ಮನೆಯಿಂದ ಹೊರಗೆ ಕಾಲಿಟ್ರೆ ಬಿಸಿಲ ಸ್ನಾನ. ಮೂವ್ವತ್ತು ಡಿಗ್ರಿ ಸೆಲ್ಷಿಯಸ್‌ನಲ್ಲೇ ಬಾಡಿ ಹೋಗುವ ಹುಡುಗಿಗೆ, ನಲ್ವತ್ತು ಡಿಗ್ರಿಯ ಬಿಸಿಲು ಅಂದ್ರೆ ಕೊಂಚ ಜ್ವರ ಬಂದಹಾಗಾಗುತ್ತೆ. ಆ ಬೆವರಿನಲ್ಲಿ ಮೇಕಪ್ ನಿಲ್ಲೋದೇ ಡೌಟು ಅನ್ನೋ ಚಿಂತೆ ಒಂದುಕಡೆ. ಮೇಕಪ್‌ಗಿಂತಲೂ ಹೆಚ್ಚಾಗಿ ದೇಹದ ಆರೋಗ್ಯದ ಕತೆಯೇನು ಎಂಬ ಚಿಂತೆಯೂ ಆಕೆಗೆ ಇರುತ್ತೆ. ಈ ಬಿಸಿಲಲ್ಲಿ ಆರೋಗ್ಯ, ಸೌಂದರ್ಯ ರಕ್ಷಿಸಿಕೊಳ್ಳೋದು ಹೇಗೆಂಬುದಕ್ಕೆ ಫಟಾಫಟ್ ಪರಿಹಾರಗಳು ಇಲ್ಲಿವೆ…
1. ಬೆವರಿನಂದ ತಲೆಯಲ್ಲಿ ಡ್ಯಾಂಡ್ರಫ್ ಆಗೋದು ಕಾಮನ್. ಕೂದಲು ಉದುರೋದರ ಜೊತೆಗೆ ಹೇನಿನ ಕಾಟವೂ ಇದರೊಂದಿಗೆ ಬೋನಸ್ ಆಗಿ ಬರುತ್ತೆ. ಇದಕ್ಕೆ ಪರಿಹಾರವೂ ಸಿಂಪಲ್. ಮೆಡಿಕೇಟೆಡ್ ಶಾಂಪೂ ಬಳಸಿ, ತಲೆಹೊಟ್ಟಿಗೆ ಮುಕ್ತಿ ಹಾಡಬಹುದು. ಮಜ್ಜಿಗೆ, ಲಿಂಬೆಹಣ್ಣಿನ ರಸವನ್ನು ತಲೆಗೆ ಹಚ್ಕೊಂಡು ಅರ್ಧ ಗಂಟೆಯ ನಂತರ ಸ್ನಾನ ಮಾಡಿಯೂ ಪರಿಹಾರ ಕಂಡುಕೊಳ್ಬಹುದು.
2. ದೇಹದ ಉಷ್ಣತೆ ಹೆಚ್ಚಾಗಿ ಮುಖದಲ್ಲಿ ಮೊಡವೆಗಳು ಹಾಜರಿ ಹಾಕುತ್ತವೆ. ಆದಷ್ಟೂ ಕರಬೂಜ ಜ್ಯೂಸ್ ಕುಡಿಯುತ್ತಿರಿ. ಕನಿಷ್ಠ 3-4 ಲೀಟರ್ ನೀರು ಸೇವಿಸಿ. ವಿಟಮಿನ್ ಎ, ಝಿಂಕ್, ಆ್ಯಂಟಿ ಆಕ್ಸಿಡೆಂಟ್ಸ್ ಇರುವ ಜೆಲ್‌ಗಳನ್ನು ಹಚ್ಕೊಂಡ್ರೂ ಪರಿಹಾರ ಸಿಗುತ್ತೆ.
3. ನಿಮ್ಮ ಕಣ್ಣುಗಳ ಮೇಲೂ ಸೂರ್ಯನ ತಾಪ ಕೆಂಗಣ್ಣು ಬೀರಬಹುದು. ಕಣ್ಣು ಕೆಂಪಾಗಿ, ತೇಜಸ್ಸು ಕಳಕೊಳ್ಳುವುದಲ್ಲದೆ, ಕಣ್ಣಿನ ಸುತ್ತ ಕಪ್ಪು ವರ್ತುಲಗಳು ನಿರ್ಮಾಣ ಆಗಬಹುದು. ಎಳೆಯ ಸೌತೆಕಾಯಿಗಳನ್ನು ಕಣ್ಣಿನ ಸುತ್ತ ಇಟ್ಕೊಂಡು, ಕಿರುನಿದ್ರೆ ಮಾಡಿ. ರೋಸ್‌ವಾಟರ್ ಅನ್ನು ಕಣ್ಣಿಗೆ ಬಿಟ್ಕೊಳ್ತಾ ಇರಿ.
4. ಬಿಸಿಲಿಗೆ ಚರ್ಮವೂ ಬಹಳ ಸಂಕಟ ಅನುಭವಿಸುತ್ತೆ. ಅಲೋವೆರಾ ಜೆಲ್ ಬಳಸಿ ಸ್ನಾನ ಮಾಡಿ. ಕಡಲೆ ಹಿಟ್ಟನ್ನು ಸ್ನಾನಕ್ಕೆ ಬಳಸಿಯೂ ನಾವು ತ್ವಚೆಯನ್ನು ಕಾಪಾಡಿಕೊಳ್ಳಬಹುದು. ಒಂದಂತೂ ನೆನಪಿರಲಿ… ಜಾಸ್ತಿ ಬಿಸಿ ನೀರಿನ ಸ್ನಾನ ಒಳ್ಳೇದಲ್ಲ.
5. ಬೆವರಿನಿಂದ ಬಚಾವ್ ಆಗಲು ದಿನಕ್ಕೆರಡು ಬಾರಿ ಸ್ನಾನ ಮಾಡಿ. ಕೆಮಿಕಲ್ ಮುಕ್ತವಾದ ಕೂಲಿಂಗ್ ಪೌಡರ್ ಉಪಯೋಗಿಸಿ. ಸ್ನಾನ ಮಾಡುವಾಗ ನೀರಿಗೆ ಪುದೀನಾ ಎಲೆ ಅಥವಾ ಲಿಂಬೆ ರಸವನ್ನು ಬಳಸುವುದರಿಂದ ಬೆವರನ್ನು ತಡೆಗಟ್ಟಬಹುದು.
6. ಬಿಸಿಲಿನ ಝಳಕ್ಕೆ ಕೈಕಾಲು ಒಡೆದರೆ ಹೆದರಬೇಡಿ. ಹೀಗೆ ಚರ್ಮ ಒರಟಾಗದೇ ಇರುವಂತೆ ಮಾಡಲು, ಮನೆಯಲ್ಲಿಯೇ ಮದ್ದಿದೆ. ಟೊಮೇಟೊ ರಸ, ಆಲೂಗಡ್ಡೆ, ಎಳೆ ಸೌತೆಕಾಯಿಯ ತುಣುಕುಗಳಿಂದ ಕೈಕಾಲಿಗೆ ಮಸಾಜ್ ಮಾಡುವುದರಿಂದ ಬಿರುಕುಗಳನ್ನು ಮುಚ್ಚಬಹುದು.