Advertisement
ಕಳೆದೆರಡು ವರ್ಷಗಳಿಂದ ತಾಲೂಕಿನಲ್ಲಿ ಉತ್ತಮ ಮಳೆಯಾಗಿದ್ದು, ರೈತರು ಹಾಗೂ ಹಾಗೂ ಜನರ ಜೀವನಾಡಿ ವಾಣಿವಿಲಾಸ ಸಾಗರದಲ್ಲಿ ಹೆಚ್ಚು ನೀರು ಸಂಗ್ರಹಗೊಂಡಿದೆ. ವಿವಿ ಸಾಗರದಲ್ಲಿ ಸಂಗ್ರಹಗೊಂಡಿರುವ ಭದ್ರಾ ನೀರು ಹಾಗೂ ಮಳೆ ಕಳೆದ ಎರಡು ವರ್ಷಗಳಿಂದ ನೀರಿನ ಅಭಾವವನ್ನು ಕಡಿಮೆ ಮಾಡಿದೆ. ಇದರಿಂದ ರೈತರಲ್ಲಿದ್ದ ಆತಂಕವೂ ದೂರವಾದಂತಾಗಿದೆ. ವಿಶ್ವೇಶ್ವರಯ್ಯ ಜಲನಿಗಮ ಮೂರು ಹಂತಗಳಲ್ಲಿ 90 ದಿನ ನಾಲೆಗಳ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. ಇದರಿಂದ ನೀರಿನ ಅಭಾವ ಬಹುತೇಕ ಕಡಿಮೆ ಆಗಿದೆ. ಐಮಂಗಲ ಹೋಬಳಿ, ಜವನಗೊಂಡನಹಳ್ಳಿ ಹೋಬಳಿ, ವಿವಿ ಪುರ ಹೋಬಳಿಗಳ 19 ಗ್ರಾಮಗಳಿಗೆ 21 ಕೋಟಿ ರೂ. ವೆಚ್ಚದಲ್ಲಿ ಕುಡಿಯುವ ನೀರು ಸರಬರಾಜು ಕಾಮಗಾರಿ ಪೂರ್ಣಗೊಂಡಿದೆ.
Related Articles
Advertisement
ಫೆಬ್ರವರಿ ಮತ್ತು ಮಾರ್ಚ್ ತಿಂಗಳಲ್ಲಿ ಜಿಪಂ ಸಿಇಒ ಡಾ| ಕೆ. ನಂದಿನಿದೇವಿ ಕುಡಿಯುವ ನೀರಿನ ಅಭಾವ ಇರುವ ಸ್ಥಳಗಳಿಗೆ ಮತ್ತು ನೀರು ಪೂರೈಕೆ ಯೋಜನೆ ಕಾಮಗಾರಿ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಜವನಗೊಂಡನಹಳ್ಳಿ ಹೋಬಳಿಯಲ್ಲಿ ಗಾಯತ್ರಿ ಜಲಾಶಯವಿರುವುದರಿಂದ ನೀರಿನ ಸಮಸ್ಯೆ ಅಷ್ಟೊಂದಿಲ್ಲ. ಆದರೆ ಹೋಬಳಿಯಲ್ಲಿ ಬಹು ಗ್ರಾಮದ ಯೋಜನೆಯಡಿ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಒಂದೊಮ್ಮೆ ನೀರಿನ ಅಭಾವ ಎದುರಾದಲ್ಲಿ ಅಧಿಕಾರಿಗಳು ಖಾಸಗಿ ಕೊಳವೆಬಾವಿ ಮಾಲೀಕರ ಮನವೊಲಿಸಿ ನೀರು ಸರಬರಾಜು ಮಾಡಲು ಸಿದ್ಧತೆ ಮಾಡಿಕೊಂಡಿದ್ದಾರೆ.
ಹಿರಿಯೂರು ತಾಲೂಕಿನ 167 ಹಳ್ಳಿಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳು ಸ್ಥಾಪನೆಯಾಗಿದ್ದು ಕುಡಿಯುವ ನೀರು ಒದಗಿಸಲಿವೆ. ಪಂಚಾಯಿತಿ ಮಟ್ಟದಲ್ಲಿ ಪಿಡಿಒಗಳಿಗೆ ಬಹುಗ್ರಾಮ ನೀರು ಯೋಜನೆ ಜವಾಬ್ದಾರಿ ವಹಿಸಲಾಗಿದೆ. ತಾಲೂಕಿನಲ್ಲಿ ಈಗ ಕುಡಿಯುವ ನೀರಿನ ಸಮಸ್ಯೆ ಕಡಿಮೆಯಾಗಿದೆ. 284 ಹಳ್ಳಿಗಳ ಪ್ರತಿ ಮನೆಗೆ ನಳಗಳ ಮೂಲಕ ನೀರು ಪೂರೈಕೆ ಮಾಡಲು ಗ್ರಾಮೀಣ ನೀರು ಸರಬರಾಜು ವಿಭಾಗ ಕ್ರಿಯಾ ಯೋಜನೆ ಸಿದ್ಧಪಡಿಸಿದೆ. 2021ನೇ ಸಾಲಿನಲ್ಲಿ ನೀರು ಸರಬರಾಜು ಮಾಡಲು ಒಂದೂವರೆ ಕೋಟಿ ರೂ. ವಿನಿಯೋಗಿಸಲಾಗಿದೆ. – ಶಿವರಾಮ್, ಗ್ರಾಮೀಣ ಕುಡಿಯುವ ನೀರು ಸರಬರಾಜು ವಿಭಾಗದ ಅಧಿಕಾರಿ
-ಶಿವಶಂಕರ ಮಠದ್