ಬೆಂಗಳೂರು: ಬಾನಂಗಳ ಭಾನುವಾರ ನೆರಳು ಬೆಳಕಿನಾಟಕ್ಕೆ ಸಾಕ್ಷಿಯಾಯಿತು. ಅಪರೂಪಕ್ಕೆ ಸಂಭವಿಸುವ ಕಂಕಣ ಸೂರ್ಯಗ್ರಹಣ ನಭೋಮಂಡಲ ದಲ್ಲಿ ಕೆಲಕಾಲ ಚಮತ್ಕಾರ ಸೃಷ್ಟಿಸಿತು. ಆದರೆ, ಬೆಂಗಳೂರಿನಲ್ಲಿ ಪಾರ್ಶ್ವ ಸೂರ್ಯಗ್ರಹಣ ಶೇ. 37ರಷ್ಟು ಮಾತ್ರ ಗೋಚರಿಸಿತು. ಬೆಳಗ್ಗೆ 10.12ಕ್ಕೆ ಕಂಕಣ ಸೂರ್ಯಗ್ರಹಣ ಆರಂಭವಾಯಿತು.
11.47ರ ವೇಳೆಗೆ ಗ್ರಹಣ ಗರಿಷ್ಠ ಮಟ್ಟ ತಲುಪಿತು. ಮಧ್ಯಾಹ್ನ 1:30ರ ಸುಮಾರಿಗೆ ಗ್ರಹಣ ಮುಕ್ತಾಯವಾಯಿತು. ಇನ್ನು ಖಗೋಳದಲ್ಲಿ ನಡೆಯುವ ಅಪರೂಪದ ಸೂರ್ಯ ಚಮತ್ಕಾರ ತಿಳಿಯಲು ನೆಹರು ತಾರಾಲಯ ಹಲವು ರೀತಿಯಲ್ಲಿ ಸಜ್ಜಾಗಿತ್ತು. ತಾರಾಲಯದಲ್ಲಿ ದೇಶದ ಬೇರೆ ಬೇರೆ ಭಾಗದ ಗ್ರಹಣ ದೃಶ್ಯಗಳ ನೇರಪ್ರಸಾರ ನಡೆಯಿತು. ನಾಲ್ವರು ವಿದ್ಯಾರ್ಥಿಗಳು ಗ್ರಹಣ ವೇಳೆಯಲ್ಲಿ ವಾತಾವರಣದಲ್ಲಿ ನಡೆಯುವ ವ್ಯತ್ಯಾಸಗಳನ್ನು ಅಭ್ಯಾಸ ಮಾಡಿದರು ಎಂದು ಜವಾಹರಲಾಲ್ ನೆಹರು ತಾರಾಲಯದ ನಿರ್ದೇಶಕ ಪ್ರಮೋದ ಗಲಗಲಿ ಹೇಳಿದ್ದಾರೆ.
ಉತ್ತರದ ಕೆಲವು ಪ್ರದೇಶದಲ್ಲಿ ಮಾತ್ರ ಕಂಕಣ ಸೂರ್ಯಗ್ರಹಣ ವೀಕ್ಷಣೆ ಸಾಧ್ಯವಾಯಿತು. ಬೆಂಗಳೂರು ಸೇರಿದಂತೆ ಇನ್ನಿತರ ಕಡೆ ಭಾಗಶಃ ಗೋಚರವಾಯಿತು ಎಂದ ಅವರು, ಕೋವಿಡ್-19 ಹಿನ್ನೆಲೆಯಲ್ಲಿ ತಾರಾಲಯದಲ್ಲಿ ಗ್ರಹಣ ವೀಕ್ಷಣೆಗೆ ಸಾರ್ವಜನಿಕರಿಗೆ ಅವಕಾಶ ಇರಲಿಲ್ಲ. ಆದರೆ, ವೆಬ್ ಸೈಟ್ ಮೂಲಕ ನೇರ ಪ್ರಸಾರ ಮಾಡಲಾಯಿತು. ಸಾವಿರಾರು ಮಂದಿ ಸೂರ್ಯಗ್ರಹಣ ಕಣ್ತುಂಬಿಕೊಂಡರು ಎಂದರು.
ಲಾಲ್‌ಬಾಗ್‌ನಲ್ಲಿ ವೀಕ್ಷಣೆ: ಕರ್ನಾಟಕ ಜ್ಞಾನ ವಿಜ್ಞಾನ ಪರಿಷತ್ತು ಲಾಲ್ ಬಾಗ್ ನ ಬಂಡೆ ಪ್ರದೇಶದಲ್ಲಿ ಗ್ರಹಣ ವೀಕ್ಷಣೆಯ ವ್ಯವಸ್ಥೆ ಮಾಡಿತ್ತು. ಸಾಮಾಜಿಕ ಅಂತರ ಕಾಯ್ದು ಕೊಂಡು ಖಗೋಳ ವಿಜ್ಞಾನ ಆಸಕ್ತರು ವಿಶೇಷ ಕನ್ನಡಕ ಧರಿಸಿ ಕಂಕಣ ಸೂರ್ಯನ ಕಣ್ಣಾಮುಚ್ಚಾಲೆ ಆಟವನ್ನು ಕಣ್ತುಂಬಿಕೊಂಡರು. ಖಗೋಳ ವಿಜ್ಞಾನಿ ಪ್ರಜ್ವಲ್ ಶಾಸ್ತ್ರಿ, ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಖಜಾಂಚಿ ಇ. ಬಸವರಾಜು, ಕರ್ನಾಟಕ ನಡುಗೆದಾರರ ಒಕ್ಕೂಟದ ಅಧ್ಯಕ್ಷ ಸಿ.ಕೆ. ರವಿಚಂದ್ರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ಗ್ರಹಣಕ್ಕೆ ಸಂಬಂಧಿಸಿದಂತೆ ಉಪನ್ಯಾಸ ಕೂಡ ನಡೆಯಿತು. ಶಿಕ್ಷಣ ತಜ್ಞ ಡಾ.ಎಚ್. ನರಸಿಂಹಯ್ಯ ಅವರ ಜನ್ಮ ಶತಮಾನೋತ್ಸವ ಅಂಗವಾಗಿ ಅವರಿಗೆ ಪ್ರಿಯವಾದ ಉಪ್ಪಿಟ್ಟು ಮತ್ತು ಮಂಡಕ್ಕಿಯನ್ನು ವ್ಯವಸ್ಥೆ ಮಾಡಲಾಗಿತ್ತು.
ದೇವಸ್ಥಾನಗಳಲ್ಲಿ ವಿಶೇಷ ಪೂಜೆ: ಕಂಕಣ ಸೂರ್ಯಗ್ರಹಣದ ಹಿನ್ನಲೆಯಲ್ಲಿ ಐತಿಹಾಸಿಕ ಪ್ರಸಿದ್ಧ ಕಾಡುಮಲ್ಲೇಶ್ವರ,ದೊಡ್ಡಗಣಪತಿ ದೇವಸ್ಥಾನ, ಗವಿಗಂಗಾಧರೇಶ್ವರ ದೇವಸ್ಥಾನ ಸೇರಿತೆ ಹಲವು ದೇವಾಲಯಗಳಲ್ಲಿ ಭಾನುವಾರ ಬೆಳಗ್ಗೆ 7 ಗಂಟೆಯಿಂ ದ 9 ಗಂಟೆ ವರೆಗೆ ವಿಶೇಷ ಪೂಜೆ ಜರುಗಿದವು. ಗ್ರಹಣ ಮುಗಿದ ಬಳಿಕ ಬಹುತೇಕ ದೇವಾಲಯಗಳಲ್ಲಿ ಶುದ್ಧೀಕರಣ ಕಾರ್ಯ ನಡೆಯಿತು. ತದನಂತರ ದೇವರಿಗೆ ವಿವಿಧ ರೀತಿಯ ಪೂಜೆ ನಡೆದವು.
ಬಸವನಗುಡಿಯ ದೊಡ್ಡಗಣಪತಿ ದೇವಾಲದಲ್ಲಿ ಗ್ರಹಣ ಬಳಿಕ ಶಾಂತಿ ಹೋಮ ಸೇರಿದಂತೆ ಇನ್ನಿತರ ಪೂಜಾ ಕಾರ್ಯಗಳು ಸಾಗಿದವು. ಅದೇ ರೀತಿ, ಗವಿಗಂಗಾಧರೇಶ್ವರ ದೇವಾಲಯದಲ್ಲಿ ಗ್ರಹಣದ ಮೊದಲು ನವಗ್ರಹ ಹೋಮ ನಡೆಯಿತು. ಮಧ್ಯಾಹ್ನ ದೇವಾಲಯದ ಶುದ್ಧೀಕರಣ ಕಾರ್ಯ ನಡೆದ ಬಳಿಕ ಭಕ್ತರಿಗೆ ದರ್ಷನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಮಾಸ್ಕ್ ಧರಿಸಿ ಹಾಗೂ ಸಾಮಾಜಿಕ ಅಂತರ ಕಾಯ್ದು ಕೊಂಡು ಭಕ್ತರು ದೇವರ ದರ್ಶನ ಪಡೆದರು.