Advertisement
ತಾಲೂಕಿನ ಪಂಜ ಗ್ರಾಮ ಪಂಚಾಯತ್ ವ್ಯಾಪ್ತಿ ಹಾಗೂ ಕಲ್ಮಡ್ಕ ಗ್ರಾಮ ಪಂಚಾಯತ್ ವ್ಯಾಪ್ತಿಯನ್ನು ಹೊಂದಿಕೊಂಡಿರುವ ಪಂಜದ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನ ಸಮೀಪದ ಪೆರ್ಮಾಜೆ – ಕಂರ್ಬಿ – ಕೋಟೆಗುಡ್ಡೆ – ಪಂಬೆತ್ತಾಡಿ ಸಂಪರ್ಕ ರಸ್ತೆ ಯಾವುದೇ ರೀತಿಯಲ್ಲಿ ಪೂರ್ಣ ಪ್ರಮಾಣದ ಅಭಿವೃದ್ಧಿ ಆಗದೆ ಇಂದಿಗೂ ಮಣ್ಣಿನ ಕಚ್ಚಾ ರಸ್ತೆಯಾಗಿಯೇ ಉಳಿದು, ಸ್ಥಳೀಯರ ತಾಳ್ಮೆ ಪರೀಕ್ಷಿಸುತ್ತಿದೆ.
ಪಂಬೆತ್ತಾಡಿ ಭಾಗದಿಂದ ಕೋಟೆಗುಡ್ಡೆ- ಕಂರ್ಬಿ ಮೂಲಕ ಪೆರ್ಮಾಜೆ ಮುಖಾಂತರ ಪಂಜ ಪೇಟೆ ಸಂಪರ್ಕಿಸುವ ಈ ರಸ್ತೆ ಪಂಚಾಯತ್ ರಸ್ತೆಯಾಗಿ ಗುರುತಿಸಿಕೊಂಡಿದ್ದು, ಸುಮಾರು 3.5 ಕಿ.ಮೀ. ಉದ್ದವಿದೆ. ಈ ರಸ್ತೆಯ ಮೂರು ಕಡೆಗಳಲ್ಲಿ ಸೇತುವೆ ಇದ್ದು, ಇಲ್ಲಿ ಕೆಲವು ದೂರ ಕಾಂಕ್ರೀಟ್ ರಸ್ತೆ ನಿರ್ಮಾಣಗೊಂಡಿದ್ದರೂ ಉಳಿದ ಕಡೆಗಳಲ್ಲಿ ಇದುವರೆಗೆ ರಸ್ತೆ ಅಭಿವೃದ್ಧಿಗೊಂಡಿಲ್ಲ. ಮಳೆಗಾಲದಲ್ಲಿ ಕೆಸರುಮಯಗೊಳ್ಳುವ ಈ ರಸ್ತೆ, ಬೇಸಗೆಯಲ್ಲಿ ಧೂಳುಮಯವಾಗಿರುತ್ತದೆ. ಪರಿಣಾಮ ಸರ್ವಋತುವಿನಲ್ಲೂ ಈ ರಸ್ತೆಯಲ್ಲಿ ವಾಹನ ಸಂಚಾರ ಕಷ್ಟವೇ ಆಗಿದೆ. ಶಾಲಾ-ಮಕ್ಕಳು, ಸಾರ್ವಜನಿಕರು ನಡೆದಾಡಲು ಸಾಧ್ಯವಾಗದ ಸ್ಥಿತಿ ಇರುತ್ತದೆ ಎನ್ನುವುದು ಸ್ಥಳೀಯರ ಆರೋಪ. ಮಳೆಗಾಲದಲ್ಲಿ ಈ ರಸ್ತೆ ಸಂಪೂರ್ಣ ಹದಗೆಟ್ಟು ವಾಹನಗಳ ಸಂಚಾರಕ್ಕೆ ಸಮಸ್ಯೆ ಆಗುತ್ತಿರುವುದಿಂದ ವಾಹನಗಳನ್ನು ಕೆಲವೊಮ್ಮೆ ಒಂದೆಡೆ ನಿಲ್ಲಿಸಿ ಮನೆಗೆ ತೆರಳುವ ಸ್ಥಿತಿಯೂ ಇಲ್ಲಿದೆ. ಅನಾರೋಗ್ಯ ಉಂಟಾದಲ್ಲಿ ತುರ್ತು ಸಂದರ್ಭದಲ್ಲಿ ಆ್ಯಂಬುಲೆನ್ಸ್ ಸಂಚಾರಕ್ಕೂ ಪರದಾಟ ನಡೆಸುವ ಸ್ಥಿತಿ ಇಲ್ಲಿದೆ ಎನ್ನುತ್ತಾರೆ ಸ್ಥಳೀಯರು. ಹೊಂಡ-ಗುಂಡಿ, ಕೆಸರು, ಧೂಳುಮಯ ರಸ್ತೆಯಲ್ಲಿ ಎದ್ದು-ಬಿದ್ದು ಸಂಚರಿಸಬೇಕಾದ ಸ್ಥಿತಿಯಲ್ಲಿ ಇಲ್ಲಿನ ಜನ ದಿನ ಕಳೆಯುತ್ತಿದ್ದಾರೆ. ಕೋಟೆಗುಡ್ಡೆ ಎಂಬಲ್ಲಿ ಪ್ರಾಥಮಿಕ ಶಾಲೆ, ಅಂಗನವಾಡಿ ಕೇಂದ್ರ ವಿದೆ. ಹಾಗೂ ಪಂಬೆತ್ತಾಡಿ ಭಾಗದ ಜನರು ಪಂಜ ದೇವಸ್ಥಾನ, ನಾಗತೀರ್ಥ ಆರೋಗ್ಯ ಉಪಕೇಂದ್ರ, ಪಂಜ ಆಸ್ಪತ್ರೆ, ಪಂಜ ಪೆಟೆ, ಕಲ್ಮಡ್ಕ ಗ್ರಾ.ಪಂ. ಕಚೇರಿ, ನ್ಯಾಯಬೆಲೆ ಅಂಗಡಿ, ಮತ್ತಿತರ ಕಡೆಗಳಿಗೆ ತೆರಳಲು ಇದೇ ರಸ್ತೆ ಅವಶ್ಯಕವಾಗಿದೆ. ರಸ್ತೆ ಅಭಿವೃದ್ಧಿ ಮಾಡುವಂತೆ ಸರಕಾರ, ಸ್ಥಳೀಯಾಡಳಿತ, ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದರೂ ಇದುವರೆಗೆ ಬೇಡಿಕೆ ಈಡೇರಿಸಲಾಗಿಲ್ಲ ಎಂದು ಊರವರು ಆರೋಪಿಸಿದ್ದಾರೆ.
Related Articles
Advertisement
ಪೆರ್ಮಾಜೆ-ಪಂಬೆತ್ತಾಡಿ ಸಂಪರ್ಕ ರಸ್ತೆ ಅಭಿವೃದ್ಧಿ ಆಗದೇ ಸಂಚರಿಸಲು ಕಷ್ಟವಾಗು ತ್ತಿದೆ. ಮಳೆಗಾಲದಲ್ಲಂತು ಈ ರಸ್ತೆ ತೀರ ಹದಗೆಟ್ಟು ತೀವ್ರ ತೊಂದರೆ ಅನುಭವಿಸಬೇಕಾಗಿದೆ.ಈ ರಸ್ತೆ ಯನ್ನು ಕಾಂಕ್ರೀಟ್ ರಸ್ತೆಯಾಗಿ ಅಭಿವೃದ್ಧಿ ಮಾಡಬೇಕು.-ಜಯಶ್ರೀ ಸಂಪ, ಸ್ಥಳೀಯರು