ಹೆಚ್ಚುತ್ತಿರುವ ದ್ವೇಷ ಭಾಷಣಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್ ಶುಕ್ರವಾರ ಅತ್ಯಂತ ಮಹತ್ವದ ಆದೇಶವೊಂದನ್ನು ನೀಡಿದೆ. ಯಾವುದೇ ಧರ್ಮ, ಪಕ್ಷದವರೇ ಆಗಲಿ ದ್ವೇಷ ಭಾಷಣಗೈದವರ ವಿರುದ್ಧ ಸ್ವಯಂಪ್ರೇರಿತ ಕ್ರಿಮಿನಲ್ ಪ್ರಕರಣ ದಾಖಲಿಸಿಕೊಂಡು ಕಾನೂನು ಪ್ರಕ್ರಿಯೆ ಕೈಗೆತ್ತಿಕೊಳ್ಳುವಂತೆ ದೇಶದ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರಕಾರಗಳಿಗೆ ನಿರ್ದೇಶನ ನೀಡಿದೆ.
ದೇಶಾದ್ಯಂತ ದ್ವೇಷ ಭಾಷಣಗಳು ಮತ್ತು ದ್ವೇಷಪೂರಿತ ಅಪರಾಧ ಕೃತ್ಯಗಳು ಹೆಚ್ಚುತ್ತಿದ್ದು ಅವುಗಳ ವಿರುದ್ಧ ಸ್ವತಂತ್ರ ಮತ್ತು ನಿಷ್ಪಕ್ಷ ತನಿಖೆ ನಡೆಸುವಂತೆ ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ನಿರ್ದೇಶನ ನೀಡುವಂತೆ ಕೋರಿ ಶಹೀನ್ ಅಬ್ದುಲ್ಲಾ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ನ್ಯಾಯಪೀಠ, ದ್ವೇಷ ಭಾಷಣ ಮಾಡುವವರ ವಿರುದ್ಧ ದೂರು ದಾಖಲಾಗುವವರೆಗೆ ಕಾಯದೆ ಕೂಡಲೇ ಸ್ವಯಂಪ್ರೇರಿತರಾಗಿ ಕೇಸು ದಾಖಲಿಸಿಕೊಂಡು ಕ್ರಮ ಕೈಗೊಳ್ಳಬೇಕು. ಈ ವಿಚಾರ ದಲ್ಲಿ ಪೊಲೀಸರು ಅಥವಾ ಸರಕಾರ ವಿಳಂಬ ಮಾಡಿದಲ್ಲಿ ನ್ಯಾಯಾಂಗ ನಿಂದನೆ ಪ್ರಕರಣ ಎದುರಿಸಬೇಕಾದೀತು ಎಂದು ಕಳೆದ ವರ್ಷದ ಅ.21ರಂದು ದಿಲ್ಲಿ, ಉತ್ತರಪ್ರದೇಶ ಮತ್ತು ಉತ್ತರಾಖಂಡ ರಾಜ್ಯಗಳಿಗೆ ಕಠಿನ ಎಚ್ಚರಿಕೆ ನೀಡಿತ್ತು. ಈಗ ಈ ಆದೇಶದ ವ್ಯಾಪ್ತಿಯನ್ನು ಇಡೀ ದೇಶಕ್ಕೆ ವಿಸ್ತರಿಸಿರುವ ಸುಪ್ರೀಂ ಕೋರ್ಟ್, ದ್ವೇಷ ಭಾಷಣ ವಿಚಾರ ಅತ್ಯಂತ ಗಂಭೀರವಾಗಿದ್ದು ಧರ್ಮನಿರಪೇಕ್ಷ ರಾಷ್ಟ್ರದಲ್ಲಿ ಇಂತಹ ಬೆಳವಣಿಗೆಗಳನ್ನು ಸಹಿಸಲಾಗದು ಎಂದು ಅತ್ಯಂತ ಕಟುಮಾತುಗಳಲ್ಲಿ ಹೇಳಿದೆ.
ದೇಶದಲ್ಲಿ ಸಂವಿಧಾನವೇ ಪರಮಶ್ರೇಷ್ಠ. ಏಕತೆ, ಸಾರ್ವಭೌಮತೆಯು ಸಂವಿ ಧಾನದ ಆಶಯವಾಗಿದೆ. ವಿವಿಧ ಸಮುದಾಯಗಳ ಜನರು ಸಾಮರಸ್ಯದಿಂದ ಬದುಕಬೇಕಿದೆ. ನಾಗರಿಕರ ಮೂಲಭೂತ ಹಕ್ಕುಗಳನ್ನು ಮತ್ತು ಸಂವಿಧಾನವನ್ನು ರಕ್ಷಿಸುವುದು ನಮ್ಮ ಕರ್ತವ್ಯವಾಗಿದೆ. ದೇಶದ ಜಾತ್ಯತೀತ ಮೌಲ್ಯಗಳಿಗೆ ಅಪಾಯ ತಂದೊಡ್ಡಬಲ್ಲ ಈ ದ್ವೇಷ ಭಾಷಣಕ್ಕೆ ಕಡಿವಾಣ ಹಾಕಲೇಬೇಕಿದೆ. ದೇಶದ ವಿವಿಧ ಕೋರ್ಟ್‌ಗಳಲ್ಲಿ ದ್ವೇಷ ಭಾಷಣಕ್ಕೆ ಸಂಬಂಧಿಸಿದಂತೆ ಹಲವಾರು ಅರ್ಜಿಗಳು ಸಲ್ಲಿಕೆ ಯಾಗಿದ್ದು ಸಾರ್ವಜನಿಕ ಸಮಷ್ಟಿಯ ಹಿತದೃಷ್ಟಿಯಿಂದ ಮತ್ತು ಕಾನೂನಾತ್ಮಕ ಆಡ ಳಿತವನ್ನು ಖಾತರಿಪಡಿಸುವ ದೃಷ್ಟಿಯಿಂದ ಇವುಗಳನ್ನು ಗಂಭೀರವಾಗಿ ಪರಿಗಣಿಸಿದೆ.
ದ್ವೇಷ ಭಾಷಣ ಮತ್ತು ದ್ವೇಷಪೂರಿತ ಅಪರಾಧ ಕೃತ್ಯಗಳು ದೇಶದೆಲ್ಲೆಡೆ ಇಂದು ಸಾಮಾನ್ಯವಾಗುತ್ತಿದೆ. ಇಂತಹ ಭಾಷಣ, ಕೃತ್ಯಗಳು ಯಾವುದೋ ಒಂದು ಧರ್ಮ, ಜಾತಿ, ಸಮುದಾಯಕ್ಕೆ ಸೀಮಿತವಾಗಿ ಉಳಿದಿಲ್ಲ. ಯಾರೋ ಏನೋ ಹೇಳಿದರು ಎಂದು ಪ್ರತಿಹೇಳಿಕೆ, ಟೀಕೆಯ ಭರದಲ್ಲಿ ಮತ್ತಷ್ಟು ಅಪಸವ್ಯದ ಮಾತುಗಳು ಇಂದು ಸರ್ವೇಸಾಮಾನ್ಯವಾಗುತ್ತಿದೆ. ಎಷ್ಟೋ ಪ್ರಕರಣಗಳಲ್ಲಿ ಇಂಥ ಹೇಳಿಕೆಗಳು, ಕೃತ್ಯಗಳು ವ್ಯಕ್ತಿಗತವಾಗಿದ್ದರೂ ಅವು ಇಡೀ ಸಮಾಜದ ಮೇಲೆ ಗಂಭೀರ ಪರಿಣಾಮ ಬೀರಿದ ಹಲವಾರು ಉದಾಹರಣೆಗಳು ನಮ್ಮ ಮುಂದಿವೆ.
ಈ ವಿಚಾರವನ್ನು ಸರಕಾರಗಳು ಅಷ್ಟೊಂದು ಗಂಭೀರವಾಗಿ ಪರಿಗಣಿಸದ ಪರಿಣಾಮ ಅವು ಆ ಸಂದರ್ಭದಲ್ಲಷ್ಟೇ ವಿವಾದಕ್ಕೀಡಾಗಿ ಆ ಬಳಿಕ ತಣ್ಣಗಾಗುತ್ತವೆ. ಆದರೆ ಈ ಸಂದರ್ಭದಲ್ಲಿ ಅವು ಸೃಷ್ಟಿಸುವ ಕ್ಷೋಭೆ, ಹಾನಿಗೆ ಉತ್ತರದಾಯಿಗಳಾರು ಎಂಬ ಬಗ್ಗೆ ಯಾರೂ ತಲೆಕೆಡಿ ಸಿಕೊಳ್ಳುತ್ತಿಲ್ಲ. ಸರಕಾರ ಕೂಡ ಈ ಪ್ರಕರಣಗಳನ್ನು ನಿರ್ಲಕ್ಷಿಸುತ್ತಿರುವ ಪರಿಣಾಮ ದ್ವೇಷ ಭಾಷಣ, ದ್ವೇಷಪೂರಿತ ಕೃತ್ಯಗಳ ಪುನರಾವರ್ತನೆಯಾಗುತ್ತಲೇ ಇರುತ್ತವೆ. ಹೀಗಾಗಿ ಈ ಬಗ್ಗೆ ಕಠಿನ ಕಾನೂನು ಕ್ರಮದ ಅಗತ್ಯವಿದೆ ಎಂಬ ಆಗ್ರಹ ಕೇಳಿ ಬರುತ್ತಲೇ ಇದೆ. ಆದರೆ ರಾಜ್ಯ ಸರಕಾರಗಳಾಗಲೀ ಕೇಂದ್ರ ಸರಕಾರವಾಗಲೀ ಸರಿಯಾಗಿ ಸ್ಪಂದಿಸಿಲ್ಲ. ಈ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ಕಟ್ಟುನಿಟ್ಟಿನ ಆದೇಶ ಅತ್ಯಂತ ಮಹತ್ವಪೂರ್ಣ ಮತ್ತು ಔಚಿತ್ಯಪೂರ್ಣವಾದುದಾಗಿದೆ. ಈ ಬಗ್ಗೆ ಎಲ್ಲ ಕೇಂದ್ರಾಡಳಿತ ಮತ್ತು ರಾಜ್ಯ ಸರಕಾರ ಗಳು ಗಂಭೀರವಾಗಿ ಪರಿಗಣಿಸಬೇಕು. ಆಗಷ್ಟೇ ದ್ವೇಷ ಹೇಳಿಕೆಗಳಿಗೆ ಕಡಿ ವಾಣ ಹಾಕಲು ಸಾಧ್ಯ.