ಸುರತ್ಕಲ್: ಮಂಗಳೂರು ನಗರಕ್ಕೆ ಹಾಗೂ ಕೈಗಾರಿಕ ಪ್ರದೇಶಕ್ಕೆ ಹತ್ತಿರವಾದ ರೈಲು ನಿಲ್ದಾಣವಾದ ಸುರತ್ಕಲ್ ಕೊಂಕಣ ರೈಲು ನಿಲ್ದಾಣದ ಅಭಿವೃದ್ಧಿಯ ಕುರಿತಾಗಿ ಉದಯವಾಣಿ ವರದಿಗೆ ಶಾಸಕ ಡಾ| ಭರತ್ ಶೆಟ್ಟಿ ವೈ. ಅವರು ಸ್ಪಂದಿಸಿದ್ದು, 1.25 ಕೋಟಿ ರೂ. ಬಿಡುಗಡೆಗೆ ಕ್ರಮ ಕೈಗೊಂಡಿದ್ದಾರೆ.
ಪ್ರಮುಖ ಬೇಡಿಕೆಗಳಾದ ಪ್ಯಾಸೆಂಜರ್ ರೈಲ್ವೇ ರಿಸರ್ವೇಷನ್ ವ್ಯವಸ್ಥೆಗೆ ಒಪ್ಪಿಗೆ ದೊರೆತಿದ್ದು, ಕೇಂದ್ರ ಕಚೇರಿಯಿಂದ ರಿಸರ್ವೇಷನ್ ಕೋಡ್‌ಗಾಗಿ ನಿರೀಕ್ಷಿಸಲಾಗುತ್ತಿದೆ. ಮುಡಾದಿಂದ ರೈಲು ನಿಲ್ದಾಣದ ಒಳಭಾಗದಲ್ಲಿ ನೂತನ ಮೇಲ್ಛಾವಣಿ, ನೆಲಕ್ಕೆ ಮಾರ್ಬಲ್ ಹಾಸುವ ಕಾಮಗಾರಿಗೆ 50 ಲಕ್ಷ ರೂ., ನಿಲ್ದಾಣದ ಹೊರ ಭಾಗದಲ್ಲಿ ಇಂಟರ್‌ಲಾಕ್ ಮತ್ತು ರಸ್ತೆ ಕಾಂಕ್ರೀಟ್ ಕಾಮಗಾರಿಗೆ ನಗರಾಭಿವೃದ್ಧಿ ಇಲಾಖೆಯಿಂದ 75 ಲಕ್ಷ ರೂ. ಅನುದಾನ ಬಿಡುಗಡೆಗೆ ಅನುಮೋದನೆ ಲಭಿಸಿದೆ.
ಸುರತ್ಕಲ್ ಮಂಗಳೂರು ಮಹಾನಗರ ಪಾಲಿಕೆಯ ಪ್ರಮುಖ ಉಪನಗರದಲ್ಲಿ ಎಂಆರ್‌ಪಿಎಲ್, ಬೈಕಂಪಾಡಿ ಕೈಗಾರಿಕ ಪ್ರಾಂಗಣ ಸಹಿತ ಕೈಗಾರಿಕೆ ಹಾಗೂ ವಸತಿ ಬಡಾವಣೆಗಳು ಹೆಚ್ಚಿದ್ದು, ಲಕ್ಷಾಂತರ ಕಾರ್ಮಿಕರು ಇಲ್ಲಿ ಉದ್ಯೋಗವನ್ನು ಕಂಡುಕೊಂಡಿದ್ದು ಮಾತ್ರವಲ್ಲದೆ ಸ್ಥಳೀಯವಾಗಿ ಮುಂಬಯಿ – ಸುರತ್ಕಲ್ ನಡುವೆ ಸ್ಥಳೀಯ ಜನರ ಸಂಚಾರವೂ ಹೆಚ್ಚಿದೆ.
ಪ್ರಸ್ತುತ ಸುರತ್ಕಲ್ ರೈಲು ನಿಲ್ದಾಣದಲ್ಲಿ ಬಹುತೇಕ ರೈಲುಗಳಿಗೆ ನಿಲುಗಡೆಯಿದೆ. ಹೆಚ್ಚು ಬೇಡಿಕೆಯಿರುವ ಎರ್ನಾಕುಲಂ – ನಿಜಾಮುದ್ದೀನ್ ಎಕ್ಸ್‌ಪ್ರೆಸ್ (ಮಂಗಳ ಎಕ್ಸ್ ಪ್ರಸ್ 12617 ಮತ್ತು 12618 ದೈನಂದಿನ) ಮತ್ತು ಎರ್ನಾಕುಲಂ – ಅಜ್ಮಿàರ್ (ಮರು ಸಾಗರ್ ಎಕ್ಸ್‌ಪ್ರೆಸ್ 12977 ಮತ್ತು 12978 ವಾರಕ್ಕೊಮ್ಮೆ) ಸುರತ್ಕಲ್ ನಿಲ್ದಾಣದಲ್ಲಿ ನಿಲುಗಡೆಯಾಗುವುದಿಲ್ಲ. ಈ ರೈಲುಗಳಲ್ಲಿ ದೂರದ ಪ್ರಯಾಣ ಮಾಡುವ ಈ ಭಾಗದ ಪ್ರಯಾಣಿಕರು ಅವರನ್ನು ಹಿಡಿಯಲು ಮಂಗಳೂರಿಗೆ ಪ್ರಯಾಣಿಸಬೇಕಾದ ಅನಿವಾರ್ಯತೆ ಇದೆ. ಆದ್ದರಿಂದ ಈ ರೈಲುಗಳನ್ನು ಸುರತ್ಕಲ್ ನಿಲ್ದಾಣದಲ್ಲಿ ನಿಲುಗಡೆಗೆ ಆಗ್ರಹ ಕೇಳಿ ಬರುತ್ತಿದ್ದು, ಇದರ ಪ್ರಯೋಜನ ಸ್ಥಳೀಯರಿಗೆ ಲಭಿಸಬೇಕಿದೆ.
ಮತ್ತಷು ಅಭಿವೃದ್ಧಿಗೆ ಚಿಂತನೆ: ಮಂಗಳೂರು ಉತ್ತರ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಸುರತ್ಕಲ್ ಸರ್ವಸಜ್ಜಿತ ರೈಲು ನಿಲ್ದಾಣ ಆಗಬೇಕಿದೆ ಎಂಬ ಕನಸು ಸ್ಥಳೀಯರಿಗಿದೆ. ಈ ಬಗ್ಗೆ ಉದಯವಾಣಿ ವರದಿ ಗಮನಿಸಿದ್ದೇನೆ. ಎಂಜಿನಿಯರಿಂಗ್, ಮೆಡಿಕಲ್ ಸಹಿತ ಪ್ರಮುಖ ಶಿಕ್ಷಣ ಕ್ಷೇತ್ರ, ಕೈಗಾರಿಕೆಯಿದೆ. ಹೀಗಾಗಿ ಪಿಆರ್‌ಎಸ್ ರಿಸರ್ವೇಷನ್‌ಗೆ ಒಪ್ಪಿಗೆ ದೊರೆಯಲಿದೆ. ಮುಡಾ ಸಭೆಯಲ್ಲಿ ಮೂಲಸೌಕರ್ಯ ಯೋಜನೆಯಡಿ ಅನುದಾನ ಬಿಡುಗಡೆಗೊಳಿಸಲು ಬೇಕಾದ ಕ್ರಮ ಕೈಗೊಂಡಿದ್ದೇನೆ. ಒಟ್ಟು 1.25 ಕೋ.ರೂ. ಅಭಿವೃದ್ಧಿಗೆ ಇಡಲಾಗಿದೆ. ಈ ರೈಲು ನಿಲ್ದಾಣದಿಂದ ಮುಂಬಯಿಗೆ ಹೋಗಿ ಬರುವ ಸಾವಿರಾರು ಮಂದಿ ಸ್ಥಳೀಯರು ಇದ್ದಾರೆ. ಕಾರ್ಮಿಕ ವರ್ಗವಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಅಭಿವೃದ್ಧಿಗೆ ನೀಲಿನಕಾಶೆ ರೂಪಿಸಲಾಗುವುದು. –
ಡಾ| ಭರತ್ ಶೆಟ್ಟಿ ವೈ., ಶಾಸಕರು, ಮಂಗಳೂರು ಉತ್ತರ ವಿಧಾನಸಭೆ ಕ್ಷೇತ್ರ