Advertisement

ಸಾಂಬಾರ್‌ ಸೊಪ್ಪಿನ ಸೂಪರ್‌ ರುಚಿ

01:01 PM Aug 30, 2017 | |

ಮಳೆಗಾಲದಲ್ಲಿ ಮಲೆನಾಡಿನ ಹಳ್ಳಿಗಳ ಮನೆಗಳಿಗೆ ಹೋದರೆ, ಸಾಂಬಾರ್‌ ಸೊಪ್ಪಿನ ವೈವಿಧ್ಯಗಳ ಸವಿಯನ್ನು ಉಣ್ಣಬಹುದು. ಜ್ವರ, ನೆಗಡಿಯಂಥ ಸಮಸ್ಯೆಗಳಿದ್ದಾಗ ಔಷಧದ ರೂಪದಲ್ಲೂ ಇದು ಬಳಕೆಯಾಗುತ್ತದೆ. ಈ ಸೊಪ್ಪಿನಿಂದ ತಯಾರಿಸುವ ಆರೋಗ್ಯಕರ ಮತ್ತು ರುಚಿಕರ ಪದಾರ್ಥಗಳ ಬಗೆಗಳು ಇಲ್ಲಿವೆ…

Advertisement

1. ಸಾಂಬಾರ್‌ ಸೊಪ್ಪಿನ ಅನ್ನ
 ಬೇಕಾಗುವ ಸಾಮಗ್ರಿ: ಸಣ್ಣಗೆ ಹೆಚ್ಚಿರುವ ಸಾಂಬಾರ್‌ ಸೊಪ್ಪು, ಕತ್ತರಿಸಿದ ಈರುಳ್ಳಿ ಕಾಲು ಕಪ್‌, ಒಗ್ಗರಣೆಗೆ- ಸ್ವಲ್ಪ ಎಣ್ಣೆ, ಸಾಸಿವೆ, ಉದ್ದಿನಬೇಳೆ, ಅರಿಶಿನ ಪುಡಿ, ರುಚಿಗೆ ಉಪ್ಪು ಮತ್ತು ಹುಳಿ, ಅನ್ನ ಮೂರು ಕಪ್‌, ಹಸಿಮೆಣಸು ಸಣ್ಣಗೆ ಕೊಚ್ಚಿದ್ದು ಒಂದು.

 ಮಾಡುವ ವಿಧಾನ: ಒಗ್ಗರಣೆ ತಯಾರಿಸಿಕೊಂಡು ಸಾಂಬಾರ್‌ ಸೊಪ್ಪು, ಈರುಳ್ಳಿ, ಹಸಿಮೆಣಸು ಹಾಕಿ ಒಂದೆರಡು ಸುತ್ತು ಹುರಿಯಿರಿ. ನಂತರ ಅನ್ನ, ಉಪ್ಪು, ಹುಳಿ ಸೇರಿಸಿ ಚೆನ್ನಾಗಿ ಬಿಸಿಯಾದ ಮೇಲೆ ಇಳಿಸಿರಿ.
 
2. ಸೊಪ್ಪಿನ ಬೋಂಡ
ಬೇಕಾಗುವ ಸಾಮಗ್ರಿ: ಸಣ್ಣಗೆ ಕತ್ತರಿಸಿದ ಸಾಂಬಾರ್‌ ಸೊಪ್ಪು- 1 ಕಪ್‌, ಸಣ್ಣಗೆ ಕೊಚ್ಚಿದ ಈರುಳ್ಳಿ- 1 ಕಪ್‌, ಕಡ್ಲೆ ಹಿಟ್ಟು- 1 ಕಪ್‌, ಅಕ್ಕಿ ಹಿಟ್ಟು- 2 ಚಮಚ, ಮೊಸರು- ಅರ್ಧ ಕಪ್‌, ಖಾರಕ್ಕೆ ಹಸಿಮೆಣಸು ಅಥವಾ ಕೆಂಪುಮೆಣಸಿನ ಪುಡಿ, ರುಚಿಗೆ ಉಪ್ಪು, ಕರಿಯಲು ಎಣ್ಣೆ.

ಮಾಡುವ ವಿಧಾನ: ಕೊಚ್ಚಿಕೊಂಡ ಪದಾರ್ಥವನ್ನು ಕಡ್ಲೆ ಹಿಟ್ಟಿನೊಂದಿಗೆ ಬೆರೆಸಿ, ಅಕ್ಕಿ ಹಿಟ್ಟನ್ನು ಸೇರಿಸಿ, ಉಪ್ಪು ಮೊಸರು ಹಾಕಿ ಬೇಕಾದಷ್ಟು ನೀರು ಸೇರಿಸಿ, ಎರಡು ಚಮಚ ಕಾದ ಎಣ್ಣೆಯನ್ನು ಈ ಹಿಟ್ಟಿಗೆ ಬೆರೆಸಿ ಕಾದ ಎಣ್ಣೆಯಲ್ಲಿ ಹೊಂಬಣ್ಣ ಬರುವವರೆಗೆ ಕರಿದು, ಬಿಸಿ ಇರುವಾಗಲೇ ಟೊಮೇಟೊ ಸಾಸ್‌ನೊಂದಿಗೆ ಸವಿಯಿರಿ. 
 
3. ತಂಬುಳಿ
ಬೇಕಾಗುವ ಸಾಮಗ್ರಿ: ಸಣ್ಣಗೆ ಹೆಚ್ಚಿದ ಸಾಂಬಾರ್‌ ಸೊಪ್ಪು- ಕಾಲು ಕಪ್‌, ಕೊಚ್ಚಿದ ಈರುಳ್ಳಿ- ಅರ್ಧ ಕಪ್‌, ಸಣ್ಣಗೆ ಕತ್ತರಿಸಿದ ಹಸಿಮೆಣಸು- 2, ಒಗ್ಗರಣೆಗೆ ಎಣ್ಣೆ, ಸಾಸಿವೆ, ಚಿಟಿಕೆ ಇಂಗು, ಕಡೆದ ಮಜ್ಜಿಗೆ ಅರ್ಧ ಲೀಟರ್‌, ರುಚಿಗೆ ಉಪ್ಪು, ಬೆಲ್ಲ- 1 ಚಮಚ. (ಸಿಹಿ ಜಾಸ್ತಿ ಬೇಕಿದ್ದರೆ ಬೆಲ್ಲ ಹಾಕಿ)

ಮಾಡುವ ವಿಧಾನ: ಒಗ್ಗರಣೆಗೆ ಎಣ್ಣೆ ಕಾಯಿಸಿಕೊಂಡು, ಸಾಸಿವೆ ಇಂಗು ಹಾಕಿ ನಂತರ ಕೊಚ್ಚಿಕೊಂಡ ಈರುಳ್ಳಿ, ಸಾಂಬಾರ್‌ ಸೊಪ್ಪು, ಹಸಿಮೆಣಸು ಹಾಕಿ ಎರಡು ಸುತ್ತು ಹುರಿದು ಅರ್ಧ ಕಪ್‌ ನೀರು ಹಾಕಿ ಉಪ್ಪು, ಬೆಲ್ಲ ಸೇರಿಸಿ ಕುದಿಸಿರಿ. ನಂತರ ಅದಕ್ಕೆ ಕಡೆದ ಮಜ್ಜಿಗೆ ಸೇರಿಸಿ. (ಮಜ್ಜಿಗೆ ಹಾಕಿದ ಮೇಲೆ ಮತ್ತೆ ಬಿಸಿ ಮಾಡಬಾರದು) 

Advertisement

4. ಸಾಂಬಾರ್‌ ಸೊಪ್ಪಿನ ಸಾಸಿವೆ
ಬೇಕಾಗುವ ಸಾಮಗ್ರಿ: ಸಣ್ಣಗೆ ಹೆಚ್ಚಿದ ಸಾಂಬಾರ್‌ ಸೊಪ್ಪು- ಅರ್ಧ ಕಪ್‌, ತೆಂಗಿನ ತುರಿ- ಅರ್ಧ ಕಪ್‌, ಸಾಸಿವೆ- ಅರ್ಧ ಚಮಚ, ಅರಿಶಿನ ಪುಡಿ- ಅರ್ಧ ಚಮಚ, ಹಸಿಮೆಣಸಿನ ಕಾಯಿ- 2, ಅರ್ಧ ಲಿಂಬೆ ಹಣ್ಣು, ಬೆಲ್ಲ ಅಥವಾ ಸಕ್ಕರೆ- 2 ಚಮಚ, ರುಚಿಗೆ ಉಪ್ಪು, ಒಗ್ಗರಣೆಗೆ ಎಣ್ಣೆ, ಸಾಸಿವೆ, ಚಿಟಿಕೆ ಅರಿಶಿನ ಪುಡಿ, ಉದ್ದಿಬೇಳೆ ಸ್ವಲ್ಪ.

ಮಾಡುವ ಧಾನ: ಒಗ್ಗರಣೆಗೆ ಎಣ್ಣೆ ಬಿಸಿ ಮಾಡಿಕೊಂಡು, ಕೊಚ್ಚಿಕೊಂಡ ಸೊಪ್ಪು ಹಾಕಿ ಕಾಲು ಕಪ್‌ ನೀರು ಸೇರಿಸಿ ಉಪ್ಪು, ಹುಳಿ, ಬೆಲ್ಲ ಹಾಕಿ ಬೇಯಿಸಿರಿ. ನಂತರ ತೆಂಗಿನ ತುರಿ, ಅರಿಶಿನ ಪುಡಿ, ಹಸಿಮೆಣಸು, ಸಾಸಿವೆ ಹಾಕಿ ನುಣ್ಣಗೆ ರುಬ್ಬಿಕೊಂಡು ಬೇಯಿಸಿದ ಸೊಪ್ಪಿಗೆ ಹಾಕಿ ಸ್ವಲ್ಪ ನೀರು ಸೇರಿಸಿ ಚೆನ್ನಾಗಿ ಕುದಿಸಿ. (ತಣ್ಣಗಾದ ಮೇಲೆ ಬೇಕಿದ್ದರೆ ಮೊಸರು ಸೇರಿಸಬಹುದು)

ಚಿತ್ರ-ಬರಹ: ಅರ್ಚನಾ ಬೊಮ್ನಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next