Advertisement
ಅಮೆರಿಕಕ್ಕೆ ವಲಸಿಗರು ಬೇಕೋ ಬೇಡವೋ ಎಂಬ ಬಗ್ಗೆ ಚರ್ಚೆಗಳು ಮತ್ತೆ ಶುರುವಾಗಿವೆ. ರಿಪಬ್ಲಿಕನ್ ಪಕ್ಷದ ಮುಖ್ಯಸ್ಥ, ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಅಮೆರಿಕದ ಅಧ್ಯಕ್ಷರಾಗಿ ಜ.20ರಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಅದಕ್ಕೂ ಮೊದಲು ಅಮೆರಿಕಕ್ಕೆ ವಿವಿಧ ವೀಸಾಗಳ ಮೂಲಕ ಪ್ರವೇಶ ಪಡೆಯುವವರನ್ನು ನಿರ್ಬಂಧಿಸಬೇಕೇ ಬೇಡವೇ ಎಂಬ ಬಗ್ಗೆ ರಿಪಬ್ಲಿಕನ್ ಪಕ್ಷದ ನಾಯಕರು ಮತ್ತು ಅಮೆರಿಕ ಸರಕಾರದ ಕಾರ್ಯದಕ್ಷತೆ ಹೆಚ್ಚಿಸಲು ನೇಮಕ ಮಾಡಿರುವ ಹೊಸ ವಿಭಾಗದ ಮುಖ್ಯಸ್ಥರಾಗಿರುವ ಉದ್ಯಮಿ ಎಲಾನ್ ಮಸ್ಕ್ ಮತ್ತು ಅನಿವಾಸಿ ಭಾರತೀಯ ವಿವೇಕ್ ರಾಮಸ್ವಾಮಿ ನಡುವೆ ಮುಸುಕಿನ ಗುದ್ದಾ ಟಗಳು ನಡೆಯುತ್ತಿವೆ. “ಮೇಕ್ ಅಮೆರಿಕ ಗ್ರೇಟ್ ಅಗೈನ್’ (ಮಗಾ) ಮತ್ತು ಎಚ್-1 ಬಿ ವೀಸಾ ಬೇಕು ಬೇಡಗಳ ಚರ್ಚೆಗಳು ಬಿರುಸಾಗಿಯೇ ನಡೆದಿವೆ. ಜತೆಗೆ ನಿಯೋ ಜಿತ ಸರಕಾರದಲ್ಲಿಯೇ ವೀಸಾ ಬಗ್ಗೆ ಗೊಂದಲವೇ ಹೆಚ್ಚಾಗಿರುವಂತೆ ತೋರುತ್ತಿದೆ.
ಎಚ್-1 ಬಿ ವೀಸಾದಿಂದಾಗಿಯೇ ನಾನು ಅಮೆರಿಕಕ್ಕೆ ಬರುವಂತೆ ಆಯಿತು. ಹೀಗಾಗಿಯೇ ಸ್ಪೇಸ್ ಎಕ್ಸ್ ಸೇರಿ ಹಲವು ಉದ್ದಿಮೆ ಗಳನ್ನು ನಿರ್ಮಿಸಲು ಸಾಧ್ಯವಾಯಿತು ಎಂದು ಉದ್ಯಮಿ ಮತ್ತು ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿಕಟವರ್ತಿ ಎಲಾನ್ ಮಸ್ಕ್ ಡಿ.29ರಂದು ಹೇಳಿಕೊಂಡಿದ್ದರು. ನನ್ನಂತೆಯೇ ಇತರರೂ ಅಮೆರಿಕಕ್ಕೆ ಬರಲು ಎಚ್-1ಬಿ ವೀಸಾ ಕಾರಣ ಎಂದು ಮಸ್ಕ್ ಹೇಳಿಕೊಂಡಿದ್ದರು. ಆ ವೀಸಾದ ಮೇಲೆ ನಿಯಂತ್ರಣ ಹೇರಿದರೆ ಕೋಲಾಹಲವೇ ಉಂಟಾದೀತು ಎಂದು ಘೋಷಿ ಸಿದ್ದರು. ಕೇರಳ ಮೂಲದ ಅನಿವಾಸಿ ಭಾರತೀಯ ಉದ್ಯಮಿ ವಿವೇಕ್ ರಾಮಸ್ವಾಮಿ ಕೂಡ ದೇಶಕ್ಕೆ ಕೌಶಲ ಇರುವ ವಿದೇಶಿ ಕೆಲಸಗಾರರು ಅಗತ್ಯವಾಗಿದ್ದಾರೆ. ಹೀಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ವಿದೇಶಿ ಕೆಲಸಗಾರರು ಬೇಕು ಎಂದು ವಾದಿಸುತ್ತಾರೆ. ವೀಸಾ ನಿಟ್ಟಿನಲ್ಲಿ ಇಬ್ಬರದ್ದೂ ಒಂದೇ ಅಭಿಪ್ರಾಯವಾಗಿದೆ. ವಿವಾದ ಶುರು ಆದದ್ದು ಯಾವಾಗ?
ಅಮೆರಿಕದಲ್ಲಿ ಕೃತಕ ಬುದ್ಧಿಮತ್ತೆ (ಎಐ) ಬಳಸಿಕೊಳ್ಳುವ ಬಗ್ಗೆ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಚೆನ್ನೈ ಮೂಲದ ಶ್ರೀರಾಮ ಕೃಷ್ಣನ್ ಅವರನ್ನು ಸಲಹೆಗಾರ ಹುದ್ದೆಗೆ ನೇಮಿಸಿ, ಘೋಷಣೆ ಮಾಡಿದ್ದರು. ಬಳಿಕ ಅವರು ಕೌಶಲ ಇರುವ ಹೆಚ್ಚಿನ ಸಂಖ್ಯೆಯ ವಿದೇಶಿ ಕೆಲಸಗಾರರು ಅಮೆರಿಕಕ್ಕೆ ಬರಬೇಕು ಎಂದು ಹೇಳಿದ್ದರು. ಈ ಬಗ್ಗೆ ಅಮೆರಿಕದ ಪ್ರಭಾವಶಾಲಿ ಮಹಿಳೆ, ಆ ದೇಶದ ಬಲಪಂಥೀಯವಾದಿ ನಾಯಕಿ ಲೌರಾ ಲೂಮರ್ ಕಟುವಾಗಿ ಟೀಕಿಸಿದ್ದರು. ಜತೆಗೆ “ಅಮೆರಿಕವೇ ಮೊದಲು’ ಎಂಬ ನೀತಿಯನ್ನು ಡೊನಾಲ್ಡ್ ಟ್ರಂಪ್ ಅವಗಣಿಸುತ್ತಿದ್ದಾರೆ. ಎಲಾನ್ ಮಸ್ಕ್ ಸೇರಿ ಉದ್ಯಮಿಗಳು ಮತ್ತಷ್ಟು ಶ್ರೀಮಂತರಾಗಲು ಸಜ್ಜಾಗುತ್ತಿದ್ದಾರೆ ಎಂದು ದೂರಿದ್ದರು.
Related Articles
ಮೊದಲು ಎಚ್-1ಬಿ ವೀಸಾ ಪರ ವಾದಿಸಿದ್ದ ವಿಶ್ವದ ಅತ್ಯಂತ ಶ್ರೀಮಂತ ಉದ್ಯಮಿಯಾದ ಎಲಾನ್ ಮಸ್ಕ್ ಅವರು ತಮ್ಮ ಮಾತುಗಳಿಗೆ ಹೆಚ್ಚಿನ ಸಂಖ್ಯೆಯ ಜನರು ಟೀಕೆ ವ್ಯಕ್ತಪಡಿಸುತ್ತಿ¤ದ್ದಂತೆಯೇ ನಿಲುವು ಬದಲಾಯಿಸಿ “ಎಚ್-1 ಬಿ ವೀಸಾ ವ್ಯವಸ್ಥೆ ಬೇಕು. ಆ ನಿಲುವಿನಲ್ಲಿ ಯಾವುದೇ ಬದಲಾವಣೆ
ಇಲ್ಲ. ಆದರೆ ಅದಕ್ಕೆ ಸಂಬಂಧಿಸಿದ ವ್ಯವಸ್ಥೆ ಕುಸಿದು ಹೋಗಿದೆ. ಅದರಲ್ಲಿ ಆಮೂಲಾಗ್ರ ಬದಲಾವಣೆ ಆಗಬೇಕಾಗಿದೆ’ ಎಂದು ಹೇಳಿಕೊಂಡಿದ್ದರು.
Advertisement
ಡೊನಾಲ್ಡ್ ಟ್ರಂಪ್ ನಿಲುವು ಏನು?2017ರಿಂದ 2021ರ ವರೆಗೆ ಮೊದಲ ಅವಧಿಯಲ್ಲಿ ಡೊನಾಲ್ಡ್ ಟ್ರಂಪ್ ಅಮೆರಿಕ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದ ವೇಳೆ “ಅಮೆರಿಕದವರನ್ನೇ ಉದ್ಯೋಗ ಕ್ಷೇತ್ರಕ್ಕೆ ನೇಮಿಸಿ’, “ಅಮೆರಿಕದ ಉತ್ಪನ್ನಗಳನ್ನೇ ಖರೀದಿಸಿ’ ಎಂಬ ನಿಲುವನ್ನು ಅತ್ಯುಗ್ರವಾಗಿ ಪ್ರತಿಪಾದಿಸಿದ್ದರು. ಈ ಅವಧಿಯಲ್ಲಿ ಕೂಡ ಎಚ್-1ಬಿ ವೀಸಾ ಬಗ್ಗೆ ಕಟುವಾದ ತೀರ್ಮಾನಗಳನ್ನು ಕೈಗೊಳ್ಳಲಾಗಿತ್ತು. ಹೀಗಾಗಿ ಭಾರತದಲ್ಲಿ ಇರುವ ಐಟಿ ಕಂಪೆನಿಗಳು ಅಮೆರಿಕದವರನ್ನೇ ಹೆಚ್ಚಿನ ಸಂಖ್ಯೆಯಲ್ಲಿ ನೇಮಿಸಿಕೊಳ್ಳಬೇಕಾಗಿದ್ದ ಪರಿಸ್ಥಿತಿ ಬಂದಿತ್ತು. ಟ್ರಂಪ್ ಅವರ ಮೊದಲ ಅವಧಿಯಲ್ಲಿಯೇ “ಮೇಕ್ ಅಮೆರಿಕ ಗ್ರೇಟ್ ಎಗೈನ್’ (ಮಗಾ) ಎಂಬ ಅಭಿಯಾನ ಶುರುವಾಗಿತ್ತು. 2016ರಲ್ಲಿ ವೀಸಾ ಪದ್ಧತಿಯನ್ನೇ ಕಟುವಾಗಿ ಟೀಕಿಸಿದ್ದರು. ಅಕ್ರಮವಾಗಿ ದೇಶ ಪ್ರವೇಶಿಸುವವರನ್ನು ಹೊರದಬ್ಬುತ್ತೇನೆ. ಅದಕ್ಕಾಗಿ ಜ.20ರಂದು ಆದೇಶಕ್ಕೆ ಸಹಿ ಹಾಕುತ್ತೇನೆ ಎಂದು ಹೇಳಿದ್ದರು. ಡೊನಾಲ್ಡ್ ಟ್ರಂಪ್ ಅವರು ಎಚ್-1ಬಿ ವೀಸಾವನ್ನು ಅತ್ಯುತ್ತಮ ವೀಸಾ ಎಂದಿದ್ದರು. ನನಗೆ ಅದರಲ್ಲಿ ನಂಬಿಕೆ ಇದೆ. ನಾನು ವೀಸಾಗಳ ಪರವಾಗಿದ್ದೇನೆ ಎಂದಿದ್ದರು. ರಿಪಬ್ಲಿಕನ್ ಪಕ್ಷದಲ್ಲಿಯೇ ಇವೆ 2 ಗುಂಪು
ಟ್ರಂಪ್ ಅವರ ಮೊದಲ ಅವಧಿಯಲ್ಲಿ ದೇಶೀಯವಾದವನ್ನು ಅತ್ಯುಗ್ರವಾಗಿ ಪ್ರತಿಪಾದಿಸುತ್ತಿದ್ದರು. ಈ ಬಾರಿ ಅವರ ನಿಲುವಿನಲ್ಲಿ ಕೊಂಚ ಮೃದುತ್ವ ಬಂದಂತೆ ಇದೆ. ಕೌಶಲ ಹೊಂದಿರುವ ವಿದೇಶಿ ಕೆಲಸಗಾರರು ಬೇಕು ಎಂದು ಪ್ರತಿಪಾದಿಸುವ ಎಲಾನ್ ಮಸ್ಕ್, ವಿವೇಕ್ ರಾಮಸ್ವಾಮಿಯವರು ಒಂದೆಡೆಯಾದರೆ, ರಿಪಬ್ಲಿಕನ್ ಪಕ್ಷದ ಕಟ್ಟಾಳುಗಳಾಗಿರುವ ಲೌರಾ ಲೂಮರ್ ಮತ್ತು ಸ್ಟೀವ್ ಬ್ಯಾನನ್ ಸೇರಿ ಇತರರ ನಡುವೆ ವೀಸಾ ವಿಚಾರಕ್ಕೆ ಗುದ್ದಾಟ ಶುರುವಾಗಿದೆ. ಹೀಗಾಗಿ, ಕೌಶಲದಿಂದ ಕೂಡಿದ ವಿದೇಶಿ ಕೆಲಸ ಗಾರರು ಬೇಕು-ಬೇಡ ಎಂಬ ವಾದ ಮುಂದಿನ 4 ವರ್ಷಗಳ ಕಾಲ ಅಮೆರಿಕ ಆಡಳಿತದ ಅವಧಿಯಲ್ಲಿ ಮೇಲ್ಮೆ„ಸಾಧಿಸಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಅಮೆರಿಕವನ್ನು ಜ.20ರಿಂದ 4 ವರ್ಷಗಳ ಕಾಲ ಆಳಲಿರುವ ರಿಪಬ್ಲಿಕನ್ ಪಕ್ಷದಲ್ಲಿ ವೀಸಾ ವಿಚಾರದಲ್ಲಿ ಮುಸುಕಿನ ಗುದ್ದಾಟ ನಡೆಯುತ್ತಿರುವಂತೆಯೇ ಭಾರತ ಸರಕಾರ ಎಚ್ಚರಿಕೆ ವಹಿಸಿದೆ. ದೇಶದಲ್ಲಿ ಇರುವ ಪ್ರಮುಖ ಮಾಹಿತಿ ತಂತ್ರಜ್ಞಾನ ಕಂಪೆನಿಗಳಿಂದ ಪ್ರತಿಕ್ರಿಯೆಯನ್ನೂ ಬಯಸಿದೆ. ಎಚ್-1ಬಿ ವೀಸಾ: 78% ಭಾರತೀಯರು
2023ನೇ ವರ್ಷದಲ್ಲಿ ಭಾರತದಿಂದ ಎಚ್-1ಬಿ ವೀಸಾದಲ್ಲಿ ಆಯ್ಕೆಯಾದವರ ಸಂಖ್ಯೆ 2.79 ಲಕ್ಷ. ಇನ್ನು 2024ರಲ್ಲಿ ಭಾರತದಿಂದ ಆಯ್ಕೆ ಆದವರ ಸಂಖ್ಯೆಯೇ ಶೇ.78 ಇದೆ ಎನ್ನುವುದು ಅಮೆರಿಕದ ಪೌರತ್ವ ಮತ್ತು ವಲಸಿಗರ ಸೇವಾ ವಿಭಾಗ (ಯುಎಸ್‌ಸಿಐಎಸ್)ದ ಮೂಲಗಳು ತಿಳಿಸುತ್ತವೆ. ಅಮೆರಿಕ ಸರಕಾರ ನೀಡುವ ಪ್ರಮುಖ ವೀಸಾಗಳು 1. ವೀಸಾ ಎ: ವಿದೇಶಿ ಸರಕಾರಗಳ ಮುಖ್ಯಸ್ಥರಿಗೆ, ರಾಜತಾಂತ್ರಿಕ ಅಧಿಕಾರಿಗಳಿಗೆ ಕೊಡುವ ವೀಸಾ 2. ಎಚ್-1ಬಿ: ಐಟಿ ಸೇರಿ ಕೌಶಲಪೂರ್ಣ ಉದ್ಯೋಗಸ್ಥರಿಗೆ ನೀಡುವ ವೀಸಾ. 3. ಎಲ್-1ಎ: ಅಮೆರಿಕದಲ್ಲಿ ಕೆಲಸ ಮಾಡಲು ಇತರ ದೇಶಗಳ ಉದ್ಯೋಗಿಗಳಿಗೆ ನೀಡುವ ವೀಸಾ 4. ಬಿ-1: ವ್ಯಾಪಾರ, ಉದ್ದಿಮೆಗಳಿಗೆ ಸಂಬಂಧಿಸಿದ ಸಭೆ, ಕಾನ್ಫರೆನ್ಸ್‌ಗಳಿಗೆ ತೆರಳುವವರಿಗೆ 5. ಬಿ-2: ಪ್ರವಾಸ, ರಜೆಯಲ್ಲಿ ತೆರಳುವವರಿಗೆ ಅಥವಾ ವೈದ್ಯಕೀಯ ಚಿಕಿತ್ಸೆಗೆ ತೆರಳುವವರಿಗೆ 6. ಎಫ್-1: ಉನ್ನತ ವ್ಯಾಸಂಗಕ್ಕೆ ಅಮೆರಿಕದ ವಿವಿಗಳಲ್ಲಿ ಅಧ್ಯಯನಕ್ಕೆ ತೆರಳುವವರಿಗೆ 7. ಜೆ-1: ಪ್ರಾಧ್ಯಾಪಕರು, ಸಂಶೋಧಕರು, 2 ದೇಶಗಳ ನಡುವೆ ಸಾಂಸ್ಕೃತಿಕ ವಿನಿಮಯ ವ್ಯಾಪ್ತಿಯಲ್ಲಿರುವವರಿಗೆ ನೀಡುವ ವೀಸಾ 8. ಆರ್-1: ಧಾರ್ಮಿಕ ಕ್ಷೇತ್ರಗಳಲ್ಲಿ ಇರುವವರಿಗೆ ಆರ್-1 ವೀಸಾವನ್ನು ನೀಡಲಾಗುತ್ತದೆ
ಅಮೆರಿಕದಲ್ಲಿ ಹೆಚ್ಚುತ್ತಿರುವ ವಲಸಿಗರ ಪ್ರಭಾವ
ಅಮೆರಿಕದಲ್ಲಿ 2023ರಲ್ಲಿ ನಡೆಸಲಾಗಿದ್ದ ಜನಗಣತಿಯ ಪ್ರಕಾರ ಆ ದೇಶದ ಒಟ್ಟು ಜನಸಂಖ್ಯೆ 33.49 ಕೋಟಿ. ಈ ಪೈಕಿ ವಲಸಿಗರ ಪ್ರಭಾವವೇ ಹೆಚ್ಚಾಗಿದೆ. ಅಮೆರಿಕದಲ್ಲಿ 2023ರಲ್ಲಿ ಜನಿಸಿದವರ ಪೈಕಿ 47.8 ಮಿಲಿಯ ಮಂದಿ ವಿದೇಶಿ ಮೂಲ ದವರಾಗಿದ್ದಾರೆ. ಅಮೆರಿಕ ವಲಸಿಗರ ಒಕ್ಕೂಟದ ಮಾಹಿತಿ ಪ್ರಕಾರ ಆ ದೇಶದ ಒಟ್ಟು ಜನಸಂಖ್ಯೆಯ ಪೈಕಿ ಶೇ.13.8 ಇತರ ದೇಶಗಳ ಮೂಲದವರೇ ಆಗಿದ್ದಾರೆ. ಅವರು ಅಮೆರಿಕದ ಸರಕಾರ, ಉದ್ಯಮ, ಆರೋಗ್ಯ, ಕೈಗಾರಿಕೆ ಸೇರಿದಂತೆ ಪ್ರಮುಖ ಕ್ಷೇತ್ರಗಳಲ್ಲಿ ಪ್ರಭಾವ ಬೀರಿದ್ದಾರೆ. ಜತೆಗೆ ಅರ್ಥ ವ್ಯವಸ್ಥೆಯ ಅವಿಭಾಜ್ಯ ಅಂಗವೇ ಆಗಿಹೋಗಿದ್ದಾರೆ. ಇನ್ನು ಅಮೆರಿಕದಲ್ಲಿ ಇರುವ ಭಾರತೀಯ ಮೂಲದವರನ್ನು ನೋಡುವುದಿದ್ದರೆ 1980ರಲ್ಲಿ 2.6 ಲಕ್ಷ ಮಂದಿ ಇದ್ದವರ ಸಂಖ್ಯೆ 2023ರ ವೇಳೆಗೆ 29.10 ಲಕ್ಷ ಮಂದಿಗೆ ಏರಿಕೆಯಾಗಿದ್ದಾರೆ.
ವಲಸಿಗರಿಂದ ಅಮೆರಿಕಕ್ಕೆ ಉಂಟಾಗುವ ಅನುಕೂಲ
ಅಮೆರಿಕದ ಪ್ರಜೆಗಳು ಹಲವು ಕ್ಷೇತ್ರಗಳಲ್ಲಿ ಬುದ್ಧಿವಂತರೇ ಆಗಿದ್ದರೂ ಕೂಡ ಲಾಗಾಯ್ತಿನಿಂದ ಅಲ್ಲಿನ ಉದ್ದಿಮೆ, ವೈದ್ಯಕೀಯ ಸೇರಿದಂತೆ ಪ್ರಮುಖ ವಲಯಗಳಲ್ಲಿ ವಲಸಿಗರೇ ಪ್ರಭಾವ ಬೀರಿದ್ದಾರೆ. ವಿವಿಧ ವೀಸಾಗಳ ಮೂಲಕ ಆ ದೇಶಕ್ಕೆ ಪ್ರವೇಶಿಸುವವರು ಅಲ್ಲಿನ ಅರ್ಥವ್ಯವಸ್ಥೆಯ ಬೆಳವಣಿಗೆಗೆ ಕಾರಣರಾಗುತ್ತಾರೆ. ಅವರು ವಿವಿಧ ರೀತಿಯಲ್ಲಿ ಖರ್ಚುಗಳನ್ನು ಮಾಡುವುದರಿಂದ ಅಮೆರಿಕಕ್ಕೆ ಆರ್ಥಿಕವಾಗಿ ಲಾಭವಾಗುತ್ತದೆ. ಉದ್ಯೋಗ ತೆರಿಗೆ, ಆಸ್ತಿ ತೆರಿಗೆ ಸೇರಿದಂತೆ ಹಲವು ರೀತಿಯ ತೆರಿಗೆಗಳನ್ನು ಪಾವತಿ ಮಾಡುವುದರ ಮೂಲಕ ಧನಾತ್ಮಕ ಬೆಳವಣಿಗೆಗೆ ಕಾರಣರಾಗುತ್ತಾರೆ. – ಸದಾಶಿವ ಕೆ.