Advertisement

ಸಮ್ಮರ್‌ ಸಲಾಡ್‌ 

12:30 AM Mar 20, 2019 | |

ಬೇಸಿಗೆಯಲ್ಲಿ ಊಟ ಸೇರುವುದಿಲ್ಲ. ಏನು ತಿಂದರೂ ದಾಹ ಹೆಚ್ಚುತ್ತದೆ. ಮಳೆಗಾಲ, ಚಳಿಗಾಲದಲ್ಲಿ ತಿನ್ನುವ ಯಾವ ತಿನಿಸೂ ಈಗ ಇಷ್ಟವಾಗುವುದಿಲ್ಲ. ಹಾಗಾದ್ರೆ, ಈ ಕಾಲದಲ್ಲಿ ಯಾವ ಪದಾರ್ಥ ಬಾಯಿಗೆ, ದೇಹಕ್ಕೆ ಹಿತಕರ ಎಂದರೆ, “ಸಲಾಡ್‌’ ಎಂದು ಕಣ್ಮುಚ್ಚಿ ಉತ್ತರಿಸಬಹುದು. ಈ ಕಾಲದಲ್ಲಿ ಸಿಗುವ ಹಣ್ಣು-ತರಕಾರಿ-ಕಾಳುಗಳನ್ನು ಬಳಸಿ ಮಾಡಬಹುದಾದ ಸಲಾಡ್‌ಗಳ ರೆಸಿಪಿ ಇಲ್ಲಿದೆ.

Advertisement

1. ಪಾಸ್ತಾ ಸಲಾಡ್‌
ಬೇಕಾಗುವ ಸಾಮಗ್ರಿ:
ಮ್ಯಾಕ್ರೋನಿ ಪಾಸ್ತಾ- 1 ಕಪ್‌, ಕ್ಯಾರೆಟ್‌ತುರಿ- ಅರ್ಧಕಪ್‌, ಈರುಳ್ಳಿ- 1, ಕ್ಯಾಪ್ಸಿಕಮ್‌- ಅರ್ಧ, ಟೊಮೇಟೊ- 1, ಈರುಳ್ಳಿ, ಮಯೊನೈಸ್‌-5 ಚಮಚ, ಸಬ್ಬಸಿಗೆ ಸೊಪ್ಪು – 1ಕಪ್‌, ರುಚಿಗೆ ಉಪ್ಪು, ಎಣ್ಣೆ- 2 ಚಮಚ, ಕಾಳುಮೆಣಸಿನ ಪುಡಿ- ಅರ್ಧ ಚಮಚ, ಲಿಂಬೆ ಹೋಳು -1.

ಮಾಡುವ ವಿಧಾನ: ಒಂದು ಬಾಣಲೆಯಲ್ಲಿ 5 ಲೋಟ ನೀರು, 2 ಚಮಚ ಎಣ್ಣೆ, ಸ್ವಲ್ಪ ಉಪ್ಪು ಹಾಕಿ ಕುದಿಯಲು ಇಡಿ. ಒಂದು ಕುದಿ ಬಂದ ನಂತರ ಪಾಸ್ತಾ ಹಾಕಿ, ಅದು ಮೃದುವಾಗುವವರೆಗೂ ಬೇಯಿಸಿ. ಬೆಂದ ಪಾಸ್ತಾವನ್ನು ನೀರು ಬಸಿಯಿರಿ. ಒಂದು ಬೌಲ್‌ನಲ್ಲಿ ಮಯೊನೈಸ್‌, ಕಾಳುಮೆಣಸಿನ ಪುಡಿ, ಲಿಂಬೆ ರಸ, ಉಪ್ಪು ಬೆರೆಸಿ. ಇದಕ್ಕೆ ಹೆಚ್ಚಿದ ಈರುಳ್ಳಿ, ಕ್ಯಾಪ್ಸಿಕಂ, ಕ್ಯಾರೆಟ್‌ ತುರಿ ಹಾಕಿ, ಬೆಂದ ಪಾಸ್ತಾವನ್ನೂ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಕೊತ್ತಂಬರಿ ಅಥವಾ ಸಬ್ಬಸಿಗೆ ಸೊಪ್ಪಿನಿಂದ ಅಲಂಕರಿಸಿ. ಈ ಸಲಾಡ್‌ ಅನ್ನು ಬೆಳಗಿನ ಉಪಾಹಾರವಾಗಿಯೂ ಸೇವಿಸಬಹುದು.

2. ಸ್ವೀಟ್‌ ಕಾರ್ನ್ ಸಲಾಡ್‌
ಬೇಕಾಗುವ ಸಾಮಗ್ರಿ:
ಸ್ವೀಟ್‌ಕಾರ್ನ್ (ಜೋಳ) – 1 ಕಪ್‌, ಕ್ಯಾರೆಟ್‌ತುರಿ- 1 ಕಪ್‌, ಹೆಚ್ಚಿದ ಕೊತ್ತಂಬರಿ ಸೊಪ್ಪು- 2 ಕಪ್‌, ಕಾಳುಮೆಣಸಿನ ಪುಡಿ- 1/2 ಚಮಚ, ರುಚಿಗೆ ಉಪ್ಪು, ಲಿಂಬೆ ರಸ- 1 ಹೋಳು.

ಮಾಡುವ ವಿಧಾನ: ಮೇಲೆ ಹೇಳಿದ ಎಲ್ಲ ಸಾಮಗ್ರಿಗಳನ್ನು ಒಂದು ಬೌಲ್‌ನಲ್ಲಿ ಹಾಕಿ, ಲಿಂಬೆ ರಸ ಸೇರಿಸಿ ಮಿಶ್ರಣ ಮಾಡಿ. ಬೇಕಿದ್ದಲ್ಲಿ ಈರುಳ್ಳಿ, ದಾಳಿಂಬೆ ಕಾಳನ್ನೂ ಸೇರಿಸಬಹುದು.

Advertisement

3. ಫ್ರೂಟ್ಸ್‌ ಸಲಾಡ್‌ 
ಬೇಕಾಗುವ ಸಾಮಗ್ರಿ:
ಬಾಳೆಹಣ್ಣು -2, ಸಪೋಟ -2, ಪಪ್ಪಾಯ -1, ಸೇಬು -2, ಒಣದ್ರಾಕ್ಷಿ, ಗೋಡಂಬಿ, ಬಾದಾಮಿ, ಪಿಸ್ತಾ ಚೂರುಗಳು – 1 ಕಪ್‌, ಪುದೀನಾ ಸೊಪ್ಪು, ಚಾಟ್‌ ಮಸಾಲ – 2 ಚಮಚ.

ಮಾಡುವ ವಿಧಾನ: ಎಲ್ಲ ಹಣ್ಣುಗಳನ್ನು ಚೆನ್ನಾಗಿ ತೊಳೆದು, ಸಣ್ಣಗೆ ಹೆಚ್ಚಿ ಒಂದು  ಬೌಲ್‌ನಲ್ಲಿ ಹಾಕಿ. ಸಲಾಡ್‌ನ‌ ರುಚಿ ಹೆಚ್ಚಲು ಡ್ರೈ ಫ್ರೂಟ್ಸ್‌ಗಳನ್ನು ಸೇರಿಸಿ, ಚಾಟ್‌ ಮಸಾಲ ಪುಡಿ ಹಾಗೂ ಉಪ್ಪು ಹಾಕಿ, ಪುದೀನಾ ಸೊಪ್ಪಿನಿಂದ ಅಲಂಕರಿಸಿ. ಬಿಸಿಲಿನ ಧಗೆಯಲ್ಲಿ ಮಧ್ಯಾಹ್ನ ಊಟ ಸೇರದಿದ್ದಾಗ, ಸಂಜೆ ಸ್ನ್ಯಾಕ್ಸ್‌ನ ಬದಲು ಈ ಸಲಾಡ್‌ ಸೇವಿಸಬಹುದು. ಈ ಸೀಸನ್‌ನಲ್ಲಿ ಸಿಗುವ ನಿಮ್ಮಿಷ್ಟದ ಹಣ್ಣುಗಳನ್ನು ಬೆರೆಸಿ, ರುಚಿಯಾದ ಸಲಾಡ್‌ ತಯಾರಿಸಿ. 

4. ಮೊಳಕೆಕಾಳು ಸಲಾಡ್‌
ಬೇಕಾಗುವ ಸಾಮಗ್ರಿ:
ಮೊಳಕೆ ಬಂದ ಹೆಸರುಕಾಳು- 2 ಕಪ್‌, ಕ್ಯಾರೆಟ್‌ ತುರಿ- ಅರ್ಧ ಕಪ್‌, ದಾಳಿಂಬೆ- 1 ಕಪ್‌, ಜೀರಿಗೆ ಪುಡಿ- 1 ಚಮಚ, ಚಾಟ್‌ ಮಸಾಲ- 1 ಚಮಚ, ರುಚಿಗೆ ಉಪ್ಪು, ಕೊತ್ತಂಬರಿ ಸೊಪ್ಪು- ಅರ್ಧಕಂತೆ.

ಮಾಡುವ ವಿಧಾನ: ಮೊಳಕೆ ಬಂದ ಹೆಸರುಕಾಳಿಗೆ ಕ್ಯಾರೆಟ್‌ತುರಿ, ದಾಳಿಂಬೆ, ಹೆಚ್ಚಿದ ಕೊತ್ತಂಬರಿ ಸೊಪ್ಪು ಹಾಕಿ ಚಾಟ್‌ ಮಸಾಲ, ಜೀರಿಗೆ ಪುಡಿ, ಉಪ್ಪು ಹಾಕಿ ಚೆನ್ನಾಗಿ ಕೂಡಿಸಿದರೆ ರುಚಿಕರ ಸಲಾಡ್‌ ತಯಾರು. ಬೇಸಿಗೆಯ ಧಗೆಯಲ್ಲಿ ಈ ಸಲಾಡ್‌ ಸೇವಿಸಿದರೆ, ದೇಹದ ಉಷ್ಣಾಂಶ ಕಡಿಮೆಯಾಗುತ್ತದೆ. 

ಶ್ರುತಿ ಕೆ.ಎಸ್‌., ತುರುವೇಕೆರೆ

Advertisement

Udayavani is now on Telegram. Click here to join our channel and stay updated with the latest news.

Next