Advertisement

ಸಕಾರಾತ್ಮಕ ವರದಿಗಾರಿಕೆ ಪ್ರಗತಿಗೆ ಪೂರಕ

09:37 PM Nov 27, 2019 | Team Udayavani |

ಚಾಮರಾಜನಗರ: ಮಾಧ್ಯಮ ವರದಿಗಾರಿಕೆಯು ಸಕಾರಾತ್ಮಕವಾಗಿದ್ದಲ್ಲಿ ಸಮುದಾಯದ ಏಳಿಗೆಗೆ ಸಹಾಯಕವಾಗಲಿದೆ ಎಂದು ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಶಿವಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಭಾರತ ಸರ್ಕಾರದ ವಾರ್ತಾ ಶಾಖೆ (ಪಿಐಬಿ)ಯು ಜಿಲ್ಲಾಡಳಿತ ಹಾಗೂ ಮೈಸೂರು ವಿಶ್ವವಿದ್ಯಾನಿಲಯದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಸಹಯೋಗದಲ್ಲಿ ನಗರದಲ್ಲಿ ಜಿಲ್ಲೆಯ ಮಾಧ್ಯಮ ಪ್ರತಿನಿಧಿಗಳಿಗಾಗಿ ಹಮ್ಮಿಕೊಳ್ಳಲಾಗಿದ್ದ ಒಂದು ದಿನದ ವಾರ್ತಾಲಾಪ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

Advertisement

ಮಾಧ್ಯಮ ಸದಾ ವಸ್ತುನಿಷ್ಠವಾಗಿ ಕಾರ್ಯನಿರ್ವಹಿಸಬೇಕು. ಯಾವುದೇ ಪಕ್ಷಪಾತವಿಲ್ಲದೇ ಜನರಿಗೆ ನೈಜ ಸುದ್ದಿ ನೀಡುವಲ್ಲಿ ಶ್ರಮಿಸಬೇಕು. ನಾಲ್ಕನೇ ಅಂಗ ಎಂದು ಕರೆಸಿಕೊಳ್ಳುವ ಮಾಧ್ಯಮ ಹೆಚ್ಚಾಗಿ ಧನಾತ್ಮಕ ವಿಷಯಗಳ ಮೇಲೆ ಬೆಳಕು ಚೆಲ್ಲಬೇಕು ಎಂದು ತಿಳಿಸಿದರು.

ಯೋಜನೆ ಯಶಸ್ವಿಗೆ ಮಾಧ್ಯಮದ ಪಾತ್ರ ಮಹತ್ವ: ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಮಾತನಾಡಿ, ಸರ್ಕಾರ ರೂಪಿಸುವ ಯಾವುದೇ ಯೋಜನೆ ಯಶಸ್ವಿಯಾಗಬೇಕಾದರೆ, ಅದರಲ್ಲಿ ಮಾಧ್ಯಮದ ಪಾತ್ರ ಮಹತ್ವದಾಗಿರುತ್ತದೆ. ಹೀಗಾಗಿ ಮಾಧ್ಯಮಗಳು ಸಮಾಜದ ತಪ್ಪುಗಳನ್ನು ಎತ್ತಿತೋರಿಸುವುದರ ಜತೆಗೆ ಸಕಾರಾತ್ಮಕ ಸುದ್ದಿಗಳ ಮೇಲೂ ಗಮನಹರಿಸಬೇಕು. ಸರ್ಕಾರದ ಯೋಜನೆಗಳು ಮುಖ್ಯವಾಗಿ ಗ್ರಾಮೀಣ ಪ್ರದೇಶದ ಪ್ರತಿಯೊಬ್ಬ ಸಾಮಾನ್ಯನಿಗೂ ತಲುಪಿಸುವಲ್ಲಿ ಮಾಧ್ಯಮ ಕಾರ್ಯಪ್ರವೃತ್ತರಾಗಬೇಕು ಎಂದು ಸಲಹೆ ನೀಡಿದರು.

ಸಾಮಾನ್ಯರನ್ನು ತಲುಪಲು ಮಾಧ್ಯಮ ಅಗತ್ಯ: ಸ್ವತ್ಛ ಭಾರತ್‌ ಮತ್ತು ಆಯುಷ್ಮಾನ್‌ ಭಾರತ್‌ ಮಹತ್ವಾಕಾಂಕ್ಷಿ ಯೋಜನೆಗಳಾಗಿವೆ. ಇದರಿಂದ ದೊರೆಯುವ ಉಪಯೋಗ ಹಾಗೂ ಸೌಲಭ್ಯಗಳ ಬಗ್ಗೆ ಎಷ್ಟೋ ಜನರಿಗೆ ತಿಳಿದೇ ಇರುವುದಿಲ್ಲ. ಅಂತಹ ಸಾಮಾನ್ಯರನ್ನು ತಲುಪುವ ಕೆಲಸ ಮಾಧ್ಯಮದಿಂದ ಆಗಬೇಕು. ಸರ್ಕಾರದ ಯೋಜನೆಗಳು ಯಾವ ರೀತಿ ಉಪಕಾರಿ ಎಂಬ ಅಂಶವನ್ನು ಅಗತ್ಯ ಇರುವವರಿಗೆ ಅರ್ಥಮಾಡಿಸುವ ಗುರುತರ ಜವಾಬ್ದಾರಿ ಮಾಧ್ಯಮಗಳ ಮೇಲಿದೆ ಎಂದು ತಿಳಿಸಿದರು.

ಆಡಳಿತ- ಜನರ ನಡುವಿನ ಕೊಂಡಿ: ಪ್ರಾದೇಶಿಕ ಜನಸಂಪರ್ಕ ಕಾರ್ಯಾಲಯ ಹಾಗೂ ಪಿಐಬಿ ಹೆಚ್ಚುವರಿ ಮಹಾನಿರ್ದೇಶಕ ಎಂ. ನಾಗೇಂದ್ರಸ್ವಾಮಿ ಮಾತನಾಡಿ, ಸರ್ಕಾರದ ಯೋಜನೆಗಳು ಜನರನ್ನು ತಲುಪುವುದೇ ಮಾಧ್ಯಮಗಳ ಮೂಲಕ. ಅಷ್ಟರ ಮಟ್ಟಿಗೆ ಮಾಧ್ಯಮ ಆಡಳಿತ ವ್ಯವಸ್ಥೆ ಹಾಗೂ ಜನರ ನಡುವಿನ ಕೊಂಡಿಯಾಗಿದೆ. ಹೀಗಾಗಿ ಮಾಧ್ಯಮಗಳಲ್ಲಿ ಅಭಿವೃದ್ಧಿಪರ ವರದಿಗಾರಿಕೆಯು ಮತ್ತಷ್ಟು ಬಲಗೊಳ್ಳಬೇಕಿದೆ. ಇದು ಸಮಾಜದ ಬೆಳವಣಿಗೆಗೂ ಪೂರಕವಾಗಲಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಮೈಸೂರು ವಿವಿಯ ಪತ್ರಿಕೋದ್ಯಮ ವಿಭಾಗದ ಸಹ ಪ್ರಾಧ್ಯಾಪಕಿ ಡಾ.ಎಂ.ಎಸ್‌. ಸಪ್ನಾ ಮತ್ತಿತರರು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next