ಚಿತ್ರರಂಗಕ್ಕೆ ಈಗಾಗಲೇ ಎಲ್ಲಾ ಕ್ಷೇತ್ರಗಳಿಂದಲೂ ಆಗಮಿಸಿದ ವರ್ಗವಿದೆ. ಆ ಸಾಲಿಗೆ ಪ್ರೊಫೆಸರ್‌ವೊಬ್ಬರ ಹೊಸ ಆಗಮನವಾಗಿದೆ. ಅವರ ಹೆಸರು ಡಾ.ದೇವರಾಜ್. ಇದೇ ಮೊದಲ ಸಲ ಕಥೆ, ಚಿತ್ರಕಥೆ, ಸಾಹಿತ್ಯ, ಸಂಗೀತ ಮಾಡುವುದರ ಜೊತೆಗೆ ನಿರ್ದೇಶಕರೂ ಆಗಿದ್ದಾರೆ. ಚೊಚ್ಚಲ ನಿರ್ದೇಶನದ ಚಿತ್ರಕ್ಕೆ “ಸಪ್ಲಿಮೆಂಟರಿ’ ಎಂದು ಹೆಸರಿಡಲಾಗಿದೆ. ಈಗಾಗಲೇ ಸದ್ದಿಲ್ಲದೆ ಚಿತ್ರ ಮುಗಿಸಿರುವ ನಿರ್ದೇಶಕರು, ಇತ್ತೀಚೆಗೆ ಟೀಸರ್ ತೋರಿಸುವುದರ ಜೊತೆಗೆ ಹಾಡುಗಳನ್ನು ಬಿಡುಗಡೆ ಮಾಡಿದರು. ಅಂದು ಹಿರಿಯ ನಿರ್ದೇಶಕ ಭಗವಾನ್ ಆಡಿಯೋ ಸಿಡಿ ಬಿಡುಗಡೆ ಮಾಡಿ ಶುಭಹಾರೈಸಿದರು. ಕಿರುತೆರೆ ನಟರಾದ ವಿಜಯ್ ಸೂರ್ಯ, ಚಂದುಗೌಡ ಸಾಕ್ಷಿಯಾದರು.
ಮೊದಲು ಮಾತಿಗಿಳಿದ ನಿರ್ದೇಶಕರು, “ವ್ಯಕ್ತಿ ತನ್ನ ಬದುಕಿನಲ್ಲಿ ಫೇಲ್ ಆಗಿಬಿಟ್ಟರೆ, ಅವನಿಗೆ ಮತ್ತೂಂದು ಅವಕಾಶ ಇದ್ದೇ ಇರುತ್ತೆ. ಅದೇ “ಸಪ್ಲಿಮೆಂಟರಿ’. ಅಲ್ಲಿ ತನ್ನ ಬದುಕಿನ ಏರಿಳಿತ, ನೋವು-ನಲಿವು, ಕಷ್ಟ,ನಷ್ಟಗಳನ್ನೆಲ್ಲಾ ಸರಿಯಾಗಿಸುವ ಅವಕಾಶ ಇರುತ್ತೆ. ಪ್ರತಿಯೊಬ್ಬರ ಲೈಫಲ್ಲೂ ಸಪ್ಲಿಮೆಂಟರಿ ಎಂಬುದಿರುತ್ತೆ. ಆ ನಂತರ ಸರಿಯಾಗಿ ಆಲೋಚನೆ ಮಾಡಿದರೆ ಮಾತ್ರ ಅಲ್ಲಿ ಪಾಸ್ ಆಗಲು ಸಾಧ್ಯವಿದೆ. ಇಲ್ಲಿ ಗುರು ಮತ್ತು ಶಿಷ್ಯನ ಸಂಬಂಧ ಇಟ್ಟುಕೊಂಡು ಕಥೆ ಹೆಣೆದಿದ್ದೇನೆ. ಇದು ಈಗಿನ ಯುವಕರಿಗೆ ಹೇಳಿಮಾಡಿಸಿದ ಕಥೆ. ಈಗಿನ ವಾಟ್ಸಾಪ್, ಫೇಸ್‌ಬುಕ್‌ನಲ್ಲೇ ಕಾಲ ಕಳೆಯುವ ಯುವ ಸಮೂಹಕ್ಕೊಂದು ಸಂದೇಶವಿದೆ. ಹಾಗಂತ ನೀತಿ ಪಾಠವಿಲ್ಲ. ಮನರಂಜನೆ ಜೊತೆಗೊಂದು ಸಂದೇಶವಿದೆ. ಚಿತ್ರದಲ್ಲಿ ಆರು ಹಾಡುಗಳಿವೆ. ಆ ಪೈಕಿ ನಾಲ್ಕು ಹಾಡುಗಳಿಗೆ ನಾನು ಸಂಗೀತ ನೀಡಿದ್ದೇನೆ. ನಿರ್ಮಾಪಕ ಮಹೇಂದ್ರ ಮುನ್ನೋತ್ ಅವರ ಸಹಕಾರ ಇರದೇ ಇದ್ದರೆ, ಈ ಚಿತ್ರ ಇಲ್ಲಿಯವರೆಗೆ ಬರುತ್ತಿರಲಿಲ್ಲ’ ಎಂದು ಹೇಳಿಕೊಂಡರು ದೇವರಾಜ್.
ನಿರ್ಮಾಪಕ ಮಹೇಂದ್ರ ಮುನ್ನೋತ್ ಅವರಿಗೆ ಒಳ್ಳೆಯ ತಂಡದ ಜೊತೆ ಕೆಲಸ ಮಾಡಿದ ತೃಪ್ತಿ ಇದೆಯಂತೆ. “ಸಿನಿಮಾ ಮನರಂಜನೆ ಕ್ಷೇತ್ರ. ಇದು ಅದರೊಂದಿಗೆ ಸಾಗುವ ಚಿತ್ರವಾದರೂ, ಇಲ್ಲೊಂದು ಪವರ್‌ಫುಲ್ ಆಗಿರುವ ಸಂದೇಶವಿದೆ. ಸಾಮಾಜಿಕ ಕಳಕಳಿ ಇಟ್ಟುಕೊಂಡು ಮಾಡಿರುವ ಚಿತ್ರವಿದು. ಅನುತ್ತೀರ್ಣಗೊಂಡ ವಿದ್ಯಾರ್ಥಿಗಳಿಗೆ ಧೈರ್ಯ ತುಂಬುವಂತಹ ಅನೇಕ ಅಂಶಗಳು ಇಲ್ಲಿವೆ. ಜೊತೆಗೆ ಪೋಷಕರಿಗೂ ಅರ್ಥವಾಗಿಸುವ ಕಥೆ ಇಲ್ಲಿದೆ. ನನ್ನ ಚಿತ್ರರಂಗದ ಜೀವನದ ಸಪ್ಲಿಮೆಂಟರಿ ಇದು’ ಎಂಬುದು ಮಹೇಂದ್ರ ಮುನ್ನೋತ್ ಮಾತು.
ನಾಯಕ ಖುಷ್ ಅವರಿಗೆ ಇದು ಮೊದಲ ಚಿತ್ರ. ಅವರಿಗಿಲ್ಲಿ ಸಾಕಷ್ಟು ಅಂಶಗಳನ್ನು ತಿಳಿದುಕೊಳ್ಳಲು ಸಾಧ್ಯವಾಗಿದೆಯಂತೆ. “ಸಪ್ಲಿಮೆಂಟರಿ’ ಅಂದರೆ ಎಕ್ಸಾಂ ಕುರಿತು ಅಲ್ಲ. ಬದುಕಿನ ಸಪ್ಲಿಮೆಂಟರಿ ವಿಷಯವೂ ಇಲ್ಲಿದೆ. ಎಕ್ಸಾಂ ಫೇಲ್ ಆದವರು, ಲವ್ವಲ್ಲಿ ಫೇಲ್ ಆದವರು, ಬಿಜಿನೆಸ್‌ನಲ್ಲಿ ಫೇಲ್ ಆದವರು ಸೇರಿದಂತೆ ಬದುಕಿನ ಅನೇಕ ಘಟ್ಟಗಳಲ್ಲಿ ಫೇಲ್ ಆದವರ ಕುರಿತ ವಿಷಯವೂ ಇಲ್ಲಿದೆ’ ಎಂದರು ಅವರು.
ನಾಯಕಿ ಶ್ರದ್ಧಾಭಟ್ ಅವರಿಗೆ ಇದು ಎರಡನೇ ಚಿತ್ರವಂತೆ. ಅವರಿಗಿಲ್ಲಿ ಎರಡು ಶೇಡ್ ಇರುವ ಪಾತ್ರ ಸಿಕ್ಕಿದೆಯಂತೆ. ಸಂಗೀತ ನಿರ್ದೇಶಕ ರಾಘವ್ ಸುಭಾಷ್ ಅವರು ಎರಡು ಹಾಡುಗಳಿಗೆ ಸಂಗೀತ ನೀಡಿದ ಬಗ್ಗೆ ಹೇಳಿಕೊಂಡರು. ಅಂದು ಭಗವಾನ್, ವಿಜಯ್ ಸೂರ್ಯ, ಚಂದುಗೌಡ ಸೇರಿದಂತೆ ಇತರರು ಚಿತ್ರಕ್ಕೆ ಶುಭಕೋರಿದರು.