Advertisement
ಸಾಮಾನ್ಯವಾಗಿ ಮತ ಎಣಿಕೆ ವೇಳೆ ಹಲವು ಸುತ್ತಿನ ಮತ ಎಣಿಕೆ ಮುಗಿದು, ಎಣಿಕೆಗೆ ಬಾಕಿಯಿರುವ ಮತಗಳಿಗಿಂತ ಹೆಚ್ಚಿನ ಮುನ್ನಡೆ ಕಾಯ್ದುಕೊಂಡಿರುವುದು ಖಾತರಿಯಾದಾಗ ಕಾರ್ಯಕರ್ತರು ಸಂಭ್ರಮಾಚರಣೆಗೆ ಮುಂದಾಗುತ್ತಾರೆ. ಆದರೆ ರಾಜರಾಜೇಶ್ವರಿನಗರ ಕ್ಷೇತ್ರದ ಮತ ಎಣಿಕೆ ಮೊದಲ ಸುತ್ತಿನಿಂದಲೇ ಕಾಂಗ್ರೆಸ್ ಕಾರ್ಯಕರ್ತರು ಸಂಭ್ರಮದಲ್ಲಿ ತೊಡಗಿದ್ದು ವಿಶೇಷವಾಗಿತ್ತು.
Related Articles
Advertisement
ಬೆಳಗ್ಗೆ 8.45ರ ಸುಮಾರಿನಲ್ಲಿ ಎರಡು ಸುತ್ತಿನ ಎಣಿಕೆ ಮುಗಿದು ಮುನಿರತ್ನ ಅವರು ಮುನ್ನಡೆಯಲ್ಲಿರುವ ಮಾಹಿತಿ ಸಿಗುತ್ತಿದ್ದಂತೆ ಬ್ಯಾರಿಕೇಡ್ ದಾಟಿ ಕೇಂದ್ರದ ಪ್ರವೇಶ ದ್ವಾರದ ಬಳಿ ಜಮಾಯಿಸಿದ ಬೆಂಬಲಿಗರು, ಮುನಿರತ್ನ ಪರ ಘೋಷಣೆ ಕೂಗಲಾರಂಭಿಸಿದರು. ಸೂಚನೆ ನೀಡಿದರೂ ಗದ್ದಲ ಕಡಿಮೆಯಾಗದ ಕಾರಣ ಪೊಲೀಸರು ಎಲ್ಲ ಕಾರ್ಯಕರ್ತರನ್ನು ಬ್ಯಾರಿಕೇಡ್‌ನ ಹೊರಗೆ ಕಳುಹಿಸಿದರು.
ಬೆಳಗ್ಗೆ 11 ಗಂಟೆ ಹೊತ್ತಿಗೆ ಮುನಿರತ್ನ ಭರ್ಜರಿ ಮುನ್ನಡೆ ಸಾಧಿಸಿರುವ ಮಾಹಿತಿ ತಿಳಿಯುತ್ತಿದ್ದಂತೆ ಕಾರ್ಯಕರ್ತರ ಸಂಭ್ರಮ ಮುಗಿಲು ಮುಟ್ಟಿತು. ಮತ ಎಣಿಕೆ ಮುಗಿದು ಅಂತಿಮವಾಗಿ ಮುನಿರತ್ನ ಅವರು ಜಯ ಗಳಿಸಿರುವುದು ಖಾತರಿಯಾಗುತ್ತಿದ್ದಂತೆ ಕಾರ್ಯಕರ್ತರು ಪಕ್ಷದ ಬಾವುಟ ಹಿಡಿದು ಘೋಷಣೆ ಕೂಗಲಾರಂಭಿಸಿದರು.
ಬಿಜೆಪಿ, ಜೆಡಿಎಸ್‌ನವರು ಕಾಣಲೇ ಇಲ್ಲ: ಮೊದಲ ಸುತ್ತಿನಿಂದಲೂ ಕಾಂಗ್ರೆಸ್‌ನ ಮುನಿರತ್ನ ಅವರು ಮುನ್ನಡೆ ಕಾಯ್ದುಕೊಂಡಿದ್ದರಿಂದ ಜೆಡಿಎಸ್, ಬಿಜೆಪಿ ಕಾರ್ಯಕರ್ತರು ಎಣಿಕೆ ಕೇಂದ್ರದ ಮುಂಭಾಗದ ಕಡೆಗೆ ಬರಲೇ ಇಲ್ಲ. ಬಿಜೆಪಿ, ಜೆಡಿಎಸ್‌ನ ಏಜೆಂಟರು ಕೇಂದ್ರದ ಒಳಗಿದ್ದರೂ ಹೊರಗೆ ಕಾರ್ಯಕರ್ತರ ಗುಂಪು ಕಾಣಲಿಲ್ಲ. ಆದರೆ ಕಾಂಗ್ರೆಸ್ ಕಾರ್ಯಕರ್ತರು ಭಾರಿ ಸಂಖ್ಯೆಯಲ್ಲಿ ಜಮಾಯಿಸಿದ್ದರು.
ಕೇಂದ್ರಕ್ಕೆ ಬಾರದ ಮುನಿರತ್ನ, ರಾಮಚಂದ್ರ: ಬಿಜೆಪಿಯ ಮುನಿರಾಜುಗೌಡ ಅವರನ್ನು ಹೊರತುಪಡಿಸಿದರೆ ಕಾಂಗ್ರೆಸ್‌ನ ಮುನಿರತ್ನ ಹಾಗೂ ಜೆಡಿಎಸ್‌ನ ಜಿ.ಎಚ್.ರಾಮಚಂದ್ರ ಅವರು ಮತ ಎಣಿಕೆ ಕೇಂದ್ರದಲ್ಲಿ ಕಾಣಿಸಿಕೊಳ್ಳಲಿಲ್ಲ. ಮತ ಎಣಿಕೆ ಕೇಂದ್ರದಲ್ಲಿದ್ದ ಮುನಿರಾಜು ಗೌಡ, ಏಳನೇ ಸುತ್ತಿನಲ್ಲಿ ಭಾರಿ ಹಿನ್ನಡೆ ಅನುಭವಿಸಿದ ಹಿನ್ನೆಲೆಯಲ್ಲಿ ಹೊರ ನಡೆದರು. ಇದೇ ವೇಳೆ ಜೆಡಿಎಸ್‌ನ ರಾಮಚಂದ್ರ ಕುಟುಂಬ ಸಮೇತರಾಗಿ ರಾಜರಾಜೇಶ್ವರಿ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು. ಆದರೆ ಮತ ಎಣಿಕೆ ಕೇಂದ್ರಕ್ಕೆ ಬರಲಿಲ್ಲ.
ಹುಚ್ಚ ವೆಂಕಟ್ ಎಂದು ಉಲ್ಲೇಖ: ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಹುಚ್ಚ ವೆಂಕಟ್ ನಾಮಪತ್ರದಲ್ಲಿ ತಮ್ಮ ಹೆಸರನ್ನು ಎಲ್.ವೆಂಕಟರಾಮ್ ಎಂದು ನಮೂದಿಸಿದ್ದರು. ಆದರೆ ಮತ ಎಣಿಕೆ ಕೇಂದ್ರದಲ್ಲಿ ಮತ ವಿವರ ಪ್ರಕಟಿಸುವಾಗ ಚುನಾವಣಾ ಸಿಬ್ಬಂದಿ ವೆಂಕಟರಾಮ್ ಎನ್ನುವ ಬದಲಿಗೆ “ಹುಚ್ಚ ವೆಂಕಟ್’ ಎಂದೇ ಉಲ್ಲೇಖೀಸಿದ್ದು ಕಂಡುಬಂತು.
ಗಣ್ಯರ ಅಭಿನಂದನೆ: ಸಾಕಷ್ಟು ವಿವಾದ, ಗೊಂದಲ, ಜಿದ್ದಾಜಿದ್ದಿನ ಹೋರಾಟ ನಡೆದಿದ್ದ ಚುನಾವಣೆಯಲ್ಲಿ ಗೆದ್ದ ಮುನಿರತ್ನ ಅವರನ್ನು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾಂಗ್ರೆಸ್ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅಭಿನಂದಿಸಿದ್ದಾರೆ. ಗೆಲುವು ಸಾಧಿಸಿದ ಬಳಿಕ ಮುನಿರತ್ನ ಅವರು ಮಾಜಿ ಸಚಿವ ಡಿ.ಕೆ.ಶಿವಕುಮಾರ್, ಸಂಸದ ಡಿ.ಕೆ.ಸುರೇಶ್ ಅವರನ್ನು ಭೇಟಿ ಮಾಡಿ ಸಿಹಿ ತಿನಿಸಿ ಕೃತಜ್ಞತೆ ಸಲ್ಲಿಸಿದರು.
ಮುನಿರತ್ನ ಗೆಲುವಿನಿಂದ ಮೈತ್ರಿ ಸರ್ಕಾರಕ್ಕೆ ಇನ್ನಷ್ಟು ಬಲ ಬಂದಿದೆ. ಕರ್ನಾಟಕದ ಜನ ಅಭಿವೃದ್ಧಿ ಪರ ಇದ್ದಾರೆ ಎಂಬುದನ್ನು ಈ ವಿಜಯ ಮತ್ತೆ ಸಾಬೀತುಪಡಿಸಿದೆ. ಬಹುತ್ವ ಚಳವಳಿ ಕಂಡ ಕರ್ನಾಟಕ ಎಂದಿಗೂ ಕೋಮು ಸಾಮರಸ್ಯದ ಪರವಾಗಿಯೇ ಇರಲಿದೆ ಎಂಬುದನ್ನು ಫಲಿತಾಂಶ ತೋರಿಸಿದೆ. ಮುನಿರತ್ನ ಅವರು ಕ್ಷೇತ್ರದ ಅಭಿವೃದ್ಧಿಗೆ ಮಾದರಿಯಾಗಲಿ.-ಎಚ್.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ ಮುನಿರತ್ನ ಗೆಲುವು ನಿರೀಕ್ಷಿತ. ಸಾರ್ವತ್ರಿಕ ಚುನಾವಣೆ ವೇಳೆಯೇ ಈ ಕ್ಷೇತ್ರಕ್ಕೂ ಮತದಾನ ನಡೆದಿದ್ದರೂ ಅವರೇ ಗೆಲ್ಲುತ್ತಿದ್ದರು. ಪಕ್ಷಕ್ಕೆ ಮತ ನೀಡಿದ ಎಲ್ಲ ಮತದಾರರಿಗೆ ಕೃತಜ್ಞತೆ ಸಲ್ಲಿಸುತ್ತೇವೆ. ದೇಶದ ವಿವಿಧೆಡೆ ನಡೆದ ಲೋಕಸಭೆ ಉಪ ಚುನಾವಣೆಗಳಲ್ಲೂ ಬಿಜೆಪಿ ಸೋತಿದೆ. 2019ರ ಲೋಕಸಭೆ ಚುನಾವಣೆಯಲ್ಲೂ ಬಿಜೆಪಿಗೆ ಸೋಲಾಗುವುದರ ಮುನ್ಸೂಚನೆ ಈಗಲೇ ಸಿಕ್ಕಿದೆ.
-ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ ಕಾಂಗ್ರೆಸ್, ಜೆಡಿಎಸ್ ಮೊದಲೇ ಒಳ ಒಪ್ಪಂದ ಮಾಡಿಕೊಂಡಿದ್ದವು. ಆದರೂ ಜನಾದೇಶಕ್ಕೆ ತಲೆ ಬಾಗುತ್ತೇನೆ.
-ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಮೈತ್ರಿ ಸರ್ಕಾರ ರಚನೆ ಬಳಿಕ ಇಡೀ ದೇಶವೇ ರಾಜರಾಜೇಶ್ವರಿನಗರ ಕ್ಷೇತ್ರದ ಕಡೆ ನೋಡುತ್ತಿತ್ತು. ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಸಾಕಷ್ಟು ಆರೋಪ ಹೊರಿಸಿ ಕೆಟ್ಟ ಹೆಸರು ತರಲು ಕೆಲವರು ಪ್ರಯತ್ನಿಸಿದರು. ಆದರೆ ಕ್ಷೇತ್ರದ ಜನ ಐತಿಹಾಸಿಕ ತೀರ್ಪು ನೀಡಿದ್ದಾರೆ. ನಮ್ಮ ಸಂಸದರು, ಶಾಸಕರು ಜೋಡಿ ಎತ್ತಿನಂತೆ ದುಡಿದಿದ್ದಕ್ಕೆ ಜನ ಮನ್ನಣೆ ನೀಡಿದ್ದಾರೆ.
-ಡಿ.ಕೆ.ಶಿವಕುಮಾರ್, ಮಾಜಿ ಸಚಿವ ಕ್ಷೇತ್ರದಲ್ಲಿ ಅಭಿವೃದ್ಧಿ ಗೆಲ್ಲುವುದೇ, ಸುಳ್ಳು ಆರೋಪ ಗೆಲ್ಲುವುದೇ ಎಂಬ ಕುತೂಹಲವಿತ್ತು. ಕೊನೆಗೆ ಮತದಾರರು ಅಭಿವೃದ್ಧಿಯ ಕೈ ಹಿಡಿದಿದ್ದಾರೆ. ಮುನಿರತ್ನ ಅವರನ್ನು ಕಣದಿಂದ ಹೊರಹಾಕಲು ಬಿಜೆಪಿ ಪ್ರಯತ್ನಿಸಿತ್ತು. ಒಂದು ಪಕ್ಷ ಜಾತಿ ಹೆಸರಿನಲ್ಲಿ ಮತ್ತೂಂದು ಪಕ್ಷ ಧರ್ಮದ ಹೆಸರಿನಲ್ಲಿ ಸಮಾಜ ಒಡೆಯಲು ಪ್ರಯತ್ನಿಸಿದರೂ ಕೊನೆಗೆ ಅಭಿವೃದ್ಧಿಗೆ ಜಯ ಸಿಕ್ಕಿದೆ.
-ಡಿ.ಕೆ.ಸುರೇಶ್, ಸಂಸದ ಜಾತಿ, ಧರ್ಮ ನೋಡದೆ ಜನ ಮತ ನೀಡುತ್ತಾರೆ ಎಂಬುದಕ್ಕೆ ಕ್ಷೇತ್ರವೇ ಸಾಕ್ಷಿ. ಏನೆಲ್ಲಾ ಆರೋಪ ಕೇಳಿಬಂದಾಗಲೂ ಐದು ವರ್ಷ ಸತತವಾಗಿ ನನ್ನೊಂದಿಗಿದ್ದು, ನನ್ನ ಗೆಲುವಿಗೆ ಶ್ರಮಿಸಿದ್ದು ಸಂಸದ ಡಿ.ಕೆ.ಸುರೇಶ್. ಸುಳ್ಳು ಆರೋಪಗಳಿಂದ ಬೇಸತ್ತು ಚುನಾವಣೆಯಿಂದ ವಿಮುಖನಾಗಲು ಹೊರಟಾಗ ನನಗೆ ಧೈರ್ಯ ತುಂಬಿ ಕಾರ್ಯಕರ್ತರಂತೆ ದುಡಿದರು. ಈ ಗೆಲುವು ನನ್ನದಲ್ಲ, ಡಿ.ಕೆ.ಸುರೇಶ್ ಅವರದ್ದು.
-ಮುನಿರತ್ನ, ಶಾಸಕ