ಸೂರತ್ : ಇಲ್ಲಿ ಶುಕ್ರವಾರ 20 ವಿದ್ಯಾರ್ಥಿಗಳನ್ನು ಬಲಿ ಪಡೆದ ಅಗ್ನಿ ಅನಾಹುತಕ್ಕೆ ಸಂಬಂಧಿಸಿ ಕೋಚಿಂಗ್ ಸೆಂಟರ್ ಮಾಲೀಕ ಮತ್ತು ಬಿಲ್ಡರ್‌ಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸಕ್ಷನ್ 304 ಮತ್ತು ಸೆಕ್ಷನ್ 114 ರ ಅಡಿಯಲ್ಲಿ ಸರ್ಥಾನಾ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಕೋಚಿಂಗ್ ಸೆಂಟರ್ ಮಾಲೀಕ ಭಾರ್ಗವ್ ಭೂತಾನಿ, ಬಿಲ್ಡರ್ಸ್‌ಗಳಾದ ಹರ್ಷಲ್ ವೆಕಾರಿಯಾ, ಜಿಗ್ನೇಶ್ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
ಕೋಚಿಂಗ್ ಕೇಂದ್ರವಿದ್ದ ನಾಲ್ಕು ಅಂತಸ್ತಿನ ತಕ್ಷಶಿಲಾ ಆರ್ಕೇಡ್‌ನಲ್ಲಿ ಏಕಾಏಕಿ ಬೆಂಕಿ ಹತ್ತಿಕೊಂಡಿದ್ದು, ಉರಿಯುವ ಬೆಂಕಿ ಯಿಂದ ಪಾರಾಗಲು ಹಲವು ವಿದ್ಯಾರ್ಥಿಗಳು 4ನೇ ಮಹಡಿಯಿಂದ ಕೆಳಕ್ಕೆ ಜಿಗಿದಿದ್ದಾರೆ. ಹೀಗೆ ಜಿಗಿದ ಕೆಲವು ವಿದ್ಯಾರ್ಥಿಗಳನ್ನು ಕೆಳಗೆ ನಿಂತಿದ್ದ ಸ್ಥಳೀಯರು ರಕ್ಷಿಸಿದ್ದಾರೆ. ಅನೇಕರು ಗಂಭೀರ ಗಾಯಗಳೊಂದಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೋಚಿಂಗ್ ಕೇಂದ್ರವಾದ ಕಾರಣ 14ರಿಂದ 17ರ ವಯಸ್ಸಿನ ವಿದ್ಯಾರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದರು. ಅಗ್ನಿ ಅನಾಹುತಕ್ಕೆ ಶಾರ್ಟ್ ಸರ್‌ಕ್ಯೂಟ್ ಕಾರಣವೆಂದು ತಿಳಿದು ಬಂದಿದೆ.
ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಅವರು ದುರಂತದ ತನಿಖೆಗೆ ಆದೇಶಿಸಿ ಮೃತರ ಕುಟುಂಬಗಳಿಗೆ ತಲಾ 4 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ.