ಮುಧೋಳ: ಹೊಸ ಮನ್ವಂತರಕ್ಕೆ ನಾಂದಿ ಹಾಡುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಆಮ್ ಆದ್ಮಿ ಪಕ್ಷಕ್ಕೆ ಬೆಂಬಲ ನೀಡಬೇಕು ಎಂದು ಆಮ್ ಆದ್ಮಿ ಪಕ್ಷದ ತಾಲೂಕು ಮುಖಂಡ ಡಾ| ರವೀಂದ್ರ ಲಕ್ಷಣ್ಣವರ ಹೇಳಿದರು. ನಗರದ ಖಾಸಗಿ ಹೊಟೇಲ್‌ನಲ್ಲಿ ನಡೆದ ಪಕ್ಷದ ಸಭೆಯಲ್ಲಿ ಮಾತನಾಡಿದ ಅವರು, ಆಮ್ ಆದ್ಮಿ ಪಕ್ಷ ರಾಜಕೀಯ ಬದಲಾವಣೆಗಾಗಿ ಕಂಕಣಬದ್ಧವಾಗಿದೆ. ಪಕ್ಷಕ್ಕೆ ಜನರು ಆಶೀರ್ವಾದ ಮಾಡಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ರೈತ ಮುಖಂಡ ಮುತ್ತಪ್ಪ ಕೋಮಾರ ಮಾತನಾಡಿ, ಮೋದಿ ಅಧಿ ಕಾರಕ್ಕೆ ಬರುವ ಮುನ್ನ ನಾನು ತಿನ್ನುವುದಿಲ್ಲ ನಮ್ಮವರಿಗೆ ತಿನ್ನಲೂ ಬಿಡುವುದಿಲ್ಲ ಎಂಬ ಮಾತು ನಂಬಿದ್ದೆವು. ಆದರೆ ಮೋದಿಯ ಬಣ್ಣ ಬಹುಬೇಗ ಬದಲಾಗಿ ನಮ್ಮ ನಿರೀಕ್ಷೆ ಹುಸಿಯಾಗಿದೆ ಎಂದು ಬಿಜೆಪಿ ಆಡಳಿತವನ್ನು ಟೀಕಿಸಿದರು. ಹೊಸ ಭರವಸೆಯನ್ನು ಮೂಡಿಸಿ ಸಾರ್ವಜನಿಕರ ಸೇವೆಯಲ್ಲಿ ಮುಂಚೂಣಿಯಲ್ಲಿರುವ ಆಮ್ ಆದ್ಮಿ ಪಕ್ಷಕ್ಕೆ ರೈತರು ಬೆಂಬಲ ನೀಡಲಿದ್ದಾರೆ ಎಂದು ಹೇಳಿದರು.
ಕ್ಷೇತ್ರದಲ್ಲಿನ ಜನರು ಕಾಂಗ್ರೆಸ್, ಬಿಜೆಪಿ ಪಕ್ಷದ ಆಡಳಿತದಿಂದ ಬೇಸತ್ತು ಬೇರೆ ಪಕ್ಷಗಳತ್ತ ಮುಖ ಮಾಡಲು ಒಲವು ಹರಿಸುತ್ತಿದ್ದಾರೆ. ಆಮ್ ಆದ್ಮಿ ಪಕ್ಷಕ್ಕೆ ಜನರು ಖಂಡಿತ ಆಶೀರ್ವಾದ ಮಾಡುತ್ತಾರೆ ಎಂಬ ವಿಶ್ವಾಸ ನನಗಿದೆ ಎಂದರು. ಆಮ್ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷ ರಮೇಶ ಬದೂ°ರ ಮಾತನಾಡಿ, ರೈತ ಮುಖಂಡರು ನಮಗೆ ಬೆಂಬಲ ನೀಡಿರುವುದು ಆನೆ ಬಲ ಬಂದಂತಾಗಿದೆ.
ತಾಪಂ ಮತ್ತು ಜಿಪಂ ಚುನಾವಣೆ ಸ್ಪರ್ಧೆ ಹಿನ್ನೆಲೆ ಜಿಲ್ಲಾದ್ಯಂತ ಪಕ್ಷ ಸಂಘಟನೆ ಉದ್ದೇಶದಿಂದ ಮುಧೋಳದಲ್ಲಿ ಸಭೆ ನಡೆಸಲಾಗಿದೆ ಎಂದರು. ಯುವಕರನ್ನು ರಾಜಕಾರಣದತ್ತ ಸೆಳೆಯುವ ಉದ್ದೇಶದಿಂದ ತಾಪಂ ಮತ್ತು ಜಿಪಂ ಚುನಾವಣೆಯಲ್ಲಿ ಯುವಕರಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಹೇಳಿದರು ರಾಜಕಾರಣದ ಅಮೂಲಾಗ್ರ ಬದಲಾವಣೆ ಹಿನ್ನೆಲೆ ಜಿಲ್ಲೆಯಲ್ಲಿ ಪ್ರವಾಸ ಹಮ್ಮಿಕೊಂಡಿದ್ದೇವೆ.
ಭ್ರಷ್ಟಮುಕ್ತ ಆಡಳಿತ, ಕ್ರಾಂತಿಕಾರಿ ಬದಲಾವಣೆಗೆ ಮತದಾರರು ಆಮ್ ಆದ್ಮಿ ಪಾರ್ಟಿಯನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿಕೊಂಡರು. ರೈತ ಮುಖಂಡರಾದ ಈರಪ್ಪ ಹಂಚನಾಳ, ಬಸವಂತ ಕಾಂಬಳೆ, ಕಾರ್ಮಿಕ ಮುಖಂಡ ಈರಣ್ಣಗೌಡ ಪಾಟೀಲ ಸೇರಿದಂತೆ ಇತರರು ಇದ್ದರು.
ರೈತ ಮುಖಂಡರ ಬೆಂಬಲ : ಮುಧೋಳ ಖಾಸಗಿ ಹೊಟೆಲ್‌ನಲ್ಲಿ ನಡೆದ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡಿದ್ದ ರೈತ ಮುಖಂಡರು ಒಕ್ಕೊರಲಿನಿಂದ ಆಮ್ ಆದ್ಮಿ ಪಕ್ಷವನ್ನು ಬೆಂಬಲಿಸುವ ನಿರ್ಧಾರ ಕೈಗೊಂಡರು.