ನವದೆಹಲಿ: ಐದು ವರ್ಷಗಳ ಶಾರ್ಟ್ ಸರ್ವೀಸ್ ಕಮಿಷನ್ ಅವಧಿಗಿಂತ ಹೆಚ್ಚು ಕಾಲ ಭಾರತೀಯ ವಾಯು ಪಡೆ (ಐಎಎಫ್)ಯಲ್ಲಿ ಸೇವೆ ಸಲ್ಲಿಸಲು ಅವಕಾಶಕ್ಕಾಗಿ ಹೋರಾಡಿದ 32 ಮಹಿಳಾ ಐಎಎಫ್ ಅಧಿಕಾರಿಗಳಿಗೆ, ದೆಹಲಿ ಹೈಕೋರ್ಟ್ ಪೂರ್ಣಪ್ರಮಾಣದ ನಿವೃತ್ತಿ ವೇತನ ಘೋಷಿಸಿ ತೀರ್ಪು ನೀಡಿದೆ. ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ನ್ಯಾಯಪೀಠ ಈ ಬಗ್ಗೆ ವಿಚಾರಣೆ ನಡೆಸಿತ್ತು.
ಪೂರ್ಣ ನಿವೃತ್ತಿ ವೇತನವು 20 ವರ್ಷಗಳ ಕಾಲ ಐಎಎಫ್ ನಲ್ಲಿ ಸೇವೆ ಸಲ್ಲಿಸಿದ ಅಧಿಕಾರಿಗಳಿಗೆ ನೀಡುವ ನಿವೃತ್ತಿ ವೇತನಕ್ಕೆ ಸಮವಾಗಿದೆ. 12 ವರ್ಷಗಳವರೆಗೆ ನ್ಯಾಯಾಲಯಲ್ಲಿ ಈ ಮಹಿಳಾ ಅಧಿಕಾರಿಗಳು ಹೋರಾಟ ನಡೆಸಿದರು. ಆದರೆ ತೀರ್ಪು ಬರುವ ಮುನ್ನವೇ ಅವರು ನಿವೃತ್ತಿಯಾಗಿದ್ದರು.
ರಕ್ಷಣಾ ಪಡೆಯ ನೇಮಕಾತಿ ಮತ್ತು ಉನ್ನತ ಸ್ಥಾನಗಳನ್ನು ನೀಡುವಲ್ಲಿ ಮಹಿಳೆಯರಿಗೆ ತಾರತಮ್ಯ ಮಾಡಲಾಗುತ್ತಿದೆ ಎಂದು 2020ರ ಬಬಿತಾ ಪೂನಿಯಾ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪು ಸದರಿ ಪ್ರಕರಣದಲ್ಲಿ ಉಲ್ಲೇಖಗೊಂಡಿದೆ.
32 ಮಹಿಳಾ ಅಧಿಕಾರಿಗಳು ತೀರ್ಪು ಪ್ರಕಟವಾಗಿರುವ ಈ ವೇಳೆ ಸಮವಸ್ತ್ರ ಧರಿಸಿ, ಪುನಃ ಸೇವೆ ಸಲ್ಲಿಸಲು ಆಗುವುದಿಲ್ಲ. ಆದರೆ ಪೂರ್ಣ ನಿವೃತ್ತಿ ವೇತನ ದೊರೆತಿರುವುದು ಅವರ ಹೋರಾಟಕ್ಕೆ ಸಂದ ಜಯವಾಗಿದೆ.
ಈ ಪೈಕಿ ಮೂವರು ಮಹಿಳಾ ಅಧಿಕಾರಿಗಳು ಭಾರತದ ಸೇವೆಯಲ್ಲಿ ಹುತಾತ್ಮರಾದ ಐಎಎಫ್ ಅಧಿಕಾರಿಗಳ ಪತ್ನಿಯರಾಗಿದ್ದಾರೆ. ಇವರಿಗೆ ಅನುಕಂಪದ ಆಧಾರದಲ್ಲಿ ಕಮೀಷನ್ ಅಧಿಕಾರಿಗಳ ಹುದ್ದೆಯನ್ನು ನೀಡಲಾಗಿತ್ತು.