Advertisement

ಸರ್ಜಿಕಲ್‌ ಸ್ಟ್ರೈಕ್‌ ರೂವಾರಿ ರಾವತ್‌ಗೆ ನಮನ

04:01 PM Dec 10, 2021 | Shwetha M |

ಮುದ್ದೇಬಿಹಾಳ: ಹೆಲಿಕಾಪ್ಟರ್‌ ದುರಂತದಲ್ಲಿ ಸಾವನ್ನಪ್ಪಿದ ದೇಶದ ರಕ್ಷಣಾ ಪಡೆಗಳ ಮುಖ್ಯಸ್ಥ ಜನರಲ್‌ ಬಿಪಿನ್‌ ರಾವತ್‌ ಅವರ ಬಲಿದಾನ ನಿರರ್ಥಕವಾಗಲು ಪ್ರಧಾನಿ ಮೋದಿ ಅವರು ಬಿಡುವುದಿಲ್ಲ. ದುರಂತದ ಬಗ್ಗೆ ಸಮಗ್ರ ತನಿಖೆ ನಡೆಸಿ ಸತ್ಯಾಸತ್ಯತೆಯನ್ನು ದೇಶದ ಜನರೆದುರು ಬಿಚ್ಚಿಡುವ ವಿಶ್ವಾಸ ದೇಶವಾಸಿಗಳಿಗೆ ಇದೆ ಎಂದು ಪುರಸಭೆ ಮಾಜಿ ಸದಸ್ಯ ಬಸವರಾಜ ನಂದಿಕೇಶ್ವರಮಠ ಹೇಳಿದರು.

Advertisement

ಇಲ್ಲಿನ ವಿದ್ಯಾನಗರದಲ್ಲಿರುವ ಭಾರತ ಸ್ಕೌಟ್ಸ್‌ ಮತ್ತು ಗೈಡ್ಸ್‌ ತರಬೇತಿ ಕೇಂದ್ರದಲ್ಲಿ ಗುರುವಾರ ಸಂಜೆ ಏರ್ಪಡಿಸಿದ್ದ ಜನರಲ್‌ ಬಿಪಿನ್‌ ರಾವತ್‌ ಮತ್ತು ಹುತಾತ್ಮರಾದ ಎಲ್ಲ ರಕ್ಷಣಾಧಿಕಾರಿಗಳಿಗೆ ಶ್ರದ್ಧಾಂಜಲಿ ಸಲ್ಲಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಈಚೆಗೆ ನಡೆದ ಸರ್ಜಿಕಲ್‌ ಸ್ಟ್ರೈಕ್‌ನ ರೂವಾರಿಯಾಗಿದ್ದ ರಾವತ್‌ ಅವರು ದೇಶವನ್ನು ರಕ್ಷಣಾತ್ಮಕವಾಗಿ ಮುನ್ನಡೆಸುವಲ್ಲಿ ಸಾಕಷ್ಟು ಸಾಮರ್ಥ್ಯ ಪ್ರದರ್ಶಿಸಿದ್ದರು. ಅವರು ರಕ್ಷಣಾ ಪಡೆಗಳ ಮುಖ್ಯಸ್ಥರಾಗಿ ಅಧಿಕಾರ ಸ್ವೀಕರಿಸಿದ ಮೇಲೆ ಇತರೆ ದೇಶಗಳಿಗೆ ಭಾರತದ ಬಗ್ಗೆ ಒಂದು ಬಲವಾದ ಸಂದೇಶ ರವಾನೆಯಾಗಿತ್ತು ಎಂದರು.

ಸ್ಕೌಟ್ಸ್‌ ಮತ್ತು ಗೈಡ್ಸ್‌ ಸ್ಥಳೀಯ ಸಂಸ್ಥೆಯ ಉಪಾಧ್ಯಕ್ಷರಾದ ಡಿ.ಬಿ. ವಡವಡಗಿ, ಪುರಸಭೆ ಸದಸ್ಯೆ ಸಂಗಮ್ಮ ದೇವರಳ್ಳಿ, ಪದಾಧಿಕಾರಿ ನಾಗಭೂಷಣ ನಾವದಗಿ ಅವರು ಜನರಲ್‌ ರಾವತ್‌ ಅವರ ಜೀವನ, ಶೌರ್ಯ, ಸಾಹಸ ಮತ್ತು ದೇಶಭಕ್ತಿ ಕುರಿತು ಮಾತನಾಡಿದರು.

ಸಂಸ್ಥೆಯ ಕಾರ್ಯದರ್ಶಿ ಜಿ.ಎಚ್‌. ಚವ್ಹಾಣ ಕಾರ್ಯಕ್ರಮ ನಿರ್ವಹಿಸಿದರು. ಆರ್‌ಎಂಎಸ್‌ಎ ಆದರ್ಶ ವಿದ್ಯಾಲಯದ ಮುಖ್ಯಾಧ್ಯಾಪಕಿ ನೀಲಮ್ಮ ತೆಗ್ಗಿನಮಠ, ಸ್ಕೌಟ್ಸ್‌ ಗೈಡ್ಸ್‌ ಪದಾಧಿಕಾರಿಗಳಾದ ಗೋಪಾಲ ಹೂಗಾರ, ಬಿಜೆಪಿ ಮಹಿಳಾ ಘಟಕದ ಅಧ್ಯಕ್ಷೆ ಗೌರಮ್ಮ ಹುನಗುಂದ ಬಲದಿನ್ನಿ, ಎಸ್‌.ಆರ್‌. ಸುಲ್ಪಿ, ಮುತ್ತಪ್ಪನವರ್‌, ಮುಖ್ಯಾಧ್ಯಾಪಕ ವಿನೋದ ಪಟಗಾರ, ದೈಹಿಕ ಶಿಕ್ಷಕ ರಾಮೋಡಗಿ ಮತ್ತಿತರರು ಪಾಲ್ಗೊಂಡಿದ್ದರು. ಇದೇ ವೇಳೆ ಒಂದು ನಿಮಿಷ ಮೌನ ಆಚರಿಸಿ ಅಗಲಿದವರ ಆತ್ಮಕ್ಕೆ ಶಾಂತಿ ಕೋರಲಾಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next