ಶಸ್ತ್ರಚಿಕಿತ್ಸೆಯು ವೈದ್ಯಕೀಯ ಶಾಸ್ತ್ರದ ಒಂದು ಶಾಖೆಯಾಗಿದ್ದು, ಮೂಲದಲ್ಲಿ ಗಾಯ, ಸೋಂಕುಗಳು ಮತ್ತು ಮೂತ್ರಕೋಶ ಕಲ್ಲುಗಳ ನಿಭಾವಣೆಗಾಗಿ ಬೆಳೆದುಬಂದುದು. ಕ್ರಮೇಣವಾಗಿ ಅದು ಅಪಾಯಕಾರಿಯಾದ ಘನ ಗಡ್ಡೆಗಳ ಪ್ರಥಮ ಚಿಕಿತ್ಸಾ ವಿಧಾನವಾಯಿತು. ಅನೇಕ ಬಗೆಯ ಕ್ಯಾನ್ಸರ್‌ಗಳಿಗೆ ಶಸ್ತ್ರಚಿಕಿತ್ಸೆಯ ಮೂಲಕ ತೆಗೆದುಹಾಕುವುದೇ ಗುಣಪಡಿಸಬಹುದಾದ ಚಿಕಿತ್ಸೆಯ ಅಡಿಗಲ್ಲಾಗಿದೆ.
ಕ್ಯಾನ್ಸರ್ ಎಂಬುದು ಒಂದು ಗುಣಪಡಿಸಲಾಗದ ಕಾಯಿಲೆ ಎಂಬ ನಂಬಿಕೆಯು ಬಹುಕಾಲದಿಂದ ನೆಲೆಸಿತ್ತು. ಕ್ಯಾನ್ಸರ್‌ಗಿಂತಲೂ ಅದಕ್ಕೆ ಒದಗಿಸುವ ಚಿಕಿತ್ಸೆಯೇ ಹೆಚ್ಚು ಹಾನಿಕರ ಎಂಬ ಭಾವನೆಯಿತ್ತು. ಆಧುನಿಕ ಶಸ್ತ್ರಚಿಕಿತ್ಸಾತ್ಮಕ ಓಂಕಾಲಜಿ ಚಿಕಿತ್ಸೆಗಳ ಅಡಿಪಾಯವು ಅಭಿವೃದ್ಧಿ ಹೊಂದಿರುವುದು 1840ರಿಂದ 1940ರ ನಡುವಣ ಒಂದು ಶತಮಾನದ, ತುಲನಾತ್ಮಕವಾದ ಕಿರು ಅವಧಿಯಲ್ಲಿ. ಈ ಅವಧಿಯನ್ನು ಸಾಮಾನ್ಯವಾಗಿ “ಶಸ್ತ್ರಚಿಕಿತ್ಸಾ ತಜ್ಞರ ಶತಮಾನ’ ಎಂಬುದಾಗಿ ಕರೆಯಲಾಗುತ್ತದೆ. 1840ರ ಕಾಲಘಟ್ಟದಲ್ಲಿ ಸಾಮಾನ್ಯ ಅರಿವಳಿಕೆಯ ಆವಿಷ್ಕಾರವು ಹೆಚ್ಚು ಸಂಕೀರ್ಣ ಶಸ್ತ್ರಚಿಕಿತ್ಸೆಗಳನ್ನು ನಡೆಸುವುದಕ್ಕೆ ಅನುವು ಮಾಡಿಕೊಟ್ಟಿತು. ಇದರ ಜತೆಗೆ, 1860ರ ಅವಧಿಯಲ್ಲಿ ಆ್ಯಂಟಿ ಸೆಪ್ಟಿಕ್ ಶಸ್ತ್ರಚಿಕಿತ್ಸೆಯ ಆವಿಷ್ಕಾರವು ಶಸ್ತ್ರಚಿಕಿತ್ಸೆಗೆ ಸಂಬಂಧಿಸಿದ ಗಾಯ-ಅಪಾಯಗಳು ಮತ್ತು ಮರಣ ಪ್ರಮಾಣವನ್ನು ಕಡಿಮೆ ಮಾಡಿತು. ಅಂತಿಮವಾಗಿ, ಅಂಗಾಂಶ ಸೂಕ್ಷ್ಮದರ್ಶನದಲ್ಲಿ ನಡೆದ ತಾಂತ್ರಿಕ ಮುನ್ನಡೆಗಳು ಅನುದ್ದೇಶಿತ ಜೀವಕೋಶ ಬೆಳವಣಿಗೆಯ ಶೋಧಕ್ಕೆ ವೇಗವರ್ಧನೆ ಒದಗಿಸಿತು. ಅನುದ್ದೇಶಿತ ಜೀವಕೋಶ ಬೆಳವಣಿಗೆಯೇ ಕ್ಯಾನ್ಸರ್‌ನ ಜೀವಶಾಸ್ತ್ರೀಯ ರಹಸ್ಯವಾಗಿದ್ದು, ಇದಕ್ಕೆ ಕಾರಣ ವಂಶವಾಹಿ ಮ್ಯುಟೇಶನ್ ಎಂಬುದನ್ನು ನಾವಿಂದು ತಿಳಿದುಕೊಂಡಿದ್ದೇವೆ. “ಕ್ಯಾನ್ಸರ್ ಶಸ್ತ್ರಚಿಕಿತ್ಸೆ’ಯನ್ನು ಆವಿಷ್ಕರಿಸಿದ ಹೆಗ್ಗಳಿಕೆಯು ಮೂವರು ಶಸ್ತ್ರಚಿಕಿತ್ಸಾ ತಜ್ಞರಿಗೆ ಸಲ್ಲುತ್ತದೆ. ಅವರು ಜರ್ಮನಿಯ ಡಾ| ಕ್ರಿಶ್ಚಿಯನ್ ಆಲ್ಬರ್ಟ್ ಥಿಯೋಡೋರ್ ಬಿಲಾÅಥ್, ಲಂಡನ್‌ನ ಡಾ| ಡಬ್ಲ್ಯು. ಸ್ಯಾಂಪ್ಸನ್ ಹ್ಯಾಂಡ್ಲಿ ಮತ್ತು ಬಾಲ್ಟಿಮೋರ್‌ನ ಡಾ| ಸ್ಟೀವಾರ್ಟ್ ಹಾಲ್‌ಸ್ಟೆಡ್.
ಸ್ಥೂಲವಾಗಿ ಹೇಳಬೇಕೆಂದರೆ, ಸರ್ಜಿಕಲ್ ಓಂಕಾಲಜಿ ಎಂಬುದು ಶಸ್ತ್ರಚಿಕಿತ್ಸೆಯಲ್ಲಿ ಕ್ಯಾನ್ಸರ್ ನಿಭಾವಣೆಗೆ ಸಂಬಂಧಪಟ್ಟಿರುವ ವಿಭಾಗ. ಇದು ಶಸ್ತ್ರಚಿಕಿತ್ಸೆಯ ವಿಶೇಷಜ್ಞ ವಿಭಾಗವಾಗಿದ್ದು, ಬಹುತೇಕ ಸಂಪೂರ್ಣವಾಗಿ ಓಂಕಾಲಜಿಗೆ ಮೀಸಲಾಗಿದೆ ಮಾತ್ರವಲ್ಲದೆ, ಅಂಗಾಂಗ ಆಧಾರಿತವಾಗಿಲ್ಲದೆ ಕಾಯಿಲೆಯನ್ನು ಆಧರಿಸಿದೆ. ಭಾರತದ ಸರ್ಜಿಕಲ್ ಓಂಕಾಲಜಿಸ್ಟ್‌ಗಳು ಬಹುತೇಕ ಮಾಸ್ಟರ್ ಇನ್ ಚಿರುಗೇì (ಎಂಸಿಎಚ್) ಅಥವಾ ಡಿಪ್ಲೊಮಾ ಇನ್ ನ್ಯಾಶನಲ್ ಬೋರ್ಡ್ ಪದವಿಯನ್ನು ಹೊಂದಿರುತ್ತಾರೆ. ಈ ಕೋರ್ಸ್‌ಗಳು ಬಹುಶಿಸ್ತೀಯ ನೋಟ ಸಹಿತ ವಿವಿಧ ಘನ ಅಂಗಾಂಗಗಳ ಕ್ಯಾನ್ಸರ್ ಶಸ್ತ್ರಚಿಕಿತ್ಸೆಯಲ್ಲಿ ಮೂರು ವರ್ಷಗಳ ತೀವ್ರ ತರಬೇತಿಯನ್ನು ಹೊಂದಿರುತ್ತವೆ. ಫಲಿತಾಂಶವಾಗಿ, ಈ ಪದವಿಯನ್ನು ಪಡೆದಿರುವ ಓಂಕಾಲಜಿಸ್ಟ್‌ಗಳು ತೀವ್ರವಾದ, ಬಹುಶಿಸ್ತೀಯ ಚಿಕಿತ್ಸೆ ಅಗತ್ಯವಾಗಿರುವ ಅನೇಕ ಸಂಕೀರ್ಣ ಕ್ಯಾನ್ಸರ್ ಪ್ರಕರಣಗಳಿಗೆ ಚಿಕಿತ್ಸೆ ನೀಡಲು ಅಗತ್ಯವಾದ ಪರಿಣತಿಯನ್ನು ಹೊಂದಿರುತ್ತಾರೆ. ಈ ಕೋರ್ಸ್‌ಗಳು ಓಂಕಾಲಜಿಸ್ಟ್‌ಗಳನ್ನು ಇತರ ಓಂಕಾಲಜಿ ಶಿಸ್ತುಗಳ ಜತೆಗೆ ಸಂವಹನ ನಡೆಸಲು ಮತ್ತು ಓಂಕಾಲಜಿ ಸಂಬಂಧಿ ವಿಚಾರಗಳಲ್ಲಿ ಶಸ್ತ್ರಚಿಕಿತ್ಸೆ, ವೈದ್ಯಕೀಯ ಮತ್ತು ಸಮುದಾಯ ಆರೋಗ್ಯ ವಿಭಾಗಕ್ಕೆ ನಾಯಕತ್ವ ಒದಗಿಸಲು ಸಮರ್ಥರನ್ನಾಗಿಸುತ್ತವೆ.
ಓರ್ವ ಸರ್ಜಿಕಲ್ ಓಂಕಾಲಜಿಸ್ಟ್ ಸಂಕೀರ್ಣ ಕ್ಯಾನ್ಸರ್ ಶಸ್ತ್ರಚಿಕಿತ್ಸೆಗಳನ್ನು ಯಶಸ್ವಿಯಾಗಿ ನಡೆಸಿಕೊಡಲು ಪರಿಣತಿಯನ್ನು ಹೊಂದಿದ್ದರೂ ಈ ಕ್ಷೇತ್ರದಲ್ಲಿ ಹಲವು ಉಪಪರಿಣತಿಗಳು ತಾಂತ್ರಿಕವಾಗಿಲ್ಲದೆ ವಿವೇಚನೆ ಮತ್ತು ಬುದ್ಧಿವಂತಿಕೆಗೆ ಸಂಬಂಧಿಸಿರುತ್ತವೆ. ಸರ್ಜಿಕಲ್ ಓಂಕಾಲಜಿ ವೈದ್ಯರಲ್ಲಿ ಕ್ಯಾನ್ಸರ್ ಕಾಯಿಲೆಯ ಜೀವಶಾಸ್ತ್ರೀಯ ಸೂಕ್ಷ್ಮಗಳನ್ನು ಮತ್ತು ಜ್ಞಾನವನ್ನು ಬೆಳೆಸುವುದಕ್ಕಾಗಿ ಹಾಗೂ ಕ್ಯಾನ್ಸರ್ ಕಾಯಿಲೆಯನ್ನು ಗುಣಪಡಿಸಲು ಅಥವಾ ಸಾಂತ್ವನದಿಂದಿರಿಸಲು ಶಸ್ತ್ರಚಿಕಿತ್ಸೆಯ ಜತೆಗೆ ಅಗತ್ಯವಾಗಿರುವ ಇತರ ಚಿಕಿತ್ಸೆಗಳ ಬಗ್ಗೆ ಜ್ಞಾನವನ್ನು ಬೆಳೆಯಿಸಲು ಸರ್ಜಿಕಲ್ ಓಂಕಾಲಜಿ ಕೋರ್ಸ್‌ಗಳು ಸಾಮಾನ್ಯವಾಗಿ ಮೆಡಿಕಲ್ ಓಂಕಾಲಜಿ, ರೇಡಿಯೇಶನ್ ಓಂಕಾಲಜಿ ಮತ್ತು ಪೆಥಾಲಜಿ ವಿಭಾಗಗಳ ಆವರ್ತ ತರಬೇತಿಯನ್ನು ಹೊಂದಿರುತ್ತವೆ. ಕ್ಯಾನ್ಸರ್ ಚಿಕಿತ್ಸೆಯ ಈ ಜಾಗತಿಕ ದೃಷ್ಟಿಯು ರೋಗಿ ಆರೈಕೆ ಯೋಜನೆಯನ್ನು ಇನ್ನಷ್ಟು ವ್ಯಕ್ತಿ ನಿರ್ದಿಷ್ಟವಾಗಿಸಲು ಸಹಾಯ ಮಾಡುತ್ತದೆ. ರೋಗಿಯ ಸಮಗ್ರ ಚಿಕಿತ್ಸಾ ಯೋಜನೆಯಲ್ಲಿ ಕ್ಲಪ್ತ ಕಾಲದಲ್ಲಿ ಸಂಕೀರ್ಣ ಶಸ್ತ್ರಚಿಕಿತ್ಸೆಗೆ ರೋಗಿಯನ್ನು ಆರಿಸುವುದು ಜಟಿಲವಾಗುವ ಸಾಧ್ಯತೆಯಿರುತ್ತದೆ. ಕೀಮೋಥೆರಪಿ ಅಥವಾ ರೇಡಿಯೇಶನ್ ಸ್ಥಳೀಯವಾಗಿ ಮತ್ತು ದೈಹಿಕವಾಗಿ ಬೀರುವ ಪರಿಣಾಮಗಳು ಇದಕ್ಕೆ ಕಾರಣ. ತನ್ನ ಅನುಭವವನ್ನು ಶಸ್ತ್ರಚಿಕಿತ್ಸೇತರ ಶಿಸ್ತುಗಳಿಗೂ ವಿಸ್ತರಿಸಿಕೊಳ್ಳುವ ಮೂಲಕ ಸರ್ಜಿಕಲ್ ಓಂಕಾಲಜಿಸ್ಟ್ ವೈದ್ಯನೊಬ್ಬ ಬಹುಶಿಸ್ತೀಯ ಚಿಕಿತ್ಸೆಯನ್ನು ಪಡೆಯುತ್ತಿರುವ ಅಥವಾ ಪಡೆಯ ಲಿರುವ ರೋಗಿಯನ್ನು ಶಸ್ತ್ರಚಿಕಿತ್ಸೆಗೆ ಒಳಪಡಿಸು ವುದರ ಕುಂದು ಕೊರತೆಗಳನ್ನು ತಿಳಿದುಕೊಳ್ಳುವುದು ಸಾಧ್ಯ. ಅಂತಿಮವಾಗಿ ಸರ್ಜಿಕಲ್ ಓಂಕಾಲಜಿಸ್ಟ್ ಗಳು ಅಪರೂಪದ ಗಡ್ಡೆಗಳು ಮತ್ತು ಅಸಾಧಾರಣ ಕಾಯಿಲೆ ಸನ್ನಿವೇಶಗಳನ್ನು ನಿಭಾಯಿಸುವ ಅನುಭವಗಳನ್ನು ಆಗಾಗ ಪಡೆಯುತ್ತಾರೆ. ನಿರಂತರ ಅಧ್ಯಯನ ಮತ್ತು ಬೋಧನೆಯ ಮೂಲಕ ಕ್ಯಾನ್ಸರ್ ರೋಗಿಯ ಆರೈಕೆಯ ವಿಧಿವಿಧಾನಗಳನ್ನು ಇನ್ನಷ್ಟು ಉತ್ತಮ ಪಡಿಸುವುದಕ್ಕೆ ಗಮನಾರ್ಹ ಕೊಡುಗೆ ನೀಡುವ ಗುರುತರ ಹೊಣೆಗಾರಿಕೆಯೂ ಸರ್ಜಿಕಲ್ ಓಂಕಾಲಜಿಸ್ಟ್‌ಗಳ ಮೇಲಿರುತ್ತದೆ.
– ಮುಂದುವರಿಯುವುದು
– ಡಾ| ಕಾರ್ತಿಕ್ ಕೆ.ಎಸ್.,
ಕನ್ಸಲ್ಟಂಟ್ ಸರ್ಜಿಕಲ್ ಓಂಕಾಲಜಿಸ್ಟ್
ಕೆಎಂಸಿ ಆಸ್ಪತ್ರೆ, ಮಂಗಳೂರು