ಹೊಸದಿಲ್ಲಿ: ಶನಿವಾರದಿಂದ ಮಲೇಶ್ಯದಲ್ಲಿ ಆರಂಭವಾಗಲಿರುವ ಪ್ರತಿಷ್ಠಿತ ಸುಲ್ತಾನ್ ಅಜ್ಲಾನ್ ಷಾ ಕಪ್ ಹಾಕಿ ಪಂದ್ಯಾವಳಿಯಲ್ಲಿ ಭಾರತ ಉತ್ತಮ ಹೋರಾಟ ನೀಡಲಿದೆ ಎಂದು ನಾಯಕ ಸರ್ದಾರ್ ಸಿಂಗ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇತ್ತೀಚಿನ ಕೆಲವು ವಿದೇಶಿ ಸರಣಿಗಳಲ್ಲಿ ತಂಡ ಗಮನಾರ್ಹ ಪ್ರದರ್ಶನ ನೀಡಿದ್ದೇ ಸರ್ದಾರ್ ಅವರ ಆತ್ಮವಿಶ್ವಾಸಕ್ಕೆ ಕಾರಣ. ಭಾರತ ತನ್ನ ಶನಿವಾರದ ಆರಂಭಿಕ ಪಂದ್ಯದಲ್ಲಿ ಒಲಿಂಪಿಕ್ ಚಾಂಪಿಯನ್ ಆರ್ಜೆಂಟೀನಾವನ್ನು ಎದುರಿಸಲಿದೆ. ವಿಶ್ವದ ನಂ.1 ತಂಡವಾದ ಆಸ್ಟ್ರೇಲಿಯ ಕೂಡ ಕಣದಲ್ಲಿದೆ. ಇಂಗ್ಲೆಂಡ್, ಅಯರ್‌ಲ್ಯಾಂಡ್ ಮತ್ತು ಆತಿಥೇಯ ಮಲೇಶ್ಯ ಈ ಕೂಟದಲ್ಲಿ ಪಾಲ್ಗೊಳ್ಳಲಿರುವ ಇತರ ತಂಡಗಳು.
“ಪಂದ್ಯಾವಳಿಯನ್ನು ಗೆಲುವಿನೊಂದಿಗೆ ಆರಂಭಿಸುವುದು ಮುಖ್ಯ. ಇದು ನಮ್ಮ ಮೊದಲ ಗುರಿಯೂ ಹೌದು. ಆರ್ಜೆಂಟೀನಾ ವಿರುದ್ಧ ಉತ್ತಮ ಪ್ರದರ್ಶನ ನೀಡಿದರೆ ತಂಡದ ಆತ್ಮವಿಶ್ವಾಸ ಖಂಡಿತ ವೃದ್ಧಿಯಾಗಲಿದೆ. ಫೈನಲ್ ತಲುಪಬೇಕಾದರೆ ಗ್ರೂಪ್ ಹಂತದ ಪ್ರತಿಯೊಂದು ಪಂದ್ಯವೂ ಮುಖ್ಯ. ಹಿಂದೆ ನಾವು ಆಸ್ಟ್ರೇಲಿಯ, ಇಂಗ್ಲೆಂಡ್ ತಂಡಗಳನ್ನು ಸೋಲಿಸಿದ್ದೇವೆ. ಆರ್ಜೆಂಟೀನಾವನ್ನೂ ಮಣಿಸಿದ್ದೇವೆ. ತಂಡದ ಯೋಜನೆ ಹಾಗೂ ಕಾರ್ಯತಂತ್ರವನ್ನು ಪರಿಪೂರ್ಣ ರೀತಿಯಲ್ಲಿ ಜಾರಿಗೆ ತರುವುದು ಅತ್ಯಗತ್ಯ’ ಎಂದು ತಂಡ ಮಲೇಶ್ಯಕ್ಕೆ ವಿಮಾನವೇರುವ ಮುನ್ನ ಸರ್ದಾರ್ ಸಿಂಗ್ ಮಾಧ್ಯಮದವರಲ್ಲಿ ಹೇಳಿದರು.
ಕಳೆದ ಸಲದ ಸುಲ್ತಾನ್ ಅಜ್ಲಾನ್ ಷಾ ಹಾಕಿ ಪಂದ್ಯಾವಳಿಯಲ್ಲಿ ಭಾರತ 4-0 ಅಂತರದಿಂದ ನ್ಯೂಜಿಲ್ಯಾಂಡನ್ನು ಮಣಿಸಿ ತೃತೀಯ ಸ್ಥಾನ ಪಡೆದಿತ್ತು. ಆಸ್ಟ್ರೇಲಿಯವನ್ನು 4-3ರಿಂದ ಉರುಳಿಸಿದ ಇಂಗ್ಲೆಂಡ್ ಚಾಂಪಿಯನ್ ಆಗಿ ಹೊರಹೊಮ್ಮಿತ್ತು.
2016ರ ಫೈನಲ್‌ನಲ್ಲಿ ಆಸ್ಟ್ರೇಲಿಯದ ಕೈಯಲ್ಲಿ 0-4 ಗೋಲುಗಳ ಹೊಡೆತ ಅನುಭವಿಸಿದ ಭಾರತ ರನ್ನರ್ ಅಪ್ ಆಗಿತ್ತು. ಆಗಲೂ ಮಿಡ್ ಫೀಲ್ಡರ್ ಸರ್ದಾರ್ ಸಿಂಗ್ ಅವರೇ ಭಾರತ ತಂಡದ ನಾಯಕರಾಗಿದ್ದರು.
ಭಾರತದ ಪಂದ್ಯಗಳು
ಆರ್ಜೆಂಟೀನಾವನ್ನು ಎದುರಿಸಿದ ಬಳಿಕ ಭಾರತ ತಂಡ ಇಂಗ್ಲೆಂಡ್ (ಮಾ. 4), ಆಸ್ಟ್ರೇಲಿಯ (ಮಾ. 6), ಮಲೇಶ್ಯ (ಮಾ. 7) ಮತ್ತು ಅಯರ್‌ಲ್ಯಾಂಡ್ (ಮಾ. 9) ವಿರುದ್ಧ ಲೀಗ್ ಪಂದ್ಯಗಳನ್ನು ಆಡಲಿದೆ.