Advertisement
ಜೆಡಿಎಸ್-ಕಾಂಗ್ರೆಸ್ ನಡುವೆ ಲೋಕಸಭಾ ಸೀಟು ಹಂಚಿಕೆಗೆ ಹಗ್ಗ-ಜಗ್ಗಾಟ ನಡೆದಿರುವ ಸಂದರ್ಭದಲ್ಲೇ ಸುಮಲತಾ ಮಂಡ್ಯ ಜಿಲ್ಲೆಯೊಳಗೆ ಪ್ರವಾಸ ನಡೆಸುತ್ತಿರುವುದು ರಾಜಕೀಯ ಕುತೂಹಲಕ್ಕೂ ಕಾರಣವಾಗಿದೆ. ಚುನಾವಣೆಗೆ ಸ್ಪರ್ಧಿಸುವುದಾದರೆ ಮಂಡ್ಯ ಕ್ಷೇತ್ರದಿಂದಲೇ ಎಂದು ದೃಢ ನಿಶ್ಚಯ ಮಾಡಿರುವುದು ಜೆಡಿಎಸ್ ಪಾಳಯದಲ್ಲಿ ಆತಂಕ ಮೂಡಿಸಿದೆ.
Related Articles
Advertisement
ಕಾಂಗ್ರೆಸ್‌ನೊಳಗೆ ಸಂತಸ: ಜಿಲ್ಲೆಯೊಳಗೆ ಅಸ್ತಿತ್ವವನ್ನೇ ಕಳೆದುಕೊಂಡು ದುರ್ಬಲವಾಗಿರುವ ಕಾಂಗ್ರೆಸ್ ಪಾಲಿಗೆ ಸುಮಲತಾ ಸಂಜೀವಿನಿಯಂತೆ ಕಂಡುಬಂದಿದ್ದಾರೆ. ಅಧಿಕಾರ ರಾಜಕಾರಣದಿಂದ ದೂರವಾಗಿರುವ ಕೈ ನಾಯಕರು ಸುಮಲತಾ ಅವರನ್ನು ಅಸ್ತ್ರವಾಗಿ ಬಳಸಿಕೊಂಡು ಕ್ಷೇತ್ರದಲ್ಲಿ ರಾಜಕೀಯ ಅಸ್ತಿತ್ವದ ಮರು ಪ್ರತಿಷ್ಠಾಪನೆಗೆ ಮುಂದಾಗಿದ್ದಾರೆ. ಇದೇ ಕಾರಣದಿಂದ ಅವರ ಬೆನ್ನಿಗೆ ನಿಂತು ಪರೋಕ್ಷವಾಗಿ ಶಕ್ತಿ ತುಂಬುವ ಕೆಲಸ ಮಾಡುತ್ತಿರುವುದಲ್ಲದೆ, ಸುಮಲತಾ ಅವರನ್ನೇ ಅಭ್ಯರ್ಥಿ ಎಂದು ಜನಮಾನಸದಲ್ಲಿ ಬಿಂಬಿಸುವ ಪ್ರಯತ್ನದಲ್ಲಿ ತೊಡಗಿದ್ದಾರೆ.
ಮೌನಕ್ಕೆ ಶರಣು: ಚುನಾವಣೆ ಘೋಷಣೆಯಾಗುವುದರೊಳಗೆ ಕಾಂಗ್ರೆಸ್ ನಾಯಕರನ್ನೆಲ್ಲಾ ಭೇಟಿಯಾಗಿ ಬೆಂಬಲ ಕೋರಲು ನಿರ್ಧರಿಸಿರುವ ಸುಮಲತಾ ಅವರು, ಜೆಡಿಎಸ್ ನಾಯಕರ ವಿರೋಧಿ ಹೇಳಿಕೆಗಳಿಗೆ ಯಾವುದೇ ಪ್ರತಿಕ್ರಿಯೆಯನ್ನೂ ನೀಡದೆ ಮೌನಕ್ಕೆ ಶರಣಾಗಿ ಜಾಣ ನಡೆ ಪ್ರದರ್ಶಿಸುತ್ತಿದ್ದಾರೆ. ಜೆಡಿಎಸ್ ಭದ್ರಕೋಟೆಯೊಳಗೆ ಪುತ್ರ ನಿಖೀಲ್‌ಗೆ ರಾಜಕೀಯ ನೆಲೆ ದೊರಕಿಸುವ ಮಹತ್ವಾಕಾಂಕ್ಷೆ ಹೊಂದಿದ್ದ ಸಿಎಂ ಕುಮಾರಸ್ವಾಮಿ ಅವರಿಗೆ ಸುಮಲತಾ ಚುನಾವಣಾ ಸ್ಪರ್ಧೆಗೆ ಆಸಕ್ತಿ ವಹಿಸಿರುವುದು ದೊಡ್ಡ ಆಘಾತ ನೀಡಿದೆ. ನಿಖೀಲ್ ಜೆಡಿಎಸ್‌ನ ಅಧಿಕೃತ ಅಭ್ಯರ್ಥಿ ಎಂದು ದೃಢವಾಗಿ ಹೇಳುತ್ತಾ, ಅವರ ಹೆಸರನ್ನು ಮುಂಚೂಣಿಗೆ ತರುವ ಪ್ರಯತ್ನಕ್ಕೂ ಸ್ಥಳೀಯ ಶಾಸಕರು ಗಮನಹರಿಸುತ್ತಿಲ್ಲ. ಇದು ಕುಟುಂಬದ ಕುಡಿಯನ್ನು ಜಿಲ್ಲೆಗೆ ಕರೆತರುವ ಜೆಡಿಎಸ್ ವರಿಷ್ಠರ ಪ್ರಯತ್ನಕ್ಕೂ ಹಿನ್ನಡೆ ಉಂಟುಮಾಡಿದೆ.
ಹಲವು ನಾಯಕರ ಭೇಟಿ: ಬೆಂಗಳೂರಿನಿಂದ ಮಂಡ್ಯಕ್ಕೆ ಬರುವಾಗಲೇ ರಾಮನಗರದಲ್ಲಿ ಸಚಿವ ಡಿ.ಕೆ.ಶಿವಕುಮಾರ್ ಅವರನ್ನೂ ಭೇಟಿಯಾಗಿ ಮಾತುಕತೆ ನಡೆಸಿರುವ ಸುಮಲತಾ ರಾಜಕೀಯ ಬೆಂಬಲ ನೀಡುವಂತೆ ಮನವಿ ಮಾಡಿದ್ದಾರೆ. ಆನಂತರ ಹುತಾತ್ಮ ಯೋಧನ ಕುಟುಂಬಕ್ಕೆ ಸಾಂತ್ವನ ಹೇಳಿ ಬಳಿಕ ಪಾಂಡವಪುರ ಶಾಸಕರಾಗಿದ್ದ ದಿವಂಗತ ಕೆ.ಎಸ್.ಪುಟ್ಟಣ್ಣಯ್ಯ ಕುಟುಂಬ ಹಾಗೂ ರೈತ ಮುಖಂಡರ ಜೊತೆ ಮಾತುಕತೆ ನಡೆಸಿದ್ದಾರೆ. ಇಂಡುವಾಳು ಎಸ್.ಸಚ್ಚಿದಾನಂದ ನಿವಾಸಕ್ಕೂ ತೆರಳಿ ಅಲ್ಲಿಯೂ ಸ್ಥಳೀಯರೊಟ್ಟಿಗೆ ಚರ್ಚಿಸಿದ್ದಾರೆ. ಸುಮಲತ ಚುನಾವಣಾ ಪ್ರವೇಶಕ್ಕೆ ಮುನ್ನವೇ ಜಿಲ್ಲೆಯೊಳಗೆ ವ್ಯವಸ್ಥಿತ ವೇದಿಕೆ ರೆಡಿಯಾಗುತ್ತಿದೆ. ಸ್ಥಳೀಯ ನಾಯಕತ್ವದ ಪ್ರಶ್ನೆ ಎದುರಾಗಿರುವುದರಿಂದ ಸುಮಲತಾ ಸ್ಪರ್ಧೆಗೆ ಹೆಚ್ಚಿನ ಒಲವು ವ್ಯಕ್ತವಾಗುತ್ತಿರುವಂತೆ ಕಂಡುಬರುತ್ತಿದೆ.
ಅದ್ಧೂರಿ ಸ್ವಾಗತ: ಹುತಾತ್ಮ ಯೋಧ ಎಚ್‌ಗುರು ಕುಟುಂಬಕ್ಕೆ ಸಾಂತ್ವನ ಹೇಳಲು ಆಗಮಿಸಿದ ಸುಮಲತಾ ಅಂಬರೀಶ್ ಅವರಿಗೆ ರಸ್ತೆಯುದ್ದಕ್ಕೂ ಅಭಿಮಾನಿಗಳು ಅಭಿನಂದನೆಗಳ ಮಹಾಪೂರದೊಂದಿಗೆ ಅದ್ಧೂರಿ ಸ್ವಾಗತ ನೀಡಿದರು. ಲೋಕಸಭಾ ಚುನಾವಣೆಗೆ ಸ್ಪರ್ಧಿಸುವಂತೆ ಎಲ್ಲರಿಂದಲೂ ಒಕ್ಕೊರಲ ಆಗ್ರಹ ಕೇಳಿಬಂದಿತು. ಎಳನೀರು, ಕಬ್ಬಿನ ಜ್ಯೂಸ್ ನೀಡಿ ಸತ್ಕರಿಸಿದರಲ್ಲದೆ ಅಭಿಷೇಕ್ ಹಾಗೂ ಸುಮಲತಾ ಜೊತೆಗೆ ಸೆಲ್ಫಿ ತೆಗೆಸಿಕೊಳ್ಳುವುದಕ್ಕೆ ಮುಗಿಬಿದ್ದರು. ಅಭಿಮಾನಿಗಳ ಆಸೆಯನ್ನು ನಿರಾಸೆಗೊಳಿಸದೆ ಅವರ ಜೊತೆಗಿದ್ದು ಸೆಲ್ಫಿಗೆ ಸಹಕರಿಸಿದರಲ್ಲದೆ, ಅಭಿಮಾನಿಗಳತ್ತ ಕೈ ಬೀಸುತ್ತಾ ಮುನ್ನಡೆಯುತ್ತಿದ್ದ ದೃಶ್ಯ ಎಲ್ಲೆಡೆ ಕಂಡುಬಂತು.ಯೋಧನ ಕುಟುಂಬದ ರೋಧನ: ಸುಮಲತಾ ಕಣ್ಣೀರು
ಮಂಡ್ಯ/ಭಾರತೀನಗರ: ಹುತಾತ್ಮ ಯೋಧ ಎಚ್‌ಗುರು ಕುಟುಂಬದವರಿಗೆ ಸುಮಲತಾ ಸಾಂತ್ವನ, ತಂದೆ, ತಾಯಿ, ಪತ್ನಿಯ ರೋಧನ ಕಂಡು ಭಾವುಕರಾಗಿ ಕಣ್ಣೀರಿಟ್ಟು ದುಃಖದಲ್ಲಿ ಭಾಗಿ, ಯೋಧನ ಪತ್ನಿ ಕಲಾವತಿ ಕಾಲಿಗೆ ಬಿದ್ದು ನಮಸ್ಕರಿಸಿದಾಗಲಂತೂ ಇನ್ನಷ್ಟು ಭಾವುಕತೆಯಿಂದ ಅವರನ್ನು ಹಿಡಿದು ಮೇಲೆತ್ತಿ ಅಪ್ಪಿಕೊಂಡು ಅತ್ತ ದೃಶ್ಯ ಎಲ್ಲರ ಮನಕಲಕುವಂತಿತ್ತು. ಯೋಧರ ಹತ್ಯೆಗೆ ಇಡೀ ದೇಶವೇ ದುಃಖಪಡುತ್ತಿದೆ. ನಾವೆಲ್ಲರೂ ಸಾಮಾನ್ಯ ಮನುಷ್ಯರು. ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಗುರುವಿನಂತಹ ಸೈನಿಕರು ವೀರಯೋಧರಾಗಿದ್ದಾರೆ. ಅವರ ಜೊತೆ ಇಡೀ ದೇಶದ ಜನರಿದ್ದಾರೆ. ನೀವು ಹೆದರಬೇಡಿ. ನಿಮ್ಮೊಂದಿಗೆ ನಾವು ಸದಾ ಇದ್ದೇವೆ ಎಂದು ಧೈರ್ಯ ತುಂಬಿದರು. ಯೋಧ ಗುರುವಿನ ತಾಯಿ ಚಿಕ್ಕೋಳಮ್ಮ, ದೇಶ ಸೇವೆಯಲ್ಲಿ ತೊಡಗಿಸಿಕೊಂಡಿದ್ದ ಒಬ್ಬ ಮಗನನ್ನು ಈಗಾಗಲೇ ಕಳೆದುಕೊಂಡು ಸಾಕಷ್ಟು ನೊಂದಿದ್ದೇವೆ. ಇನ್ನೊಬ್ಬ ಮಗ ಕೆಇಬಿಯಲ್ಲಿ ಲೈನ್‌ಮನ್ ಆಗಿ ಕೆಲಸ ಮಾಡುತ್ತಿದ್ದಾನೆ. ಆತ ಮನೆಗೆ ಬರುವವರೆಗೂ ನಮಗೆ ಆತಂಕವಿರುತ್ತದೆ. ದಯಮಾಡಿ ಅವನಿಗೆ ಇಲಾಖೆಯಲ್ಲೇ ಬೇರೊಂದು ಜಾಗಕ್ಕೆ ಅವಕಾಶ ಮಾಡಿಕೊಡಲು ಶಿಫಾರಸು ಮಾಡುವಂತೆ ಸುಮಲತಾ ಅವರಲ್ಲಿ ಮನವಿ ಮಾಡಿದರು. ಈ ಬಗ್ಗೆ ನಾನು ಅಧಿಕಾರಿಗಳೊಂದಿಗೆ ಮಾತನಾಡುತ್ತೇನೆ. ನಿಮ್ಮ ಮಗ ಕೆಲಸ ಮಾಡುವ ಸ್ಥಳ ಹಾಗೂ ಕೆಲಸದ ಬಗ್ಗೆ ವಿವರಗಳನ್ನು ನೀಡುವಂತೆ ತಿಳಿಸಿದರಲ್ಲದೆ, ನಿಮ್ಮ ಕುಟುಂಬಕ್ಕೆ ಅರ್ಧ ಎಕರೆ ಜಮೀನು ನೀಡುವ ಬಗ್ಗೆ ನನ್ನ ಮಗ ಅಭಿಷೇಕ್ ಜೊತೆ ಮಾತನಾಡಿದ್ದೇನೆ. ಅವನೇ ಬಂದು ನಿಯಮಾನುಸಾರ ಜಮೀನನ್ನು ಕುಟುಂಬಕ್ಕೆ ವರ್ಗಾಯಿಸಿಕೊಡಲಿದ್ದಾನೆ ಎಂದು ಹೇಳಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ನಾನು ಮಲೇಷಿಯಾದಲ್ಲಿ ಇದ್ದಾಗಲೇ ಯೋಧನ ಕುಟುಂಬಕ್ಕೆ ಅರ್ಧ ಎಕರೆ ಜಮೀನು ನೀಡುವ ಬಗ್ಗೆ ತಿಳಿಸಿದ್ದೆ. ಈಗಲೂ ಅವರ ಕುಟುಂಬಕ್ಕೆ ಜಮೀನು ನೀಡುವುದಾಗಿ ಹೇಳಿದ್ದೇನೆ. ಅವರೂ ಸಹ ಜಮೀನು ಪಡೆಯಲು ಒಪ್ಪಿದ್ದಾರೆ. ಆದಷ್ಟು ಶೀಘ್ರವೇ ಜಮೀನನ್ನು ಅವರ ಸುಪರ್ದಿಗೆ ದೊರಕಿಸಿಕೊಡುವುದಾಗಿ ತಿಳಿಸಿದರು. ಸಮಾಧಿಗೆ ನಮನ: ಇದಕ್ಕೂ ಮುನ್ನ ಸುಮಲತಾ ಅವರು ದೊಡ್ಡರಸಿನಕೆರೆ ಗ್ರಾಮಕ್ಕೆ ತೆರಳಿ ಜಮೀನು ವೀಕ್ಷಣೆ ಮಾಡಿ ಸಂಬಂಧಿಕರಿಂದ ಮಾಹಿತಿ ಪಡೆದುಕೊಂಡರು. ಬಳಿಕ ಅಭಿಷೇಕ್, ರಾಕ್‌ಲೈನ್ ವೆಂಕಟೇಶ್ ಅವರೊಂದಿಗೆ ಮದ್ದೂರು-ಮಳವಳ್ಳಿ ಹೆದ್ದಾರಿಯ ಮೆಳ್ಳಹಳ್ಳಿ ಬಳಿ ಇರುವ ವೀರಯೋಧ ಎಚ್‌ಗುರು ಸಮಾಧಿಗೆ ನಮನ ಸಲ್ಲಿಸಿದರು. * ಮಂಡ್ಯ ಮಂಜುನಾಥ್