ಬೆಂಗಳೂರು: ನನಗೆ ಈ ಕಾರ್ಯಕ್ರಮದಲ್ಲಿ ಭಾಗಿಯಾದ ಕುರಿತು ಬಹಳ ಸಂತೋಷವಿದೆ. ಮುಟ್ಟಿನ ನೈರ್ಮಲ್ಯತೆಯ ಕುರಿತಾದಂತೆ ಮಹಿಳೆಯರು, ಯುವತಿಯರಲ್ಲಿ ಜಾಗೃತಿ ಮೂಡಿಸುವುದು ಅತ್ಯಗತ್ಯವಾಗಿದೆ. ಈ ಕುರಿತು ಯಾವುದೇ ಅರಿವಿಲ್ಲದವರಿಗೆ ತಿಳಿಸಿ ಕೊಡುವುದು ನಮ್ಮ ಜವಾಬ್ದಾರಿಯಾಗಿದೆ. ಬಿಗ್ ಎಫ್.ಎಮ್ ಆಯೋಜಿಸಿದ ಈ ಕಾರ್ಯಕ್ರಮವು ನಿಜಕ್ಕೂ ಪ್ರಶಂಸಾರ್ಹವಾಗಿದ್ದು, ಇಂತಹ ಕಾರ್ಯಕ್ರಮಕ್ಕೆ ಪ್ರತಿಯೊಬ್ಬರೂ ಕೈಜೋಡಿಸುವ ಮೂಲಕ ಇಂತಹ ಯೋಜನೆಯನ್ನು ಯಶಸ್ವಿಗೊಳಿಸಬೇಕು ಎಂದು ನಟ ವಶಿಷ್ಠ ಸಿಂಹ ಹೇಳಿದರು.
ಅವರು ಬೆಂಗಳೂರಿನ 92.7 ಬಿಗ್ ಎಫ್ ನ ನಿರೂಪಕಿ ಆರ್ ಜೆ ಶ್ರುತಿ ತಮ್ಮ ತಂಡ ಬಿಗ್ ಕಾಫಿ ಬ್ರಿಗೇಡ್ ನೊಂದಿಗೆ ರೂಪಿಸಿರುವ ವಿಂಗ್ಸ್ ಆಫ್ ವುಮೆನ್ ಯೋಜನೆಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಈ ಕಾರ್ಯಕ್ರಮವನ್ನು ಆಯೋಜಿಸಿದ ಬಿಗ್ ಎಫ್ ಎಂ ನ ಆರ್.ಜೆ ಶ್ರುತಿ ಮಾತನಾಡಿ, ಈ ಕಾರ್ಯಕ್ರಮವನ್ನು ನಾವು ಆಯೋಜಿಸಿದ್ದು, ನಮಗೆ ಬಹಳ ಸಂತೋಷವಾಗಿದೆ. ಸ್ಯಾನಿಟರಿ ನ್ಯಾಪ್ ಕಿನ್ ಕುರಿತು ವಿಶ್ವದೆಲ್ಲೆಡೆ ಚರ್ಚೆ ಮತ್ತು ಜಾಗೃತಿಗಳು ನಡೆಯುತ್ತಿದ್ದು, ಬೆಂಗಳೂರಿನಲ್ಲಿ ನಾವು ಆಯೋಜಿಸಿದ ಕಾರ್ಯಕ್ಕೆ ಉತ್ತಮ ಪ್ರತಿಕ್ರಿಯೆಗಳು ಲಭ್ಯವಾಗಿವೆ. ಈ ಕುರಿತಾದಂತೆ ಪ್ರತಿಯೊಬ್ಬರೂ ಇಂತಹ ಕಾರ್ಯಕ್ರಮಗಳನ್ನು ಮುಂದುವರಿಸಿಕೊಂಡು ಹೋಗಬೇಕು. ಇದೇ ಕಾರ್ಯಕ್ರಮವನ್ನು ಮುಂದಿನ ವರ್ಷವೂ ಮಾಡಲಿದ್ದೇವೆ ಎಂದು ಹೇಳಿದರು.
ಆರ್.ಜೆ ಶ್ರುತಿ ನೇತೃತ್ವದ ಬಿಗ್ ಎಫ್ ಎಮ್ ತಂಡ ಸ್ಯಾನಟರಿ ನ್ಯಾಪ್ ಕಿನ್ ಗಳ ಕುರಿತು ಜಾಗೃತಿ ಮೂಡಿಸಲು ತಮ್ಮ ತಂಡದೊಂದಿಗೆ ರಾಜಾಜಿನಗರದ ಕಬಾಡಿ ಶಂಕರರ್ಸ್ ಎಂಬ ಗಾರ್ಮೆಂಟ್ ಫ್ಯಾಕ್ಟರಿಗೆ ತೆರಳಿ, ಅಲ್ಲಿನ ಪ್ರತಿಯೊಂದು ಯುವತಿಗೆ 45 ಸ್ಯಾನಿಟರಿ ನ್ಯಾಪ್ ಕಿನ್ ಗಳನ್ನು ವಿತರಿಸಿದೆ. ಬಿಗ್ ತಂಡದೊಂದಿಗೆ ನಟ ಜೈಜಗದೀಶ್ ಪುತ್ರಿಯರಾದ ವೈನಿಧಿ, ವೈಭವಿ ಹಾಗೂ ವೈಸಿರಿ ಕೂಡಾ ತಂಡದೊಂದಿಗೆ ಸೇರಿ ಸ್ಯಾನಿಟರಿ ನ್ಯಾಪ್ ಕಿನ್ ಗಳನ್ನು ವಿತರಿಸಿದರು.
ಆರ್.ಜೆ ಶ್ರುತಿ ತಮ್ಮ ತಂಡದೊಂದಿಗೆ ಮಲ್ಲೇಶ್ವರಂನ ಸರಕಾರಿ ಪ್ರಥಮ ದರ್ಜೆ ಕಾಲೇಜಿಗೆ ತೆರಳಿ, ಅಲ್ಲಿನ ವಿದ್ಯಾರ್ಥಿನಿಯರಿಗೆ ಸ್ಯಾನಿಟರಿ ನ್ಯಾಪ್ ಕಿನ್ ಅನ್ನು ವಿತರಿಸಿದರು.