Advertisement

ಜೆಡಿಎಸ್‌ಗೆ ಸವಾಲಾದ ಸುಮಲತಾ

12:42 AM Feb 03, 2019 | |

ಮಂಡ್ಯ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಕಾಂಗ್ರೆಸ್‌ ಮೂಲಕವೇ ಸ್ಪರ್ಧೆಗೆ ಆಸಕ್ತಿ ತೋರಿರುವ ಸುಮಲತಾ ಅಂಬರೀಶ್‌ ನಿಲುವು ಜೆಡಿಎಸ್‌ಗೆ ಹೊಸ ಸವಾಲಾಗಿದೆ. 2019ರ ಚುನಾವಣೆಯನ್ನು ಕಾಂಗ್ರೆಸ್‌-ಜೆಡಿಎಸ್‌ ಒಗ್ಗೂಡಿ ಎದುರಿಸಲು ನಿರ್ಧರಿಸಿರುವ ಬೆನ್ನಲ್ಲೇ ಸುಮಲತಾ ಅವರು ಕಾರ್ಯಕರ್ತರ ಒತ್ತಡಕ್ಕೆ ಮಣಿದು ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸಲು ಆಸಕ್ತಿ ವಹಿಸಿರುವುದು ದೋಸ್ತಿ ಪಕ್ಷಗಳ ನಡುವೆ ಶೀತಲ ಸಮರವನ್ನು ಹುಟ್ಟು ಹಾಕಿದೆ.

Advertisement

ಕಳೆದ ಲೋಕಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಮೇಲ್ನೋಟಕ್ಕೆ ಒಗ್ಗೂಡಿ ಚುನಾವಣೆ ನಡೆಸಿದ್ದರೂ ವಾಸ್ತವವಾಗಿ ಕಾಂಗ್ರೆಸ್‌ನ ಪ್ರಬಲ ಗುಂಪು ಜೆಡಿಎಸ್‌ ವಿರುದ್ಧ ಬಹಿರಂಗವಾಗಿಯೇ ಸಮರ ಸಾರಿತ್ತು. ಈಗ ಅಧಿಕೃತವಾಗಿಯೇ ಜಿಲ್ಲೆಯ ಕಾಂಗ್ರೆಸ್ಸಿಗರು ಪ್ರತ್ಯೇಕ ಸ್ಪರ್ಧೆಗೆ ಪೂರ್ವ ಸಿದ್ಧತೆ ನಡೆಸುತ್ತಿರುವುದು ಜೆಡಿಎಸ್‌ಗೆ ತಲೆನೋವಾಗಿ ಪರಿಣಮಿಸಿದೆ.

ರಾಜ್ಯದಲ್ಲೇ ಅತ್ಯಂತ ಸುರಕ್ಷಿತವಾದ ಮಂಡ್ಯ ಕ್ಷೇತ್ರದ ಮೂಲಕ ನಿಖೀಲ್‌ ಕುಮಾರಸ್ವಾಮಿಗೆ ರಾಜ ಕೀಯ ಪಟ್ಟಾಭಿಷೇಕ ನೆರವೇರಿಸುವ ಉತ್ಸಾಹದಲ್ಲಿದ್ದ ಜೆಡಿಎಸ್‌ಗೆ, ಸುಮಲತಾ ಸಿಡಿಸಿರುವ ಬಾಂಬ್‌ ಸಹಜವಾಗಿಯೇ ಆಘಾತ ಉಂಟು ಮಾಡಿದೆ.

ಅಂಬಿ ಕುಟುಂಬಕ್ಕೆ ಕೈಕೊಟ್ಟ ಸಿಎಂ?: ಕಾಂಗ್ರೆಸ್‌ನಲ್ಲಿ ಅಧಿಕೃತವಾಗಿ ತಮ್ಮ ರಾಜಕೀಯ ಬದುಕನ್ನು ಸವೆಸಿದ ಅಂಬರೀಶ್‌, 2018ರ ವಿಧಾನಸಭಾ ಚುನಾವಣೆಯ ಅಂತ್ಯದಲ್ಲಿ ಕಾಂಗ್ರೆಸ್‌ ಜತೆ ಮುನಿಸಿಕೊಂಡು, ಜೆಡಿಎಸ್‌ ವರಿಷ್ಠರೊಂದಿಗೆ ತಮ್ಮ ಒಡನಾಟವನ್ನು ಮತ್ತಷ್ಟು ಗಟ್ಟಿಗೊಳಿಸಿಕೊಂಡಿದ್ದರು. ಅಲ್ಲದೆ, ಅಂಬರೀಶ್‌ ಸಾವಿನ ಸಂದರ್ಭ ಸಿಎಂ ಸೇರಿ ಸಮಗ್ರ ಜೆಡಿಎಸ್‌ ನಾಯಕರು ಅಂಬಿ ಕುಟುಂಬದ ಪರ ನಿಂತಿದ್ದರು. ಆದರೆ, ಚುನಾವಣಾ ವಿಚಾರ ಬಂದಾಗ ಅಂಬರೀಶ್‌ ಅವರು ಕಾಂಗ್ರೆಸ್ಸಿಗರು ಎನ್ನುವ ಮೂಲಕ ಮುಖ್ಯಮಂತ್ರಿ ಕುಮಾರಸ್ವಾಮಿಯವರೇ ಅಂಬಿ ಕುಟುಂಬಕ್ಕೆ ಕೈ ಕೊಟ್ಟಂತೆ ಕಂಡು ಬರುತ್ತಿದೆ.

ಅಂಬರೀಶ್‌ ಸಾವಿನ ವೇಳೆ ಕುಮಾರಸ್ವಾಮಿಯವರ ಮಾನವೀಯ ನಡವಳಿಕೆಯನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸಿದ್ದ ಅಸಂಖ್ಯಾತ ಅಂಬರೀಶ್‌ ಅಭಿಮಾನಿ ಬಳಗ, ನಂತರದಲ್ಲಿ ಅಂಬಿ ಕುಟುಂಬಕ್ಕೆ ಜೆಡಿಎಸ್‌ನಿಂದ ನೇರವಾಗಿ ಅಥವಾ ಕಾಂಗ್ರೆಸ್‌ನಿಂದ ಪರೋಕ್ಷವಾಗಿ ರಾಜಕೀಯ ಅಧಿಕಾರ ದೀಕ್ಷೆ ನೀಡುವುದೆಂಬ ಭರವಸೆಯಿತ್ತು. ಆದರೆ, ನಗರದಲ್ಲಿ ಇತ್ತೀಚೆಗೆ ಅಂಬರೀಶ್‌ ಅಭಿಮಾನಿಗಳ ಸಂಘದಿಂದ ನಡೆದ ಅಂಬಿ ನುಡಿ ನಮನ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸೇರಿ ಜೆಡಿಎಸ್‌ನ ಸಮಸ್ತ ನಾಯಕರು ಗೈರು ಹಾಜರಾಗುವ ಮೂಲಕ ಅಂಬಿ ಸಂಸ್ಮರಣೆ ಕಾರ್ಯಕ್ರಮವನ್ನು ಕಾಂಗ್ರೆಸ್‌ಮಯ ಮಾಡಿದ್ದರು. ಜತೆಗೆ, ಇತ್ತೀಚೆಗೆ ಕುಮಾರಸ್ವಾಮಿ ನೀಡಿರುವ ಹೇಳಿಕೆ, ಅವರ ನಡವಳಿಕೆ ಸಹಜವಾಗಿ ಅಂಬರೀಶ್‌ ಅಭಿಮಾನಿ ಬಳಗಕ್ಕೆ ನಿರಾಸೆ ಮೂಡಿಸಿದೆ.

Advertisement

ಈ ಎಲ್ಲಾ ಬೆಳವಣಿಗೆಗಳ ನಡುವೆ ನಿಖೀಲ್‌ ಕುಮಾರಸ್ವಾಮಿ ಅವರನ್ನು ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆಗಿಳಿಸುವ ಪೂರ್ವ ಸಿದ್ಧತೆಗಳು ಆರಂಭಗೊಂಡಿದೆ. ಇತ್ತೀಚೆಗೆ ನಡೆಯುತ್ತಿರುವ ಸರ್ಕಾರಿ ಕಾರ್ಯಕ್ರಮಗಳಲ್ಲಿ ನಿಖೀಲ್‌ ದರ್ಬಾರ್‌ ಇದಕ್ಕೆ ಸಾಕ್ಷಿಯಾಗಿದೆ. ಸೀತಾರಾಮ ಕಲ್ಯಾಣ ಚಿತ್ರ ಕೂಡ ನಿಖೀಲ್‌ ಅವರ ಚುನಾವಣಾ ಪ್ರಚಾರಕ್ಕೆ ಬಳಕೆಯಾಗು ತ್ತಿದೆ ಎಂಬ ಮಾತುಗಳು ದಟ್ಟವಾಗಿ ಕೇಳಿ ಬಂದಿವೆ.

ಸ್ಪರ್ಧೆಗೆ ಒಲವು ತೋರಿದ ಸುಮಲತಾ: ಮಂಡ್ಯದ ನೂರಾರು ಕಾಂಗ್ರೆಸ್ಸಿಗರು ಸುಮಲತಾ ಅಂಬರೀಶ್‌ ಅವರನ್ನು ಬೆಂಗಳೂರಿನಲ್ಲಿ ಭೇಟಿ ಮಾಡಿ ಮಂಡ್ಯ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸುವಂತೆ ಆಹ್ವಾನ ನೀಡಿದ್ದಾರೆ. ಇದಕ್ಕೆ ಸಹಮತ ವ್ಯಕ್ತಪಡಿಸಿರುವ ಸುಮಲತಾ, ಅಂಬರೀಶ್‌ಗೆ ಮಂಡ್ಯವೇ ರಾಜಕೀಯ ಜನ್ಮಭೂಮಿ ಎನ್ನುವುದನ್ನು ನೆನಪಿಸಿಕೊಂಡಿದ್ದಾರೆ. ತಮ್ಮ ರಾಜಕೀಯ ನಿರ್ಧಾರವನ್ನು ಮಂಡ್ಯದ ಜನರೇ ತೆಗೆದುಕೊಳ್ಳುತ್ತಾರೆ ಮತ್ತು ಅವರ ಅಭಿಲಾಷೆಯಂತೆ ಚುನಾವಣಾ ನಿರ್ಧಾರವನ್ನು ಕೈಗೊಳ್ಳುತ್ತೇನೆ ಎನ್ನುವ ಮೂಲಕ ತಮ್ಮ ಸ್ಪರ್ಧೆಯ ಇರಾದೆಯನ್ನು ವ್ಯಕ್ತಪಡಿಸಿದ್ದಾರೆ.

‘ನಾನು ಯಾವುದೇ ದ್ವೇಷ ಸಾಧನೆಗಾಗಿ ಚುನಾವ ಣೆಗೆ ಸ್ಪರ್ಧಿಸುತ್ತಿಲ್ಲ. ಎಲ್ಲ ನಾಯಕರೊಡನೆ ಸಮಾಲೋ ಚಿಸಿ, ಮುಂದಿನ ನಡೆ ತಿಳಿಸುವುದಾಗಿ ಅಂಬರೀಶ್‌ ಅವರ ಮಾದರಿಯಲ್ಲೇ ಹೇಳಿಕೆ ನೀಡಿರುವ ಸುಮಲತಾ, ಅಭಿಷೇಕ್‌ ಅವರನ್ನು ಚಿತ್ರರಂಗದಲ್ಲಿ ಇನ್ನಷ್ಟು ಬೆಳೆಸುವ ಮತ್ತು ತಾತ್ಕಾಲಿಕವಾಗಿ ರಾಜಕಾರಣದಿಂದ ದೂರ ಇಡುವ ದೂರದೃಷ್ಟಿಯನ್ನು ಹೊಂದಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಏಳೂ ಕ್ಷೇತ್ರಗಳಲ್ಲಿ ಹೀನಾಯವಾಗಿ ಪರಾಭವಗೊಂಡು ಲೋಕಸಭಾ ಉಪ ಚುನಾವಣೆಯಲ್ಲಿಯೂ ಸ್ಪರ್ಧೆಗೆ ಅವಕಾಶವಿಲ್ಲದೆ ರಾಜಕೀಯವಾಗಿ ಸೊರಗಿ ಹೋಗಿದ್ದ ಮಂಡ್ಯದ ಕಾಂಗ್ರೆಸ್ಸಿಗರಿಗೆ ಸುಮಲತಾ ಅಂಬರೀಶ್‌ ಅವರ ಸ್ಪರ್ಧಾಕಾಂಕ್ಷೆಯ ಮಾತುಗಳು ಹೊಸ ಭರವಸೆಯನ್ನು ಮೂಡಿಸಿವೆ. ಇದು ಜೆಡಿಎಸ್‌ಗೆ ಸೆರಗಿನಲ್ಲಿರುವ ಕೆಂಡವಾಗಿದೆ.

ಸುಮಲತಾ ಪಕ್ಷೇತರ ಅಭ್ಯರ್ಥಿ ಆದರೆ ಬಿಜೆಪಿ ಸೂಕ್ತ ಸಂದರ್ಭದಲ್ಲಿ ತೀರ್ಮಾನ

ಬೆಂಗಳೂರು: ಸುಮಲತಾ ಅವರು ಮಂಡ್ಯದಿಂದ ಸ್ವತಂತ್ರವಾಗಿ ಸ್ಪರ್ಧಿಸಿದರೆ ಬಿಜೆಪಿ ಸೂಕ್ತ ಸಮಯದಲ್ಲಿ ರಾಜಕೀಯ ತೀರ್ಮಾನ ಕೈಗೊಳ್ಳಲಿದೆ ಎಂದು ಮಾಜಿ ಉಪ ಮುಖ್ಯಮಂತ್ರಿ ಆರ್‌.ಅಶೋಕ್‌ ಹೇಳಿದ್ದಾರೆ. ಕೇಂದ್ರ ಬಜೆಟ್‌ನಲ್ಲಿ ಕಿಸಾನ್‌ ಸಮ್ಮಾನ್‌ ಯೋಜನೆ ಘೋಷಣೆ ಹಿನ್ನೆಲೆಯಲ್ಲಿ ಬಿಜೆಪಿ ಆಯೋಜಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಅಂಬರೀಶ್‌ ಕುಟುಂಬ ಯಾವ ಪಕ್ಷಕ್ಕೂ ಸೀಮಿತವಾಗಿಲ್ಲ. ರಾಜಕೀಯದಲ್ಲಿ ಯಾವುದೂ ನಿಂತ ನೀರಲ್ಲ. ಸುಮಲತಾ ಅವರು ಸ್ಪತಂತ್ರವಾಗಿ ಸ್ಪರ್ಧೆ ಮಾಡುವ ನಿರ್ಧಾರ ಆದ ಬಳಿಕ ಬಿಜೆಪಿ ಸೂಕ್ತ ತೀರ್ಮಾನ ಕೈಗೊಳ್ಳಲಿದೆ ಎಂದರು. ಆ ಮೂಲಕ ಒಂದೊಮ್ಮೆ ಸುಮಲತಾ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದರೆ ಬಿಜೆಪಿ ಅಭ್ಯರ್ಥಿಯನ್ನು ಹಾಕದೆ ಬೆಂಬಲಿಸುವ ಸಂದೇಶ ರವಾನಿಸಿದ್ದಾರೆ.

ಜತೆಗೆ, ಒಂದೊಮ್ಮೆ ಸುಮಲತಾ ಅವರು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿ ಸಿದರೆ, ಬಿಜೆಪಿ ಅಭ್ಯರ್ಥಿಯನ್ನು ಕಣಕ್ಕಿಳಿ ಸದೆ, ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿಕೂಟದ ಅಭ್ಯರ್ಥಿ ವಿರುದ್ಧ ಅವರು ಗೆಲುವು ಸಾಧಿಸಿದರೆ ನಂತರ ಬಿಜೆಪಿಗೆ ಅವರನ್ನು ಸೇರಿಸಿಕೊಳ್ಳುವ ಕಾರ್ಯತಂತ್ರವೂ ಇದೆ ಎಂದು ಹೇಳಲಾಗುತ್ತಿದೆ. ಒಟ್ಟಾರೆ, ಮಂಡ್ಯ ಕ್ಷೇತ್ರದ ಅಭ್ಯರ್ಥಿ ವಿಚಾರ ದಿನಕ್ಕೊಂದು ತಿರುವು ಪಡೆಯುತ್ತಿದೆ. ಜತೆಗೆ, ಅಶೋಕ್‌ ಅವರ ಹೇಳಿಕೆ ರಾಜಕೀಯ ವಲಯದಲ್ಲಿ ನಾನಾ ರೀತಿಯ ವ್ಯಾಖ್ಯಾನಗಳಿಗೆ ಎಡೆ ಮಾಡಿಕೊಟ್ಟಿದೆ.

ಸುಮಲತಾ ಸ್ಪರ್ಧೆ ಬಗ್ಗೆ ಚರ್ಚೆ ನಡೆದಿಲ್ಲ

ಮಂಗಳೂರು: ಲೋಕಸಭಾ ಚುನಾವಣೆಯಲ್ಲಿ ಮಂಡ್ಯದಲ್ಲಿ ಕಾಂಗ್ರೆಸ್‌ನಿಂದ ಸುಮಲತಾ ಅವರು ಸ್ಪರ್ಧಿಸುವ ಬಗ್ಗೆ ಪಕ್ಷದಲ್ಲಿ ಇದುವರೆಗೆ ಯಾವುದೇ ಚರ್ಚೆ ನಡೆದಿಲ್ಲ ಎಂದು ಸಮ್ಮಿಶ್ರ ಸರಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಹೇಳಿದ್ದಾರೆ. ಸುದ್ದಿಗಾರರ ಜತೆ ಮಾತನಾಡಿ, ಯಾವ್ಯಾವ ಕ್ಷೇತ್ರದಲ್ಲಿ ಯಾರಿಗೆ ಟಿಕೆಟ್ ನೀಡಬೇಕೆಂಬ ಬಗ್ಗೆ ಇನ್ನೂ ಚರ್ಚೆ ಮಾಡಿಲ್ಲ. ಕಾಂಗ್ರೆಸ್‌ ಹಾಗೂ ಜೆಡಿಎಸ್‌ ನಾಯಕರು ಒಟ್ಟು ಸೇರಿ ಚರ್ಚೆ ನಡೆಸುñ್ತಾರೆ. ಯಾವ ಕ್ಷೇತ್ರದಲ್ಲಿ ಯಾರು ಗೆಲ್ಲಬಹುದು ಎಂಬುದನ್ನು ನೋಡಿಕೊಂಡು ಟಿಕೆಟ್ ಹಂಚಿಕೆ ಬಗ್ಗೆ ನಿರ್ಧರಿಸಲಾಗುವುದು ಎಂದರು.

ಮಂಡ್ಯ ಮಂಜುನಾಥ್‌

Advertisement

Udayavani is now on Telegram. Click here to join our channel and stay updated with the latest news.

Next