ಹೈದರಾಬಾದ್: ಅಂಕಪಟ್ಟಿ ಯಲ್ಲಿ ತೀರಾ ಕೆಳಮಟ್ಟದಲ್ಲಿರುವ ಕೋಲ್ಕತಾ ನೈಟ್‌ರೈಡರ್ ಮತ್ತು ಸನ್‌ರೈಸರ್ ಹೈದರಾಬಾದ್ ತಂಡಗಳು ಗುರುವಾರ ದ್ವಿತೀಯ ಸುತ್ತಿನ ಹೋರಾಟಕ್ಕೆ ಇಳಿಯಲಿವೆ. ಎರಡೂ ತಂಡಗಳು ಈವರೆಗೆ ಕೇವಲ 3 ಪಂದ್ಯಗಳನ್ನು ಜಯಿಸಿವೆ.
ಪ್ಲೇ ಆಫ್ ಹಾದಿ ಹಿಡಿಯಲು ಈ ಸಾಧನೆ ಏನೂ ಸಾಲದೆಂಬುದು ಸದ್ಯದ ಲೆಕ್ಕಾಚಾರ.
ಕೋಲ್ಕತಾದಲ್ಲಿ ನಡೆದ ಮೊದಲ ಪಂದ್ಯದಲ್ಲಿ ಹೈದರಾಬಾದ್ ಬೃಹತ್ ಮೊತ್ತ ಪೇರಿಸಿ ಕೆಕೆಆರ್‌ಗೆ 23 ರನ್ನುಗಳ ಸೋಲುಣಿಸಲು ಯಶಸ್ವಿಯಾಗಿತ್ತು. ಆರಂಭಕಾರ ಹ್ಯಾರಿ ಬ್ರೂಕ್ ಅವರ ಶತಕ ಸಾಹಸದಿಂದ (ಅಜೇಯ 100) ಹೈದರಾಬಾದ್ 4 ವಿಕೆಟಿಗೆ 228 ರನ್ ರಾಶಿ ಹಾಕಿದರೆ, ಕೆಕೆಆರ್ 7ಕ್ಕೆ 205ರ ತನಕ ಮುನ್ನುಗ್ಗಿ ಬಂದು ಶರಣಾಗಿತ್ತು.
ದುರಂತವೆಂದರೆ, ಅಂದಿನ ಪಂದ್ಯ ದಲ್ಲಿ ಶತಕ ಬಾರಿಸಿದ್ದ ಹ್ಯಾರಿ ಬ್ರೂಕ್ ಅನಂತರ ಬ್ಯಾಟಿಂಗ್ ವೈಫಲ್ಯ ಕಾಣುತ್ತ ಹೋದರು. ಅವರನ್ನು ಮಧ್ಯಮ ಕ್ರಮಾಂಕದಲ್ಲಿ ಆಡಿಸುವ ಪ್ರಯೋಗ ವನ್ನೂ ಮಾಡಲಾಯಿತು. ಇದು ಕೂಡ ಕ್ಲಿಕ್ ಆಗಲಿಲ್ಲ. ಇವರ ಸ್ಥಾನದಲ್ಲಿ ಇನ್ನಿಂಗ್ಸ್ ಆರಂಭಿಸಿದ ಮಾಯಾಂಕ್ ಅಗರ್ವಾಲ್ ಕೂಡ ಅವಕಾಶವನ್ನು ಬಳಸಿಕೊಳ್ಳಲಿಲ್ಲ. ಆದರೆ ಡೆಲ್ಲಿ ಎದುರಿನ ಕೊನೆಯ ಪಂದ್ಯದಲ್ಲಿ ಅಭಿಷೇಕ್ ಶರ್ಮ 67 ರನ್ ಬಾರಿಸಿ ಗಮನ ಸೆಳೆದಿದ್ದಾರೆ.
ಡೆಲ್ಲಿ ವಿರುದ್ಧ 197 ರನ್ ಪೇರಿಸಿದ ಹೈದರಾಬಾದ್ 9 ರನ್ನುಗಳ ರೋಚಕ ಗೆಲುವು ಸಾಧಿಸಿತ್ತು. ಈ ದೊಡ್ಡ ಮೊತ್ತದ ಮತ್ತೋರ್ವ ಪಾಲುದಾರನೆಂದರೆ ಹೆನ್ರಿಚ್ ಕ್ಲಾಸೆನ್ (ಅಜೇಯ 53). ಉಳಿದಂತೆ ನಾಯಕ ಐಡನ್ ಮಾರ್ಕ್ ರಮ್, ರಾಹುಲ್ ತ್ರಿಪಾಠಿ ಕೂಡ ವೈಫಲ್ಯ ಕಾಣುತ್ತಿದ್ದಾರೆ. ಆಲ್‌ರೌಂಡರ್ ವಾಷಿಂಗ್ಟನ್ ಸುಂದರ್ ಗಾಯಾಳಾಗಿ ಕೂಟದಿಂದ ಬೇರ್ಪಟ್ಟಿದ್ದಾರೆ. ಒಟ್ಟಾರೆ, ಬ್ಯಾಟಿಂಗ್ ವಿಭಾಗದಲ್ಲಿ ಸುಧಾರಣೆ ಆಗದ ಹೊರತು ಹೈದರಾಬಾದ್‌ಗೆ ಮೇಲುಗೈ ಅಸಾಧ್ಯ.
ಅಭಿಷೇಕ್ ಶರ್ಮ ಬೌಲಿಂಗ್ ನಲ್ಲೂ ನಿಯಂತ್ರಣ ಸಾಧಿಸುತ್ತಿರುವುದು ವಿಶೇಷ. ಟಿ. ನಟರಾಜನ್, ಭುವ ನೇಶ್ವರ್ ಕುಮಾರ್, ಮಾಯಾಂಕ್ ಮಾರ್ಕಂಡೆ ದಾಳಿಯೂ ಓಕೆ. ಆದರೆ ಉಮ್ರಾನ್ ಮಲಿಕ್ ವೈಫಲ್ಯ ತಂಡದ ಬೌಲಿಂಗ್ ವಿಭಾಗಕ್ಕೊಂದು ಹಿನ್ನಡೆ. ದುಬಾರಿ ಆಗುತ್ತಿರುವ ಅವರು 7 ಪಂದ್ಯಗಳಿಂದ ಕೆಡವಿದ್ದು ಐದೇ ವಿಕೆಟ್. ಹೀಗಾಗಿ ಡೆಲ್ಲಿ ವಿರುದ್ಧ ತಂಡದಿಂದ ಬೇರ್ಪಡಬೇಕಾಯಿತು.
ಕೋಲ್ಕತಾ ಸಮಸ್ಯೆಗಳು…
ಇನ್ನೊಂದೆಡೆ ಕೋಲ್ಕತಾ ತಂಡ ತವರಲ್ಲೇ ಗುಜರಾತ್‌ಗೆ 7 ವಿಕೆಟ್‌ಗಳಿಂದ ಸೋತ ಆಘಾತದಲ್ಲಿದೆ. 9 ಪಂದ್ಯಗಳಲ್ಲಿ 3 ಸೋಲು ಶುಭ ಲಕ್ಷಣವೇನೂ ಅಲ್ಲ.
ಆರಂಭಿಕರಾದ ರೆಹಮಾನುಲ್ಲ ಗುರ್ಬಜ್ ಮತ್ತ ಜೇಸನ್ ರಾಯ್ ಉತ್ತಮ ಫಾರ್ಮ್ನಲ್ಲಿದ್ದಾರೆ ನಿಜ, ಆದರೆ ಇಬ್ಬರನ್ನೂ ಒಟ್ಟಿಗೇ ಆಡಿಸುವ ಸ್ಥಿತಿಯಲ್ಲಿಲ್ಲ. ಆಲ್‌ರೌಂಡರ್‌ಗಳಾದ ಆ್ಯಂಡ್ರೆ ರಸೆಲ್ ಮತ್ತು ಶಾರ್ದೂಲ್ ಠಾಕೂರ್ ಓವರಿಗೆ ಹತ್ತಕ್ಕೂ ಹೆಚ್ಚು ರನ್ ಬಿಟ್ಟುಕೊಡುತ್ತಿದ್ದಾರೆ.