ಮುಂಬಯಿ: ಬಿಜೆಪಿ ಟಿಕೆಟ್ ನಿರಾಕರಿಸಿದ ಹಿನ್ನೆಲೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಹಿರಿಯ ನಾಯಕ ಹಾಗೂ ಮಾಜಿ ಸಂಸದ ಗೋಪಾಲ್ ಶೆಟ್ಟಿ ಸೋಮವಾರ ಮುಂಬೈನ ಬೊರಿವಲಿ ವಿಧಾನಸಭಾ ಕ್ಷೇತ್ರದಿಂದ ತಮ್ಮ ಉಮೇದುವಾರಿಕೆಯನ್ನು ಹಿಂಪಡೆಯುವುದಾಗಿ ಘೋಷಿಸಿದ್ದಾರೆ. ಶೆಟ್ಟಿಯವರ ಬಂಡಾಯ ಬಿಜೆಪಿಗೆ ತನ್ನ ಭದ್ರಕೋಟೆಯಲ್ಲಿ ಹೊಡೆತವಾಗಿ ಕಂಡುಬಂದಿತ್ತು. ಖುದ್ದು ಡಿಸಿಎಂ ದೇವೇಂದ್ರ ಫಡ್ನವಿಸ್ ಅವರೇ ಮಾತುಕತೆ ನಡೆಸಿ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ.
ನವೆಂಬರ್ 20 ರಂದು ನಡೆಯಲಿರುವ ಚುನಾವಣೆಗೆ ಬಿಜೆಪಿಯು ಸಂಜಯ್ ಉಪಾಧ್ಯಾಯ ಅವರನ್ನು ಬೊರಿವಲಿ ಕ್ಷೇತ್ರದಿಂದ ಕಣಕ್ಕಿಳಿಸಿದೆ. ನಾಮಪತ್ರ ಹಿಂಪಡೆಯಲು ಸೋಮವಾರ ಕೊನೆಯ ದಿನವಾಗಿತ್ತು.
ಭಾನುವಾರ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿನೋದ್ ತಾವ್ಡೆ ಅವರು ಗೋಪಾಲ್ ಶೆಟ್ಟಿ ಅವರೊಂದಿಗೆ ಸಭೆ ನಡೆಸಿ ನಾಮಪತ್ರ ಹಿಂಪಡೆಯುವಂತೆ ಮನವೊಲಿಸಿದ್ದರು.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಗೋಪಾಲ್ ಶೆಟ್ಟಿ, ಇಂದು ನಾಮಪತ್ರ ಹಿಂಪಡೆಯುತ್ತಿದ್ದೇನೆ. ನನ್ನಂತಹ ಪಕ್ಷದ ಕಾರ್ಯಕರ್ತರೊಂದಿಗೆ ಯಾವುದೇ ಸಮಾಲೋಚನೆಯಿಲ್ಲದೆ ನಿರ್ಧಾರಗಳನ್ನು ತೆಗೆದುಕೊಂಡ ಬಿಜೆಪಿಯ ಕಾರ್ಯವೈಖರಿಯ ಬಗ್ಗೆ ನನ್ನ ಆಕ್ಷೇಪಣೆಯಿತ್ತು. ಪಕ್ಷವು ನಿರಂತರವಾಗಿ ವಿಧಾನಸಭಾ ಚುನಾವಣೆಗೆ ಅಭ್ಯರ್ಥಿಗಳನ್ನು ಹೊರಗಿನಿಂದ ನಾಮನಿರ್ದೇಶನ ಮಾಡುತ್ತಿದೆ. ಬೊರಿವಲಿ ವಿಧಾನಸಭಾ ಕ್ಷೇತ್ರಕ್ಕೆ ಅಭ್ಯರ್ಥಿಯನ್ನು ಆಯ್ಕೆ ಮಾಡಿದಾಗ ನನ್ನನ್ನು ಎಂದಿಗೂ ಸಮಾಲೋಚಿಸಲಿಲ್ಲ. ನಾನು ಪಕ್ಷದ ಕಾರ್ಯಕರ್ತ ಮತ್ತು ನಾನು ಯಾವಾಗಲೂ ಒಂದು ನಿರ್ದಿಷ್ಟ ಶೈಲಿಯ ನಿರ್ಧಾರದ ಬಗ್ಗೆ ನನ್ನ ಕಳವಳವನ್ನು ವ್ಯಕ್ತಪಡಿಸಿದ್ದೇನೆ”ಎಂದು ಹೇಳಿದರು.
ಅಂಧೇರಿ ಪೂರ್ವ ವಿಧಾನಸಭೆಯಿಂದ ಬಿಜೆಪಿಯ ಮತ್ತೋರ್ವ ಬಂಡಾಯ ಅಭ್ಯರ್ಥಿ ಸ್ವೀಕೃತಿ ಶರ್ಮ ಕೂಡ ನಾಮಪತ್ರ ಹಿಂಪಡೆಯುವುದಾಗಿ ಘೋಷಿಸಿದ್ದಾರೆ.
ಗೋಪಾಲ್ 2014 ಮತ್ತು 2019 ರಲ್ಲಿ ನಾಲ್ಕು ಲಕ್ಷಕ್ಕೂ ಹೆಚ್ಚು ಅಂತರದಿಂದ ಮುಂಬೈ ಉತ್ತರ ಲೋಕಸಭಾ ಸ್ಥಾನದಲ್ಲಿ ಜಯ ಸಾಧಿಸಿದ್ದರು. 2024 ರ ಸಾರ್ವತ್ರಿಕ ಚುನಾವಣೆಯಲ್ಲಿ ಅವರಿಗೆ ಟಿಕೆಟ್ ನಿರಾಕರಿಸಿ ಕ್ಷೇತ್ರವನ್ನು ಬಿಜೆಪಿಯ ಹಿರಿಯ ನಾಯಕ ಪಿಯೂಷ್ ಗೋಯಲ್ ಅವರಾಯಿಗೆ ನೀಡಲಾಗಿತ್ತು. ಅವರು ಜಯ ಸಾಧಿಸಿ ಈಗ ಕೇಂದ್ರ ಸಚಿವರಾಗಿದ್ದಾರೆ.
ಗೋಪಾಲ್ ಶೆಟ್ಟಿ ಮುಂಬೈ ಉತ್ತರ ಪ್ರದೇಶದ ಅನುಭವಿ ನಾಯಕ. 2004 ಮತ್ತು 2009 ರಲ್ಲಿ ಬೊರಿವಲಿಯಿಂದ ಶಾಸಕರಾಗಿದ್ದರು. ಅವರು ಹಲವಾರು ವರ್ಷಗಳ ಕಾಲ ಈ ಪ್ರದೇಶದ ಕಾರ್ಪೊರೇಟರ್ ಆಗಿದ್ದರು.