ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಸೀಟು ಹಂಚಿಕೆ ವಿಷಯದಲ್ಲಿ ತೀವ್ರ ಕುತೂಹಲ ಮೂಡಿಸಿರುವ ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸಲು ಕಾಂಗ್ರೆಸ್ ಪಕ್ಷದಿಂದ ಅವಕಾಶ ಕಲ್ಪಿಸಿ ಕೊಡುವಂತೆ ಮಾಜಿ ಸಚಿವ ದಿವಂಗತ ಅಂಬರೀಶ್ ಅವರ ಪತ್ನಿ ಸುಮಲತಾ ಅಂಬರೀಶ್ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದಾರೆ. ಬುಧವಾರ ಸಂಜೆ ಸಿದ್ದರಾಮಯ್ಯ ಅವರ ಕಾವೇರಿ ನಿವಾಸದಲ್ಲಿ ಭೇಟಿ ಮಾಡಿ ಸುಮಾರು ಒಂದು ಗಂಟೆ ಚರ್ಚಿಸಿದರು. ಅಂಬರೀಶ್ ಅವರು ಕಾಂಗ್ರೆಸ್‌ನಲ್ಲಿ ಸಕ್ರಿಯರಾಗಿದ್ದರು. ಮಂಡ್ಯದ ಜನತೆ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸುವಂತೆ ಒತ್ತಾಯ ಮಾಡುತ್ತಿದ್ದಾರೆ. ಜನರ ಪ್ರೀತಿಗೆ ಗೌರವ ಕೊಟ್ಟು ಕಾಂಗ್ರೆಸ್‌ನಿಂದಲೇ ಸ್ಪರ್ಧಿಸಲು ಪಕ್ಷದಿಂದ ಅವಕಾಶ ಕಲ್ಪಿಸಿಕೊಡಿ ಎಂದು ಮನವಿ ಮಾಡಿದ್ದಾರೆ.
ಅಂಬರೀಶ್ ಅಭಿಮಾನಿಗಳು ಹಾಗೂ ಮಂಡ್ಯದ ಜನತೆಯ ಋಣ ತೀರಿಸಲು ಅವಕಾಶ ಮಾಡಿಕೊಡಲು ಪಕ್ಷದ ನಿರ್ಧಾರವನ್ನು ಆದಷ್ಟು ಬೇಗ ತಿಳಿಸಿದರೆ ಅನುಕೂಲವಾಗಲಿದೆ ಎಂದು ಸುಮಲತಾ ಕೇಳಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಆದರೆ, ಸಿದ್ದರಾಮಯ್ಯ ಯಾವುದೇ ಸ್ಪಷ್ಟ ಭರವಸೆ ನೀಡದೆ ಪಕ್ಷದ ವೇದಿಕೆಯಲ್ಲಿ ಚರ್ಚಿಸಿ ತಿಳಿಸುವುದಾಗಿ ಹೇಳಿದ್ದಾರೆಂದು ತಿಳಿದು ಬಂದಿದೆ.
ಸಿದ್ದರಾಮಯ್ಯ ಅವರ ಭೇಟಿಯ ನಂತರ ಮಾತನಾಡಿದ ಸುಮಲತಾ, ಮಂಡ್ಯದಲ್ಲಿ ಅಂಬರೀಶ್ ಬೆಂಬಲಿಗರು ನಾನು ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತೇನೆಂದುನಂಬಿ ಕೆ ಇಟ್ಟಿದ್ದಾರೆ. ಅವರ ಅನಿಸಿಕೆಯನ್ನು ಪಕ್ಷದ ಹಿರಿಯ ನಾಯಕರ ಗಮನಕ್ಕೆ ತಂದಿದ್ದೇನೆ. ಸಿದ್ದರಾಮಯ್ಯ ಅವರ ಗಮನಕ್ಕೂ ತಂದಿದ್ದೇನೆ. ಅವರು ಈಗಿರುವ ಪರಿಸ್ಥಿತಿಯ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳುವುದಾಗಿ ಹೇಳಿದ್ದಾರೆ. ನಾನು ಮೊದಲು ಪಕ್ಷದ ತೀರ್ಮಾನಕ್ಕೆ ಆದ್ಯತೆ ನೀಡುವುದಾಗಿ ಹೇಳಿದರು.
ಮಂಡ್ಯದಲ್ಲಿ ಅಂಬಿಯಂತೆ ನೀವು ಜನ ಸೇವೆ ಮುಂದುವರಿಸಿಕೊಂಡು ಹೋಗಿ ಎಂದು ಅಲ್ಲಿನ ಜನರು ಹೇಳುತ್ತಿದ್ದಾರೆ. ನನಗೆ ಜನರ ಅಭಿಪ್ರಾಯವೇ ಅಂತಿಮ. ನಾನು ಈ ದಿಕ್ಕಿನಲ್ಲಿ ಯಾವತ್ತೂ ಯೋಚನೆ ಮಾಡಿರಲಿಲ್ಲ. ಜನರ ಅಭಿಪ್ರಾಯದಂತೆ ಚುನಾವಣೆಯಲ್ಲಿ ಸ್ಪರ್ಧಿಸಲು ತೀರ್ಮಾನಿಸಿದ್ದೇನೆ. ಪಕ್ಷದಲ್ಲಿದ್ದಾಗ ಪಕ್ಷದ ನಾಯಕರ ತೀರ್ಮಾನ ಅಂತಿಮವಾಗುತ್ತದೆ. ಪಕ್ಷ ಅಸಹಾಯಕವಾದಾಗ ಜನರ ತೀರ್ಮಾನವೇ ಅಂತಿಮವಾಗಲಿದೆ. ಮಂಡ್ಯದಲ್ಲಿ ಕಾಂಗ್ರೆಸ್‌ಗೆ ಒಂದು ನೆಲೆ ಇದೆ.
ಮಂಡ್ಯದ ಜನರು ಅಂಬರೀಶ್ ಮೇಲೆ ಅಭಿಮಾನ ಇಟ್ಟಿದ್ದಾರೆ. ಅಭಿಷೇಕ್ ಮೇಲೂ ಅವರಿಗೆ ಅಭಿಮಾನ ಇದೆ. ನಾವು ಕಾಂಗ್ರೆಸ್‌ನಲ್ಲಿ ಗುರುತಿಸಿಕೊಂಡಿದ್ದೇವೆ. ಹೀಗಾಗಿ ಪಕ್ಷದ ನಾಯಕರ ಗಮನಕ್ಕೆ ತಂದಿದ್ದೇನೆ. ಹೀಗಾಗಿ ಬೇರೆ ಕಡೆ ಹೋಗುವ ಪ್ರಶ್ನೆಯಿಲ್ಲ. ಪಕ್ಷದಿಂದ ಬರುವ ತೀರ್ಮಾನಕ್ಕೆ ಮೊದಲು ಆದ್ಯತೆ ನೀಡುತ್ತೇನೆ. ನಂತರ ಮಂಡ್ಯದ ಜನರೊಂದಿಗೆ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳುತ್ತೇನೆ ಎಂದು ಹೇಳಿದರು.
ಇಂದು ಮಂಡ್ಯಕ್ಕೆ ಭೇಟಿ, ಸಾಂತ್ವನ
ಮಂಡ್ಯದಿಂದಲೇ ಚುನಾವಣಾ ಕಣಕ್ಕೆ ಇಳಿಯಬೇಕೆಂದು ನಿರ್ಧರಿಸಿರುವ ಋಸುಮಲತಾ, ಗುರುವಾರ ಮಂಡ್ಯಕ್ಕೆ ಭೇಟಿ ನೀಡಿ, ಉಗ್ರರ ದಾಳಿಯಲ್ಲಿ ಹುತಾತ್ಮನಾದ ಗುರು ಅವರ ನಿವಾಸಕ್ಕೆ ತೆರಳಿ ಅವರ ಕುಟುಂಬಕ್ಕೆ ಸಾಂತ್ವನ ಹೇಳಲಿದ್ದಾರೆ. ಅಲ್ಲದೆ, ಅವರ ಕುಟುಂಬಕ್ಕೆ ಭರವಸೆ ನೀಡಿದಂತೆ ಅರ್ಧ ಎಕರೆ ಜಮೀನು ಪತ್ರ ಹಸ್ತಾಂತರಿಸಲಿದ್ದಾರೆಂದು ತಿಳಿದು ಬಂದಿದೆ.
ಅಲ್ಲದೇ ಪಾಂಡವಪುರದ ಮಾಜಿ ಶಾಸಕ ಹಾಗೂ ರೈತ ಮುಖಂಡ ದಿ. ಕೆ.ಎಸ್.ಪುಟ್ಟಣ್ಣಯ್ಯ ಅವರ ನಿವಾಸಕ್ಕೂ ಭೇಟಿ ನೀಡಿ ಅವರ ಕುಟುಂಬದೊಂದಿಗೆ ಮಾತುಕತೆ ನಡೆಸಲಿದ್ದಾರೆ. ನಂತರ ಕಾಂಗ್ರೆಸ್ ಹಿರಿಯ ನಾಯಕ ಮಾಜಿ ಸಂಸದ ಜಿ. ಮಾದೇಗೌಡ ಅವರನ್ನೂ ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆಂದು ತಿಳಿದು ಬಂದಿದೆ.