Advertisement
ಸುಮಲತಾ ಅವರು ಪಾಲ್ಗೊಂಡಿದ್ದ ಸಭೆಯಲ್ಲಿ ಮಾಜಿ ಸಚಿವ ಚೆಲುವರಾಯಸ್ವಾಮಿ, ಮಾಜಿ ಶಾಸಕರಾದ ಎಚ್.ಸಿ.ಬಾಲಕೃಷ್ಣ, ರಮೇಶ್ ಬಂಡಿಸಿದ್ದೇಗೌಡ, ನರೇಂದ್ರಸ್ವಾಮಿ, ರವಿ ಗಣಿಗ, ಕೆ.ಚಂದ್ರಶೇಖರ್, ಬೆಂಗಳೂರು ನಗರ ಯುವ ಕಾಂಗ್ರೆಸ್ ಅಧ್ಯಕ್ಷ ರಘುವೀರ್‌ಗೌಡ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ಮಳವಳ್ಳಿ ಶಿವಣ್ಣ ಅವರು ಭಾಗಿಯಾಗಿರುವುದು ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.
Related Articles
Advertisement
ಅತ್ತ ಮೈಸೂರಿನಲ್ಲಿ ಜಿ.ಟಿ.ದೇವೇಗೌಡರು ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಿ ಹೊಂದಲಿಲ್ಲ. ತಳಮಟ್ಟದ ಕಾರ್ಯಕರ್ತರು ಜಿದ್ದಾಜಿದ್ದಿ ಮರೆತಿಲ್ಲ. ನಮ್ಮಲ್ಲಿ ಜೆಡಿಎಸ್ ಕಾರ್ಯಕರ್ತರೇ ಬಿಜೆಪಿಗೆ ಮತ ಹಾಕಿಸಿದ್ದಾರೆ ಎಂದು ಹೇಳಿದ ಬೆನ್ನಲ್ಲೇ ಸುಮಲತಾ ಅವರು ಮಂಡ್ಯದ ಕಾಂಗ್ರೆಸ್‌ನ ನಾಯಕರು ಹಾಗೂ ಮಾಜಿ ಶಾಸಕರ ಜತೆ ಸಭೆ ಮಾಡಿರುವ ವಿಡಿಯೋ ದೃಶ್ಯಾವಳಿ ಬಹಿರಂಗಗೊಂಡಿದೆ. ಸಭೆಯಲ್ಲಿ ಸಿದ್ದರಾಮಯ್ಯ ಅವರ ಆಪ್ತ ಮಳವಳ್ಳಿ ಶಿವಣ್ಣ ಪಾಲ್ಗೊಂಡಿರುವುದು ಚರ್ಚೆಗೆ ಗ್ರಾಸವಾಗಿದೆ.
ಮೈಸೂರು-ಮಂಡ್ಯದಲ್ಲಿ ಮೈತ್ರಿ ಧರ್ಮ ಪಾಲನೆಯಾಗಿಲ್ಲ ಎಂದು ಕಾಂಗ್ರೆಸ್‌ನವರ ಮೇಲೆ ಜೆಡಿಎಸ್, ಜೆಡಿಎಸ್‌ನವರ ಮೇಲೆ ಕಾಂಗ್ರೆಸ್‌ನವರು ಆರೋಪ ಮಾಡುತ್ತಿದ್ದಾರೆ. ಒಟ್ಟಾರೆ, ಫಲಿತಾಂಶದ ನಂತರ ಯಾರ್ಯಾರು, ಎಲ್ಲೆಲ್ಲಿ ಕೈ ಕೊಟ್ಟಿದ್ದಾರೆ ಎಂಬುದು ತಿಳಿಯಲಿದೆ.
ಸಿದ್ದು ಸಭೆ ಕುತೂಹಲ: ಈ ಮಧ್ಯೆ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ ರಾತ್ರಿ ತಮ್ಮ ಆಪ್ತರ ಜತೆ ಸಭೆ ನಡೆಸಿರುವುದು ಕುತೂಹಲ ಮೂಡಿಸಿದೆ. ಸಚಿವರಾದ ಜಮೀರ್ ಅಹಮದ್, ಸತೀಶ್ ಜಾರಕಿಹೊಳಿ, ಮಾಜಿ ಸಚಿವ ಚೆಲವರಾಯಸ್ವಾಮಿ, ಮಾಜಿ ಶಾಸಕ ಬಾಲಕೃಷ್ಣ ಅವರ ಜತೆ ಚರ್ಚಿಸಿ, ಮೈಸೂರು, ಮಂಡ್ಯ, ತುಮಕೂರು, ಹಾಸನ ಸೇರಿದಂತೆ ಲೋಕಸಭೆ ಚುನಾವಣೆ ಫಲಿತಾಂಶದ ಬಗ್ಗೆ ಮಾಹಿತಿ ಪಡೆದರು. ಲೋಕಸಭೆ ಚುನಾವಣೆ ಫಲಿತಾಂಶದ ನಂತರದ ಬೆಳವಣಿಗೆಗಳ ಬಗ್ಗೆಯೂ ಚರ್ಚಿಸಿದರು ಎಂದು ತಿಳಿದು ಬಂದಿದೆ.
ಮಂಗಳವಾರ ರಾತ್ರಿಯ ಸಭೆಯಲ್ಲಿದ್ದವರೆಲ್ಲಾ 25 ಸಾವಿರ ಮತಗಳ ಅಂತರದಿಂದ ಸೋತವರು. ಡೆಡ್ ಹಾರ್ಸ್‌ಗಳು, ಸತ್ತ ಕುದುರೆಗಳಿಗೆ ಯಾವ ಖದರ್ ಇರುತ್ತದೆ? ಯಾರು ಸೋಲುತ್ತಾರೆ, ಗೆಲ್ಲುತ್ತಾರೆ ಎಂದು ಹೇಳಲು ಹೇಗೆ ಸಾಧ್ಯ? ಮೇ 23ಕ್ಕೆ ಎಲ್ಲವೂ ಗೊತ್ತಾಗಲಿದೆ.-ಎಚ್.ಸಿ.ಬಾಲಕೃಷ್ಣ, ಮಾಜಿ ಶಾಸಕ