ಶಿಡ್ಲಘಟ್ಟ: ಗ್ರಾಮೀಣ ಪ್ರದೇಶದಲ್ಲಿ ನೈರ್ಮಲ್ಯ ಕಾಪಾಡಲು ಸರ್ಕಾರ ಅನೇಕ ರೀತಿಯ ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಪ್ರಮುಖವಾಗಿ ನಗರ ಪ್ರದೇಶದ ಮಾದರಿಯಲ್ಲಿ ಘನ ತ್ಯಾಜ್ಯ ವಿಲೇವಾರಿ ಮಾಡಲು ಗ್ರಾಮಸ್ಥರು ಸಹಕರಿಸಬೇಕೆಂದು ಶಾಸಕ ವಿ.ಮುನಿಯಪ್ಪ ಹೇಳಿದರು. ತಾಲೂಕಿನ ದಿಬ್ಬೂರಹಳ್ಳಿ-ತಿಮ್ಮನಾಯಕನಹಳ್ಳಿ ಹಾಗೂ ತಲ ಕಾಯಲಬೆಟ್ಟ ಗ್ರಾಮ ಪಂಚಾಯಿತಿಯಲ್ಲಿ ತ್ಯಾಜ್ಯ ಸಂಗ್ರಹಿಸಲು ಡಸ್ಟ್‌ಬಿನ್‌ಗಳನ್ನು ವಿತರಿಸಿ ಮಾತನಾಡಿದರು.
ಗ್ರಾಮೀಣ ಪ್ರದೇಶ ಅಭಿವೃದ್ಧಿ ಹೊಂದಿದಾಗ ಮಾತ್ರ ದೇಶ ಅಭಿವೃದ್ಧಿ ಹೊಂದಲು ಸಾಧ್ಯ. ಗ್ರಾಮಸ್ಥರು ತಮ್ಮ ಮನೆಯ ಸುತ್ತಮುತ್ತ ಪರಿಸರವನ್ನು ಸ್ವಚ್ಛವಾಗಿಡಲು ಕಾಳಜಿ ವಹಿಸಬೇಕು. ಮನೆಯಲ್ಲಿ ಒಣ-ಹಸಿ ತ್ಯಾಜ್ಯವನ್ನು ಪ್ರತ್ಯೇಕವಾಗಿ ವಿಂಗಡಿಸಿ ಗ್ರಾಪಂ ವಾಹನದಲ್ಲಿ ಹಾಕುವ ಮೂಲಕ ಆರೋಗ್ಯವಂತ ಸಮಾಜ ನಿರ್ಮಿಸಬೇಕೆಂದು ಮನವಿ ಮಾಡಿದರು.
ಜಾಗೃತಿ ಮೂಡಿಸಿ: ಗ್ರಾಮೀಣ ಪ್ರದೇಶದಲ್ಲಿ ಸ್ವಚ್ಛತೆ ಕಾಪಾಡಲು ಹಿಂದಿನ ಯುಪಿಎ ಸರ್ಕಾರ ರಾಷ್ಟ್ರೀಯ ಸ್ವಚ್ಛತಾ ಅಭಿಯಾನ ಯೋಜನೆ ಆರಂಭಿಸಿತು. ಇದೀಗ ಅದೇ ಮಾದರಿಯ ಸ್ವಚ್ಛಭಾರತ ಮಿಷನ್ ಯೋಜನೆಯನ್ನು ಜಾರಿಗೊಳಿಸಲಾಗಿದೆ ಎಂದರು. ತಾಪಂ ಇಒ ಬಿ.ಶಿವಕುಮಾರ್ ಮಾತನಾಡಿ, ನಗರ ಪ್ರದೇಶದ ಮಾದರಿ ಯಲ್ಲಿ ಗ್ರಾಮಾಂತರ ಪ್ರದೇಶದಲ್ಲಿ ಸ್ವಚ್ಛತೆ ಕಾಪಾಡಲು ಮತ್ತು ತ್ಯಾಜ್ಯ ವಿಲೇವಾರಿ ಮಾಡಲು ಮೂರು ಗ್ರಾಪಂಗಳಿಗೆ ಒಂದು ಘಟಕ ಆರಂಭಿಸಿ ಪ್ರತಿಯೊಂದು ಪಂಚಾಯಿತಿಗೆ ಕಸ ವಿಲೇವಾರಿಗೆ ಟಿಪ್ಪರ್ ವ್ಯವಸ್ಥೆ ಕಲ್ಪಿಸಲಾಗಿದೆ. ಜೊತೆಗೆ ಪ್ರತಿ ಕುಟುಂಬಕ್ಕೆ 2 ಬಕೆಟ್ ವಿತರಿಸ ಲಾಗಿದೆ ಎಂದರು.
ಈ ಸಂದರ್ಭದಲ್ಲಿ ದಿಬ್ಬೂರಹಳ್ಳಿ ಗ್ರಾಪಂ ಅಧ್ಯಕ್ಷ ಸುಬ್ಬಣ್ಣ, ಉಪಾಧ್ಯಕ್ಷೆ ಮಮತಾ, ಸದಸ್ಯ ಪ್ರಸನ್ನ, ಮುಖಂಡ ಡಿ.ಎಸ್. ಎನ್.ರಾಜು, ಗೋಪಾಲಕೃಷ್ಣ(ಗೋಪಿ), ತಲಕಾಯಲಬೆಟ್ಟ ಗ್ರಾಪಂ ಅಧ್ಯಕ್ಷ ಶ್ರೀನಿ ವಾಸರೆಡ್ಡಿ, ಪಿಡಿಒ ಗೌಸ್‌ಪೀರ್,ತಿಮ್ಮನಾಯಕನಹಳ್ಳಿ ಗ್ರಾಪಂ ಅಧ್ಯಕ್ಷೆ ಭವ್ಯ, ಉಪಾಧ್ಯಕ್ಷೆ ಕಮಲಮ್ಮ ದ್ಯಾವಪ್ಪ, ಆನಂದ್, ಅರುಣ್‌ಕುಮಾರ್, ಜಿಪಂ ಮಾಜಿ ಸದಸ್ಯ ಎನ್.ಮುನಿಯಪ್ಪ, ಶ್ರೀನಿವಾಸರೆಡ್ಡಿ, ಅಶ್ವತ್ಥರೆಡ್ಡಿ, ಪಿಡಿಒ ನಾಗರಾಜಯ್ಯ, ಜಿಪಂ ಮಾಜಿ ಅಧ್ಯಕ್ಷ ವಿ.ಸುಬ್ರಹ್ಮಣಿ, ಭೂ ಅಭಿವೃದ್ಧಿ ಬ್ಯಾಂಕ್‌ನ ನಿರ್ದೇಶಕ ರವಿ ಉಪಸ್ಥಿತರಿದ್ದರು.