Advertisement

ವರದಿ ಸಲ್ಲಿಸಲು ಸುಪ್ರೀಂ ಆದೇಶ

09:02 AM Dec 09, 2017 | |

ಬಳ್ಳಾರಿ: ಅಕ್ರಮ ಗಣಿಗಾರಿಕೆಯಿಂದ ಧ್ವಂಸವಾದ ಕರ್ನಾಟಕ ಮತ್ತು ಆಂಧ್ರಪ್ರದೇಶಗಳ ಗಡಿ ಪ್ರದೇಶಗಳ ಸಮೀಕ್ಷೆ ಕೈಗೊಂಡು 12 ವಾರದೊಳಗೆ ವರದಿ ಸಲ್ಲಿಸುವಂತೆ ಸುಪ್ರೀಂ ಕೋರ್ಟಿನ ವಿಭಾಗೀಯ ಪೀಠ ಶುಕ್ರವಾರ ಆದೇಶಿಸಿದೆ.

Advertisement

ಕರ್ನಾಟಕ-ಆಂಧ್ರಪ್ರದೇಶ ರಾಜ್ಯಗಳ ಗಡಿ ಗುರುತಿಸುವಿಕೆ ಕುರಿತಂತೆ ಆಂಧ್ರಪ್ರದೇಶ ಸರ್ಕಾರ, ಬಳ್ಳಾರಿ ಮೂಲದ ದಿ.ಎಸ್‌.ಕೆ. ಮೋದಿ ಒಡೆತನದ ವಿಜಿಎಂ ಮೈನ್ಸ್‌ ಸೇರಿ ವಿವಿಧ ಸ್ಪೆಷಲ್‌ ಲೀವ್‌ ಪಿಟೀಷನ್‌ಗಳ ವಿಚಾರಣೆಯನ್ನು ಶುಕ್ರವಾರ ಕೈಗೆತ್ತಿಕೊಂಡ ವಿಭಾಗೀಯ ಪೀಠ ಈ ಮಹತ್ವದ ಆದೇಶ ಹೊರಡಿಸಿದೆ. ಪ್ರಕರಣದಲ್ಲಿ ಪ್ರತಿವಾದಿ ಸ್ಥಾನದಲ್ಲಿರುವ ಸರ್ವೇ ಆಫ್‌ ಇಂಡಿಯಾದ ಉನ್ನತಾಧಿಕಾರಿಗಳು ವಿಚಾರಣೆ ವೇಳೆ ಉಪಸ್ಥಿತರಿದ್ದು, ನಿಗದಿತ ಅವಧಿಯೊಳಗೆ ವರದಿ ಸಲ್ಲಿಸುವಂತೆ ಸೂಚಿಸಿದೆ. ಸುಪ್ರೀಂ ಕೋರ್ಟ್‌ 2013ರಲ್ಲಿ ಇಂತಹ ಸಮೀಕ್ಷೆ ನಡೆಸುವಂತೆ ಮೊದಲ ಆದೇಶ ನೀಡಿತ್ತು. ಆದರೆ, ಈ ಆದೇಶ ಸಮರ್ಪಕವಾಗಿ ಪಾಲನೆಯಾಗದ ಹಿನ್ನೆಲೆಯಲ್ಲಿ ಆಂಧ್ರಪ್ರದೇಶ ಸರ್ಕಾರ ಮತ್ತು ಇತರರು ಮತ್ತೆ ಸುಪ್ರೀಂ ಕೋರ್ಟಿನ ಮೆಟ್ಟಿಲೇರಿದ್ದರು.

ಪರಿಣಾಮ ಏನು?: ಈ ಪ್ರಕರಣದ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್‌ 2013ರಲ್ಲಿ ಧ್ವಂಸಗೊಂಡ ಗಡಿ ಪ್ರದೇಶದ
ಸಮೀಕ್ಷೆ ನಡೆಸಿ ವರದಿ ಸಲ್ಲಿಸುವಂತೆ ಸೂಚಿಸಿತ್ತು. ಆದರೆ, ಸಮೀಕ್ಷೆ ನಡೆಸಬೇಕಿದ್ದ ಸರ್ವೇ ಆಫ್‌ ಇಂಡಿಯಾದ ಅಧಿಕಾರಿಗಳು ಸಮೀಕ್ಷಾ ಕಾರ್ಯ ನೆರವೇರಿಸಿದ್ದರೋ ಇಲ್ಲವೋ ವಿಷಯ ನಿಗೂಢವಾಗಿ ಉಳಿದಿತ್ತು. ಆದರೆ, ಎರಡನೇ ಬಾರಿಗೆ ಸಮೀಕ್ಷೆ ನಡೆಸಲು ಆದೇಶ ನೀಡಿರುವ ಸುಪ್ರೀಂ ಕೋರ್ಟ್‌, ಈ ಬಾರಿ ವರದಿ ಸಲ್ಲಿಸುವಂತೆ ಖಡಕ್ಕಾಗಿ ಸೂಚನೆ ನೀಡಿದೆ. ಒಂದು ವೇಳೆ ಸರ್ವೇ ಆಫ್‌ ಇಂಡಿಯಾ ಈ ಸಮೀಕ್ಷೆ ಕೈಗೊಳ್ಳದೆ ವರದಿ ಸಲ್ಲಿಸದಿದ್ದರೆ ಗುರುತರವಾದ ನ್ಯಾಯಾಂಗ ನಿಂದನೆ ಪ್ರಕರಣ ಎದುರಿಸಬೇಕಾಗಬಹುದು ಎನ್ನುವ ಮಾತುಗಳು ಕೇಳಿ ಬಂದಿವೆ.

ಎಂ.ಮುರಳಿಕೃಷ್ಣ

Advertisement

Udayavani is now on Telegram. Click here to join our channel and stay updated with the latest news.

Next