Advertisement

ಇಂದು ಸುಳ್ಯ ಬ್ಲಾಕ್‌ ಕಾಂಗ್ರೆಸ್‌ ಸಮಾವೇಶ

02:20 AM Jul 15, 2017 | Team Udayavani |

ಸುಳ್ಯ: ಸುಳ್ಯ ಬ್ಲಾಕ್‌ ಕಾಂಗ್ರೆಸ್‌ನ ಸಮಾವೇಶ ಇಂದು ಸುಳ್ಯ ಲಯನ್ಸ್‌ ಸೇವಾ ಸದನದಲ್ಲಿ ನಡೆಯಲಿದ್ದು, ಎಐಸಿಸಿ ಕಾರ್ಯದರ್ಶಿ ವಿಷ್ಣುನಾಥನ್‌ ನೀಡುವ ಭರವಸೆಯನ್ನು ಆಧರಿಸಿ ಅತೃಪ್ತ ಒಕ್ಕಲಿಗ ನಾಯಕರು ಸಮಾವೇಶಕ್ಕೆ ಪಾಲ್ಗೊಳ್ಳುವ ಬಗ್ಗೆ ನಿರ್ಧರಿಸಲಿದ್ದಾರೆ. ಸಮಾವೇಶಕ್ಕೆ ಮುನ್ನ ಅತೃಪ್ತ ಮುಖಂಡರು, ವಿಷ್ಣುನಾಥನ್‌ ಅವರನ್ನು ಭೇಟಿ ಮಾಡುವರು. ಆ ಸಂದರ್ಭದಲ್ಲಿ ತಮ್ಮ ಅಹವಾಲು ಮಂಡಿಸುವರು. ಅಲ್ಲಿ ಸೂಕ್ತ ಭರವಸೆ ಸಿಕ್ಕರೆ ಸಮಾವೇಶದಲ್ಲಿ ಭಾಗಿಯಾಗು ವರು ಎಂದು ಮೂಲಗಳು ತಿಳಿಸಿವೆ. ಹೀಗಾಗಿ ನೂತನ ಅಧ್ಯಕ್ಷರ ನೇತೃತ್ವದ ಮೊದಲ ಸಮಾವೇಶ ಸಹಿತ ಮುಂಬರುವ ಚುನಾವಣೆಯಲ್ಲಿ ‘ಟಾರ್ಗೆಟ್‌ ಸುಳ್ಯ’ ಯೋಜನೆಯ ಕುರಿತು ತಾಲೂಕಿನ ಪಕ್ಷಗಳ ನಾಯಕರು ಮತ್ತು ಕಾರ್ಯಕರ್ತರಲ್ಲೂ ಕುತೂಹಲ ಮೂಡಿದೆ.

Advertisement

ಜಿಲ್ಲಾಧ್ಯಕ್ಷರಿಂದ ಸ್ಪಂದನೆ
ಸಮಾವೇಶದ ಪೂರ್ವಭಾವಿ ಸಭೆಗೆ ಬಂದಿದ್ದ ಜಿಲ್ಲಾಧ್ಯಕ್ಷ ಹರೀಶ್‌ ಕುಮಾರ್‌ ಅತೃಪ್ತ ಮುಖಂಡ ರೊಂದಿಗೆ ಮಾತುಕತೆ ನಡೆಸಿದ್ದರು. ಬೇಡಿಕೆಯ ಮಹತ್ವವನ್ನು ಅರಿತು ಈಡೇರಿಸಲು ಪ್ರಯತ್ನಿಸುವ ಭರವಸೆ ನೀಡಿದ್ದರು. ಸಮಾವೇಶಕ್ಕೆ ಮುನ್ನ ಎಐಸಿಸಿ ಕಾರ್ಯದರ್ಶಿಗಳಿಗೆ ಮನವರಿಕೆ ಮಾಡುವುದಾಗಿ ತಿಳಿಸಿದ್ದರು. ಇದರಿಂದ ಕೊಂಚ ಸಮಾಧಾನವಾದರೂ, ಪಟ್ಟು ಬಿಡದ ಅತೃಪ್ತರು ಎಐಸಿಸಿ ನಾಯಕರ ಭರವಸೆಯನ್ನು ಕಾದು ನೋಡುವ ತಂತ್ರ ಅನುಸರಿಸುತ್ತಿದ್ದಾರೆ.

ಸಮಾವೇಶ ಯಶಸ್ಸಿಗೆ ಈಗಾಗಲೇ ಹೊಸ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರು ಗ್ರಾಮ ಭೇಟಿ ನಡೆಸಿ ತಯಾರಿ ನಡೆಸಿದ್ದಾರೆ. ಮುಂದಿನ ಚುನಾವಣೆಯಲ್ಲಿ ಸುಳ್ಯದಲ್ಲಿ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುವ ಮೂಲಕ ಬಿಜೆಪಿಯ ಭದ್ರಕೋಟೆಯನ್ನು ಮುರಿಯಲು ಈ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ. ಆದರೆ ಇದೇ ವೇಳೆ ಪಕ್ಷದ ಅತೃಪ್ತ ಒಕ್ಕಲಿಗ ನಾಯಕರ ಅಸಮಾಧಾನ ಸಮಸ್ಯೆಯಾಗಿ ಪರಿಣಮಿಸಿದೆ.

ಬೆಂಕಿಗೆ ಮತ್ತಷ್ಟು ‘ತುಪ್ಪ ‘
ಜಿಲ್ಲೆಯಲ್ಲಿ ಮುಸ್ಲಿಂ, ಕ್ರೈಸ್ತ, ಜೈನ ಮೂರು ಅಲ್ಪಸಂಖ್ಯಾಕ ಸಮುದಾಯದ ಬಳಿಕ ಎರಡನೇ ಅತೀ ದೊಡ್ಡ ವೋಟ್‌ಬ್ಯಾಂಕ್‌ ಒಕ್ಕಲಿಗ ಸಮುದಾಯ. ಆದರೆ ಈ ಸಮುದಾಯವನ್ನು ಪಕ್ಷ ಕಡೆಗಣಿಸುತ್ತಿದೆ ಎಂಬುದು ನಾಯಕರ ಅಸಮಾಧಾನ. ಇದಕ್ಕೆ ಪೂರಕವಾಗಿ ಗುರುವಾರ ಕೆಪಿಸಿಸಿ ನೇಮಕಪಟ್ಟಿಯಲ್ಲಿ ಸಮುದಾಯ ನಾಯಕರಿಗೆ ಒತ್ತು ನೀಡಿಲ್ಲ. ನೂತನ ಅಧ್ಯಕ್ಷರು ಅತೃಪ್ತರನ್ನು ಒಟ್ಟಿಗೆ ಕರೆದೊಯ್ಯುವ ಬಗ್ಗೆ  ಹೇಳುತ್ತಿದ್ದರೂ ವಾಸ್ತವವಾಗಿ ನಡೆದುಕೊಳ್ಳುತ್ತಿಲ್ಲ. ಸಮಾವೇಶದ ಆಮಂತ್ರಣದಲ್ಲಿ ಜಿಲ್ಲಾ ಪ್ರ.ಕಾರ್ಯದರ್ಶಿ ದಿವ್ಯಪ್ರಭಾರ ಹೆಸರೇ ಪ್ರಕಟಿಸಿಲ್ಲ. ಕೆಪಿಸಿಸಿ ಸದಸ್ಯರಾದ ಮಾಜಿ ಅಧ್ಯಕ್ಷರಿಗೆ ಪ್ರಾಮುಖ್ಯತೆ ನೀಡಿಲ್ಲ ಎಂಬುದು ಸಮುದಾಯದ ನಾಯಕರನ್ನು ಮತ್ತಷ್ಟು ಕೆರಳಿಸಿದೆ.

ಸಮಾವೇಶ
ಪಕ್ಷದ ಸಮಾವೇಶ ಬೆಳಗ್ಗೆ 11 ಗಂಟೆಗೆ ನಡೆಯಲಿದೆ. ಮೈಸೂರು ವಿಭಾಗದ ಎಐಸಿಸಿ ಕಾರ್ಯದರ್ಶಿ ವಿಷ್ಣುನಾಥನ್‌, ಸಚಿವರಾದ ಬಿ.ರಮಾನಾಥ ರೈ,ರಾಮಲಿಂಗಾ ರೆಡ್ಡಿ. ಯು.ಟಿ. ಖಾದರ್‌, ಜಿಲ್ಲಾಧ್ಯಕ್ಷ ಹರೀಶ್‌ ಕುಮಾರ್‌ ಸಹಿತ ಹಲವು ಮುಖಂಡರು ಪಾಲ್ಗೊಳ್ಳುವರು.

Advertisement
Advertisement

Udayavani is now on Telegram. Click here to join our channel and stay updated with the latest news.

Next