ಬೆಂಗಳೂರು: ಮಕರ ಸಂಕ್ರಾಂತಿಯ ದಿನವಾದ ಬುಧವಾರ ಇತಿಹಾಸ ಪ್ರಸಿದ್ಧ ಗವಿ ಗಂಗಾಧರೇಶ್ವರ ಸ್ವಾಮಿ ದೇವಾಲಯದಲ್ಲಿ ಸೂರ್ಯನ ರಶ್ಮಿಯು ಗರ್ಭಗುಡಿಯಲ್ಲಿರುವ ಶಿವಲಿಂಗವನ್ನು 1.17 ನಿಮಿಷ ಕಾಲ ಸ್ಪರ್ಶಿಸಿತು. ಸೂರ್ಯನು ದಕ್ಷಿಣಾಯದಿಂದ ಉತ್ತರಾ ಯಣಕ್ಕೆ ಪಥ ಬದಲಿಸುವ ಸಮಯದಲ್ಲಾಗುವ ಈ ಅಪರೂಪದ ದೃಶ್ಯಕ್ಕೆ ಸಾವಿರಾರು ಭಕ್ತರು ಸಾಕ್ಷಿಯಾದರು.
ದೇವಾಲಯದ ಬಲಭಾಗದ ಕಿಂಡಿಯಿಂದ ಸಂಜೆ 5.34ರ ವೇಳೆಗೆ ಸೂರ್ಯ ರಶ್ಮಿ ಪ್ರವೇಶಿಸಿತು. ಮೊದಲು ಗವಿಗಂಗಾಧರೇಶ್ವರ ಲಿಂಗುವನ್ನು ಸ್ಪರ್ಶಿಸಿತು. ಬಳಿಕ ನಂದಿ ವಿಗ್ರಹದ ಮೂಲಕ ಹಾದು ಹೋದ ಸೂರ್ಯ ರಶ್ಮಿ ಪೂರ್ತಿ ಶಿವಲಿಂಗವನ್ನು ಆವರಿಸಿತು.
ಈ ವೇಳೆ ದೇವರಿಗೆ ನಿರಂತರವಾಗಿ ಈ ವೇಳೆ ಶಿವಲಿಂಗಕ್ಕೆ ಹಾಲಿನ ಅಭಿಷೇಕ ಮಾಡಲಾಯಿತು. ಸೂರ್ಯ ರಶ್ಮಿ ದೇವರನ್ನು ಸ್ಪರ್ಶಿಸಿ ಮರೆಯಾದ ನಂತರ ದೇವರಿಗೆ ಗಂಗಾ ಜಲದಲ್ಲಿ ಅಭಿಷೇಕ ಮಾಡಿ, ಪೂಜೆ ನೆರವೇರಿಸಲಾಯಿತು. ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ದಂಪತಿ, ಸಂಸದೆ ಶೋಭಾ ಕರಂದ್ಲಾಜೆ, ಶಾಸಕ ರವಿ ಸುಬ್ರಹ್ಮಣ್ಯ, ವಿಧಾನ ಪರಿಷತ್ ಸದಸ್ಯ ಟಿ.ಎ.ಶರವಣ ಸೇರಿದಂತೆ ಹಲವು ಗಣ್ಯರು ವರ್ಷಕ್ಕೊಮ್ಮೆ ನಡೆಯುವ ಈ ಕೌತುಕವನ್ನು ಕಣ್ತುಂಬಿಕೊಂಡರು.
ಸೂರ್ಯ ರಶ್ಮಿ ಲಿಂಗ ಸ್ಪರ್ಶಿಸುವ ವೇಳೆ ಭಕ್ತರಿಗೆ ದೇವಾಲಯ ಪ್ರವೇಶ ನಿರ್ಬಂಧಿಸಿ, ದೇವಾಲಯದ ಹೊರಗೆ ಎಲ್‌ಇಡಿ ಹಾಗೂ ಎಲ್‌ಸಿಡಿ ಪರದೆ ಮೂಲಕ ನೇರ ಪ್ರಸಾರ ವ್ಯವಸ್ಥೆ ಮಾಡಲಾಗಿತ್ತು. ಬಳಿಕ ಸಂಜೆ 6.30ರಿಂದ ರಾತ್ರಿ 10 ಗಂಟೆವರೆಗೆ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಬುಧವಾರ ಒಂದೇ ದಿನ ದೇವಾಲಯಕ್ಕೆ 10 ಸಾವಿರಕ್ಕೂ ಹೆಚ್ಚು ಭಕ್ತರು ಭೇಟಿ ನೀಡಿದರು.
ಎಲ್ಲರಿಗೂ ಶುಭವಾಗಲಿದೆ: ಸೂರ್ಯ ರಶ್ಮಿ ಸ್ಪರ್ಶದ ಬಳಿಕ ದೇವಸ್ಥಾನದ ಪ್ರಧಾನ ಅರ್ಚಕ ಡಾ.ಸೋಮಸುಂದರ ದೀಕ್ಷಿತ್ ಮಾತನಾಡಿ, ಕಳೆದ ವರ್ಷ ಸೂರ್ಯನ ರಶ್ಮಿ ಶಿವಲಿಂಗವನ್ನು 1.03 ನಿಮಿಷ ಸ್ಪರ್ಶಿಸಿದ್ದು, ಲಿಂಗದ ಮೇಲ್ಭಾಗದಲ್ಲಿ ಏಳು ಸೆಕೆಂಡ್ ಕಾಲ ಕಿರಣಗಳು ಬಿದ್ದಿದ್ದವು.
ಹೀಗಾಗಿಯೇ, ಕಳೆದ ವರ್ಷ ಬಹಳಷ್ಟು ಅನಾಹುತಗಳು ರಾಜ್ಯದಲ್ಲಿ ಸಂಭವಿಸಿದ್ದವು. ಆದರೆ ಈ ವರ್ಷ ಕೇವಲ ಮೂರು ಸೆಂಕೆಂಡ್‌ಗಳು ಮಾತ್ರ ಲಿಂಗದ ಮೇಲ್ಭಾಗದಲ್ಲಿ ಕಿರಣ ಬಿದ್ದು, ಬಳಿಕ ಸೂರ್ಯ ಉತ್ತರಾಯಣ ಪ್ರವೇಶ ಮಾಡಿದನು. ಇದು ಶುಭ ಸಂಕೇತವಾಗಿದ್ದು, ಎಲ್ಲರಿಗೂ ಶುಭವಾಗಲಿದೆ ಎಂದರು.