಸುರಂಗ ಮಾರ್ಗದ ಕ್ಯಾಂಪ್ ಸೈಟ್‌ನಲ್ಲಿ ಉಗ್ರರು ದಾಳಿ ನಡೆಸಿ, ವೈದ್ಯ ಸೇರಿದಂತೆ 7 ಮಂದಿ ಕಾರ್ಮಿಕರನ್ನು ಹತ್ಯೆಗೈದಿದ್ದರು. ಜಮ್ಮು-ಕಾಶ್ಮೀರದ ಮುಖ್ಯ ಮಂತ್ರಿಯಾಗಿ ಒಮರ್ ಅಬ್ದುಲ್ಲಾ ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ಈ ದಾಳಿ ನಡೆದಿದೆ. ಪ್ರವಾಸೋದ್ಯಮ, ಸಾಮಾಜಿಕ, ಆರ್ಥಿಕತೆ ಹಾಗೂ ರಾಷ್ಟ್ರೀಯ ಭದ್ರತೆಗೆ ಈ ಝಡ್ ಸುರಂಗ ಮಾರ್ಗವು ಮಹತ್ವದ ಯೋಜನೆಯಾಗಿದೆ. ಮೂಲಸೌಕರ್ಯವನ್ನು ಹಾಳು ಮಾಡುವುದು ಹಾಗೂ ಈ ಯೋಜನೆಯಲ್ಲಿ ತೊಡಗಿರುವ ವಲಸೆ ಕಾರ್ಮಿಕರನ್ನು ಹೊರದಬ್ಬುವುದು ಉಗ್ರರ ಉದ್ದೇಶವಾಗಿದೆ.
ಕಾಶ್ಮೀರದ ಸೋನಮಾರ್ಗ್ ಹಾಗೂ ಕಂಗನ್ ಮಾರ್ಗವನ್ನು ಸಂಪರ್ಕಿಸುವ ಗಂದರ್‌ಬಲ್ ಜಿಲ್ಲೆಯ ಗಗಾಂಗಿರ್ ಗ್ರಾಮದ ಬಳಿ 6.4 ಕಿ.ಮೀ. ಉದ್ದದ ಸುರಂಗ ಮಾರ್ಗ ನಿರ್ಮಿಸಲಾಗುತ್ತಿದೆ. ಈ ಸ್ಥಳವು ಸಮುದ್ರ ಮಟ್ಟದಿಂದ 8,500 ಅಡಿಗಳಷ್ಟು ಎತ್ತರವಿದೆ. 2-ಲೇನ್ ರಸ್ತೆ ಸುರಂಗವನ್ನು ನಿರ್ಮಿಸಲಾಗುತ್ತಿದೆ. ಈ ಭಾಗದಲ್ಲಿ ಚಳಿಗಾಲದಲ್ಲಿ ಭಾರೀ ಹಿಮಪಾತ, ಹಿಮ ಕುಸಿತ ಹಾಗೂ ಹವಾಮಾನ ವೈಪರೀತ್ಯ ಉಂಟಾಗುವುದರಿಂದ ಸೋನಮಾರ್ಗ್‌ನಿಂದ ಇತರ ಪ್ರದೇಶಗಳಿಗೆ ತೆರಳಲು ಸಂಪರ್ಕ ಕಡಿತವಾಗಿರುತ್ತದೆ. ಜತೆಗೆ ಬೇರೆ ಸಮಯಗಳಲ್ಲೂ ದುರ್ಗಮ ರಸ್ತೆಯಾಗಿ ಮಾರ್ಪಟ್ಟಿ ರುತ್ತದೆ. ಸುರಂಗ ಝಡ್-ಆಕಾರದಲ್ಲಿರುವುದರಿಂದ ಇದಕ್ಕೆ ಝಡ್ ಸುರಂಗ ಮಾರ್ಗ ಎಂದು ಹೆಸರಿಡಲಾಗಿದೆ.
ಹಿಮಚ್ಛಾದಿತ ವಲಯದಲ್ಲಿ ಸುಗಮ ಸಂಚಾರ
ಈಗ ನಿರ್ಮಿಸಲಾಗುತ್ತಿರುವ ಝಡ್ ಮೋರ್ ಸುರಂಗ ಮಾರ್ಗದಿಂದ ಭವಿಷ್ಯದಲ್ಲಿ ಸುಗಮ ಸಂಚಾರಕ್ಕೆ ಅನುಕೂಲ ವಾಗುತ್ತದೆ. ಈ ಭಾಗವು ಚಳಿಗಾಲದಲ್ಲಿ ಹಿಮಕುಸಿತ ಉಂಟಾಗಿ, ಇತರೆ ಭಾಗ ಗಳಿಗೆ ಸಂಚರಿಸಲು ಸಂಪರ್ಕ ಕಡಿತವಾಗುತ್ತಿದೆ. ಜತೆಗೆ ಬೇರೆ ಸಮಯಗಳಲ್ಲಿ ಸೋನಾಮಾರ್ಗ್ ರಸ್ತೆ ದುರ್ಗಮವಾಗಿರುತ್ತದೆ. ಹೀಗಾಗಿ ಸುರಂಗ ಮಾರ್ಗ ನಿರ್ಮಿಸಲಾಗುತ್ತಿದೆ.
ಅತ್ಯಾಧುನಿಕ ಸೌಲಭ್ಯ ಹೊಂದಿರುವ ಸುರಂಗ
ಜಮ್ಮು-ಕಾಶ್ಮೀರದ ಆರ್ಥಿಕತೆ ಹಾಗೂ ಪ್ರವಾಸೋದ್ಯಮಕ್ಕೆ ಪೂರಕವಾಗಿರುವ ಈ ಸುರಂಗ ಮಾರ್ಗದಲ್ಲಿ ಅತ್ಯಾಧುನಿಕ ಇಂಟೆಲಿಜೆಂಟ್ ಟ್ರಾಫಿಕ್ ಮ್ಯಾನೇಜ್‌ಮೆಂಟ್ ಸಿಸ್ಟಮ್ ಅಳವಡಿಸಲಾಗಿದೆ. ಪ್ರಯಾಣ ಸುರಕ್ಷೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಸಂಚಾರ ದಟ್ಟಣೆಯಾದಾಗ ಸುರಂಗ ಮಾರ್ಗದಿಂದ ನಡುವಿನಲ್ಲೇ ಹೊರಗೆ ನಿರ್ಗಮಿಸುವ “ಎಸ್ಕೇಪ್ ರೂಟ್’ ಸಹ ಇಲ್ಲಿದೆ. ಒಳಗಿನ ಟ್ರಾಫಿಕ್‌ನ್ನು ಹೊರಗಿಂದಲೇ ನಿರ್ವಹಿಸುವ ವ್ಯವಸ್ಥೆ ಇಲ್ಲಿದೆ. ಈ ಝಡ್ ಮೋರಾವು ಏಷ್ಯಾದಲ್ಲೇ ಅತೀ ಎತ್ತರದ ಝೋಜಿಲಾ ಸುರಂಗ ಮಾರ್ಗದ ಒಂದು ಭಾಗವಾಗಿದೆ. ಸೇನಾ ಸಿಬಂದಿ ಪ್ರಯಾಣಕ್ಕೂ ಅನುಕೂಲ
ಝಡ್ ಮೋರ್ ಸುರಂಗವು ಜಮ್ಮ ಹಾಗೂ ಕಾಶ್ಮೀರದ ಸೋನ್‌ಮಾರ್ಗ್ ಪ್ರವಾಸಿ ತಾಣಕ್ಕೆ ವರ್ಷದ ಎಲ್ಲ ಋತುವಿನಲ್ಲೂ ಸಂಪರ್ಕ ಕಲ್ಪಿಸಲಿದೆ. ಚಳಿಗಾಲದಲ್ಲಿ ಹಿಮಪಾತದಿಂದ ಈ ಮಾರ್ಗದಲ್ಲಿ ಸಾರಿಗೆ ಸಂಪರ್ಕ ಕಡಿತವಾಗುವುದನ್ನು ತಪ್ಪಿಸಲಿದೆ. ಈ ಭಾಗದಲ್ಲಿ ಮೂಲಸೌಕರ್ಯಕ್ಕೆ ಒತ್ತು ಕೊಡುವುದರ ಜತೆಗೆ ಸ್ಥಳೀಯ ವ್ಯವಹಾರಗಳಿಗೆ ಹೊಸ ಅವಕಾಶಗಳನ್ನು ಸೃಷ್ಟಿಸಲಿದೆ. ಲಡಾಖ್‌ನಲ್ಲಿ ವಿಶೇಷವಾಗಿ ಪಾಕಿಸ್ಥಾನದ ಸಮೀಪವಿರುವ ಪ್ರದೇಶಗಳಲ್ಲಿ ನೆಲೆಸಿರುವ ಭಾರತೀಯ ರಕ್ಷಣ ಪಡೆ ಸಿಬಂದಿಯನ್ನು ಸುಲಭವಾಗಿ ಕಳುಹಿಸಬಹುದು. ಮಿಲಿಟರಿ ಕಾರ್ಯಾಚರಣೆಗೆ ಸಾಕಷ್ಟು ಅನುಕೂಲವಾಗಲಿದೆ. ಕಂಗನ್‌ನಿಂದ ಆಕರ್ಷಕ ಪ್ರವಾಸಿ ತಾಣವಾದ ಸೋನ್‌ಮಾರ್ಗ್ ತಲುಪಲು ಗಂಟೆಗಟ್ಟಲೆ ಸಮಯ ಬೇಕಾಗಿತ್ತು. ಆದರೆ ಈ ಸುರಂಗ ಮಾರ್ಗದಲ್ಲಿ ಕೇವಲ 15 ನಿಮಿಷದಲ್ಲಿ ತಲುಪಬಹುದಾಗಿದೆ. ಸೋನ್‌ಮಾರ್ಗ್‌ಗೆ ಹಾಗೂ ಅಂತಿಮವಾಗಿ ಮುಂಬರುವ ಝೋಜಿಲಾ ಸುರಂಗದ ಮೂಲಕ ಲಡಾಖ್‌ಗೆ ತಡೆರಹಿತವಾಗಿ ಪ್ರಯಾಣಿಸಬಹುದು. ಈ ಸುರಂಗವು ಸಾಮಾಜಿಕ ಹಾಗೂ ಆರ್ಥಿಕ ಅಭಿವೃದ್ಧಿಯನ್ನು ಹೆಚ್ಚಿಸುತ್ತದೆ.
Related Articles
ಝಡ್ ಮಾರ್ಗದ ಸುರಂಗ ಯೋಜನೆಯನ್ನು ಪ್ರಾರಂಭ ದಲ್ಲಿ 2,400 ಕೋಟಿ ರೂ. ವೆಚ್ಚದಲ್ಲಿ 2012ರಲ್ಲಿ ಬಾರ್ಡರ್ ರೋಡ್ಸ್ ಆರ್ಗನೈಸೇಶನ್ ಕೈಗೊಂಡಿತ್ತು. ಬಳಿಕ ರಾಷ್ಟ್ರೀಯ ಹೆದ್ದಾರಿಗಳು ಹಾಗೂ ಮೂಲಸೌಕರ್ಯ ಅಭಿವೃದ್ಧಿ ನಿಗಮ ಲಿಮಿಟೆಡ್‌ಗೆ ಹಸ್ತಾಂತರಿಸಲಾಯಿತು. ಮರು-ಟೆಂಡರ್ ಪ್ರಕ್ರಿಯೆ ಅನಂತರ ನಿರ್ಮಾಣ ಗುತ್ತಿಗೆಯನ್ನು ಎಪಿಸಿಒ ಇನಾಟೆಕ್‌ಗೆ ವಹಿಸಲಾಯಿತು. ಸುರಂಗದ ಗಣಿಗಾರಿಕೆ ಹಾಗೂ ಉತ್ಖನನ ಕಾರ್ಯವನ್ನು 2021ರಲ್ಲೇ ಪೂರ್ಣಗೊ ಳಿಸಲಾಗಿದೆ. 2023ರ ಆಗಸ್ಟ್‌ನೊಳಗೆ ಯೋಜನೆ ಪೂರ್ಣ ಗೊಳಿಸಲು ಗುರಿ ಹೊಂದಲಾಗಿತ್ತು. ಆದರೆ ವಿವಿಧ ಕಾರಣ ಗಳಿಂದ ವಿಳಂಬವಾಗಿದೆ. 2026ರ ವೇಳೆಗೆ ಸುರಂಗ ಮಾರ್ಗ ಪೂರ್ಣಗೊಳ್ಳುವ ನಿರೀಕ್ಷೆಯಿದೆ.
Advertisement
ಕಾಶ್ಮೀರದಲ್ಲಿ ಪ್ರಗತಿ ಇರುವ ಯೋಜನೆಗಳು
ಜಮ್ಮು ಹಾಗೂ ಶ್ರೀನಗರ ನಡುವೆ ಎಲ್ಲ ಋತುಗಳಲ್ಲೂ ಸಂಪರ್ಕವನ್ನು ಒದಗಿಸಲು 16 ಸಾವಿರ ಕೋ.ರೂ. ವೆಚ್ಚದಲ್ಲಿ ಹೆದ್ದಾರಿ ಚತುಷ್ಪಥ ಯೋಜನೆಯನ್ನು ಕೈಗೊಳ್ಳಲಾಗಿದೆ. ರಾಂಬನ್ ಮತ್ತು ಬನಿಹಾಲ್‌ನ ಪರ್ವತಗಳ ಮೂಲಕ ನಾಲ್ಕು-ಪಥದ ಯೋಜನೆಯು 10 ಸುರಂಗಗಳು (21.5 ಕಿ.ಮೀ.ಗಳಿಗೆ ಸಮನಾಗಿರುತ್ತದೆ) ಹಾಗೂ ರಾಂಬನ್‌ನಲ್ಲಿನ ಒಂದು ವಯಡಕ್ಟ್ ಮತ್ತು ಹಲವಾರು ಸೇತುವೆಗಳನ್ನು ಒಳಗೊಂಡಿದೆ. ಯೋಜನೆಯು 2015 ರಲ್ಲಿ ಪ್ರಾರಂಭವಾಗಿದ್ದು, 2026 ರ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಕಾರ್ಮಿಕರಿಗೆ ಸವಾಲಿನ ಕೆಲಸ!
2012ರಲ್ಲಿ ಆರಂಭವಾದ ಈ ಸುರಂಗ ನಿರ್ಮಾಣ ಕಾಮಗಾರಿಯಲ್ಲಿ 1,500 ಕಾರ್ಮಿಕರು ನಿರಂತರವಾಗಿ ಕೆಲಸ ಮಾಡುತ್ತಿದ್ದಾರೆ. ಈ ಪೈಕಿ ಬಹುತೇಕರು ವಲಸೆ ಕಾರ್ಮಿಕರಾಗಿದ್ದಾರೆ. ಹಲವಾರು ಸವಾಲಿನ ಪರಿಸ್ಥಿತಿಯಲ್ಲಿ ಕೆಲಸ ಮಾಡುವ ಮೂಲಕ ಈ ಮಹತ್ವಾಕಾಂಕ್ಷೆ ಯೋಜನೆಯನ್ನು ಅಂತಿಮ ಹಂತಕ್ಕೆ ತಂದಿದ್ದಾರೆ. ಕಾಶ್ಮೀರದಲ್ಲಿ ಈಗ ಉಗ್ರ ಚಟುವಟಿಕೆಗಳು ಸಂಪೂರ್ಣವಾಗಿ ನಿಯಂತ್ರಣಕ್ಕೆ ಬಂದಿದ್ದರೂ ಸಹ ಉಗ್ರರ ಉಪಟಳ ಕೆಲವೆಡೆ ಮುಂದುವರಿದಿರುವುದು ಮತ್ತು ವಲಸೆ ಕಾರ್ಮಿಕರು ಹಾಗೂ ಮೂಲ ಸೌಕರ್ಯಗಳನ್ನು ಗುರಿಯಾಗಿಸಿಕೊಂಡಿರುವುದು ಕಣಿವೆ ರಾಜ್ಯದಲ್ಲಿ ಆತಂಕವನ್ನು ಹೆಚ್ಚಿಸಿದೆ. ರಾಷ್ಟ್ರೀಯ ಭದ್ರತೆಗೆ ಸಹಕಾರಿ
ಪಾಕಿಸ್ಥಾನ ಹಾಗೂ ಚೀನದೊಂದಿಗೆ ಉದ್ವಿಗ್ನತೆ ಇರುವ ಸಿಯಾಚಿನ್ ಮತ್ತು ಪೂರ್ವ ಲಡಾಖ್‌ನಲ್ಲಿ ಭಾರತೀಯ ರಕ್ಷಣ ಪಡೆಗಳನ್ನು ನಿಯೋಜಿಸಲು ಈ ಸುರಂಗ ಮಾರ್ಗ ಸಹಕಾರಿಯಾಗಿದೆ. ಕಡಿಮೆ ವೆಚ್ಚದಲ್ಲಿ ಸೇನಾ ಸಾಮಗ್ರಿ ಗಳನ್ನು ಸುಲಭವಾಗಿ ರವಾನಿಸಬಹುದು. ಉಗ್ರರ ವಿರುದ್ಧ ಮಿಲಿಟರಿ ಕಾರ್ಯಾಚರಣೆಗೂ ನೆರವಾಗಲಿದೆ. ಈಯೋಜನೆ ಪೂರ್ಣಗೊಂಡರೆ ಪ್ರಯಾಣದ ಸಮಯವು ಅರ್ಧಕ್ಕಿಂತ ಕಡಿಮೆಯಾಗುತ್ತದೆ. -ಎಂ.ಆರ್.ನಿರಂಜನ್