Advertisement

ಬೇಸಗೆ ಬೇಗೆ ತಣಿಸಿದ ಮಳೆ: ಅಡಿಕೆ ತೋಟಕ್ಕೆ ಕಳೆ

09:35 AM May 18, 2018 | Karthik A |

ನಗರ : ಪುತ್ತೂರು ಹಾಗೂ ಸುಳ್ಯ ತಾಲೂಕುಗಳ ವ್ಯಾಪ್ತಿಯಲ್ಲಿ ಬೇಸಗೆಯ 2 ತಿಂಗಳಲ್ಲಿ ಸುರಿದ ಉತ್ತಮ ಮಳೆಯಿಂದ ಪ್ರಮುಖ ವಾಣಿಜ್ಯ ಬೆಳೆ ಅಡಿಕೆಯನ್ನು ಸುರಕ್ಷಿತವಾಗಿರುವಂತೆ ಮಾಡಿದೆ. ಕೆಲವು ವರ್ಷಗಳಿಂದ ಬೇಸಗೆಯ ತೀವ್ರ ತಾಪಮಾನ, ನೀರಿನ ಕೊರತೆಯ ಕಾರಣದಿಂದ ಉಭಯ ತಾಲೂಕು ವ್ಯಾಪ್ತಿಯಲ್ಲಿ ಅಡಿಕೆ ಮರಗಳು ಕೆಂಪಾಗಿ ಬೆಳೆಗಾರರಿಗೆ ನಷ್ಟ ಉಂಟಾಗಿತ್ತು. ಆದರೆ ಈ ಬಾರಿ ಮಳೆ ಅಡಿಕೆ ತೋಟಗಳಿಗೆ ರಕ್ಷಣೆ ನೀಡಿದೆ. ತೋಟಗಳಿಗೆ ನೀರು ಹಾಕುವ ಕುರಿತಂತೆ ಹೆಚ್ಚಿನ ಸಮಸ್ಯೆ ಉಂಟಾಗದಿರುವುದು ಬೆಳೆಗಾರರಲ್ಲಿ ನಿಟ್ಟುಸಿರು ಬಿಡುವಂತೆ ಮಾಡಿದೆ.

Advertisement

20 ಸಾವಿರ ಹೆಕ್ಟೇರ್‌
ಸುಳ್ಯ ಹಾಗೂ ಪುತ್ತೂರು ತಾಲೂಕು ವ್ಯಾಪ್ತಿಯಲ್ಲಿ ಸುಮಾರು 20 ಸಾವಿರ ಹೆಕ್ಟೇರ್‌ ವಿಸ್ತೀರ್ಣದ ಪ್ರದೇಶದಲ್ಲಿ ಅಡಿಕೆ ಬೆಳೆಯನ್ನು ಬೆಳೆಯಲಾಗುತ್ತದೆ. ಈ ಅಡಿಕೆ ತೋಟಗಳಲ್ಲಿ ಸುಮಾರು 25 ಸಾವಿರ ಟನ್‌ ಅಡಿಕೆ ಫಸಲು ಲಭಿಸುತ್ತದೆ. ಬೇಸಗೆಯಲ್ಲಿ ನೀರಿನ ಕೊರತೆಯಿಂದ ಉಂಟಾಗುವ ನಷ್ಟ ಹಾಗೂ ರೋಗ ಬಾಧೆ ಒಟ್ಟು ಫಸಲಿನ ವ್ಯತ್ಯಾಸಕ್ಕೆ ಇಲ್ಲಿ ಕಾರಣವಾಗುತ್ತದೆ.

ಸಮಸ್ಯೆಯಾಗಿಲ್ಲ
ಉಭಯ ತಾಲೂಕುಗಳಲ್ಲಿ ಅಡಿಕೆಯೇ ಕೃಷಿಕರ ಪ್ರಧಾನ ವಾಣಿಜ್ಯ ಬೆಳೆಯಾಗಿದ್ದು, ಇದರ ಜತೆಗೆ ಕೊಕ್ಕೋ, ತೆಂಗು, ಕಾಳುಮೆಣಸನ್ನು ಉಪ ಬೆಳೆಯಾಗಿ ಬೆಳೆಯುತ್ತಾರೆ. ಇವೆಲ್ಲವೂ ನೀರಿನ ಪ್ರಮಾಣವನ್ನು ಅವಲಂಬಿಸಿವೆ. ಈ ಬಾರಿ ಗ್ರಾಮಾಂತರ ಪ್ರದೇಶಗಳಲ್ಲಿ ಹೇಳಿಕೊಳ್ಳುವ ನೀರಿನ ಸಮಸ್ಯೆಯಾಗಿಲ್ಲ. ಶೇ. 80 ರಷ್ಟು ಅಡಿಕೆ ಬೆಳೆಗಾರರು ಕೊಳವೆ ಬಾವಿಯ ನೀರನ್ನು ಕೃಷಿ ಕಾರ್ಯಕ್ಕೆ ಬಳಸುತ್ತಿದ್ದಾರೆ. ಕೆರೆ ಮತ್ತು ತೋಡಿನ ನೀರನ್ನು ಅವಲಂಬಿಸುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ.

ಉಭಯ ತಾಲೂಕುಗಳಲ್ಲಿ ಪಯಸ್ವಿನಿ, ನೇತ್ರಾವತಿ ಮತ್ತು ಕುಮಾರಧಾರಾ ನದಿ ನೀರನ್ನು ಪಂಪ್‌ ಗಳ ಮೂಲಕ ಎತ್ತಿ ಅಡಿಕೆ ತೋಟಗಳಿಗೆ ಹಾಯಿಸುವ ಬೆಳೆಗಾರರೂ ಇದ್ದಾರೆ. ಬೇಸಗೆಯಲ್ಲೂ ಮಳೆಯ ಪ್ರಮಾಣ ಹೆಚ್ಚಾಗಿರುವುದರಿಂದ ನದಿಗಳಲ್ಲಿ ನೀರು ಇದೆ. ವಾರಕ್ಕೆ ಒಂದೆರಡು ಮಳೆಗಳಾದರೂ ಬೀಳುತ್ತಿರುವುದರಿಂದ ಅಡಿಕೆ ತೋಟಗಳಿಗೆ ಹೆಚ್ಚು ನೀರು ಹಾಯಿಸುವ ಆವಶ್ಯಕತೆ ಬಿದ್ದಿಲ್ಲ.

ಇನ್ನು ತೊಂದರೆಯಿಲ್ಲ
ಮಾರ್ಚ್‌ ತಿಂಗಳ ಬಳಿಕ ಎರಡರಿಂದ ಮೂರು ವಾರಗಳ ಕಾಲ ಮಳೆ ಸುರಿಯದ ಸ್ಥಿತಿ ನಿರ್ಮಾಣವಾಗಿದ್ದರೆ ಅಡಿಕೆ ಬೆಳೆಗಾರರಿಗೆ ನಷ್ಟವಾಗುತ್ತಿತ್ತು. ಕೃಷಿಕರು ಎಪ್ರಿಲ್‌ ತಿಂಗಳಲ್ಲಿ ಒಂದು ಸುತ್ತಿನ ಔಷಧಿ ಸಿಂಪಡಣೆ ಕಾರ್ಯವನ್ನೂ ಮಾಡಿದ್ದಾರೆ. ಅನಂತರದಲ್ಲಿ ಉತ್ತಮ ಮಳೆಯಾಗುವ ಮೂಲಕ ಅಡಿಕೆ ನಳ್ಳಿಯ ಬೆಳವಣಿಗೆಗೆ ಸಹಕಾರಿಯಾಗಿದೆ. ಜತೆಗೆ ಅಡಿಕೆ ಮರಗಳು ಬುಡವನ್ನೂ ತಂಪಾಗಿರುವಂತೆ ಮಾಡಿದೆ.

Advertisement

ಮಳೆಯ ನಿರೀಕ್ಷೆ
ಜೂನ್‌ ತಿಂಗಳಲ್ಲಿ ಮುಂಗಾರು ಮಳೆ ನಿರೀಕ್ಷೆಯಂತೆ ಪ್ರವೇಶ ಮಾಡಿದರೆ ಅಡಿಕೆ ಬೆಳೆಗಾರರು ಮತ್ತಷ್ಟು ಸುರಕ್ಷಿತವಾಗಲಿದ್ದಾರೆ. ಸಣ್ಣ ಪ್ರಮಾಣದಲ್ಲಿ ಮಳೆ ಬಂದು ಮತ್ತೆ ಕಾಣಿಸಿಕೊಳ್ಳದಿದ್ದರೆ ಕೊಳೆರೋಗ ಬಾಧಿಸುವ ಸಾಧ್ಯತೆಯೂ ಇದೆ. ಈ ಕಾರಣದಿಂದ ಅಡಿಕೆ ಬೆಳೆಗಾರರು ಉತ್ತಮ ಮುಂಗಾರು ಮಳೆಯ ನಿರೀಕ್ಷೆಯಲ್ಲಿದ್ದಾರೆ.

ಮಳೆ ಪ್ರಮಾಣ
2017

ಸುಳ್ಯ ತಾಲೂಕು: ಮಾರ್ಚ್‌ ತಿಂಗಳಲ್ಲಿ 18ಮಿ.ಮೀ., ಎಪ್ರಿಲ್‌ ತಿಂಗಳಲ್ಲಿ 55 ಮಿ.ಮೀ., ಮೇ ತಿಂಗಳಲ್ಲಿ 99 ಮಿ.ಮೀ.

ಪುತ್ತೂರು ತಾಲೂಕು: ಮಾರ್ಚ್‌ ತಿಂಗಳಲ್ಲಿ ಮಳೆ ಬಂದಿಲ್ಲ, ಎಪ್ರಿಲ್‌ ತಿಂಗಳಲ್ಲಿ 10 ಮಿ.ಮೀ., ಮೇ ತಿಂಗಳಲ್ಲಿ 82 ಮಿ.ಮೀ., ಜೂನ್‌ 819 ಮಿ.ಮೀ.

2018
ಸುಳ್ಯ ತಾಲೂಕು:
ಮಾರ್ಚ್‌ ತಿಂಗಳಲ್ಲಿ 54 ಮಿ.ಮೀ., ಎಪ್ರಿಲ್‌ ತಿಂಗಳಲ್ಲಿ 107 ಮಿ.ಮೀ., ಮೇ 15ರ ತನಕ 142 ಮಿ.ಮೀ.

ಪುತ್ತೂರು ತಾಲೂಕು: ಮಾರ್ಚ್‌ ತಿಂಗಳಲ್ಲಿ 32.8 ಮಿ.ಮೀ., ಎಪ್ರಿಲ್‌ ತಿಂಗಳಲ್ಲಿ 71 ಮಿ.ಮೀ., ಮೇ 15ರ ತನಕ 82 ಮಿ.ಮೀ.

ಮುಂಜಾಗ್ರತೆ ಅಗತ್ಯ
ಎಪ್ರಿಲ್‌, ಮೇ ತಿಂಗಳಲ್ಲಿ ಒಂದಷ್ಟು ಮಳೆಯಾಗಿರುವುದರಿಂದ ಅಡಿಕೆ ತೋಟಗಳಿಗೆ ನೀರಿನ ಅಭಾವ ಕಡಿಮೆಯಾಗಿದೆ. ಮೇ ಕೊನೆಯ ವಾರದಲ್ಲಿ ಮುಂಗಾರು ಆರಂಭದ ಸಂದರ್ಭದಲ್ಲಿ ಬೋರ್ಡೋ ದ್ರಾವಣ ಸಿಂಪಡಣೆಯ ಮೂಲಕ ಕೊಳೆ ರೋಗದಿಂದ ರಕ್ಷಣೆಯ ಕ್ರಮವನ್ನು ಬೆಳೆಗಾರರು ಕೈಗೊಳ್ಳಬೇಕು. ಈ ನಿಟ್ಟಿನಲ್ಲಿ ಬೆಳೆಗಾರರೂ ಜಾಗೃತರಾಗಿದ್ದಾರೆ. ಸದ್ಯಕ್ಕೆ ಅಡಿಕೆ ತೋಟಗಳ ಪರಿಸ್ಥಿತಿ ಉತ್ತಮವಾಗಿದೆ.
– ದಿನೇಶ್‌ ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕರು, ಪುತ್ತೂರು

— ರಾಜೇಶ್‌ ಪಟ್ಟೆ

Advertisement

Udayavani is now on Telegram. Click here to join our channel and stay updated with the latest news.

Next