Advertisement
ಬೇಸಗೆ ರಜೆ ಬಂತು ಅಂದರೆ ಸಾಕು ನಮ್ಮ ಆಟಗಳೆಲ್ಲ ಶುರುವಾಗುತ್ತಿತ್ತು. ಸಹ್ಯಾದ್ರಿಯ ತಪ್ಪಲಿನಲ್ಲಿ ನನ್ನ ಹುಟ್ಟೂರು. ಅಲ್ಲಿ ನಾನು ನನ್ನ ಬಾಲ್ಯದ ದಿನ ಕಳೆದಿದ್ದು ,ಅದರ ಮಜವೇ ಬೇರೆ. ನಮ್ಮದು ಅವಿಭಕ್ತ ಕುಟುಂಬ. ಬೇಸಗೆ ರಜೆಗೆ ಚಿಕ್ಕಪ್ಪನವರ , ಅತ್ತೆಯ ಮಕ್ಕಳೆಲ್ಲಾ ಮನೆಗೆ ಬರುತ್ತಿದ್ದರು. ನಮ್ಮ ಅಡಿಕೆ ತೋಟದ ಮಧ್ಯೆ ಪೇರಳೆ, ಪನ್ನೇರಳೆ, ಕಾಕಿಹಣ್ಣು, ಹೀಗೆ ಸಣ್ಣ ಪುಟ್ಟ ಹಣ್ಣಿನ ಮರಗಳಿದ್ದವು. ನಾವು ಮಕ್ಕಳೆಲ್ಲಾ ಸೇರಿ ತೋಟಕ್ಕೆ ಹೋಗಿ ಹಿಂಬದಿಯಲ್ಲಿ ಹರಿಯುತ್ತಿದ್ದ ತೊರೆಯಲ್ಲಿ ಆಟವಾಡುತ್ತಿದ್ದೆವು. ನಮ್ಮ ತೋಟದಲ್ಲಿ ಬೇಸಗೆ ದಿನಗಳಲ್ಲಿ ತೋಟ ತಂಪಾಗಿರಲು ತೋಟದ ಮಧ್ಯೆ ಹರಿಯುತ್ತಿದ್ದ ಹಳ್ಳಕ್ಕೆ ಸಣ್ಣದಾದ ಅಣೆಕಟ್ಟನ್ನು ಹಾಕುತ್ತಿದ್ದರು.
Related Articles
Advertisement
ಇಂದಿನ ಕಾಲದಲ್ಲಿ ಮಕ್ಕಳಿಗೆ ರಜೆ ಶುರುವಾದರೆ ಹೆತ್ತವರಿಗೆ ಅವರನ್ನು ಸಂಭಾಳಿಸುವುದು ಹೇಗೆ ಎಂಬ ದೊಡ್ಡ ಚಿಂತೆ ಹೆಚ್ಚಿನವರಿಗೆ ಕಾಡುತ್ತದೆ. ಹಾಗಾಗಿಯೇ ಅವರನ್ನು ಬೇಸಗೆ ಶಿಬಿರಕ್ಕೆ ಕಳಿಸುತ್ತಾರೆ. ಅದು ಶಾಲೆಯ ಪರ್ಯಾಯ ವ್ಯವಸ್ಥೆ ಅಷ್ಟೇ ಆಗಿದೆ. ಇತ್ತೀಚಿನ ದಿನಗಳಲ್ಲಿ ಕೆಲವು ಬೇಸಿಗೆ ಶಿಬಿರಗಳಂತೂ ಹಣ ಗಳಿಕೆಯ ಮಾರ್ಗವಾಗಿಸಿಕೊಂಡಿದ್ದೆರೆ. ಪೋಷಕರು ಇದರ ಬಗ್ಗೆ ಜಾಗೃತವಾಗಿರಬೇಕು. ಇಂದಿನ ಮಕ್ಕಳು ಪರೀಕ್ಷೆ ಮುಗಿದು ರಜೆ ಬಂತೆಂದರೆ ಒಂದು ತಾಸು ಹೆಚ್ಚು ಮೊಬೈಲ್ ಹಾಗೂ ಟಿವಿಯನ್ನು ನೋಡುತ್ತಾರೆ. ರಜಾ ದಿನಗಳಲ್ಲಿ ಅಜ್ಜ ಅಜ್ಜಿಯ ಮನೆಗೆ ಹೋಗುವುದರಿಂದ ಮಕ್ಕಳ ಮತ್ತು ಅವರ ನಡುವಿನ ಬಾಂಧವ್ಯ ಹೆಚ್ಚಾಗುತ್ತದೆ. ದೊಡ್ಡಪ್ಪ ಚಿಕ್ಕಪ್ಪ ಹಾಗೂ ಅತ್ತೆ ಮಕ್ಕಳ ಒಡಗೂಡಿ ಆಡುವುದರಿಂದ ಸಂಬಂಧದ ಮಾಧುರ್ಯ ಹಾಗೂ ಒಡನಾಟ ಬೆಳೆಯುತ್ತದೆ.
ಆದರೆ ಇಂದಿನ ಆಧುನಿಕ ಯುಗದಲ್ಲಿ ತಂದೆ ತಾಯಿ ಇಬ್ಬರು ದುಡಿಯೋದು ಅನಿವಾರ್ಯವಾಗಿದೆ. ಹಳ್ಳಿಯಲ್ಲೂ ಅಜ್ಜಿ ಅಜ್ಜ ಇಬ್ಬರೇ ಇರುವ ಪರಿಸ್ಥಿತಿ ಇಂದಿನದ್ದಾಗಿದೆ ಹಾಗಾಗಿ ಮಕ್ಕಳನ್ನು ನಿಭಾಯಿಸಲು ಅನೇಕ ತರಗತಿಗಳಿಗೆ ಕಳುಹಿಸುವುದು ಬಿಟ್ಟರೆ ಬೇರೆ ದಾರಿ ಇಲ್ಲವಾಗಿದೆ.
ಇಂದಿನ ಮಕ್ಕಳು ಆಡುವುದೆಂದರೆ ಟಿವಿ, ವೀಡಿಯೋ ಗೇಮ್ ಹಾಗೂ ಮೊಬೈಲ್ ಗೇಮ್ ಗಳ ಮೊರೆ ಹೋಗಿದ್ದಾರೆ. ಸಾಂಪ್ರದಾಯಿಕ ಆಟಗಳಾದ ಲಗೋರಿ, ಗೋಲಿ, ಕಬಡ್ಡಿ, ಕೊಕ್ಕೋ ಹೀಗೆ ಎಲ್ಲ ಮಕ್ಕಳ ಒಡಗೂಡಿ ಆಡುವ ಆಟವೇ ಇಲ್ಲವಾಗಿದೆ. ಇದು ಮಕ್ಕಳ ದೈಹಿಕ ಶ್ರಮ ಬೇಡುವ ಆಟಗಳಾಗಿದ್ದು ಅವರ ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಸಹಾಯಕ ವಾಗುತ್ತದೆ ಆದರೆ ಮೊಬೈಲ್ ಎಂಬ ಮಾಯೆ ಮಕ್ಕಳನ್ನು ಬಿಡದೆ ತನ್ನ ಬಂಧನದಲ್ಲಿ ಹಿಡಿದಿಟ್ಟಿದೆ ಹಾಗಾಗಿ ಇಂದಿನ ಮಕ್ಕಳಿಗೆ ಹೊರಗಡೆ ಮೈದಾನದಲ್ಲಿ ಆಡುವುದೇ ತಿಳಿಯದಾಗಿದೆ.
ಆದ್ದರಿಂದ ಪೋಷಕರು ಬೇಸಗೆ ಶಿಬಿರಗಳು ಹಾಗೂ ಶಿಕ್ಷಕರು ಮಕ್ಕಳ ರಜಾದಿನಗಳ ಸದುಪಯೋಗಗಳನ್ನು ದೈಹಿಕ ಹಾಗೂ ಮಾನಸಿಕ ವಿಕಸನಕ್ಕೆ ಅನುವು ಮಾಡಿಕೊಡುವಂತಹ ಚಟುವಟಿಕೆಗಳು ಆಟಗಳು ಹಾಗೂ ಸುತ್ತಮುತ್ತಲಿನ ಪರಿಸರಕ್ಕೆ ಸಹಾಯವಾಗುವಂತಹ ಕಾರ್ಯಗಳು ಹಾಗೂ ಸಮಾಜಕ್ಕೆ ಹಾಗೂ ಜನರಿಗೆ ಉಪಯೋಗವಾಗುವಂತಹ ಮಾದರಿ ಚಟುವಟಿಕೆಗಳನ್ನು ಮಾಡಿಸುತ್ತಾ ಅವರ ಸರ್ವತೋಮುಖ ಬೆಳವಣಿಗೆಗೆ ಕಾರಣೀಭೂತರಾಗಬೇಕು.
ನನ್ನ ನಾಲ್ಕು ವರ್ಷದ ಮಗಳು 10 ದಿನಗಳ ಕಾಲ ತನ್ನ ಅಜ್ಜ ಅಜ್ಜಿಯೊಂದಿಗೆ ಮೊಬೈಲ್ ಹಾಗೂ ಟಿ. ವಿ ಯ ಹಂಗಿಲ್ಲದೆ ಕಾಲ ಕಳೆದು ಅಲ್ಲಿಯ ಯೋಗ ಶಿಬಿರ ಭಜನೆ ಕಾರ್ಯಕ್ರಮಗಳಲ್ಲಿ ಹಾಗೂ ಪೂಜೆ ಪುನಸ್ಕಾರ ಹಾಗೂ ಸಮುದಾಯ ಭವನದಲ್ಲಿ ಗುಂಪು ಸೇರಿ ಊರಿನವರು ನಡೆಸುವ ಅನೇಕ ಚಟುವಟಿಕೆಗಳಲ್ಲಿ ಭಾಗವಹಿಸಿ ತುಂಬಾ ಉತ್ಸಾಹಿತಳಾಗಿದ್ದಳು .
ಊರಿಂದ ಬಂದಾಗ ಅವಳ ಸ್ವಭಾವದಲ್ಲೂ ಹಾಗೂ ಎಲ್ಲ ಮಕ್ಕಳರೊಡನೆ ಒಡನಾಟದಲ್ಲೂ ಬಹಳ ಧನಾತ್ಮಕ ಬದಲಾವಣೆ ಬಂದಿದ್ದು ನನಗೆ ಆಶ್ಚರ್ಯವೆನಿಸಿತು. ಅದರಂತೆಯೇ ಎಲ್ಲ ಮಕ್ಕಳು ಜನರೊಡಗೂಡಿ ತಮ್ಮ ವ್ಯಕ್ತಿತ್ವ ವಿಕಸನಕ್ಕೆ ಅನುವು ಮಾಡಿಕೊಡಬೇಕು ಎಂದೇ ನನ್ನ ಆಶಯ. ಬೇಸಿಗೆ ರಜದ ಸದುಪಯೋಗ ಮಕ್ಕಳ ದೈಹಿಕ ಹಾಗೂ ಮಾನಸಿಕ ಆರೋಗ್ಯದಲ್ಲಿ ಧನಾತ್ಮಕ ಬದಲಾವಣೆಗಳನ್ನು ತರಲಿ. ಟಿವಿ ಹಾಗೂ ಮೊಬೈಲ್‌ಗಳ ಹಂಗನ್ನು ತಕ್ಕಮಟ್ಟಿಗೆ ಬಿಟ್ಟು ಹಲವು ಹತ್ತು ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗುವ ಮೂಲಕ ತಮ್ಮ ಕಾರ್ಯಕ್ಷೇತ್ರವನ್ನು ವೃದ್ಧಿಸಿಕೊಳ್ಳಲಿ ಎಂಬುದು ಎಲ್ಲ ಪೋಷಕರ ಸದಾಶಯ.
-ಚೇತನ ಭಾರ್ಗವ
ಬೆಂಗಳೂರು