Advertisement

ಬೆಂಬಲ ಹಿಂಪಡೆವ ಎಚ್ಚರಿಕೆ

12:05 PM Dec 30, 2017 | |

ಬೆಂಗಳೂರು: ನಗರೋತ್ಥಾನದಡಿ ಕೈಗೊಂಡ ಕಾಮಗಾರಿಗಳಿಗೆ ಸಂಬಂಧಿಸಿದ ಕ್ರಿಯಾಯೋಜನೆಯನ್ನು ಸ್ಥಾಯಿ ಸಮಿತಿ ಗಮನಕ್ಕೆ ತಾರದೆ, ನೇರವಾಗಿ ಸರ್ಕಾರದಿಂದ ಅನುಮೋದನೆ ಪಡೆದ ವಿಚಾರ ಶುಕ್ರವಾರ ನಡೆದ ಬಿಬಿಎಂಪಿ ಸಾಮಾನ್ಯಸಭೆಯಲ್ಲಿ ಪ್ರತಿಧ್ವನಿಸಿತು. ವಿಶೇಷ ಅಧಿಕಾರಯುತ ಸಮಿತಿಯಿಂದ ಕ್ರಿಯಾಯೋಜನೆಗಳಿಗೆ ನೇರವಾಗಿ ಅನುಮೋದನೆ ಪಡೆದಿರುವುದು ಖಂಡನೀಯ.

Advertisement

ಇದು ಕರ್ನಾಟಕ ಪೌರನಿಗಮಗಳ ಕಾಯ್ದೆ (ಕೆಎಂಸಿ)ಗೆ ವಿರುದ್ಧವಾಗಿದ್ದು, ಈ ಹಿನ್ನೆಲೆಯಲ್ಲಿ ಉದ್ದೇಶಿತ ಕ್ರಿಯಾಯೋಜನೆ ಕಡತಗಳನ್ನು ಪುನಃ ಸ್ಥಾಯಿ ಸಮಿತಿ ಮತ್ತು ಕೌನ್ಸಿಲ್‌ನಲ್ಲಿ ಮಂಡಿಸಬೇಕು ಎಂದು ಒತ್ತಾಯಿಸಿ ಬಿಜೆಪಿ ಮತ್ತು ಜೆಡಿಎಸ್‌ ಸದಸ್ಯರು ಸಭೆಯ ಬಾವಿಗಿಳಿದು ಪ್ರತಿಭಟಿಸಿದರು. ಈ ವೇಳೆ ಜೆಡಿಎಸ್‌ ಸದಸ್ಯರು, ಕಾಂಗ್ರೆಸ್‌ಗೆ ನೀಡಿದ ಬೆಂಬಲ ವಾಪಸ್‌ ಪಡೆಯುವ ಎಚ್ಚರಿಕೆಯನ್ನೂ ನೀಡಿದರು.

ಸಭೆಯಲ್ಲಿ ಮಾತನಾಡಿದ ಪ್ರತಿಪ್ರಕ್ಷದ ನಾಯಕ ಪದ್ಮನಾಭ ರೆಡ್ಡಿ, “ನಗರೋತ್ಥಾನದಡಿ 7,300 ಕೋಟಿ ಮೊತ್ತದ ಕ್ರಿಯಾಯೋಜನೆಯನ್ನು ಸ್ಥಾಯಿಸಮಿತಿ ಗಮನಕ್ಕೆ ತಾರದೆ, ಸರ್ಕಾರದಿಂದಲೇ ಅನುಮೋದನೆ ಪಡೆಯಲಾಗಿದೆ. ಕಾಂಗ್ರೆಸ್‌ ಸರ್ಕಾರದ ಈ ನಡೆ ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ಆಶಯಕ್ಕೂ ವಿರುದ್ಧವಾಗಿದೆ.

ತಕ್ಷಣ ಅನುಮೋದನೆಗೊಂಡ ಕ್ರಿಯಾಯೋಜನೆಯನ್ನು ಸಭೆಯಲ್ಲಿ ಪುನಃ ಮಂಡಿಸಬೇಕು’ ಎಂದು ಪಟ್ಟುಹಿಡಿದರು. “ಸರ್ಕಾರದ ಈ ಧೋರಣೆ ಕೇವಲ ನನಗಾದ ಅವಮಾನವಲ್ಲ, ಮೇಯರ್‌ ಸೇರಿದಂತೆ ಇಡೀ ಪಾಲಿಕೆಗಾದ ಅವಮಾನ. ಪಕ್ಷಭೇದ ಮರೆತು, ಸದಸ್ಯರೆಲ್ಲರೂ ಇದನ್ನು ವಿರೋಧಿಸಬೇಕು’ ಎಂದೂ ಹೇಳಿದರು. 

ಬೆಂಬಲ್‌ ವಾಪಸ್‌ ಎಚ್ಚರಿಕೆ: ಪ್ರತಿಪಕ್ಷದ ನಾಯಕರ ವಾದಕ್ಕೆ ದನಿಗೂಡಿಸಿದ ಜೆಡಿಎಸ್‌ ಸದಸ್ಯ ಇಮ್ರಾನ್‌ ಪಾಷ, “ಸಂವಿಧಾನವೇ ಡಾ.ಅಂಬೇಡ್ಕರ್‌ ಎಂದು ಮುಖ್ಯಮಂತ್ರಿಗಳು ಹೇಳುತ್ತಾರೆ. ಆದರೆ, ಪಾಲಿಕೆಯಲ್ಲಿ ಸಂವಿಧಾನ, ಕಾಯ್ದೆ ಯಾವುದಕ್ಕೂ ಕಿಮ್ಮತ್ತಿಲ್ಲ. ಸರ್ಕಾರವೇ ನೇರವಾಗಿ ಅನುಮೋದನೆ ನೀಡುವುದಾದರೆ, ನಾವೇನೂ ಇಲ್ಲಿ ಕುಳಿತುಹೋಗುವ ಗೊಂಬೆಗಳೇ? ಕಾಂಗ್ರೆಸ್‌ ಇದೇ ಧೋರಣೆ ಮುಂದುವರಿಸಿದರೆ, ಪಾಲಿಕೆಯಲ್ಲಿ ನೀಡಿರುವ ಬೆಂಬಲ ವಾಪಸ್‌ ಪಡೆಯಲಾಗುವುದು’ ಎಂದು ಎಚ್ಚರಿಸಿದರು.

Advertisement

ಇನ್ಮುಂದೆ ಮಂಡಿಸುತ್ತೇವೆ: ಮಧ್ಯ ಪ್ರವೇಶಿಸಿದ ಮೇಯರ್‌ ಸಂಪತ್‌ರಾಜ್‌, ಇನ್ಮುಂದೆ ರೂಪಿಸುವ ಯಾವುದೇ ಕ್ರಿಯಾಯೋಜನೆಗಳನ್ನು ಕಡ್ಡಾಯವಾಗಿ ಸ್ಥಾಯಿಸಮಿತಿ ಮುಂದೆ ಮಂಡಿಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಗೊಂದಲ ತಿಳಿಗೊಳಿಸಲು ಯತ್ನಿಸಿದರು. ಆದರೆ, ಈಗಾಗಲೇ ನೇರವಾಗಿ ಅನುಮೋದನೆಗೊಂಡ ಕ್ರಿಯಾಯೋಜನೆಗಳನ್ನು ವಾಪಸ್‌ ಕೌನ್ಸಿಲ್‌ನಲ್ಲಿ ಮಂಡಿಸಬೇಕು ಎಂದು ಪದ್ಮನಾಭರೆಡ್ಡಿ ಪಟ್ಟು ಹಿಡಿದರು. ಇದರಿಂದ ಪ್ರತಿಭಟನೆಯಲ್ಲೇ ಸಭೆ ಅಂತ್ಯಗೊಂಡಿತು.

ಇದಕ್ಕೂ ಮುನ್ನ ನಡೆದ ಚರ್ಚೆಯಲ್ಲಿ ಸದಸ್ಯೆ ನೇತ್ರಾ ನಾರಾಯಣ್‌ ಮಾತನಾಡಿ, ಬಿಬಿಎಂಪಿ ವ್ಯಾಪ್ತಿಯಲ್ಲಿ ಅನುಷ್ಠಾನಗೊಳ್ಳುತ್ತಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳ ಗುಣಮಟ್ಟ ನಿರ್ವಹಣೆಗೆ ಸಂಬಂಧಿಸಿದಂತೆ ಭಾರತೀಯ ವಿಜ್ಞಾನ ಸಂಸ್ಥೆ, ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯ ಸೇರಿದಂತೆ ಪ್ರತಿಷ್ಠಿತ ಸಂಸ್ಥೆಗಳನ್ನು ಥರ್ಡ್‌ಪಾರ್ಟಿ ಏಜೆನ್ಸಿಗಳನ್ನಾಗಿ ಬಳಸಲು ಸೂಚಿಸಲಾಗಿದೆ.

ಆದರೆ, ಇದುವರೆಗೆ ಯಾವುದೇ ಕಾಮಗಾರಿಗಳಿಗೆ ಸಂಸ್ಥೆಯಿಂದ ಪ್ರಮಾಣಪತ್ರ ಪಡೆದಿಲ್ಲ ಎಂದು ದಾಖಲೆ ಸಹಿತ ಸಭೆ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ಮೇಯರ್‌, ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದರು.  ಕಾವಲ್‌ ಬೈರಸಂದ್ರ, ಮುನಿರೆಡ್ಡಿಪಾಳ್ಯ ಸುತ್ತ 228.3 ಎಕರೆ ಜಾಗವು ರಕ್ಷಣಾ ಇಲಾಖೆಗೆ ಸೇರಿದ್ದು ಎಂದೇ ಇದುವರೆಗೆ ನಂಬಲಾಗಿತ್ತು.

ಆದರೆ, ಈಚೆಗೆ ಮೋದಿ ಗಾರ್ಡನ್‌ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಹೋರಾಟದ ಫ‌ಲವಾಗಿ ಸ್ವತಃ ರಕ್ಷಣಾ ಇಲಾಖೆಯು ಉದ್ದೇಶಿತ ಜಾಗ ಇಲಾಖೆಗೆ ಸೇರಿದ್ದಲ್ಲ ಎಂದು ಸ್ಪಷ್ಟಪಡಿಸಿದೆ. ಕಂದಾಯ ಇಲಾಖೆ ದಾಖಲಾತಿಗಳು ಕೂಡ ಇದನ್ನು ಪುಷ್ಟೀಕರಿಸುತ್ತವೆ. ಆದ್ದರಿಂದ ಈ ಜಾಗವನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಒತ್ತಾಯಿಸಿದರು. 

ಸರ್ಕಾರದಿಂದಲೇ ಆದೇಶ ಬಂದಿದೆ: “2012ರ ಜುಲೈನಲ್ಲೇ ಅಧಿಕಾರಯುತ ಸಮಿತಿ ರಚನೆಗೊಂಡಿದೆ. ಆಗಿನಿಂದಲೂ ಕ್ರಿಯಾಯೋಜನೆಗಳು ನೇರವಾಗಿ ಸರ್ಕಾರದಿಂದಲೇ ಅನುಮೋದನೆಗೊಳ್ಳುತ್ತಿವೆ. ಕಾಮಗಾರಿಗಳ ಅನುಷ್ಠಾನದಲ್ಲಾಗುವ ವಿಳಂಬವನ್ನು ತಪ್ಪಿಸಲು ಈ ಕ್ರಮ ಅನುಸರಿಸಲಾಗುತ್ತಿದೆ. ಈ ಬಗ್ಗೆ ಸ್ವತಃ ಪ್ರತಿಪಕ್ಷದ ನಾಯಕ ಪದ್ಮನಾಭ ರೆಡ್ಡಿ ಅವರು ಈ ಹಿಂದೆ ಸರ್ಕಾರಕ್ಕೆ ಪತ್ರ ಬರೆದು ಸ್ಪಷ್ಟೀಕರಣ ಕೇಳಿದ್ದರು.

ಇದಕ್ಕೆ ಉತ್ತರಿಸಿರುವ ಸರ್ಕಾರ, “ಉದ್ದೇಶಿತ ಕ್ರಿಯಾಯೋಜನೆಯಲ್ಲಿನ ಹೆಚ್ಚುವರಿ ಅನುದಾನಕ್ಕೆ ಮಾತ್ರ ಪಾಲಿಕೆ ಅನುಮೋದನೆ ಪಡೆಯಬಹುದು. ಇದರಿಂದ ಬಿಬಿಎಂಪಿ ಸ್ವಾಯತ್ತತೆಗೆ ಧಕ್ಕೆ ಆಗುತ್ತದೆ. ಇದು ಅಸಂವಿಧಾನಿಕ ಕ್ರಮ ಎಂದು ತಿಳಿಯುವುದು ಸಮಂಜಸವಲ್ಲ’ ಎಂದು ಹೇಳಿತ್ತು,’ ಎಂದು ಎಂದು ಪಾಲಿಕೆ ಆಯುಕ್ತ ಎನ್‌. ಮಂಜುನಾಥ ಪ್ರಸಾದ್‌ ಸ್ಪಷ್ಟಪಡಿಸಿದರು.

ಪದ್ಮನಾಭ ರೆಡ್ಡಿ ಮಾತನಾಡಿ, “ವೈಟ್‌ಟಾಪಿಂಗ್‌, ರಾಜಕಾಲುವೆ, ಅಂಡರ್‌ಪಾಸ್‌ ಸೇರಿದಂತೆ ಹಲವು ಯೋಜನೆಗಳಿಗೆ ಹೆಚ್ಚುವರಿ ಅನುದಾನ ಪಾಲಿಕೆ ನೀಡುತ್ತಿದೆ. ಹಾಗಿದ್ದರೆ, ಇದಕ್ಕಾದರೂ ಅನುಮೋದನೆ ಪಡೆಯಬೇಕಿತ್ತಲ್ಲವೇ? 50 ಸಾವಿರ ಮತದಾರರಿಂದ ಆಯ್ಕೆಯಾದ ನಮಗೆ ಅಧಿಕಾರ ಇಲ್ಲವೇ? ಮಂಜುನಾಥ್‌ ರೆಡ್ಡಿ ಮೇಯರ್‌ ಇರುವವರೆಗೂ ಸಮಿತಿ ಮುಂದೆ ಕ್ರಿಯಾ ಯೋಜನೆ ಮಂಡನೆ ಆಗುತ್ತಿತ್ತು. ನಂತರದಲ್ಲಿ ಅದು ನೇರವಾಗಿ ಸರ್ಕಾರದಿಂದ ಅನುಮೋದನೆಗೊಳ್ಳುತ್ತಿದೆ. ಹಾಗಿದ್ದರೆ ಆಗ ನಿಯಮ ಪಾಲನೆ ಆಗುತ್ತಿರಲಿಲ್ಲವೇ,’ ಎಂದು ಪ್ರಶ್ನಿಸಿದರು. 

ಅಧಿಕಾರಿ ವಿರುದ್ಧ ಕ್ರಮಕ್ಕೆ ಒತ್ತಾಯ: ಕಾಮಾಕ್ಷಿಪಾಳ್ಯದ ಸದಸ್ಯೆಯೊಂದಿಗೆ ಅನುಚಿತವಾಗಿ ವರ್ತಿಸಿದ ಅಧಿಕಾರಿ ವಿರುದ್ಧ ಕ್ರಮಕ್ಕೆ ಮಹಿಳಾ ಸದಸ್ಯರಿಂದ ಒಕ್ಕೊರಲ ಒತ್ತಾಯ ಕೇಳಿಬಂತು. ಕಾಮಾಕ್ಷಿಪಾಳ್ಯದಲ್ಲಿ ಒಂದೇ ಕಡೆ ಎರಡು ಇಂದಿರಾ ಕ್ಯಾಂಟೀನ್‌ ನಿರ್ಮಿಸಲಾಗುತ್ತಿದೆ. ಈ ಬಗ್ಗೆ ಪ್ರಶ್ನಿಸಿದ್ದಕ್ಕೆ ಆ ವಲಯದ ಜಂಟಿ ಆಯುಕ್ತ ಬಸವರಾಜ ಏಕವಚನದಲ್ಲಿ ಮಾತನಾಡಿದರು ಎಂದು ಸದಸ್ಯೆ ಶಾರದಾ ಆರೋಪಿಸಿದರು. ಇದನ್ನು ಖಂಡಿಸಿದ ಉಳಿದ ಮಹಿಳಾ ಸದಸ್ಯರು, ಕೂಡಲೇ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು. ಆಗ ಮೇಯರ್‌ ಸಂಪತ್‌ ರಾಜ್‌, ಕಠಿಣ ಕ್ರಮ ಕೈಗೊಳ್ಳು ಸೂಚಿಸುತ್ತೇನೆ ಎಂದು ಭರವಸೆ ನೀಡಿದರು. 

ವೋಟರ್‌ ಐಡಿ ಕೊಡ್ತಿಲ್ಲ: “ಕಳೆದ ಎಂಟು ತಿಂಗಳಲ್ಲಿ ಗಾಯತ್ರಿನಗರದಲ್ಲಿ ಒಂದೇ ಒಂದು ಮತದಾರರ ಗುರುತಿನಚೀಟಿ ವಿತರಿಸಿಲ್ಲ,’ ಎಂದು ಗಾಯತ್ರಿನಗರ ವಾರ್ಡ್‌ ಸದಸ್ಯೆ ಚಂದ್ರಕಲಾ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಅಲವತ್ತುಕೊಂಡರು. ಮಲ್ಲೇಶ್ವರ ಕ್ಷೇತ್ರದಲ್ಲಿ ಏಪ್ರಿಲ್‌ನಿಂದ ಈವರೆಗೆ ಅಂದಾಜು ಎರಡೂವರೆ ಸಾವಿರ ಮತದಾರರ ಗುರುತಿನ ಚೀಟಿ ವಿತರಿಸಲಾಗಿದೆ. ಆದರೆ, ಪಕ್ಕದಲ್ಲೇ ಇರುವ ನನ್ನ ವಾರ್ಡ್‌ನಲ್ಲಿ ಒಂದೂ ಮತದಾರರ ಗುರುತಿನ ಚೀಟಿ ವಿತರಿಸುತ್ತಿಲ್ಲ. ಈ ಬಗ್ಗೆ ಅಧಿಕಾರಿಗಳನ್ನು ಕೇಳಿದರೆ, ಸಬೂಬು ಹೇಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next