Advertisement

ಉರಿಬಿಸಿಲಿಗೆ ಬಸವಳಿಯುತ್ತಿರುವ ಬಿಸಿಲೂರು ಜನ: ­ಏಪ್ರಿಲ್‌, ಮೇನಲ್ಲಿ ಹೆಚ್ಚಾಗುವ ನಿರೀಕ್ಷೆ

05:53 PM Mar 29, 2022 | Team Udayavani |

ರಾಯಚೂರು: ಕಳೆದ ಎರಡು ವರ್ಷ ಕೋವಿಡ್‌ ಲಾಕ್‌ಡೌನ್‌ ವೇಳೆ ಜನ ಹೊರಗೆ ಓಡಾಡದೆ ತಮ್ಮ ಮನೆಗಳಲ್ಲೇ ಹಾಯಾಗಿದ್ದರು. ಆದರೆ, ಈ ಬಾರಿ ಮಾರ್ಚ್‌ ಅಂತ್ಯಕ್ಕೆ ಬಿಸಿಲಿನ ಪ್ರತಾಪ 41.5 ಡಿಗ್ರಿ ಸೆಲ್ಸಿಯಸ್‌ ತಲುಪಿದ್ದು, ಉಷ್ಣ ತಾಳದೆ ಜನ ಚಡಪಡಿಸುವಂತಾಗಿದೆ.

Advertisement

ಪ್ರತಿ ವರ್ಷ ಬೇಸಿಗೆ ಬಂದರೆ ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳು ಬಿಸಿಲಿಗೆ ತತ್ತರಿಸುತ್ತವೆ. ನೆಲ ಕಾದ ಹೆಂಚಾದರೆ, ಮೇಲೆ ಸೂರ್ಯ ಕೆಂಡ ಕಾರುತ್ತಿರುತ್ತಾರೆ. ಬಯಲು ಸೀಮೆ, ಕಲ್ಲಿನ ಬೆಟ್ಟ ಗುಡ್ಡಗಳಿಂದ ಕೂಡಿದ ರಾಯಚೂರು ಜಿಲ್ಲೆಯಲ್ಲಿ ಹಗಲು ಬೀಸುವ ಬಿಸಿಗಾಳಿಗೆ ಜೀವ ಸಂಕುಲ ತತ್ತರಿಸುವಂತಾಗಿದೆ.

ಮನುಷ್ಯರು ಮಾತ್ರವಲ್ಲದೇ ಪ್ರಾಣಿ-ಪಕ್ಷಿಗಳು ಕೂಡ ಬಿಸಿಲಿಗೆ ಬಸವಳಿಯುಂತಾಗಿದೆ. ಜನ ನಿರ್ಜಲೀಕರಣಕ್ಕೆ ತುತ್ತಾಗುವ ಪ್ರಕರಣ ಹೆಚ್ಚಾಗುತ್ತಿವೆ. ಏಪ್ರಿಲ್‌, ಮೇನಲ್ಲಿ ಹೆಚ್ಚು ಬಿಸಿಲು ದಾಖಲಾಗುತ್ತದೆ. ಆದರೆ, ಈ ಬಾರಿ ಮಾತ್ರ ಮಾರ್ಚ್‌ ಅಂತ್ಯದ ವೇಳೆಗೆ ಬಿಸಿಲಿನ ಪ್ರಮಾಣ ಮಿತಿಮೀರಿದೆ. ‘

ಕಳೆದ ಮಾ.26, 27ರಂದು ಜಿಲ್ಲೆಯಲ್ಲಿ ಬರೋಬ್ಬರಿ 41.5 ಡಿಗ್ರಿ ಸೆಲ್ಸಿಯಸ್‌ ಬಿಸಿಲು ದಾಖಲಾಗಿದೆ. ಈ ಬಾರಿ ಕಳೆದ ವರ್ಷಕ್ಕಿಂತ .5 ಇಲ್ಲವೆ 1 ಡಿಗ್ರಿ ಸೆಲ್ಸಿಯಸ್‌ ಬಿಸಿಲು ಹೆಚ್ಚಾಗಬಹುದು ಎಂದು ಅಂದಾಜಿಸಲಾಗಿದೆ.

ಪ್ರತಿ ವರ್ಷ 41 ಡಿಗ್ರಿಯೇ ಅಧಿಕ ಬಿಸಿಲಾಗಿರುತ್ತದೆ. ಕಳೆದ ಕೆಲ ವರ್ಷಗಳ ಹಿಂದೆ 42 ಡಿಗ್ರಿ ದಾಟಿತ್ತು. ಇನ್ನೂ ಕಳೆದ ವರ್ಷದ ಸರಾಸರಿ ಗಮನಿಸುವುದಾದರೆ ಮಾರ್ಚ್‌ ನಲ್ಲಿ 36.7 ಸೆಲ್ಸಿಯಸ್‌ ಇದ್ದರೆ, ಏಪ್ರಿಲ್‌-38.6, ಮೇ-37.6 ಬಿಸಿಲಿನ ಪ್ರಮಾಣವಿತ್ತು. ಕಳೆದ 40 ವರ್ಷಗಳ ಸರಾಸರಿ ಗಮನಿಸುವುದಾದರೆ ಮಾರ್ಚ್‌ನಲ್ಲಿ 37.5 ಡಿಗ್ರಿ, ಏಪ್ರಿಲ್‌-38.9 ಹಾಗೂ ಮೇ 40.2 ಡಿಗ್ರಿ ಬಿಸಿಲು ದಾಖಲಾಗಿದೆ.

Advertisement

ಹಿಂಗಾರು ಎಫೆಕ್ಟ್

ಕಳೆದ ವರ್ಷ ಹಿಂಗಾರು ಮಳೆ ಪ್ರಮಾಣ ಕಡಿಮೆಯಾಗಿದ್ದು, ಈ ಬಾರಿ ಬಿಸಿಲು ಹೆಚ್ಚಲು ಕಾರಣ ಎನ್ನುವುದು ಹವಾಮಾನ ತಜ್ಞರ ವಿಶ್ಲೇಷಣೆ. ಹಿಂಗಾರು ಮಳೆ ವಾಡಿಕೆಯಷ್ಟು ಸುರಿದರೆ ಭೂಮಿ ತೇವ ಹಿಡಿದಿಟ್ಟುಕೊಳ್ಳುತ್ತದೆ. ಇಲ್ಲವಾದರೆ ಭೂಮಿಯ ತೇವಾಂಶ ಕಡಿಮೆಯಾಗಿ ಬಿಸಿಲಿನ ಪ್ರಖರತೆ ಹೆಚ್ಚಾಗುತ್ತಿದೆ. ಈ ವರ್ಷದ ಉಷ್ಣಾಂಶ ಹೆಚ್ಚಳಕ್ಕೆ ಅದು ಕೂಡ ಕಾರಣವಾಗಿದೆ. ಇನ್ನೂ ಲಾಕ್‌ ಡೌನ್‌ ವೇಳೆ ಸ್ಥಗಿತಗೊಂಡಿದ್ದ ಕೈಗಾರಿಕೆ, ಕಾರ್ಖಾನೆಗಳು, ವಾಹನಗಳ ಓಡಾಟ ಈಗ ದುಪ್ಪಟ್ಟಾಗಿರುವುದು ಕೂಡ ಉಷ್ಣಾಂಶ ಹೆಚ್ಚಳಕ್ಕೆ ಕಾರಣವಾಗಿರಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.

ಪಾನಿಯ, ಮಡಕೆಗಳ ಮೊರೆ

ಬಿಸಿಲು ಹೆಚ್ಚುತ್ತಿದ್ದಂತೆ ಜನ ತಂಪು ಪಾನಿಯಗಳ ಮೊರೆ ಹೋಗುತ್ತಿದ್ದಾರೆ. ಕೂಲ್‌ ಡ್ರಿಂಕ್ಸ್‌, ಕಲ್ಲಂಗಡಿ, ವಿವಿಧ ಹಣ್ಣಿನ ಜ್ಯೂಸ್‌, ಗೋಲಿ ಸೋಡಾ, ಲಸ್ಸಿ, ಮಜ್ಜಿಗೆ, ಎಳನೀರು, ತಾಳದ ಹಣ್ಣು ಸೇರಿದಂತೆ ವಿವಿಧ ರೀತಿಯ ತಂಪು ಪದಾರ್ಥಗಳ ಸೇವನೆ ಹೆಚ್ಚಾಗಿದೆ. ಫೀಡ್ಜ್ ನೀರು ಬಿಟ್ಟು ಮಡಕೆಗಳಲ್ಲಿ ನೀರು ಕುಡಿಯಲು ಹೆಚ್ಚು ಆಸಕ್ತಿ ತೋರುತ್ತಿದ್ದು, ಮಡಕೆ ಖರೀದಿ ಕೂಡ ಜೋರಾಗಿದೆ.

ಬಿಸಿಲಿನ ಪ್ರಮಾಣ ಹೆಚ್ಚಾಗಿರುವ ಕಾರಣ ಆರೋಗ್ಯ ರಕ್ಷಣೆಗೆ ವಿಶೇಷ ಒತ್ತು ನೀಡುವಂತೆ ಆರೋಗ್ಯ ಇಲಾಖೆ ಕೂಡ ಪ್ರಕಟಣೆ ನೀಡಿ ಕೆಲವೊಂದು ಮಾರ್ಗಸೂಚಿಗಳನ್ನು ಪ್ರಕಟಿಸಿದೆ.

ಈ ಭಾಗದಲ್ಲಿ ಏಪ್ರಿಲ್‌, ಮೇನಲ್ಲಿ ಬಿಸಿಲಿನ ಪ್ರಮಾಣ ಹೆಚ್ಚಾಗುತ್ತಿತ್ತು. ಆದರೆ, ಈ ಬಾರಿ ಮಾರ್ಚ್‌ನಲ್ಲೇ 41.5 ಡಿಗ್ರಿ ತಲುಪಿದೆ. ಇದೇ ಮೊದಲಲ್ಲ ಈ ಹಿಂದೆ ಕೆಲವೊಮ್ಮೆ ಈ ರೀತಿ ದಾಖಲಾಗಿದೆ. ಹಿಂದಿನ ವರ್ಷದ ಮಳೆಗಾಲದ ಪ್ರಮಾಣದ ಮೇಲೆ ಪ್ರಸಕ್ತ ವರ್ಷದ ಬೇಸಿಗೆ ನಿರ್ಧರಿತವಾಗುವ ಸಾಧ್ಯತೆ ಹೆಚ್ಚು. ಇದೇ ಪರಿಸ್ಥಿತಿ ಮುಂದುವರಿದರೆ ಈ ಬಾರಿ ಸರಾಸರಿ ಬಿಸಿಲು ಹೆಚ್ಚಾಗಬಹುದು. -ಡಾ| ಶಾಂತಪ್ಪ, ಹವಮಾನ ತಜ್ಞ, ರಾಯಚೂರು ಕೃಷಿ ವಿವಿ

-ಸಿದ್ಧಯ್ಯಸ್ವಾಮಿ ಕುಕನೂರು

Advertisement

Udayavani is now on Telegram. Click here to join our channel and stay updated with the latest news.

Next