Advertisement

ರವಿವಾರದ ಲಾಕ್‌ಡೌನ್‌: ದಕ್ಷಿಣ ಕನ್ನಡ ಜಿಲ್ಲೆ ಸಂಪೂರ್ಣ ಸ್ತಬ್ಧ

07:06 AM May 25, 2020 | mahesh |

ಮಂಗಳೂರು: ರವಿವಾರದ ಸಂಪೂರ್ಣ ಲಾಕ್‌ಡೌನ್‌ ಆದೇಶಕ್ಕೆ ದ.ಕ. ಮತ್ತು ಉಡುಪಿ ಜಿಲ್ಲೆಯ ಜನತೆ ವ್ಯಾಪಕವಾಗಿ ಸ್ಪಂದಿಸಿದ್ದು ಬಹುತೇಕ ಎಲ್ಲೆಡೆ ಅಂಗಡಿ ಮುಂಗಟ್ಟುಗಳನ್ನು ಬಂದ್‌ ಮಾಡಲಾಗಿತ್ತು. ಮಂಗಳೂರು ಮಹಾನಗರವೂ ಸೇರಿದಂತೆ ಉಭಯ ಜಿಲ್ಲೆಯಾದ್ಯಂತ ಜನ, ವಾಹನ ಸಂಚಾರ ತೀರಾ ವಿರಳವಾಗಿತ್ತು.

Advertisement

ಬಿಗಿ ತಪಾಸಣೆ
ರವಿವಾರ ಹೆದ್ದಾರಿ ಸಹಿತವಾಗಿ ವಿವಿಧೆಡೆ ಪೊಲೀಸರು ಬಿಗಿ ತಪಾಸಣೆ ನಡೆಸಿದರು. ಸ್ಥಳೀಯ ಓಡಾಟಕ್ಕೆಂದು ತೆರಳಿದ್ದ ಕೆಲವು ಮಂದಿಗೆ ಎಚ್ಚರಿಕೆ ನೀಡಿ ವಾಪಸು ಕಳುಹಿಸಿದರು. ನಗರದಲ್ಲಿ ಮೆಡಿಕಲ್‌ ಶಾಪ್‌, ಪೆಟ್ರೋಲ್‌ ಪಂಪ್‌ ಹೊರತುಪಡಿಸಿದರೆ ಬೆರಳೆಣಿಕೆಯ ಹೊಟೇಲ್‌ಗ‌ಳು, ಹಾಲಿನ ಸ್ಟಾಲ್‌ಗ‌ಳು ಮಾತ್ರ ತೆರೆದಿದ್ದವು. ದಿನಸಿ, ತರಕಾರಿ ಅಂಗಡಿಗಳು ಕೂಡ ಮುಚ್ಚಿದ್ದವು. ಕೆಲವು ಹೊಟೇಲ್‌ಗ‌ಳಲ್ಲಿ ಪಾರ್ಸೆಲ್‌ ವ್ಯವಸ್ಥೆ ಇತ್ತು. ನಗರದ ಕೆಲವೆಡೆ ಪೊಲೀಸರು ಬ್ಯಾರಿಕೇಡ್‌ ಹಾಕಿ ಸಂಚಾರ ನಿರ್ಬಂಧಿಸಿದ್ದರು. ಅನುಮತಿ ಪಡೆದು ಮದುವೆ ಸಮಾರಂಭ ಅಥವಾ ಇತರ ತುರ್ತು ಕೆಲಸಗಳಿಗೆ ಹೋಗುವವರಿಗೆ ಮಾತ್ರ ಅವಕಾಶ ನೀಡಲಾಯಿತು.

“ಬಹುತೇಕ ಎಲ್ಲ ಕಡೆ ಅಂಗಡಿ ಮುಂಗಟ್ಟು
ಗಳನ್ನು ಸ್ವಯಂಪ್ರೇರಿತವಾಗಿ ಜನ ಮುಚ್ಚಿದ್ದರು. ಯಾವುದೇ ಚೆಕ್‌ಪೋಸ್ಟ್‌ನಲ್ಲಿಯೂ ತುರ್ತು ಆವಶ್ಯಕತೆ ಹೊರತುಪಡಿಸಿ ಇತರೆ ಕಾರಣಗಳಿಗೆ ಸಂಚಾರಕ್ಕೆ ಅವಕಾಶ ನೀಡಿಲ್ಲ’ ಎಂದು ಎಸ್‌ಪಿ ಲಕ್ಷ್ಮೀಪ್ರಸಾದ್‌ ತಿಳಿಸಿದ್ದಾರೆ.

40 ಜೋಡಿಗಳ ಕಲ್ಯಾಣ
ರವಿವಾರ ಸಂಪೂರ್ಣ ಲಾಕ್‌ಡೌನ್‌ ನಡುವೆ ದ.ಕ ಜಿಲ್ಲೆಯಲ್ಲಿ 40 ಜೋಡಿಗಳು ಸ್ಥಳೀಯಾಡಳಿತ ಸಂಸ್ಥೆಗಳ ಅನುಮತಿ ಪಡೆದು ಹಸೆಮಣೆ ಏರಿವೆ. ಮಂಗಳೂರು ಮಹಾನಗರದಲ್ಲಿ 3 ಜೋಡಿಗಳ ವಿವಾಹ ನೆರವೇರಿತು.  ಮದುವೆ ಸಮಾರಂಭಕ್ಕೆ ಆಗಮಿಸಿದ ಪ್ರತಿಯೋರ್ವರ ಥರ್ಮಲ್‌ ಸ್ಕ್ರೀನಿಂಗ್‌ ಮಾಡಲಾಯಿತು. ಆರೋಗ್ಯ ನಿರೀಕ್ಷಕರು, ಸ್ಥಳೀಯ ಸಂಸ್ಥೆಗಳಿಂದ ನಿಯೋಜಿಸಲ್ಪಟ್ಟ ನೋಡೆಲ್‌ ಅಧಿಕಾರಿಗಳ ಕಣ್ಗಾವಲಿನಲ್ಲಿ ಮದುವೆ ನೆರವೇರಿತು.

Advertisement

Udayavani is now on Telegram. Click here to join our channel and stay updated with the latest news.

Next