ನವದೆಹಲಿ: ರಾಷ್ಟ್ರಪ್ರಶಸ್ತಿ ವಿಜೇತೆ ಖ್ಯಾತ ನಿರ್ದೇಶಕಿ, ಲೇಖಕಿ ಸುಮಿತ್ರಾ(78 ವರ್ಷ) ಭಾವೆ ಸೋಮವಾರ (ಏಪ್ರಿಲ್ 19) ಬೆಳಗ್ಗೆ ನಿಧನರಾಗಿದ್ದಾರೆ ಎಂದು ವರದಿ ತಿಳಿಸಿದೆ. ಮರಾಠಿ ಚಿತ್ರರಂಗದ ಪ್ರಸಿದ್ಧ ನಿರ್ದೇಶಕಿ ಭಾವೆ ಅವರು ಪುಣೆಯಲ್ಲಿ ಕೊನೆಯುಸಿರೆಳೆದಿರುವುದಾಗಿ ಮೂಲಗಳು ಹೇಳಿವೆ.
ಇದನ್ನೂ ಓದಿ:ಕಂಬಳದ ಪಯಣ ಕೊನೆಗೊಳಿಸಿ ಕಾಲನ ಕರೆಗೆ ಓಗೊಟ್ಟ ‘ಬೋಳಂತೂರು ಕಾಟಿ’
ವಾಸ್ತುಪುರುಷ್, ಕಾಸವ್, ಸಂಹಿತಾ, ಅಸ್ತು ಮತ್ತು ದೇವ್ರೈ ಸೇರಿದಂತೆ ಹಲವು ಸಿನಿಮಾಗಳಿಗೆ ಸುಮಿತ್ರಾ ಭಾವೆ ರಾಷ್ಟ್ರಪ್ರಶಸ್ತಿ ಪಡೆದಿದ್ದರು. ಮರಾಠಿ ಚಿತ್ರರಂಗಕ್ಕೆ ಹೊಸ ಸ್ಪರ್ಶ ನೀಡಿದವರಲ್ಲಿ ಸುಮಿತ್ರಾ ಭಾವೆ ಕೂಡಾ ಒಬ್ಬರಾಗಿದ್ದಾರೆ ಎಂದು ವರದಿ ತಿಳಿಸಿದೆ.
ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ಸುಮಿತ್ರಾ ಭಾವೆ ಅವರು ಪುಣೆಯ ಆಸ್ಪತ್ರೆಗೆ ದಾಖಲಾಗಿದ್ದರು ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗ್ಗೆ ವಿಧಿವಶರಾಗಿರುವುದಾಗಿ ತಿಳಿಸಿದೆ. ಮರಾಠಿ ಸಿನಿಮಾರಂಗದಲ್ಲಿ ಸುಮಿತ್ರಾ ಹಾಗೂ ಸುನಿಲ್ ಸುಕ್ತಾಂಕರ್ ದೋಘಿ, ದಾಹಾವಿ ಫಾ, ಏಕ್ ಕಪ್ ಚಾಯ್ ಸೇರಿದಂತೆ ಜನಪ್ರಿಯ ಸಿನಿಮಾಗಳನ್ನು ನಿರ್ದೇಶಿಸಿದ್ದ ಜೋಡಿ ಇದಾಗಿದೆ.
ಸುಮಿತ್ರಾ ಭಾವೆ 1943ರಲ್ಲಿ ಪುಣೆಯಲ್ಲಿ ಜನಿಸಿದ್ದರು. ಪುಣೆಯ ಫರ್ಗ್ಯುಸನ್ ಕಾಲೇಜಿನಲ್ಲಿ ಪದವಿ ಪಡೆದ ನಂತರ, ಪುಣೆ ಯೂನಿರ್ವಸಿಟಿಯಲ್ಲಿ ರಾಜಕೀಯ ಮತ್ತು ಸಮಾಜ ವಿಜ್ಞಾನದಲ್ಲಿ ಮಾಸ್ಟರ್ ಡಿಗ್ರಿ ಪಡೆದಿದ್ದರು. ನವದೆಹಲಿಯಲ್ಲಿ ಆಲ್ ಇಂಡಿಯಾ ರೇಡಿಯೋದಲ್ಲಿ ಮರಾಠಿ ಭಾಷೆಯ ಸುದ್ದಿ ವಾಚಕರಾಗಿ ಕಾರ್ಯನಿರ್ವಹಿಸಿದ್ದರು.